ಅದ್ದೂರಿಯಾಗಿ ಕತಾರ್‌ನಲ್ಲಿ ನೆರವೇರಿದ ಫಿಫಾ ವಿಶ್ವಕಪ್ಹಲವು ರೋಚಕ ಸನ್ನಿವೇಶಗಳಿಗೆ ಸಾಕ್ಷಿಯಾದ ಫುಟ್ಬಾಲ್ ಜಗತ್ತುಕತಾರ್‌ ವಿಶ್ವಕಪ್ ಟೂರ್ನಿಯಲ್ಲಿ ಹಲವು ಯುವ ಫುಟ್ಬಾಲ್ ತಾರೆಗಳ ಉಗಮ

ದೋಹಾ(ಡಿ.20): ಕತಾರ್‌ ವಿಶ್ವಕಪ್‌ ಫುಟ್ಬಾಲ್‌ ಅಭಿಮಾನಿಗಳ ಪಾಲಿಗೆ ಹತ್ತಾರು ರೋಚಕ ಕ್ಷಣಗಳನ್ನು ಕಟ್ಟಿಕೊಟ್ಟಿದೆ. ದಿಗ್ಗಜರಾಗಿ ಬೆಳೆಯಬಲ್ಲ ಆಟಗಾರರನ್ನು ಪರಿಚಯಿಸಿದೆ. ಭವಿಷ್ಯದ ತಾರೆಯರನ್ನು ಅನಾವರಣಗೊಳಿಸಿದೆ. ಈ ಎಲ್ಲಾ ಕಾರಣಗಳಿಗೆ ಕತಾರ್‌ ವಿಶ್ವಕಪ್‌ ಬಹಳ ವಿಶೇಷ ಎನಿಸಲಿದೆ. ಇದರ ಜೊತೆ ಒಂದಿಷ್ಟುವಿವಾದಗಳಿಗೂ ಸಾಕ್ಷಿಯಾಗಿ ಟೂರ್ನಿ ಮುಗಿದರೂ, ಕತಾರ್‌ನ ನೆನಪು ಅಭಿಮಾನಿಗಳಲ್ಲಿ ಸದಾ ಕಾಲ ಉಳಿಯಲಿದೆ.

ಟಾಪ್‌ 5 ಗೋಲು ಸರದಾರರು

1. ಕಿಲಿಯಾನ್‌ ಎಂಬಾಪೆ: 08 ಗೋಲು

ಫ್ರಾನ್ಸ್‌ನ ಗೋಲ್‌ ಮಷಿನ್‌. ಫೈನಲ್‌ನಲ್ಲಿ ಹ್ಯಾಟ್ರಿಕ್‌ ಸೇರಿ ಈ ವಿಶ್ವಕಪ್‌ನಲ್ಲಿ ಬರೋಬ್ಬರಿ 8 ಗೋಲು ಸಿಡಿಸಿದ 23ರ ‘ದಿಗ್ಗಜ’.

2. ಲಿಯೋನೆಲ್‌ ಮೆಸ್ಸಿ: 07 ಗೋಲು

ಅರ್ಜೆಂಟೀನಾದ ವಿಶ್ವಕಪ್‌ ಗೆಲುವಿನ ಸೂತ್ರಧಾರ. ಟೂರ್ನಿಯ ಎಲ್ಲಾ ಹಂತಗಳಲ್ಲೂ ಗೋಲು ಬಾರಿಸಿದ ಏಕೈಕ ಆಟಗಾರ.

3. ಯೂಲಿಯನ್‌ ಆಲ್ವರಜ್‌: 04 ಗೋಲು

ಅರ್ಜೆಂಟೀನಾದ ಯುವ ಪ್ರತಿಭೆ. ಮೆಸ್ಸಿಯ ಉತ್ತರಾಧಿಕಾರಿ ಎಂದೇ ಗುರುತಿಸಲ್ಪಟ್ಟಿರುವ ಪ್ರತಿಭಾನ್ವಿತ ಸ್ಟ್ರೈಕರ್‌.

4. ಓಲಿವಿಯರ್‌ ಗಿರೌಡ್‌: 04 ಗೋಲು

ವಿಶ್ವಕಪ್‌ ವೇದಿಕೆಯಲ್ಲಿ ಫ್ರಾನ್ಸ್‌ ಪರ ಅತಿಹೆಚ್ಚು ಅಂ.ರಾ.ಗೋಲು ಬಾರಿಸಿದ ದಾಖಲೆ ಬರೆದ ತಾರಾ ಆಟಗಾರ.

5. ಗೊಂಜಾಲೋ ರಾಮೋಸ್‌: 03 ಗೋಲು

ಆಡಿದ ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್‌ ಬಾರಿಸಿ, ರಾತ್ರೋರಾತ್ರಿ ಸ್ಟಾರ್‌ ಪಟ್ಟಅಲಂಕರಿಸಿದ ಪೋರ್ಚುಗಲ್‌ ಫುಟ್ಬಾಲಿಗ.

ಟಾಪ್‌ 5 ಹೊಸ ಪ್ರತಿಭೆಗಳು

1. ಎನ್ಜೋ ಫರ್ನಾಂಡೆಜ್‌, ಅರ್ಜೆಂಟೀನಾ

ಟೂರ್ನಿಯ ಉದಯೋನ್ಮುಖ ಆಟಗಾರ ಪ್ರಶಸ್ತಿ ವಿಜೇತ. 21ರ ಹರೆಯದ ಮಿಡ್‌ಫೀಲ್ಡರ್‌.

2. ಜ್ಯೂಡ್‌ ಬೆಲ್ಲಿಂಗ್‌ಹ್ಯಾಮ್‌, ಇಂಗ್ಲೆಂಡ್‌

ನಿರೀಕ್ಷೆ ಉಳಿಸಿಕೊಂಡ 19ರ ಮಿಡ್‌ಫೀಲ್ಡ್‌ ಡೈನಮೋ. ಇಂಗ್ಲೆಂಡ್‌ನ ಭವಿಷ್ಯದ ಸೂಪರ್‌ಸ್ಟಾರ್‌.

3. ಪಾಬ್ಲೋ ಗಾವಿ, ಸ್ಪೇನ್‌

ಹಾಲಿ ವಿಶ್ವ ಶ್ರೇಷ್ಠ ಕಿರಿಯರ ಆಟಗಾರ ಪ್ರಶಸ್ತಿ ವಿಜೇತ. ಈ 18ರ ಗಾವಿ ಸ್ಪೇನ್‌ನ ದಿಗ್ಗಜ ಕ್ಸಾವಿಯ ಶಿಷ್ಯ.

FIFA World Cup ಸಂಭ್ರಮದಲ್ಲಿ ಮಿಂದೆದ್ದ ಚಾಂಪಿಯನ್‌ ಅರ್ಜೆಂಟೀನಾ!

4. ಚೌಮೇನಿ, ಫ್ರಾನ್ಸ್‌

22ರ ಈ ಅಟ್ಯಾಕಿಂಗ್‌ ಮಿಡ್‌ಫೀಲ್ಡರ್‌ ಫ್ರಾನ್ಸ್‌ ಫೈನಲ್‌ಗೇರುವಲ್ಲಿ ಪ್ರಮುಖ ಪಾತ್ರ ವಹಿಸಿದವರ ಪೈಕಿ ಒಬ್ಬರು.

5. ರಾಮೋಸ್‌, ಪೋರ್ಚುಗಲ್‌

ಈ ವಿಶ್ವಕಪ್‌ನಲ್ಲಿ ಮೊದಲ ಹ್ಯಾಟ್ರಿಕ್‌ ಹೊಡೆದ ಆಟಗಾರ. ಕ್ರಿಸಿಯಾನೋ ರೊನಾಲ್ಡೋರ ಉತ್ತರಾಧಿಕಾರಿ ಎಂದೇ ಬಿಂಬಿತ.

ಟಾಪ್‌ 5 ರೋಚಕ ಪಂದ್ಯಗಳು

1. ಅರ್ಜೆಂಟೀನಾ-ಫ್ರಾನ್ಸ್‌

ಹೈಡ್ರಾಮಾದಿಂದ ಕೂಡಿದ್ದ ಫೈನಲ್‌ ಪಂದ್ಯ. ಶೂಟೌಟ್‌ನಲ್ಲಿ ಅರ್ಜೆಂಟೀನಾಗೆ 4-2 ಜಯ.

2. ಬ್ರೆಜಿಲ್‌-ದ.ಕೊರಿಯಾ

ಪ್ರಿ ಕ್ವಾರ್ಟರ್‌ ಪಂದ್ಯದಲ್ಲಿ ಮೊದಲ 36 ನಿಮಿಷಗಳಲ್ಲೇ 4 ಗೋಲು ಬಾರಿಸಿ ಅಬ್ಬರಿಸಿದ ಬ್ರೆಜಿಲ್‌.

3. ಉರುಗ್ವೆ-ಘಾನಾ

ಘಾನಾ ವಿರುದ್ಧ ಮೊದಲಾರ್ಧದಲ್ಲೇ 2-0 ಮುನ್ನಡೆ ಪಡೆದು ಗೆದ್ದರೂ ಹೊರಬಿದ್ದ ಉರುಗ್ವೆ.

4. ಅರ್ಜೆಂಟೀನಾ-ಸೌದಿ ಅರೇಬಿಯಾ

ವಿಶ್ವಕಪ್‌ನ ಮೊದಲ ಆಘಾತಕಾರಿ ಫಲಿತಾಂಶ. ಗುಂಪು ಹಂತದಲ್ಲೇ ಹೊರಬೀಳುವ ಆತಂಕದಲ್ಲಿದ್ದ ಮೆಸ್ಸಿ ಪಡೆ.

5. ಜರ್ಮನಿ-ಜಪಾನ್‌

2-1ರಲ್ಲಿ ಗೆದ್ದು ಸತತ 2ನೇ ಬಾರಿಗೆ ಮಾಜಿ ಚಾಂಪಿಯನ್ನರು ಹೊರಬೀಳುವಂತೆ ಮಾಡಿದ ಜಪಾನ್‌.

ಟಾಪ್‌ 5 ರೋಚಕ ಕ್ಷಣಗಳು

1. ಮೆಸ್ಸಿ ಮಡಿಲಿಗೆ ವಿಶ್ವಕಪ್‌

5ನೇ ಹಾಗೂ ಬಹುತೇಕ ಕೊನೆ ಪ್ರಯತ್ನದಲ್ಲಿ ವಿಶ್ವಕಪ್‌ ಗೆದ್ದ ಲಿಯೋನೆಲ್‌ ಮೆಸ್ಸಿ.

2. ಮೊರಾಕ್ಕೊ ಸೆಮೀಸ್‌ ಸಾಧನೆ

ದೈತ್ಯ ತಂಡಗಳನ್ನು ಹಿಂದಿಕ್ಕಿದ ಮೊರಾಕ್ಕೊ. ವಿಶ್ವಕಪ್‌ ಸೆಮೀಸ್‌ಗೇರಿದ ಆಫ್ರಿಕಾದ ಮೊದಲ ತಂಡ.

3. ಬ್ರೆಜಿಲ್‌ನ ಸಾಂಬಾ ಡ್ಯಾನ್ಸ್‌

ಕೊರಿಯಾ ವಿರುದ್ಧ ಪ್ರಿ ಕ್ವಾರ್ಟರ್‌ನಲ್ಲಿ ಗೋಲು ಬಾರಿಸಿ ಸಾಂಬಾ ಡ್ಯಾನ್ಸ್‌ ಮಾಡಿದ ಬ್ರೆಜಿಲ್‌ ಆಟಗಾರರು.

4. ಬೆಂಚ್‌ ಕಾಯ್ದ ರೊನಾಲ್ಡೋ

ಪೋರ್ಚುಗಲ್‌ನ ಪ್ರಿ ಕ್ವಾರ್ಟರ್‌ನಲ್ಲಿ ರೊನಾಲ್ಡೋರನ್ನು ಹೊರಗಿಟ್ಟು ಶಾಕ್‌ ನೀಡಿದ ಪೋರ್ಚುಗಲ್‌ ಕೋಚ್‌.

5. ಮೊದಲ ಸಲ ಮಹಿಳಾ ರೆಫ್ರಿ

ಪುರುಷರ ವಿಶ್ವಕಪ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಫ್ರಾನ್ಸ್‌ನ ಸ್ಟೆಫಾನಿ ಫ್ರಾಪ್ಪರ್ಚ್‌ ರೆಫ್ರಿಯಾಗಿ ದಾಖಲೆ ಬರೆದರು.