ಏಷ್ಯಾಡ್ ಫುಟ್ಬಾಲ್ ಆಡಲು ಅವಕಾಶ ಕೊಡಿಸುವಂತೆ ಪ್ರಧಾನಿಗೆ ಸ್ಟಿಮಾಕ್ ಮನವಿ
ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆಯಲು ವಿಫಲವಾಗಿರುವ ಭಾರತ ಫುಟ್ಬಾಲ್ ತಂಡ
ಏಷ್ಯನ್ ಗೇಮ್ಸ್‌ಗೆ ಪಾಲ್ಗೊಳ್ಳಲು ಅವಕಾಶ ಕೊಡಿಸುವಂತೆ ಮೋದಿಗೆ ಭಾರತ ಫುಟ್ಬಾಲ್ ಕೋಚ್ ಮನವಿ
ತನ್ನ ನಿಯಮವನ್ನು ಸಡಿಲಗೊಳಿಸುವಂತೆ ಕೇಂದ್ರ ಕ್ರೀಡಾ ಸಚಿವಾಲಯಕ್ಕೂ ಸ್ಟಿಮಾಕ್ ಮನವಿ
ನವದೆಹಲಿ(ಜು.18): ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಫುಟ್ಬಾಲ್ ತಂಡಕ್ಕೆ ಸ್ಪರ್ಧಿಸಲು ಅವಕಾಶ ಕೊಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಂಡದ ಪ್ರಧಾನ ಕೋಚ್ ಇಗೊರ್ ಸ್ಟಿಮಾಕ್ ಮನವಿ ಮಾಡಿದ್ದಾರೆ. ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದಿರುವ ಅವರು, ಭಾರತ ತಂಡ ಇತ್ತೀಚಿನ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದೆ. ನಮಗಿಂತ ಮೇಲಿನ ರ‍್ಯಾಂಕ್‌ನ ತಂಡಕ್ಕಿಂತಲೂ ಉತ್ತಮವಾಗಿ ಆಡಿದೆ. ಏಷ್ಯನ್ ಗೇಮ್ಸ್‌ನಲ್ಲಿ ಆಡುವ ಎಲ್ಲಾ ಅರ್ಹತೆ ಭಾರತ ತಂಡಕ್ಕಿದೆ. ಹೀಗಾಗಿ ಸ್ಪರ್ಧಿಸಲು ಅವಕಾಶ ಕೊಡಿಸಿ ಎಂದು ಮನವಿ ಮಾಡಿದ್ದಾರೆ.
ಇದೇ ವೇಳೆ ತನ್ನ ನಿಯಮವನ್ನು ಸಡಿಲಗೊಳಿಸುವಂತೆ ಕೇಂದ್ರ ಕ್ರೀಡಾ ಸಚಿವಾಲಯಕ್ಕೂ ಸ್ಟಿಮಾಕ್ ಮನವಿ ಸಲ್ಲಿಸಿದ್ದಾರೆ. ಏಷ್ಯಾಡ್‌ನ ತಂಡ ವಿಭಾಗದ ಸ್ಪರ್ಧೆಗಳಿಗೆ ರಾಷ್ಟ್ರೀಯ ತಂಡವನ್ನು ಕಳುಹಿಸಲು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಮಾನದಂಡವೊಂದನ್ನು ಹಾಕಿಕೊಂಡಿದೆ. ಏಷ್ಯಾ ಮಟ್ಟದಲ್ಲಿ ತಂಡ ಅಗ್ರ 8ರಲ್ಲಿ ಸ್ಥಾನ ಪಡೆದಿದ್ದರಷ್ಟೇ ಏಷ್ಯಾಡ್‌ಗೆ ಕಳುಹಿಸುವುದಾಗಿ ಘೋಷಿಸಿದೆ. ಭಾರತ ಫುಟ್ಬಾಲ್ ತಂಡ ಏಷ್ಯಾ ರ್‍ಯಾಂಕಿಂಗ್‌ನಲ್ಲಿ 18ನೇ ಸ್ಥಾನದಲ್ಲಿದೆ. ಈ ಮಾನದಂಡವನ್ನು ಬದಲಿಸುವಂತೆ ಸ್ಟಿಮಾಕ್ ಕೋರಿದ್ದಾರೆ.
ಕುಸ್ತಿ ಸಂಸ್ಥೆ ಚುನಾವಣೆ ಮತ್ತಷ್ಟು ವಿಳಂಬ ಖಚಿತ
ಗುವಾಹಟಿ: ಭಾರತೀಯ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್‌ಐ)ದ ಚುನಾವಣೆಯಲ್ಲಿ ತನಗೂ ಮತದಾನಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿ ಅಸ್ಸಾಂ ಕುಸ್ತಿ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜು.28ರಂದು ನಡೆಸಲು ಗುವಾಹಟಿ ಹೈಕೋರ್ಟ್ ತೀರ್ಮಾನಿಸಿದೆ. ಹೀಗಾಗಿ ಡಬ್ಲ್ಯುಎಫ್‌ಐನ ಬಹುನಿರೀಕ್ಷಿತ ಚುನಾವಣೆ ಮತ್ತಷ್ಟು ವಿಳಂಬವಾಗುವುದು ಖಚಿತವಾಗಿದೆ. ಈಗಾಗಲೇ ಚುನಾವಣೆ ಮೂರು ಬಾರಿ ಮುಂದೂಡಿಕೆಯಾಗಿದೆ.
ಟೆನಿಸ್: ವಿಶ್ವ ನಂ.1 ಸ್ಥಾನ ಉಳಿಸಿಕೊಂಡ ವಿಂಬಲ್ಡನ್ ಚಾಂಪಿಯನ್ ಕಾರ್ಲೊಸ್ ಆಲ್ಕರಜ್..!
ಜು.11ಕ್ಕೆ ಕೊನೆ ಬಾರಿ ದಿನಾಂಕ ನಿಗದಿಯಾಗಿದ್ದರೂ ಅಸ್ಸಾಂ ಸಂಸ್ಥೆಯ ಮನವಿಗೆ ಸಂಬಂಧಿಸಿದಂತೆ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಸದ್ಯ ಜು.26ರ ಮೊದಲು ಅಫಿಡವಿಟ್ ಸಲ್ಲಿಸಲು ಡಬ್ಲ್ಯುಎಫ್‌ಐ ತಾತ್ಕಾಲಿಕ ಸಮಿತಿಗೆ ಸೂಚಿಸಿರುವ ನ್ಯಾಯಾಲಯ, ಜು.28ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಆ ಬಳಿಕವೇ ಚುನಾವಣೆ ಭವಿಷ್ಯ ನಿರ್ಧಾರವಾಗಲಿದೆ.
ಮಹಿಳಾ ಹಾಕಿ: ಭಾರತಕ್ಕೆ ಚೀನಾ ವಿರುದ್ಧ 2-3 ಸೋಲು
ಲಿಂಬರ್ಗ್(ಜರ್ಮನಿ): ಜರ್ಮನಿ ಪ್ರವಾಸದಲ್ಲಿರುವ ಭಾರತ ಮಹಿಳಾ ಹಾಕಿ ತಂಡ ತ್ರಿಕೋನ ಸರಣಿಯಲ್ಲಿ ಸೋಲಿನ ಆರಂಭ ಪಡೆದಿದೆ. ಭಾನುವಾರ ರಾತ್ರಿ ಚೀನಾ ವಿರುದ್ಧದ ಪಂದ್ಯದಲ್ಲಿ ಭಾರತ 2-3 ಗೋಲುಗಳಿಂದ ಪರಾಭವಗೊಂಡಿತು. 9ನೇ ನಿಮಿಷದಲ್ಲೇ ಚೀನಾ ಗೋಲಿನ ಖಾತೆ ತೆರೆದರೂ, ಭಾರತದ ಪರ ನವ್‌ನೀತ್ ಕೌರ್ 24 ಹಾಗೂ 45ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡಕ್ಕೆ ಆಸರೆಯಾದರು. ಆದರೆ ಕೊನೆಯಲ್ಲಿ ಮತ್ತೆರಡು ಗೋಲು ಹೊಡೆದ ಚೀನಾ, ಭಾರತದ ಗೆಲುವನ್ನು ಕಸಿಯಿತು. ಭಾರತ ತನ್ನ ಮುಂದಿನ ಪಂದ್ಯದಲ್ಲಿ ಜರ್ಮನಿ ವಿರುದ್ಧ ಮಂಗಳವಾರ ಸೆಣಸಲಿದೆ. ಗುರುವಾರ ಮತ್ತೊಮ್ಮೆ ಜರ್ಮನಿ ಸವಾಲು ಎದುರಾಗಲಿದೆ.
ಅಭಿನವ್-ಗೌತಮಿಗೆ ವಿಶ್ವ ಕಿರಿಯರ ಶೂಟಿಂಗ್ ಚಿನ್ನ
ಚಾಂಗ್ವಾನ್(ಕೊರಿಯಾ): ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವ ಕಿರಿಯರ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ 3ನೇ ಚಿನ್ನದ ಪದಕ ಗೆದ್ದಿದ್ದು, ಒಟ್ಟು 6 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಸೋಮವಾರ 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಅಭಿನವ್ ಶಾ ಹಾಗೂ ಗೌತಮಿ ಭಾನೋಟ್ ಚಿನ್ನದ ಪದಕ ಗೆದ್ದರು. ಈ ಜೋಡಿ ಫೈನಲ್‌ನಲ್ಲಿ ಫ್ರಾನ್ಸ್‌ನ ಮುಲ್ಲರ್-ರೊಮೈನ್ ಜೋಡಿಯನ್ನು 17-13 ಅಂಕಗಳಿಂದ ಮಣಿಸಿ ಬಂಗಾರಕ್ಕೆ ಕೊರಳೊಡ್ಡಿತು. ಇದೇ ವೇಳೆ 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಅಭಿನವ್ ಚೌಧರಿ-ಸೈನ್ಯಂ ಕಂಚಿನ ಪದಕ ತಮ್ಮದಾಗಿಸಿಕೊಂಡರು.