* ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ ಬ್ರೆಜಿಲ್* ದಕ್ಷಿಣ ಕೊರಿಯಾ ಎದುರು 4-1 ಅಂತರದ ಗೆಲುವು ಸಾಧಿಸಿದ ಬ್ರೆಜಿಲ್* ಕ್ವಾರ್ಟರ್‌ ಫೈನಲ್‌ನಲ್ಲಿ ಬ್ರೆಜಿಲ್‌ಗೆ ಕ್ರೊವೇಷಿಯಾ ಸವಾಲು

ದೋಹಾ(ಡಿ.07): ದಕ್ಷಿಣ ಕೊರಿಯಾ ವಿರುದ್ಧ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ 4-1 ಗೋಲುಗಳ ಅಧಿಕಾರಯುತ ಗೆಲುವು ಸಾಧಿಸಿದ 5 ಬಾರಿ ಚಾಂಪಿಯನ್‌ ಬ್ರೆಜಿಲ್‌, 16ನೇ ಬಾರಿಗೆ ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಡಿ.9ರಂದು ಅಂತಿಮ 8ರ ಸುತ್ತಿನಲ್ಲಿ ಕ್ರೊವೇಷಿಯಾವನ್ನು ಎದುರಿಸಲಿದೆ.

ಮೊದಲ 36 ನಿಮಿಷದಲ್ಲೇ 4 ಗೋಲು ಬಾರಿಸಿದ ಥಿಯಾಗೋ ಸಿಲ್ವಾ ಪಡೆ ವಿಶ್ವಕಪ್‌ ನಾಕೌಟ್‌ ಪಂದ್ಯದಲ್ಲಿ 1998ರ ಬಳಿಕ ಮೊದಲ ಬಾರಿಗೆ 4 ಗೋಲು ಬಾರಿಸಿದ ಸಾಧನೆ ಮಾಡಿತು. ಅಲ್ಲದೇ ಗುಂಪು ಹಂತದಲ್ಲಿ ಬಾರಿಸಿದ ಒಟ್ಟು ಗೋಲುಗಳಿಗಿಂತ ಪ್ರಿ ಕ್ವಾರ್ಟರಲ್ಲಿ ಹೆಚ್ಚು ಗೋಲು ಗಳಿಸಿ ಗಮನ ಸೆಳೆಯಿತು. ಗುಂಪು ಹಂತದಲ್ಲಿ 3 ಪಂದ್ಯಗಳಲ್ಲಿ ಬ್ರೆಜಿಲ್‌ ಒಟ್ಟು 3 ಗೋಲುಗಳನ್ನಷ್ಟೇ ಬಾರಿಸಿತ್ತು.

7ನೇ ನಿಮಿಷದಲ್ಲೇ ವಿನಿಶಿಯಸ್‌ ಜೂನಿಯರ್‌ ಗೋಲಿನ ಖಾತೆ ತೆರೆದರು. 13ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಅವಕಾಶದಲ್ಲಿ ನೇಯ್ಮರ್‌ ತಪ್ಪು ಮಾಡಲಿಲ್ಲ. 29ನೇ ನಿಮಿಷದಲ್ಲಿ ರಿಚಾರ್ಲಿಸನ್‌, 36ನೇ ನಿಮಿಷದಲ್ಲಿ ಲುಕಾಸ್‌ ಪಕೆಟಾ ಗೋಲು ಗಳಿಸಿದರು. ದ್ವಿತೀಯಾರ್ಧದಲ್ಲಿ ಬ್ರೆಜಿಲ್‌ ನಿರಾಯಾಸವಾಗಿ ಆಡಿತು. 76ನೇ ನಿಮಿಷದಲ್ಲಿ ಸಿಯುಂಗ್‌-ಹೊ ಕೊರಿಯಾ ಪರ ಏಕೈಕ ಗೋಲು ಗಳಿಸಿದರು.

ಏಷ್ಯಾ ತಂಡಗಳ ಸವಾಲು ಅಂತ್ಯ

ಕತಾರ್‌ ವಿಶ್ವಕಪ್‌ನಲ್ಲಿ ಏಷ್ಯಾ ತಂಡಗಳ ಸವಾಲು ಮುಕ್ತಾಯವಾಗಿದೆ. ಕತಾರ್‌, ಸೌದಿ ಅರೇಬಿಯಾ ಹಾಗೂ ಇರಾನ್‌ ಗುಂಪು ಹಂತದಲ್ಲೇ ಹೊರಬಿದ್ದರೆ, ಜಪಾನ್‌, ದಕ್ಷಿಣ ಕೊರಿಯಾ ಹಾಗೂ ಏಷ್ಯಾ ಫುಟ್ಬಾಲ್‌ ಕಾನ್ಫೆಡರೇಷನ್‌ಗೆ ಸೇರುವ ಆಸ್ಪ್ರೇಲಿಯಾ ಪ್ರಿ ಕ್ವಾರ್ಟರ್‌ನಲ್ಲಿ ಸೋತವು.

3 ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿ ನೇಯ್ಮರ್‌ ದಾಖಲೆ

3 ವಿವಿಧ ವಿಶ್ವಕಪ್‌ಗಳಲ್ಲಿ ಗೋಲು ಬಾರಿಸಿದ ಬ್ರೆಜಿಲ್‌ನ 3ನೇ ಆಟಗಾರ ಎನ್ನುವ ಹಿರಿಮೆಗೆ ನೇಯ್ಮರ್‌ ಪಾತ್ರರಾಗಿದ್ದಾರೆ. 2014, 2018, 2022ರ ವಿಶ್ವಕಪ್‌ಗಳಲ್ಲಿ ನೇಯ್ಮರ್‌ ಗೋಲು ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಾಧನೆ ಮಾಡಿದ ಬ್ರೆಜಿಲ್‌ನ ಮೊದಲಿಗ ಎನ್ನುವ ದಾಖಲೆ ಪೀಲೆ ಹೆಸರಿನಲ್ಲಿದೆ. ಅವರು 1958, 1962, 1966, 1970ರ ವಿಶ್ವಕಪ್‌ಗಳಲ್ಲಿ ಗೋಲು ಬಾರಿಸಿದ್ದರು. ರೊನಾಲ್ಡೋ 1998, 2002, 2006ರ ವಿಶ್ವಕಪ್‌ಗಳಲ್ಲಿ ಗೋಲು ಬಾರಿಸಿದ್ದರು.

FIFA ವಿಶ್ವಕಪ್‌ ಸೋಲಿಗೆ ತಲೆಬಾಗಿದ ಜಪಾನ್ ಕೋಚ್: 2 ಪದಗಳಲ್ಲಿ ಆನಂದ್‌ ಮಹೀಂದ್ರಾ ಬಣ್ಣಿಸಿದ್ದು ಹೀಗೆ..

ಕೊರಿಯಾ ವಿರುದ್ಧದ ಗೆಲುವನ್ನು ಫುಟ್ಬಾಲ್‌ ದಂತಕಥೆ ಪೀಲೆಗೆ ಅರ್ಪಿಸಿದ ಬ್ರೆಜಿಲ್‌ ತಂಡ, ದೊಡ್ಡ ಬ್ಯಾನರ್‌ ಹಿಡಿದು ಅವರ ಆರೋಗ್ಯ ಸುಧಾರಿಸಲಿ ಎಂದು ಪ್ರಾರ್ಥಿಸಿತು.

ಕೋವಿಡ್‌ನಿಂದ ಪೀಲೆಗೆ ಉಸಿರಾಟ ಸಮಸ್ಯೆ: ಪುತ್ರಿ

ಸಾವ್‌ ಪೌಲೊ: ಫುಟ್ಬಾಲ್‌ ದಂತಕಥೆ ಬ್ರೆಜಿಲ್‌ನ ಪೀಲೆ ಕೋವಿಡ್‌ನಿಂದಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ‘ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದು, ಆದಷ್ಟು ಬೇಗ ಮನೆಗೆ ಕರೆದೊಯ್ಯಲಿದ್ದೇವೆ’ ಎಂದು ಪೀಲೆ ಅವರ ಪುತ್ರಿ ಕೆಲಿ ನಾಸಿಮೆಂಟೊ ಹೇಳಿದ್ದಾರೆ. ಕರುಳು ಕ್ಯಾನ್ಸರ್‌ಗೂ ಪೀಲೆ ಚಿಕಿತ್ಸೆ ಪಡೆಯುತ್ತಿದ್ದು, ಇತ್ತೀಚೆಗೆ ಚಿಕಿತ್ಸೆಗೆ ಸ್ಪಂದಿಸುವುದನ್ನು ನಿಲ್ಲಿಸಿದ್ದಾರೆ ಎಂದು ಸುದ್ದಿಯಾಗಿತ್ತು.