FIFA World Cup ಪೋಲೆಂಡ್ ಸವಾಲು ಗೆದ್ದ ಅರ್ಜೆಂಟೀನಾ ನಾಕೌಟ್‌ಗೆ ಲಗ್ಗೆ
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಅರ್ಜೆಂಟೀನಾ
ಪೋಲೆಂಡ್ ಎದುರು ಭರ್ಜರಿ ಜಯ ಸಾಧಿಸಿದ ಲಿಯೋನೆಲ್ ಮೆಸ್ಸಿ ಪಡೆ
'ಸಿ' ಗುಂಪಿನಿಂದ ಅರ್ಜೆಂಟೀನಾ, ಪೋಲೆಂಡ್ ನಾಕೌಟ್ ಹಂತಕ್ಕೆ ಲಗ್ಗೆ
ದೋಹಾ(ಡಿ.01): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ತನ್ನ ಪಾಲಿನ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಪೋಲೆಂಡ್ ಎದುರು 2-0 ಅಂತರದ ಗೆಲುವು ದಾಖಲಿಸುವ ಮೂಲಕ ಅಗ್ರಸ್ಥಾನಿಯಾಗಿಯೇ ಪ್ರೀ ಕ್ವಾರ್ಟರ್ ಫೈನಲ್‌ಗೇರುವಲ್ಲಿ ಯಶಸ್ವಿಯಾಗಿದೆ. ಇನ್ನು ಸೋಲಿನ ಹೊರತಾಗಿಯೂ ಪೋಲೆಂಡ್ ತಂಡ ಕೂಡಾ 'ಸಿ' ಗುಂಪಿನಿಂದ ಎರಡನೇ ತಂಡವಾಗಿ ನಾಕೌಟ್ ಹಂತಕ್ಕೇರುವಲ್ಲಿ ಯಶಸ್ವಿಯಾಗಿದೆ.
ಸೌದಿ ಅರೇಬಿಯಾ ಎದುರು ಮೆಕ್ಸಿಕೋ ತಂಡವು 2-1 ಅಂತರದ ಗೆಲುವು ದಾಖಲಿಸಿದ ಬೆನ್ನಲ್ಲೇ ಪೋಲೆಂಡ್ ತಂಡವು ಕೂಡಾ ಒಂದು ಗೆಲುವು ಹಾಗೂ ಒಂದು ಡ್ರಾ ಸಹಿತ 4 ಅಂಕಗಳೊಂದಿಗೆ ನಾಕೌಟ್‌ಗೇರುವಲ್ಲಿ ಯಶಸ್ವಿಯಾಗಿದೆ. ಮೆಕ್ಸಿಕೊ ಕೂಡಾ 4 ಅಂಕಗಳು ಗಳಿಸಿತ್ತಾದರೂ ಮೆಕ್ಸಿಕೋಗಿಂತ ಪೋಲೆಂಡ್ ಒಂದು ಹೆಚ್ಚಿಗೆ ಗೋಲು ದಾಖಲಿಸಿದ್ದರಿಂದ ಜೆಸ್ಲಾವ್ ಮೆಕ್ನಿವಿಜ್ ನೇತೃತ್ವದ ಪೋಲೆಂಡ್ ತಂಡವು ನಾಕೌಟ್ ಹಂತಕ್ಕೇರುವಲ್ಲಿ ಯಶಸ್ವಿಯಾಗಿದೆ.
ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಫಿಫಾ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಸೌದಿ ಅರೇಬಿಯಾ ಎದುರು ಆಘಾತಕಾರಿ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿತ್ತು. ಹೀಗಾಗಿ ಪೋಲೆಂಡ್ ಎದುರಿನ ಪಂದ್ಯವು ಅರ್ಜೆಂಟೀನಾ ಪಾಲಿಗೆ ನಾಕೌಟ್ ಪ್ರವೇಶಿಸುವ ದೃಷ್ಟಿಯಿಂದ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿತ್ತು. ಆರಂಭದಿಂದಲೇ ಅರ್ಜೆಂಟೀನಾ ತಂಡವು ಚೆಂಡಿನ ಮೇಲೆ ಹಿಡಿತ ಸಾಧಿಸಿತಾದರೂ, ಮೊದಲಾರ್ಧದಲ್ಲಿ ಗೋಲು ಬಾರಿಸಲು ಯಶಸ್ವಿಯಾಗಲಿಲ್ಲ. ಆದರೆ ದ್ವಿತಿಯಾರ್ಧದ ಮೊದಲ ನಿಮಿಷದಲ್ಲೇ ಅಲೆಕ್ಸಿಸ್ ಮ್ಯಾಕ್ ಅಲಿಸ್ಟರ್ಸ್ ಆಕರ್ಷಕ ಗೋಲು ಬಾರಿಸುವ ಮೂಲಕ ಅರ್ಜೆಂಟೀನಾ ಪಡೆಯಲ್ಲಿ ಸಂತಸದ ಅಲೆ ಮೂಡುವಂತೆ ಮಾಡಿದರು. ಇನ್ನು ಇದಾದ 20 ನಿಮಿಷಗಳ ಬಳಿಕ ಜೂಲಿಯನ್ ಅಲ್ವರೆಜ್ ಮಿಂಚಿನ ಗೋಲು ಬಾರಿಸುವ ಮೂಲಕ ಅರ್ಜೆಂಟೀನಾ ತಂಡವು 2-0 ಮುನ್ನಡೆ ಸಾಧಿಸಲು ನೆರವಾದರು. ಇನ್ನು ಪೋಲೆಂಡ್ ತಂಡವು ಗೋಲು ಬಾರಿಸುವ ಯತ್ನಕ್ಕೆ ಅರ್ಜೆಂಟೀನಾ ತಂಡವು ಅವಕಾಶ ನೀಡಲಿಲ್ಲ.
FIFA World Cup: ಸ್ಪೇನ್, ಜರ್ಮನಿ, ಬೆಲ್ಜಿಯಂಗೆ ಪ್ರಿ ಕ್ವಾರ್ಟರ್‌ಗೇರುವ ತವಕ
ಅರ್ಜೆಂಟೀನಾ ತಂಡವು ಮೊದಲಾರ್ಧದಲ್ಲೇ ಗೋಲು ಬಾರಿಸಿ ಮುನ್ನಡೆ ಸಾಧಿಸುವ ಯತ್ನವನ್ನು ಪೋಲೆಂಡ್ ಗೋಲ್ ಕೀಪರ್ ವಿಫಲಗೊಳಿಸಿದರು. ಪೋಲೆಂಡ್ ಗೋಲ್ ಕೀಪರ್ ವೊಚೆಕ್ ಸ್ಟ್ಯಾನ್ಸೆ ಅದ್ಭುತ ಗೋಲು ಕೀಪಿಂಗ್ ಮಾಡುವ ಮೂಲಕ ಗಮನ ಸೆಳೆದರು. ಲಿಯೋನೆಲ್ ಮೆಸ್ಸಿಗೆ ಸಿಕ್ಕಿದ್ದ ಪೆನಾಲ್ಟಿ ಗೋಲು ಅವಕಾಶವನ್ನು ವಿಫಲಗೊಳಿಸುವಲ್ಲಿಯೂ ಪೋಲೆಂಡ್ ಗೋಲ್ ಕೀಪರ್ ವೊಚೆಕ್ ಸ್ಟ್ಯಾನ್ಸೆ ಯಶಸ್ವಿಯಾದರು. ಅಂದಹಾಗೆ ಇದು ಮೆಸ್ಸಿ ಫುಟ್ಬಾಲ್ ಜೀವನದಲ್ಲಿ 31ನೇ ಬಾರಿಗೆ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಲು ವಿಫಲವಾಗಿದ್ದು.