ಕಾಯಂ ನಾಯಕ ಸುನಿಲ್‌ ಚೆಟ್ರಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಬಿಎಫ್‌ಸಿ, ಮೊದಲಾರ್ಧದಲ್ಲಿ ಗೋಲು ಬಾರಿಸದೆ ಇದ್ದರೂ, ಎದುರಾಳಿಗೂ ಗೋಲು ಬಿಟ್ಟುಕೊಡಲಿಲ್ಲ. ಆದರೆ 52ನೇ ನಿಮಿಷದಲ್ಲಿ ಬಿಎಫ್‌ಸಿಯ ಕೆಜಿಯಾ ವೀನ್‌ಡೊರ್ಪ್‌ ಸ್ವಂತ ಗೋಲು ಬಾರಿಸಿ ಕೇರಳ ಮುನ್ನಡೆ ಪಡೆಯಲು ಕಾರಣರಾದರು.

ಕೊಚ್ಚಿ: 10ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ(ಬಿಎಫ್‌ಸಿ) ಸೋಲಿನ ಆರಂಭ ಪಡೆದಿದೆ. ಗುರುವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್‌ ವಿರುದ್ಧ 1-2 ಗೋಲುಗಳ ಅಂತರದಲ್ಲಿ ಸೋಲುಂಡಿತು.

ಕಾಯಂ ನಾಯಕ ಸುನಿಲ್‌ ಚೆಟ್ರಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಬಿಎಫ್‌ಸಿ, ಮೊದಲಾರ್ಧದಲ್ಲಿ ಗೋಲು ಬಾರಿಸದೆ ಇದ್ದರೂ, ಎದುರಾಳಿಗೂ ಗೋಲು ಬಿಟ್ಟುಕೊಡಲಿಲ್ಲ. ಆದರೆ 52ನೇ ನಿಮಿಷದಲ್ಲಿ ಬಿಎಫ್‌ಸಿಯ ಕೆಜಿಯಾ ವೀನ್‌ಡೊರ್ಪ್‌ ಸ್ವಂತ ಗೋಲು ಬಾರಿಸಿ ಕೇರಳ ಮುನ್ನಡೆ ಪಡೆಯಲು ಕಾರಣರಾದರು.

69ನೇ ನಿಮಿಷದಲ್ಲಿ ಏಡ್ರಿಯಾನ್‌ ಲೂನಾ ಬಾರಿಸಿದ ಗೋಲು, ಕೇರಳ ಬ್ಲಾಸ್ಟರ್ಸ್‌ಗೆ 2-0 ಮುನ್ನಡೆ ಒದಗಿಸಿತು. ತೀವ್ರ ಒತ್ತಡಕ್ಕೆ ಸಿಲುಕಿದ ಬಿಎಫ್‌ಸಿ, ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಸತತ ಪ್ರಯತ್ನ ನಡೆಸಿತು. 90ನೇ ನಿಮಿಷದಲ್ಲಿ ಕರ್ಟಿಸ್‌ ಮೈನ್‌ ಗೋಲು ಬಾರಿಸಿದರೂ ಫಲಿತಾಂಶ ಕೇರಳ ಪರ ಹೊರಬೀಳುವುದನ್ನು ತಪ್ಪಿಸಲು ಬಿಎಫ್‌ಸಿಗೆ ಸಾಧ್ಯವಾಗಲಿಲ್ಲ. ಬೆಂಗಳೂರು ಎಫ್‌ಸಿ ತಂಡ ತನ್ನ ಮುಂದಿನ ಪಂದ್ಯವನ್ನು ಸೆ.27ರಂದು ಮೋಹನ್‌ ಬಗಾನ್‌ ವಿರುದ್ಧ ಆಡಲಿದೆ.

ಇಂದಿನಿಂದ ಭಾರತದಲ್ಲಿ ಮೊದಲ ಬಾರಿಗೆ ಐತಿಹಾಸಿಕ ಮೋಟೋ ಜಿಪಿ.! ಹೇಗಿರಲಿವೆ ಬೈಕ್‌ಗಳು?

ಫಿಫಾ ರ್‍ಯಾಂಕಿಂಗ್‌: 3 ಸ್ಥಾನ ಕುಸಿದ ಭಾರತ

ನವದೆಹಲಿ: ಭಾರತ ಫುಟ್ಬಾಲ್‌ ತಂಡ ಫಿಫಾ ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 3 ಸ್ಥಾನ ಕುಸಿತ ಕಂಡು ಮತ್ತೆ ಅಗ್ರ-100ರಿಂದ ಹೊರ ಹೋಗಿದೆ. ಸ್ಯಾಫ್‌ ಕಪ್‌ನಲ್ಲಿ ಗೆದ್ದ ಬಳಿಕ 99ನೇ ಸ್ಥಾನಕ್ಕೆ ತಲುಪಿದ್ದ ಭಾರತ, ಹೊಸದಾಗಿ ಪ್ರಕಟಗೊಂಡಿರುವ ಪಟ್ಟಿಯಲ್ಲಿ 3 ಸ್ಥಾನ ಕೆಳಕ್ಕಿಳಿದು 102ನೇ ಸ್ಥಾನದಲ್ಲಿದೆ. ಇತ್ತೀಚೆಗೆ ಥಾಯ್ಲೆಂಡ್‌ನಲ್ಲಿ ನಡೆದ ಕಿಂಗ್ಸ್‌ ಕಪ್‌ ಟೂರ್ನಿಯಲ್ಲಿ ಭಾರತ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿತ್ತು, ಸೆಮಿಫೈನಲ್‌ನಲ್ಲಿ ಇರಾಕ್‌ ವಿರುದ್ಧ ಪರಾಭವಗೊಂಡಿದ್ದ ಭಾರತ, 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಲೆಬನಾನ್‌ ವಿರುದ್ಧ ಸೋಲುಂಡಿತ್ತು.

Asian Games 2023: ಕಾಂಬೋಡಿಯಾ ಬಗ್ಗುಬಡಿದು ಶುಭಾರಂಭ ಮಾಡಿದ ಭಾರತ ವಾಲಿಬಾಲ್ ತಂಡ

ಹಾಕಿ ವಿಶ್ವ ರ್‍ಯಾಂಕಿಂಗ್‌: 3ನೇ ಸ್ಥಾನಕ್ಕೆ ಭಾರತ

ಲುಸ್ಸಾನ್‌(ಸ್ವಿಜರ್‌ಲೆಂಡ್‌): ಭಾರತ ಪುರುಷರ ಹಾಕಿ ತಂಡ ಒಂದು ವರ್ಷಕ್ಕೂ ಹೆಚ್ಚು ಸಮಯದ ಬಳಿಕ ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. 2022ರಲ್ಲಿ ಅಗ್ರ-3ರಿಂದ ಕೆಳಗಿಳಿದಿದ್ದ ತಂಡ, ಇತ್ತೀಚೆಗೆ ನಡೆದ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಅಜೇಯವಾಗಿ ಚಾಂಪಿಯನ್‌ ಆದ ಪರಿಣಾಮ ಪಟ್ಟಿಯಲ್ಲಿ ಏರಿಕೆ ಕಂಡಿದೆ. ನೆದರ್‌ಲೆಂಡ್ಸ್‌ ಮೊದಲ ಸ್ಥಾನದಲ್ಲಿದ್ದು, ಬೆಲ್ಜಿಯಂ 2ನೇ ಸ್ಥಾನದಲ್ಲಿ ಮುಂದುವರಿದಿದೆ. ಮಹಿಳೆಯರ ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ ಒಂದು ಸ್ಥಾನ ಮೇಲೇರಿ 7ನೇ ಸ್ಥಾನ ಪಡೆದಿದೆ.