ಗರಿಷ್ಠ ಫುಟ್ಬಾಲ್ ಗೋಲು: ಟಾಪ್ 10 ಪಟ್ಟಿ ಸೇರಲು ಚೆಟ್ರಿ ತವಕ
* ಮತ್ತೊಂದು ದಾಖಲೆ ಬರೆಯಲು ಸುನಿಲ್ ಚೆಟ್ರಿ ರೆಡಿ
* ಕೆಲದಿನಗಳ ಹಿಂದಷ್ಟೇ ಲಿಯೋನೆಲ್ ಮೆಸ್ಸಿ ದಾಖಲೆ ಹಿಂದಿಕ್ಕಿದ್ದ ಚೆಟ್ರಿ
* ಸಾರ್ವಕಾಲಿಕ ಗೋಲರ್‌ಗಳ ಪಟ್ಟಿ ಸೇರಲು ಚೆಟ್ರಿಗೆ ಬೇಕಿದೆ ಇನ್ನೊಂದು ಗೋಲು
ದೋಹಾ(ಜೂ.15): ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 74 ಗೋಲು ಗಳಿಸಿ ಗರಿಷ್ಠ ಗೋಲು ಹೊಡೆದಿರುವ ಸಕ್ರಿಯ ಆಟಗಾರರ ಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿರುವ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ಸುನಿಲ್ ಚೆಟ್ರಿ ಇನ್ನೊಂದು ಗೋಲು ಗಳಿಸಿದ್ದೇ ಆದಲ್ಲಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗರಿಷ್ಠ ಗೋಲು ಗಳಿಸಿದ ಸಾರ್ವಕಾಲಿಕ ಅಗ್ರ 10 ಆಟಗಾರರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ. ಸದ್ಯ ಚೆಟ್ರಿ 12ನೇ ಸ್ಥಾನದಲ್ಲಿದ್ದಾರೆ. ಒಂದು ವೇಳೆ, ಮಂಗಳವಾರ(ಜೂ.15) ಆಫ್ಘನ್ ವಿರುದ್ಧದ ಪಂದ್ಯದಲ್ಲಿ 3 ಗೋಲು ಗಳಿಸಿದರೆ, ಫುಟ್ಬಾಲ್ ದಂತಕಥೆ ಪೀಲೆ (77 ಗೋಲು) ಅವರ ಸಾಧನೆಯನ್ನು ಸರಿಗಟ್ಟಲಿದ್ದಾರೆ.
ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಜೊತೆ ನನ್ನ ಹೋಲಿಕೆ ಬೇಡ: ಸುನಿಲ್ ಚೆಟ್ರಿ
ಕೆಲವು ದಿನಗಳ ಹಿಂದಷ್ಟೇ ಪುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ದಾಖಲೆಯನ್ನು ಹಿಂದಿಕ್ಕಿದ್ದರು. ಇದರ ಬೆನ್ನಲ್ಲೇ ಮೆಸ್ಸಿ ಜತೆ ಚೆಟ್ರಿಯನ್ನು ಹೋಲಿಸಲಾಗುತ್ತಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಚೆಟ್ರಿ, ನಾನೂ ಕೂಡಾ ಮೆಸ್ಸಿ ಅಭಿಮಾನಿ, ನನ್ನ ಮತ್ತು ಅವರ ಜತೆ ಹೋಲಿಸುವುದು ಬೇಡ ಎಂದು ಭಾರತ ಫುಟ್ಬಾಲ್ ತಂಡದ ನಾಯಕ ಚೆಟ್ರಿ ತಿಳಿಸಿದ್ದರು.
ಇಂದು ಭಾರತ-ಆಫ್ಘನ್ ಫುಟ್ಬಾಲ್ ಹಣಾಹಣಿ:
ದೋಹಾ: 2022ರ ಫುಟ್ಬಾಲ್ ವಿಶ್ವಕಪ್, 2023ರ ಏಷ್ಯನ್ ಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮಂಗಳವಾರ ಭಾರತ ಹಾಗೂ ಆಫ್ಘಾನಿಸ್ತಾನ ಎದುರಾಗಲಿವೆ. ವಿಶ್ವಕಪ್ ಮುಖ್ಯ ಅರ್ಹತಾ ಸುತ್ತಿನಿಂದ ಈಗಾಗಲೇ ಹೊರಬಿದ್ದಿರುವ ಭಾರತ ಫುಟ್ಬಾಲ್ ತಂಡವು, ಮಂಗಳವಾರದ ಪಂದ್ಯದಲ್ಲಿ ಕನಿಷ್ಠ ಡ್ರಾ ಮಾಡಿಕೊಂಡರೂ ಎಎಫ್‌ಸಿ ಏಷ್ಯನ್ ಕಪ್ ಪಂದ್ಯಾವಳಿಯ 3ನೇ ಅರ್ಹತಾ ಸುತ್ತಿಗೆ ಪ್ರವೇಶ ಪಡೆಯಲಿದೆ. ಕಳೆದ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಗೆದ್ದಿರುವ ಭಾರತ ಮತ್ತೊಂದು ಜಯದ ಹುಮ್ಮಸ್ಸಿನಲ್ಲಿದ್ದರೆ, ಒಮಾನ್ ವಿರುದ್ಧ ಸೋತಿರುವ ಆಫ್ಘನ್ ತಂಡ ತುಸು ಕಳೆಗುಂದಿದೆ.