2022-23ನೇ ಸಾಲಿನ ಐಎಸ್‌ಎಲ್ ಚಾಂಪಿಯನ್ ಎಟಿಕೆ ಮೋಹನ್ ಬಗಾನ್ಬೆಂಗಳೂರು ಎಫ್‌ಸಿ ಎದುರು ಪೆನಾಲ್ಟಿಶೂಟೌಟ್‌ನಲ್ಲಿ ಎಟಿಕೆ ಜಯಭೇರಿನಾಲ್ಕನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದ ಎಟಿಕೆ ಮೋಹನ್ ಬಗಾನ್

ಗೋವಾ(ಮಾ.19): 2022-23ರ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯ ಚಾಂಪಿಯನ್‌ ಆಗಿ ಎಟಿಕೆ ಮೋಹನ್‌ ಬಗಾನ್‌ ತಂಡ ಹೊರಹೊಮ್ಮಿದೆ. ಶನಿವಾರ ನಡೆದ ಫೈನಲ್‌ನಲ್ಲಿ ಬೆಂಗಳೂರು ಎಫ್‌ಸಿ ವಿರುದ್ಧ ಪೆನಾಲ್ಟಿಶೂಟೌಟ್‌ನಲ್ಲಿ 4-3 ಗೋಲುಗಳ ಅಂತರದಲ್ಲಿ ಗೆದ್ದ ಎಟಿಕೆ, 4ನೇ ಬಾರಿಗೆ ಟ್ರೋಫಿ ಎತ್ತಿಹಿಡಿಯಿತು.

ಟೂರ್ನಿಯ ಆರಂಭದಲ್ಲಿ ಸತತ ಸೋಲುಗಳಿಂದ ಕಂಗೆಟ್ಟು, ಲೀಗ್‌ನಲ್ಲೇ ಹೊರಬೀಳುವ ಸ್ಥಿತಿ ತಲುಪಿದ್ದ ಬಿಎಫ್‌ಸಿ, 2023ರಲ್ಲಿ ಭರ್ಜರಿಯಾಗಿ ಪುಟಿದೆದ್ದು ತಾನಾಡಿದ ಎಲ್ಲಾ ಪಂದ್ಯಗಳನ್ನು ಗೆದ್ದು ಫೈನಲ್‌ಗೇರಿತ್ತು. ಆದರೆ ಫೈನಲ್‌ನಲ್ಲಿ ತಂಡಕ್ಕೆ ಅದೃಷ್ಟ ಕೈಹಿಡಿಯಲಿಲ್ಲ.

ನಿಗದಿತ 90 ನಿಮಿಷಗಳ ಆಟದ ಮುಕ್ತಾಯಕ್ಕೆ ಎರಡೂ ತಂಡಗಳು 2-2ರಲ್ಲಿ ಸಮಬಲ ಸಾಧಿಸಿದವು. 30 ನಿಮಿಷಗಳ ಹೆಚ್ಚುವರಿ ಸಮಯದಲ್ಲಿ ಗೋಲು ದಾಖಲಾಗದೆ ಇದ್ದಾಗ, ಫಲಿತಾಂಶಕ್ಕೆ ಶೂಟೌಟ್‌ ಮೊರೆ ಹೋಗಲಾಯಿತು. ಶೂಟೌಟ್‌ನಲ್ಲಿ ಬಿಎಫ್‌ಸಿ ಪರ ಬ್ರುನೊ ರಮಿರೆಸ್‌, ಪಾಬ್ಲೊ ಪೆರೆಜ್‌ ಗೋಲು ಬಾರಿಸಲು ವಿಫಲರಾದರು. ತನ್ನ ಮೊದಲ ನಾಲ್ಕೂ ಪ್ರಯತ್ನಗಳಲ್ಲಿ ಗೋಲು ಬಾರಿಸಿದ್ದ ಎಟಿಕೆ ಗೆಲುವಿನ ಸಂಭ್ರಮ ಆಚರಿಸಿತು.

Scroll to load tweet…

ಇದಕ್ಕೂ ಮುನ್ನ ಎಟಿಕೆಗೆ 14ನೇ ನಿಮಿಷದಲ್ಲೇ ಪೆನಾಲ್ಟಿಕಿಕ್‌ ಅವಕಾಶ ದೊರೆಯಿತು. ಚೌಕದೊಳಗೆ ಚೆಂಡು ಬಿಎಫ್‌ಸಿಯ ರಾಯ್‌ ಕೃಷ್ಣ ಅವರ ಕೈಗೆ ತಗುಲಿದ ಕಾರಣ ಪೆನಾಲ್ಟಿದೊರೆಯಿತು. ಡಿಮಿಟ್ರಿ ಪೆಟ್ರಾಟೊಸ್‌ ಎಟಿಕೆಗೆ ಆರಂಭಿಕ ಮುನ್ನಡೆ ಒದಗಿಸಿದರು. 45+5ನೇ ನಿಮಿಷದಲ್ಲಿ ಬಿಎಫ್‌ಸಿಗೆ ಸಿಕ್ಕ ಪೆನಾಲ್ಟಿಯಲ್ಲಿ ಸುನಿಲ್‌ ಚೆಟ್ರಿ ಗೋಲು ಬಾರಿಸಿ ಸಮಬಲಕ್ಕೆ ಕಾರಣರಾದರು.

Scroll to load tweet…

78ನೇ ನಿಮಿಷದಲ್ಲಿ ರಾಯ್‌ ಕೃಷ್ಣ ಆಕರ್ಷಕ ಹೆಡ್ಡರ್‌ ಮೂಲಕ ಗೋಲು ದಾಖಲಿಸಿ ಬಿಎಫ್‌ಸಿಗೆ 2-1ರ ಮುನ್ನಡೆ ಒದಗಿಸಿದರು. ಆದರೆ 85ನೇ ನಿಮಿಷದಲ್ಲಿ ಎಟಿಕೆಗೆ ಮತ್ತೊಂದು ಪೆನಾಲ್ಟಿ ಬಿಟ್ಟುಕೊಟ್ಟ ಬಿಎಫ್‌ಸಿ ಎಡವಟ್ಟು ಮಾಡಿತು. ಪೆಟ್ರಾಟೊಸ್‌ ಗೋಲು ಬಾರಿಸುವಲ್ಲಿ ಯಾವುದೇ ತಪ್ಪು ಮಾಡದೆ ಪಂದ್ಯವನ್ನು ಹೆಚ್ಚುವರಿ ಸಮಯಕ್ಕೆ ಕೊಂಡೊಯ್ದರು.

ತ್ರೀಸಾ-ಗಾಯತ್ರಿಗೆ ಸೆಮೀಸ್‌ನಲ್ಲಿ ಸೋಲು!

ಬರ್ಮಿಂಗ್‌ಹ್ಯಾಮ್‌: 2001ರ ಬಳಿಕ ಪ್ರತಿಷ್ಠಿತ ಆಲ್‌-ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಜಯಿಸುವ ಭಾರತೀಯರ ಕನಸು ಈ ಸಲವೂ ಈಡೇರಲಿಲ್ಲ. ಮಹಿಳಾ ಡಬಲ್ಸ್‌ನ ಸೆಮಿಫೈನಲ್‌ನಲ್ಲಿ ತ್ರೀಸಾ ಜಾಲಿ ಹಾಗೂ ಗಾಯತ್ರಿ ಗೋಪಿಚಂದ್‌ ಸೋತು ನಿರಾಸೆ ಅನುಭವಿಸಿದ್ದಾರೆ. ಕಳೆದ ವರ್ಷವೂ ಈ ಜೋಡಿ ಸೆಮೀಸ್‌ನಲ್ಲಿ ಸೋಲುಂಡಿತ್ತು.

ಶನಿವಾರ ನಡೆದ ಅಂತಿಮ-4ರ ಪಂದ್ಯದಲ್ಲಿ ಕೊರಿಯಾದ ಬೆಕ್‌ ನಾ ಹಾ ಹಾಗೂ ಲೀ ಸೊ ಹೀ ಜೋಡಿ ವಿರುದ್ಧ 10-21, 10-21 ನೇರ ಗೇಮ್‌ಗಳಲ್ಲಿ ಭಾರತೀಯ ಜೋಡಿ ಪರಾಭವಗೊಂಡಿತು. ಕೇವಲ 46 ನಿಮಿಷಗಳಲ್ಲಿ ಪಂದ್ಯ ಮುಕ್ತಾಯಗೊಂಡಿತು. ಇದರೊಂದಿಗೆ ಪಂದ್ಯಾವಳಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.

14 ವರ್ಷದ ಛೋಟಾ ಬುಮ್ರಾನ ದಾಳಿಗೆ ವಿಕೆಟ್‌ ಚೆಲ್ಲಾಪಿಲ್ಲಿ..! ವಿಡಿಯೋ ವೈರಲ್

ಗಾಯತ್ರಿ ಅವರ ತಂದೆ ಪುಲ್ಲೇಲಾ ಗೋಪಿಚಂದ್‌ 2001ರಲ್ಲಿ ಚಾಂಪಿಯನ್‌ ಆಗಿದ್ದರು. ಅವರಿಗೂ ಮೊದಲು 1980ರಲ್ಲಿ ಪ್ರಕಾಶ್‌ ಪಡುಕೋಣೆ ಪ್ರಶಸ್ತಿ ಜಯಿಸಿದ್ದರು. ಕಳೆದ ವರ್ಷ ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್‌, 2015ರಲ್ಲಿ ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್‌ ರನ್ನರ್‌-ಅಪ್‌ ಆಗಿದ್ದರು.

ಬಾಕ್ಸಿಂಗ್‌: ಭಾರತದ ಇನ್ನೂ ಮೂವರು ಪ್ರಿ ಕ್ವಾರ್ಟರ್‌ಗೆ

ನವದೆಹಲಿ: ತವರಿನಲ್ಲಿ ನಡೆಯುತ್ತಿರುವ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಇನ್ನೂ ಮೂವರು ಬಾಕ್ಸರ್‌ಗಳು ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಶನಿವಾರ ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನ ವಿಜೇತೆ ನೀತು ಗಂಗಾಸ್‌, ಪ್ರೀತಿ ಹಾಗೂ ಮಂಜು ಬಂಬೋರಿಯಾ ಶುಭಾರಂಭ ಮಾಡಿದರು.

48 ಕೆ.ಜಿ. ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ನೀತು ಕೊರಿಯಾದ ಡೊಯೆನ್‌ ಕಾಂಗ್‌ ವಿರುದ್ಧ ತಾಂತ್ರಿಕ ಮುನ್ನಡೆ ಸಾಧಿಸಿ ಜಯಿಸಿದರು. ಎದುರಾಳಿಯು ನೀತುರ ಪಂಚ್‌ಗಳಿಗೆ ಉತ್ತರಿಸಲಾಗದೆ ಇದ್ದಾಗ ರೆಫ್ರಿ ಪಂದ್ಯ ನಿಲ್ಲಿಸಿ ನೀತು ಪರ ತೀರ್ಪಿತ್ತರು. ಇದೇ ವೇಳೆ 54 ಕೆ.ಜಿ. ವಿಭಾಘದಲ್ಲಿ ಪ್ರೀತಿ ರೊಮೇನಿಯಾದ ಲಾಕ್ರಮಿಯೊರಾ ಪಿರಿಯೊಕ್‌ ವಿರುದ್ಧ 4-3 ಅಂತರದಲ್ಲಿ ಗೆಲುವು ಸಾಧಿಸಿದರೆ, 66 ಕೆ.ಜಿ. ವಿಭಾಗದಲ್ಲಿ ಮಂಜು, ನ್ಯೂಜಿಲೆಂಡ್‌ನ ಕಾರಾ ವಾರೆರೌ ವಿರುದ್ಧ 5-0 ಅಂತರದ ಅಧಿಕಾರಯುತ ಗೆಲುವು ಪಡೆದರು.