2023ರ ಸ್ಯಾಫ್ ಫುಟ್ಬಾಲ್ ಟೂರ್ನಿಗೆ ಭಾರತ ಆತಿಥ್ಯ
14ನೇ ಆವೃತ್ತಿಯ ಸ್ಯಾಫ್ ಪಂದ್ಯಾವಳಿಗೆ ಭಾರತ ಆತಿಥ್ಯ
2023ರ ಪ್ರತಿಷ್ಠಿತ ಫುಟ್ಬಾಲ್ ಕ್ರೀಡಾಕೂಟದ ಆತಿಥ್ಯದ ಹಕ್ಕು ಭಾರತದ ಪಾಲು
ಸ್ಯಾಫ್ ಟೂರ್ನಿಯಲ್ಲಿ ಎಂಟು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಭಾರತ
ನವದೆಹಲಿ(ಫೆ.16): 2023ರ ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಷನ್(ಸ್ಯಾಫ್) ಚಾಂಪಿಯನ್‌ಶಿಪ್ ಆತಿಥ್ಯ ಹಕ್ಕು ಭಾರತಕ್ಕೆ ದೊರೆತಿದೆ. ಈ ವರ್ಷ ಜೂನ್‌ನಲ್ಲಿ 14ನೇ ಆವೃತ್ತಿಯ ಪಂದ್ಯಾವಳಿ ನಡೆಯಲಿದ್ದು, 8 ಬಾರಿ ಚಾಂಪಿಯನ್ ಭಾರತ ತವರಿನಲ್ಲಿ ಪ್ರಶಸ್ತಿ ಜಯಿಸಲು ಸೆಣಸಲಿದೆ.
1999, 2011, 2015ರಲ್ಲಿ ಭಾರತ ಪಂದ್ಯಾವಳಿಗೆ ಆತಿಥ್ಯ ವಹಿಸಿತ್ತು. ಮಾ.10ರ ವೇಳೆಗೆ ಪಂದ್ಯಾವಳಿ ನಡೆಯುವ ನಗರ, ಪಾಲ್ಗೊಳ್ಳುವ ತಂಡಗಳ ವಿವರಗಳನ್ನು ಪ್ರಕಟಿಸುವುದಾಗಿ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್(ಎಐಎಫ್‌ಎಫ್) ತಿಳಿಸಿದೆ.
ಬ್ಯಾಡ್ಮಿಂಟನ್: ಭಾರತಕ್ಕೆ 5-0 ಅಂತರದ ಜಯ
ದುಬೈ: ಏಷ್ಯಾ ಮಿಶ್ರ ತಂಡ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಸತತ 2ನೇ ಜಯ ಸಾಧಿಸಿದೆ. ಬುಧವಾರ ಯುಎಇ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 5-0 ಅಂತರದಲ್ಲಿ ಜಯಿಸಿತು. ಮೊದಲ ಪಂದ್ಯದಲ್ಲಿ ಕಜಕಸ್ತಾನವನ್ನು 5-0ಯಲ್ಲಿ ಸೋಲಿಸಿದ್ದ ಭಾರತ, ಕ್ವಾರ್ಟರ್ ಫೈನಲ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಗುರುವಾರ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಬಲಿಷ್ಠ ಮಲೇಷ್ಯಾ ವಿರುದ್ಧ ಸೆಣಸಲಿದ್ದು, ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸಲಿದೆ.
ಬೆಂಗ್ಳೂರು ಓಪನ್ ಟೆನಿಸ್‌ಗೆ ವಿಂಬಲ್ಡನ್ ಡಬಲ್ಸ್ ವಿಜೇತ!
ಬೆಂಗಳೂರು: ಫೆಬ್ರವರಿ 20ರಿಂದ ಆರಂಭಗೊಳ್ಳಲಿರುವ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಹಾಲಿ ವಿಂಬಲ್ಡನ್ ಪುರುಷರ ಡಬಲ್ಸ್ ಚಾಂಪಿಯನ್ ತಂಡದ ಆಟಗಾರ ಆಸ್ಪ್ರೇಲಿಯಾದ ಮ್ಯಾಕ್ಸ್ ಪುರ್ಸೆಲ್ ಪಾಲ್ಗೊಳ್ಳಲಿದ್ದಾರೆ. 2022ರ ವಿಂಬಲ್ಡನ್‌ನಲ್ಲಿ ಪುರ್ಸೆಲ್, ಮ್ಯಾಥ್ಯೂ ಎಬ್ಡೆನ್ ಜೊತೆ ಪ್ರಶಸ್ತಿ ಜಯಿಸಿದ್ದರು.
ಬೆಂಗ್ಳೂರು ಓಪನ್ ಟೆನಿಸ್: ಸುಮಿತ್‌ಗೆ ವೈಲ್ಡ್‌ಕಾರ್ಡ್
ಬೆಂಗಳೂರು: ಭಾರತದ ಮಾಜಿ ನಂ.1 ಟೆನಿಸಿಗ ಸುಮಿತ್ ನಗಾಲ್ ಫೆ.20ರಿಂದ ಆರಂಭವಾಗಲಿರುವ 7ನೇ ಆವೃತ್ತಿಯ ಬೆಂಗಳೂರು ಓಪನ್ ಎಟಿಪಿ ಟೆನಿಸ್ ಟೂರ್ನಿಗೆ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದಾರೆ. 2017ರಲ್ಲಿ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದ 25 ವರ್ಷದ ನಗಾಲ್ ಈ ಬಾರಿ ವೈಲ್ಡ್‌ಕಾರ್ಡ್ ಮೂಲಕ ಟೂರ್ನಿಗೆ ಅರ್ಹತೆ ಪಡೆದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
ನಗಾಲ್ 2018, 2020ರಲ್ಲಿ ಟೂರ್ನಿಯಲ್ಲಿ ಕ್ರಮವಾಗಿ ಕ್ವಾರ್ಟರ್ ಫೈನಲ್, ಪ್ರಿಕ್ವಾರ್ಟರ್ಗೇರಿದ್ದರು. ಫೆಬ್ರವರಿ 19, 20ಕ್ಕೆ ಅರ್ಹತಾ ಸುತ್ತಿನ ಪಂದ್ಯಗಳು, ಫೆ.20ರಿಂದ 26ರ ವರೆಗೂ ಪ್ರಧಾನ ಸುತ್ತು ನಡೆಯಲಿದೆ.
ಬಾಕ್ಸಿಂಗ್ ವಿಶ್ವಕಪ್‌ಗೆ ಬ್ರಿಟನ್ ಬಹಿಷ್ಕಾರ!
ಲಂಡನ್: ಮುಂದಿನ ತಿಂಗಳು ನವದೆಹಲಿಯಲ್ಲಿ ನಡೆಯಲಿರುವ ಮಹಿಳಾ ಬಾಕ್ಸಿಂಗ್ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳದಿರಲು ಬ್ರಿಟನ್ ಬಾಕ್ಸಿಂಗ್ ಮಂಡಳಿ ನಿರ್ಧರಿಸಿದೆ. ಬಾಕ್ಸಿಂಗ್ ಕ್ರೀಡೆಯನ್ನು ಒಲಿಂಪಿಕ್ಸ್‌ನಿಂದ ಕೈಬಿಡಲು ಚಿಂತನೆ ನಡೆಸುತ್ತಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ನಿರ್ಧಾರವನ್ನು ವಿರೋಧಿಸಿ ವಿಶ್ವಕಪ್‌ಗೆ ಬಹಿಷ್ಕಾರ ಹಾಕಲು ತೀರ್ಮಾನಿಸಿರುವುದಾಗಿ ಬ್ರಿಟನ್ ತಿಳಿಸಿದೆ. ಇದೇ ವೇಳೆ ಉಕ್ರೇನ್ ವಿರುದ್ಧ ಯುದ್ಧ ನಿಲ್ಲದ ಹೊರತಾಗಿಯೂ ರಷ್ಯಾ ಹಾಗೂ ಬೆಲಾರಸ್ ಬಾಕ್ಸರ್‌ಗಳಿಗೆ ವಿಶ್ವಕಪ್‌ನಲ್ಲಿ ಆಯಾ ದೇಶಗಳ ಧ್ವಜದಡಿ ಸ್ಪರ್ಧಿಸಲು ಅವಕಾಶ ನೀಡಿರುವುದನ್ನೂ ಬ್ರಿಟನ್ ವಿರೋಧಿಸಿದೆ.