Asianet Suvarna News Asianet Suvarna News

FIFA ಅಮಾನತು ತೆರವಿಗೆ ಕ್ರಮ ಕೈಗೊಳ್ಳಿ: ಕೇಂದ್ರಕ್ಕೆ ಸುಪ್ರೀಂ ಕೋರ್ಚ್‌ ಸೂಚನೆ

* ಅಖಿಲ ಭಾರತ ಫುಟ್ಬಾಲ್‌ ಫೆಡರೇಶನ್‌ ಬ್ಯಾನ್ ಮಾಡಿರುವ ಫಿಫಾ
* ಫಿಫಾ ಅಮಾನತು ತೆರವಿಗೆ ಕ್ರಮಕೈಗೊಳ್ಳಲು ಸುಪ್ರೀಂ ಕೋರ್ಟ್ ಸೂಚನೆ
* ಈಗಾಗಲೇ 2 ಬಾರಿ ಫಿಫಾ ಜೊತೆ ಮಾತುಕತೆ ನಡೆಸಲಾಗಿದೆ ಎಂದ ಕೇಂದ್ರ ಸರ್ಕಾರ

FIFA Ban Supreme Court Tells Government To Work On Lifting AIFF Suspension kvn
Author
Bengaluru, First Published Aug 18, 2022, 10:04 AM IST

ನವದೆಹಲಿ(ಆ.18): ಅಖಿಲ ಭಾರತ ಫುಟ್ಬಾಲ್‌ ಫೆಡರೇಶನ್‌(ಎಐಎಫ್‌ಎಫ್‌) ಮೇಲಿನ ಅಂತಾರಾಷ್ಟ್ರೀಯ ಫುಟ್ಬಾಲ್ ಫೆಡರೇಶನ್‌(ಫಿಫಾ) ವಿಧಿಸಿರುವ ಅಮಾನತು ತೆರವಿಗೆ ಬೇಕಾದ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲು ಬುಧವಾರ ಸುಪ್ರೀಂ ಕೋರ್ಚ್‌ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಎಐಎಫ್‌ಎಫ್‌ಗೆ ಸಂಬಂಧಪಟ್ಟಪ್ರಕರಣದ ವಿಚಾರಣೆಯನ್ನು ಬುಧವಾರ ಪರಿಗಣಿಸಿದ ಸುಪ್ರೀಂ, ಅಕ್ಟೋಬರ್‌ನಲ್ಲಿ ನಡೆಯಬೇಕಿರುವ ಮಹಿಳಾ ಅಂಡರ್‌-17 ವಿಶ್ವಕಪ್‌ ಆಯೋಜಿಸಲು ಹಾಗೂ ಫಿಫಾ ಹೇರಿರುವ ಅಮಾನತು ತೆರವಿಗೆ ಸಕ್ರಿಯ ಪಾತ್ರ ವಹಿಸಿ ಎಂದು ಸೂಚಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ, ಈಗಾಗಲೇ 2 ಬಾರಿ ಫಿಫಾ ಜೊತೆ ಮಾತುಕತೆ ನಡೆಸಲಾಗಿದೆ ಎಂದಿದೆ.

ಭಾರತೀಯ ಫುಟ್ಬಾಲ್‌ ಫೆಡರೇಷನ್‌ಗೆ ಫಿಫಾ ಬ್ಯಾನ್‌

85 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಖಿಲ ಭಾರತ ಫುಟ್ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ನಿಷೇಧಕ್ಕೊಳಗಾಗಿದ್ದು, ‘ತನ್ನ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ಫಿಫಾ ತಿಳಿಸಿದೆ.

ಸುಪ್ರೀಂಕೋರ್ಚ್‌ ನೇಮಿತ ಆಡಳಿತ ಮಂಡಳಿ(ಸಿಒಎ)ಯನ್ನು ರದ್ದುಗೊಳಿಸಿ, ಕಾನೂನು ತಿದ್ದುಪಡಿ ಮಾಡಿದ ಬಳಿಕ ನಿಷೇಧ ಹಿಂಪಡೆಯುವುದಾಗಿ ಫಿಫಾ ಸ್ಪಷ್ಟಪಡಿಸಿದೆ. 2020ರ ಡಿಸೆಂಬರ್‌ನಲ್ಲಿ ಎಐಎಫ್‌ಎಫ್‌ ಚುನಾವಣೆ ನಡೆಯಬೇಕಿತ್ತು. ಆದರೆ ಚುನಾವಣೆ ನಡೆಸದೆ ಫೆಡರೇಷನ್‌ನ ಅಧ್ಯಕ್ಷರಾಗಿ ಮಾಜಿ ಕೇಂದ್ರ ಸಚಿವ, ಎನ್‌ಸಿಪಿ ಮುಖಂಡ ಪ್ರಫುಲ್‌ ಪಟೇಲ್‌ ಮುಂದುವರೆದಿದ್ದರು. ಹೀಗಾಗಿ ಮೇ 18ರಂದು ಸುಪ್ರೀಂ ಕೋರ್ಚ್‌ ಪಟೇಲ್‌ರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ, ಮೂರು ಮಂದಿ ಸದಸ್ಯರನ್ನು ಒಳಗೊಂಡ ಆಡಳಿತ ಸಮಿತಿಯನ್ನು ರಚನೆ ಮಾಡಿತ್ತು. ಸಮಿತಿ ರಚನೆಯಿಂದ ಭಾರತೀಯ ಫುಟ್ಬಾಲ್‌ನ ಆಡಳಿತದಲ್ಲಿ ‘ಹೊರಗಿನವರ’ ಹಸ್ತಕ್ಷೇಪವಾಗುತ್ತಿದೆ ಎಂದು ಮೇ 23ರಂದು ಪ್ರಫುಲ್‌ ಫಿಫಾಗೆ ದೂರು ನೀಡಿದ್ದರು.

ಆಡಳಿತ ಸಮಿತಿಯು ರಾಷ್ಟ್ರೀಯ ಕ್ರೀಡಾ ನೀತಿ ಮತ್ತು ಮಾರ್ಗಸೂಚಿಯ ಅನ್ವಯ ಸಂವಿಧಾನ ರಚನೆ ಮಾಡಬೇಕು ಎಂದು ಸುಪ್ರೀಂಕೋರ್ಚ್‌ ಸೂಚಿಸಿತ್ತು. ಆದರೆ ಸಿಒಎ ಭಾರತೀಯ ಫುಟ್ಬಾಲ್‌ನ ದೈನಂದಿನ ಚಟುವಟಿಕೆಗಳ ಮೇಲ್ವಿಚಾರಣೆ ನಡೆಸುವುದನ್ನು ವಿರೋಧಿಸಿದ್ದ ಫಿಫಾ, ಆದಷ್ಟುಬೇಗ ಸಮಿತಿಯನ್ನು ರದ್ದುಗೊಳಿಸಿ ಸ್ವತಂತ್ರ ಚುನಾವಣಾ ಸಮಿತಿಯ ಕಣ್ಗಾವಲಿನಲ್ಲಿ ಚುನಾವಣೆ ನಡೆಸಿ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡುವಂತೆ ಸೂಚಿಸಿತ್ತು. ಫಿಫಾ ಸೂಚನೆಯನ್ನು ಪಾಲಿಸದ ಕಾರಣ ಎಐಎಫ್‌ಎಫ್‌ ಮೇಲೆ ನಿಷೇಧ ಹೇರಲಾಗಿದೆ.

FIFA suspends AIFF ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಮಾನ್ಯತೆ ರದ್ದುಪಡಿಸಿದ ಫಿಫಾ..! ಕಾರಣ ಏನು?

ತನ್ನ ಯಾವುದೇ ಸದಸ್ಯ ರಾಷ್ಟ್ರಗಳ ಫುಟ್ಬಾಲ್‌ ಸಂಸ್ಥೆ ಅಥವಾ ಫೆಡರೇಷನ್‌ಗಳಲ್ಲಿ ಸರ್ಕಾರ ಇಲ್ಲವೇ ನ್ಯಾಯಾಲಯ ನೇಮಿತ ಆಡಳಿತ ಸಮಿತಿ ಕಾರ‍್ಯನಿರ್ವಹಿಸುವುದಕ್ಕೆ ಫಿಫಾ ಅನುಮತಿ ನೀಡುವುದಿಲ್ಲ.

ಡುರಾಂಡ್‌ ಕಪ್‌ ಫುಟ್ಬಾಲ್‌: ಬೆಂಗಳೂರು ಎಫ್‌ಸಿಗೆ ಜಯ

ಕೋಲ್ಕತಾ: ಡುರಾಂಡ್‌ ಕಪ್‌ ಫುಟ್ಬಾಲ್‌ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ತಂಡ ಶುಭಾರಂಭ ಮಾಡಿದೆ. ಬುಧವಾರ ಜಮ್ಶೇಡ್‌ಪುರ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಬಿಎಫ್‌ಸಿ 2-1 ಗೋಲುಗಳಿಂದ ಜಯಗಳಿಸಿತು. ನಾಯಕ ಸುನಿಲ್‌ ಚೆಟ್ರಿ 23ನೇ ನಿಮಿಷದಲ್ಲಿ ಗೋಲು ಬಾರಿಸಿ ಮುನ್ನಡೆ ಒದಗಿಸಿದರೆ, ತಂಡದ ಪರ ಮೊದಲ ಪಂದ್ಯವಾಡುತ್ತಿರುವ ಪಿಜಿಯ ರಾಯ್‌ ಕೃಷ್ಣ 56ನೇ ನಿಮಿಷದಲ್ಲಿ ಹೊಡೆದ ಗೋಲಿನಿಂದ ತಂಡ ಮೇಲುಗೈ ಸಾಧಿಸಿತು. ಜಮ್ಶೇಡ್‌ಪುರದ ರಿಶಿ 62ನೇ ನಿಮಿಷದಲ್ಲಿ ತಂಡದ ಪರ ಏಕೈಕ ಗೋಲು ಬಾರಿಸಿದರು. ಬಿಎಫ್‌ಸಿ ಆ.23ಕ್ಕೆ ಇಂಡಿಯನ್‌ ಏರ್‌ಫೋ​ರ್ಸ್ ವಿರುದ್ಧ ಆಡಲಿದೆ.

Follow Us:
Download App:
  • android
  • ios