* ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಡ್ರಾ ಪ್ರಕಟ* ಒಂದೇ ಗುಂಪಿನಲ್ಲಿ ಸ್ಥಾನ ಪಡೆದ ಬಲಿಷ್ಠ ಸ್ಪೇನ್ ಹಾಗೂ ಜರ್ಮನಿ* ಮೊದಲ ಪಂದ್ಯದಲ್ಲಿಯೇ ಇಂಗ್ಲೆಂಡ್‌ಗೆ ಇರಾನ್ ಎದುರಾಳಿ

ದೋಹಾ(ಏ.03): 2022ರ ಫಿಫಾ ಫುಟ್ಬಾಲ್‌ ವಿಶ್ವಕಪ್‌ನ ಡ್ರಾ ಅಂತಿಮಗೊಂಡಿದ್ದು ಮಾಜಿ ಚಾಂಪಿಯನ್‌ಗಳಾದ ಸ್ಪೇನ್‌, ಜರ್ಮನಿ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಈ ಎರಡು ತಂಡಗಳ ಜೊತೆ ‘ಇ’ ಗುಂಪಿನಲ್ಲಿ ಜಪಾನ್‌, ಕ್ವಾಲಿಫೈಯರ್‌ ತಂಡ ಇದೆ. ನವೆಂಬರ್ 21ರಿಂದ ಆರಂಭವಾಗಲಿರುವ ಮೊದಲ ಪಂದ್ಯದಲ್ಲಿಯೇ ಬಲಿಷ್ಠ ಇಂಗ್ಲೆಂಡ್ ತಂಡವು ಇರಾನ್ ಎದುರು ಕಾದಾಟ ನಡೆಸಲಿದೆ. 

‘ಎ’ ಗುಂಪಲ್ಲಿ ಕತಾರ್‌, ಈಕ್ವೆಡಾರ್‌, ಸೆನೆಗಲ್‌, ನೆದರ್‌ಲೆಂಡ್ಸ್‌, ‘ಬಿ’ ಗುಂಪಲ್ಲಿ ಇಂಗ್ಲೆಂಡ್‌, ಇರಾನ್‌, ಅಮೆರಿಕ, ಕ್ವಾಲಿಫೈಯರ್‌ ತಂಡ, ‘ಸಿ’ ಗುಂಪಲ್ಲಿ ಅರ್ಜೆಂಟೀನಾ, ಸೌದಿ ಅರೇಬಿಯಾ, ಮೆಕ್ಸಿಕೋ, ಪೋಲೆಂಡ್‌, ‘ಡಿ’ ಗುಂಪಲ್ಲಿ ಫ್ರಾನ್ಸ್‌, ಕ್ವಾಲಿಫೈಯರ್‌, ಡೆನ್ಮಾರ್ಕ್, ಟ್ಯುನಿಶಿಯಾ, ‘ಎಫ್‌’ ಗುಂಪಲ್ಲಿ ಬೆಲ್ಜಿಯಂ, ಕೆನಡಾ, ಮೊರಾಕ್ಕೊ, ಕ್ರೊವೇಷಿಯಾ, ‘ಜಿ’ ಗುಂಪಲ್ಲಿ ಬ್ರೆಜಿಲ್‌, ಸರ್ಬಿಯಾ, ಸ್ವಿಜರ್‌ಲೆಂಡ್‌, ಕ್ಯಾಮರೂನ್‌, ‘ಎಚ್‌’ ಗುಂಪಲ್ಲಿ ಪೋರ್ಚುಗಲ್‌, ಘಾನಾ, ಉರುಗ್ವೆ, ದ.ಕೊರಿಯಾ ಸ್ಥಾನ ಪಡೆದಿವೆ.

ಖೇಲೋ ಇಂಡಿಯಾ ವಿವಿ ಗೇಮ್ಸ್‌ ಜೆರ್ಸಿ, ಲೋಗೋ ಅನಾವರಣ

ಬೆಂಗಳೂರು : 2ನೇ ಆವೃತ್ತಿಯ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌-2021 ಲೋಗೋ, ಮಾಸ್ಕಾಟ್‌ ಅನಾವರಣ ಹಾಗೂ ಜೆರ್ಸಿ ಬಿಡುಗಡೆ ಕಾರ‍್ಯಕ್ರಮ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಿತು. ಸಮಾರಂಭದಲ್ಲಿ ಗೇಮ್ಸ್‌ನ ಮೊಬೈಲ್‌ ಆ್ಯಪ್‌, ಕ್ರೀಡಾ ಗೀತೆ ಹಾಗೂ ಕ್ರೀಡಾ ಸಾಧಕರ ಸಂಪುಟವನ್ನೂ ಬಿಡುಗಡೆ ಮಾಡಲಾಯಿತು. ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ಜೆರ್ಸಿ ಹಾಗೂ ಕ್ರೀಡಾ ಗೀತೆಗೆ ಚಾಲನೆ ನೀಡಿದರು. ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಮಾಸ್ಕಾಟ್‌, ಕರ್ನಾಟಕ ವಿಧಾನಸೌಧ ಹಾಗೂ ಆನೆಯ ಚಿಹ್ನೆಯನ್ನೊಳಗೊಂಡ ಲೋಗೋ ಅನಾವರಣಗೊಳಿಸಿದರು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವಥ್‌ ನಾರಾಯಣ ಅವರು ಮೊಬೈಲ್‌ ಆ್ಯಪ್‌ಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅನುರಾಗ್‌ ಠಾಕೂರ್‌, ‘ಒಡಿಶಾದಲ್ಲಿ ನಡೆದಿದ್ದ ಮೊದಲ ಆವೃತ್ತಿಯ ಖೇಲೋ ಇಂಡಿಯಾ ವಿವಿ ಗೇಮ್ಸ್‌ ಅತ್ಯಂತ ಯಶಸ್ವಿಯಾಗಿತ್ತು. ಈ ಬಾರಿ ಗೇಮ್ಸ್‌ ಆಯೋಜನೆ ಅವಕಾಶ ಕರ್ನಾಟಕಕ್ಕೆ ಸಿಕ್ಕಿದೆ. ಗೇಮ್ಸ್‌ನಲ್ಲಿ ಸುಮಾರು 20 ಕ್ರೀಡೆಗಳಲ್ಲಿ 4,500 ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ವಿವಿಗಳ ಮೂಲಕ ಹೆಚ್ಚಿನ ಯುವ ಕ್ರೀಡಾಪಟುಗಳು ಹೊರಬರಬೇಕು ಮತ್ತು ಮುಂದಿನ ಒಲಿಂಪಿಕ್ಸ್‌ಗಳಲ್ಲಿ ದೇಶಕ್ಕೆ ಇನ್ನಷ್ಟು ಪದಕಗಳನ್ನು ಗೆಲ್ಲಬೇಕು. ದೇಶ ಕ್ರೀಡೆಯಲ್ಲಿ ಕೆಲವೇ ವರ್ಷಗಳಲ್ಲಿ ಭಾರೀ ಪ್ರಗತಿ ಸಾಧಿಸಿದೆ. ಮುಂದೆ ಇನ್ನಷ್ಟು ಉತ್ತುಂಗಕ್ಕೆ ಏರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2022 ಫಿಫಾ ಫುಟ್ಬಾಲ್‌ ವಿಶ್ವಕಪ್‌ನ ಚೆಂಡು ಅನಾವರಣ: ಸಖತ್ ಆಗಿದೆ ಈ ಬಾರಿಯ ಹಾಡು

ಕಾರ‍್ಯಕ್ರಮದಲ್ಲಿ ರಾಜ್ಯ ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಸಂಸದರಾದ ಪಿ.ಸಿ.ಮೋಹನ್‌ ಹಾಗೂ ತೇಜಸ್ವಿ ಸೂರ್ಯ, ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆ ಅಧ್ಯಕ್ಷ ಹಾಗೂ ವಿಧಾನಪರಿಷತ್‌ ಸದಸ್ಯ ಡಾ. ಕೆ.ಗೋವಿಂದರಾಜು, ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ‍್ಯದರ್ಶಿ ಶಾಲಿನಿ ರಜನೀಶ್‌, ಸರ್ಕಾರದ ಮುಖ್ಯ ಕಾರ‍್ಯದರ್ಶಿ ಪಿ.ರವಿಕುಮಾರ್‌ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಜೈನ್‌ ವಿವಿ ಸಹಯೋಗ

ಜೈನ್‌ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆಯುವ ಗೇಮ್ಸ್‌ಗೆ ಏಪ್ರಿಲ್ 24ರಂದು ಚಾಲನೆ ಸಿಗಲಿದ್ದು, ಮೇ 3ರಂದು ಮುಕ್ತಾಯಗೊಳ್ಳಲಿದೆ. ಉದ್ಘಾಟನಾ ಸಮಾರಂಭ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಬಹುತೇಕ ಸ್ಪರ್ಧೆಗಳು ಜೈನ್‌ ವಿವಿ ಆವರಣದಲ್ಲಿ ನಡೆಯಲಿವೆ. ಮೊದಲ ಆವೃತ್ತಿಯ ವಿವಿ ಗೇಮ್ಸ್‌ನಲ್ಲಿ ಪಂಜಾಬ್‌ ವಿವಿ ಮೊದಲ ಸ್ಥಾನ ಪಡೆದಿದ್ದರೆ, ರಾಜ್ಯದ ಮಂಗಳೂರು ವಿವಿ 25 ಪದಕದೊಂದಿಗೆ 5ನೇ ಸ್ಥಾನ ಗಳಿಸಿತ್ತು.

ಡೇವಿಸ್‌ ಕಪ್‌: ಭಾರತಕ್ಕೆ ನಾರ್ವೆ ಎದುರಾಳಿ

ನವದೆಹಲಿ: ಡೇವಿಸ್‌ ಕಪ್‌ ಟೆನಿಸ್‌ ಟೂರ್ನಿಯ ಡ್ರಾ ಪ್ರಕಟಗೊಂಡಿದ್ದು, ವಿಶ್ವ ಗುಂಪು 1ರಲ್ಲಿರುವ ಭಾರತ ತಂಡ ಸೆ.16-17 ಅಥವಾ ಸೆ.17-18ಕ್ಕೆ ನಾರ್ವೆ ವಿರುದ್ಧ ಆಡಲಿದೆ. ಸ್ಪರ್ಧೆ ನಡೆಯುವ ದಿನಾಂಕವನ್ನು ಆತಿಥ್ಯ ರಾಷ್ಟ್ರ ಆಯ್ಕೆ ಮಾಡಲಿದೆ ಎಂದು ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಶನ್‌(ಐಟಿಎಫ್‌) ತಿಳಿಸಿದೆ. ಆದರೆ ಏಷ್ಯನ್‌ ಗೇಮ್ಸ್‌ ಸೆ.10ರಿಂದ 14ರ ವರೆಗೆ ನಡೆಯಲಿದ್ದು, ಗೇಮ್ಸ್‌ ಮುಗಿದ ಕೂಡಲೇ ಡೇವಿಸ್‌ ಕಪ್‌ನಲ್ಲಿ ಆಡಬೇಕಾದ ಸವಾಲು ಭಾರತಕ್ಕೆ ಎದುರಾಗಿದೆ. ಇದರ ಬಗ್ಗೆ ಭಾರತೀಯ ಟೆನಿಸ್‌ ಸಂಸ್ಥೆ ಅಸಮಾಧಾನ ವ್ಯಕ್ತಪಡಿಸಿದ್ದು, ದಿನಾಂಕ ಬದಲಾವಣೆಗೆ ಮನವಿ ಮಾಡಿದೆ.