ಪ್ರತಿ ಜಿಲ್ಲೆಯಲ್ಲೂ ಫುಟ್ಬಾಲ್ ಕ್ರೀಡಾಂಗಣ: NA ಹ್ಯಾರಿಸ್
ರಾಜ್ಯ ಫುಟ್ಬಾಲ್ ಸಂಸ್ಥೆ ಅಧ್ಯಕ್ಷರಾಗಿ ಎನ್ ಎ ಹ್ಯಾರಿಸ್ ಪುನರಾಯ್ಕೆ
ಬೆಂಗಳೂರಿನಲ್ಲಿ ಫುಟ್ಬಾಲ್ ಮ್ಯೂಸಿಯಂ ನಿರ್ಮಾಣ
ಜಿಲ್ಲಾ ಮಟ್ಟದಲ್ಲಿ ಫುಟ್ಬಾಲ್ ಕ್ರೀಡಾಂಗಣ ನಿರ್ಮಿಸಲು ಯೋಜನೆ
ಬೆಂಗಳೂರು(ಜು.31): ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಫುಟ್ಬಾಲ್ ಕ್ರೀಡಾಂಗಣ ನಿರ್ಮಿಸುವ ಯೋಜನೆ ಇದ್ದು, ಅಗತ್ಯ ಜಾಗವನ್ನು ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸದ್ಯದಲ್ಲೇ ಮನವಿ ಮಾಡಲಿದ್ದೇವೆ ಎಂದು ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ(ಕೆಎಸ್‌ಎಫ್‌ಎ) ಅಧ್ಯಕ್ಷರಾಗಿ ಪುನರಾಯ್ಕೆಯಾದ ಶಾಸಕ ಎನ್.ಎ.ಹ್ಯಾರಿಸ್ ಹೇಳಿದರು.
ಭಾನುವಾರ ನಗರದ ಕೆಎಸ್‌ಎಫ್ಎ ಕ್ರೀಡಾಂಗಣದ ಆವರಣದಲ್ಲಿ ನಡೆದ 54ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನೂತನ ಆಡಳಿತ ಮಂಡಳಿಯ ಆಯ್ಕೆ ನಡೆಯಿತು. ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಹ್ಯಾರಿಸ್, ‘ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಫುಟ್ಬಾಲ್ ಅಭಿವೃದ್ಧಿ ಕಂಡಿದೆ. 55 ವರ್ಷ ಬಳಿಕ ನಮ್ಮ ತಂಡ ಸಂತೋಷ್ ಟ್ರೋಫಿ ಗೆದ್ದಿದೆ. ಕಳೆದ ತಿಂಗಳು ಯಶಸ್ವಿಯಾಗಿ ಸ್ಯಾಫ್ ಚಾಂಪಿಯನ್‌ಶಿಪ್ ಆಯೋಜಿಸಿದ್ದೇವೆ. ರಾಜ್ಯದಲ್ಲಿ ಫುಟ್ಬಾಲ್ ಪ್ರತಿಭೆಗಳಿಗೆ ಕೊರತೆ ಇಲ್ಲ. ಪ್ರತಿಭೆಗಳಿಗೆ ಸೂಕ್ತ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಫುಟ್ಬಾಲ್ ಕ್ರೀಡಾಂಗಣ ನಿರ್ಮಿಸಲು ಯೋಜನೆ ರೂಪಿಸಿದ್ದು, ಸದ್ಯದಲ್ಲೇ ಸರ್ಕಾರಕ್ಕೆ ಜಾಗ ಮಂಜೂರು ಮಾಡುವಂತೆ ಮನವಿ ಮಾಡಲಿದ್ದೇವೆ. ಬೆಂಗಳೂರಿನ ಕ್ರೀಡಾಂಗಣವನ್ನು ಮೇಲ್ದರ್ಜೆಗೇರಿಸುವ ಕಾರ್ಯ ಮುಂದಿನ 6 ತಿಂಗಳಲ್ಲಿ ಆಗಲಿದೆ’ ಎಂದರು.
ಕೊರಿಯಾದಲ್ಲಿ ಭಾರತ ಶೂಟರ್‌ಗಳ ದುರ್ವರ್ತನೆ..! ಪುರುಷ ಶೂಟರ್‌ಗಳ ಕೊಠಡಿಯಲ್ಲಿ ಇಬ್ಬರು ಮಹಿಳಾ ಶೂಟರ್?
ಬೆಳಗಾವಿಯಲ್ಲಿ ಅಂತಾರಾಜ್ಯ ಅಂಡರ್-17 ಟೂರ್ನಿ
ಕೆಲ ವರ್ಷಗಳಿಂದ ಕರ್ನಾಟಕ ಹಲವು ರಾಷ್ಟ್ರೀಯ ಟೂರ್ನಿಗಳಿಗೆ ಆತಿಥ್ಯ ವಹಿಸುತ್ತಿದ್ದು, ಸದ್ಯದಲ್ಲೇ ಬೆಳಗಾವಿಯಲ್ಲಿ ಅಂತಾರಾಜ್ಯ ಅಂಡರ್-17 ಫುಟ್ಬಾಲ್ ಟೂರ್ನಿ ಆಯೋಜಿಸಲು ಸಿದ್ಧತೆ ನಡೆಸುತ್ತಿರುವುದಾಗಿ ಹ್ಯಾರಿಸ್ ತಿಳಿಸಿದರು. ‘ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಬೇರೆ ಬೇರೆ ನಗರಗಳಲ್ಲೂ ಫುಟ್ಬಾಲ್ ಟೂರ್ನಿಗಳನ್ನು ಆಯೋಜಿಸುವ ಗುರಿ ಹಾಕಿಕೊಂಡಿದ್ದೇವೆ’ ಎಂದು ಹ್ಯಾರಿಸ್ ಮಾಹಿತಿ ನೀಡಿದರು.
ಬೆಂಗಳೂರಲ್ಲಿ ಫುಟ್ಬಾಲ್ ಮ್ಯೂಸಿಯಂ!
ಕರ್ನಾಟಕದ ಫುಟ್ಬಾಲ್ ಇತಿಹಾಸವನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಬೆಂಗಳೂರಿನ ಫುಟ್ಬಾಲ್ ಕ್ರೀಡಾಂಗಣದಲ್ಲಿ ಮ್ಯೂಸಿಯಂವೊಂದನ್ನು ಸ್ಥಾಪಿಸುವುದಾಗಿ ತಿಳಿಸಿದ ಹ್ಯಾರಿಸ್, ರಾಜ್ಯ ಫುಟ್ಬಾಲ್‌ಗೆ ಸಂಬಂಧಿಸಿದ ಹಲವು ಆಸಕ್ತಿದಾಯಕ ವಸ್ತು, ಮಾಹಿತಿಗಳನ್ನು ಈ ಮ್ಯೂಸಿಯಂ ಒಳಗೊಂಡಿರಲಿದೆ ಎಂದರು.
Kylian Mbappe:ಸೌದಿ ಕ್ಲಬ್ ರಾಜಾತಿಥ್ಯ ತಿರಸ್ಕರಿಸಿ ಎಂಬಾಪೆ ಕಳೆದುಕೊಂಡಿದ್ದೇನು?
ನೂತನ ಕಾರ್ಯದರ್ಶಿಯಾಗಿ ಮಾಜಿ ಫುಟ್ಬಾಲಿಗ ಕುಮಾರ್
ರಾಜ್ಯ ಸಂಸ್ಥೆಯ ನೂತನ ಕಾರ್ಯದರ್ಶಿಯಾಗಿ ಮಾಜಿ ಫುಟ್ಬಾಲಿಗ ಎಂ.ಕುಮಾರ್ ಆಯ್ಕೆಯಾಗಿದ್ದಾರೆ. ಕಳೆದ ಅವಧಿಯಲ್ಲಿ ಕಾರ್ಯದರ್ಶಿಯಾಗಿದ್ದ ಎಂ.ಸತ್ಯನಾರಾಯಣ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್)ನ ಉಪ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು, ಸೋಮವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ.