ಯುರೋ ಕಪ್ ಫುಟ್ಬಾಲ್: ಬೆಲ್ಜಿಯಂ, ಜೆಕ್ ರಿಪಬ್ಲಿಕ್ ಕ್ವಾರ್ಟರ್‌ಗೆ
* ಯುರೋ ಕಪ್ ಫುಟ್ಬಾಲ್‌ನಲ್ಲಿ ಕ್ವಾರ್ಟರ್ ಫೈನಲ್‌ಗೇರಿದ ಬೆಲ್ಜಿಯಂ ಹಾಗೂ ಜೆಕ್ ರಿಪಬ್ಲಿಕ್
* ಕ್ರಿಸ್ಟಿಯಾನೋ ರೊನಾಲ್ಡೋ ನೇತೃತ್ವದ ಪೋರ್ಚುಗಲ್ ತಂಡಕ್ಕೆ ಸೋಲಿನ ಶಾಕ್
* ಬೆಲ್ಜಿಯಂ ಎದುರು ಸೋತು ಹೊರಬಿದ್ದ ಪೋರ್ಚುಗಲ್ ಫುಟ್ಬಾಲ್ ತಂಡ
ಬುಡಾಪೆಸ್ಟ್(ಜೂ.29): ವಿಶ್ವದ ನಂ.1 ಶ್ರೇಯಾಂಕಿತ ಬೆಲ್ಜಿಯಂ ಹಾಗೂ ಯುರೋಪ್‌ನ ಮತ್ತೊಂದು ಪ್ರಬಲ ತಂಡ ಜೆಕ್ ರಿಪಬ್ಲಿಕ್, ಪ್ರತಿಷ್ಠಿತ ಯುರೋ ಕಪ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ. ಇದೇ ವೇಳೆ, 2016ರಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದಿದ್ದ ಹಾಲಿ ಚಾಂಪಿಯನ್ ಪೋರ್ಚುಗಲ್ ಮತ್ತು ನೆದರ್ಲೆಂಡ್ ತಂಡಗಳು ಸೋತು ಹೊರಬಿದ್ದಿವೆ.
ರೋಚಕ ಪಂದ್ಯದಲ್ಲಿ ಬೆಲ್ಜಿಯಂ ತಂಡ ಪೋರ್ಚುಗಲ್ ವಿರುದ್ಧ 1-0 ಜಯ ಸಾಧಿಸಿತು. ಮೊದಲಾರ್ಧದ 42ನೇ ನಿಮಿಷದಲ್ಲೇ ಥಾರ್ಗನ್ ಹಜಾರ್ಡ್ ಗೋಲು ಗಳಿಸಿ ಬೆಲ್ಜಿಯಂಗೆ ಮುನ್ನಡೆ ಒದಗಿಸಿದರು. ನಂತರ, ವಿಶ್ವಖ್ಯಾತ ಕ್ರಿಸ್ಟಿಯಾನೋ ರೊನಾಲ್ಡೋ ಅವರನ್ನು ಹೊಂದಿದ್ದ ಬಲಿಷ್ಠ ಪೋರ್ಚುಗಲ್‌ಗೆ ಗೋಲು ಗಳಿಸುವ ಅವಕಾಶವನ್ನೇ ನೀಡದೆ ಬೆಲ್ಜಿಯಂ ಮುಂದಿನ ಸುತ್ತಿಗೆ ಮುನ್ನಡೆಯಿತು.
ಯೂರೋ ಕಪ್: ಕ್ವಾರ್ಟರ್ ಫೈನಲ್‌ಗೆ ಇಟಲಿ, ಡೆನ್ಮಾರ್ಕ್ ಪ್ರವೇಶ
ಇದಕ್ಕೂ ಮುನ್ನ ನಡೆದ ಇನ್ನೊಂದು ಪಂದ್ಯದಲ್ಲಿ ಜೆಕ್ ರಿಪಬ್ಲಿಕ್ ಫುಟ್ಬಾಲ್ ತಂಡವು ನೆದರ್ಲೆಂಡ್ ವಿರುದ್ಧ 2-0 ಅಂತರದ ಗೆಲುವು ಸಾಧಿಸಿತು. 55ನೇ ನಿಮಿಷದಲ್ಲಿ ಮ್ಯಾಥ್ಯೂಸ್ ಡಿ ಲಿಟ್ ಕೆಂಪು ಚೀಟಿ ಪಡೆದ ಬಳಿಕ ನೆದರ್ಲೆಂಡ್ ಬಲ 10ಕ್ಕಿಳಿಯಿತು. ನಂತರ ದಾಳಿ ತೀವ್ರಗೊಳಿಸಿದ ಜೆಕ್ ಆಟಗಾರರು 68 ಹಾಗೂ 80ನೇ ನಿಮಿಷದಲ್ಲಿ ನಿರ್ಣಾಯಕ ಗೋಲುಗಳನ್ನು ಗಳಿಸಿದರು.
ರೊನಾಲ್ಡೋಗೆ ನಿರಾಸೆ: ಅಂತಾರಾಷ್ಟ್ರೀಯ ಮಟ್ಟದಲ್ಲಿ 110ನೇ ಗೋಲು ಗಳಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಳ್ಳುವ ಹೊಸ್ತಿಲಲ್ಲಿದ್ದ ರೊನಾಲ್ಡೋ ನಿರಾಸೆ ಅನುಭವಿಸಿದರು. ಒಂದೂ ಗೋಲು ಗಳಿಸದ ಅವರಿಗೆ ತಂಡವನ್ನು ಮತ್ತೊಮ್ಮೆ ಚಾಂಪಿಯನ್ ಆಗುವತ್ತ ಮುನ್ನಡೆಸಲು ಹಾಗೂ ಗರಿಷ್ಠ ಗೋಲು ಗಳಿಕೆಯ ವಿಶ್ವದಾಖಲೆ ಬರೆಯಲು ಸಾಧ್ಯವಾಗಲಿಲ್ಲ. 109 ಗೋಲು ಗಳಿಸಿರುವ ಇರಾನ್‌ನ ಅಲ್ ದಾಯಿ ಜತೆ ಅವರು ಜಂಟಿ ಅಗ್ರಸ್ಥಾನದಲ್ಲಿದ್ದಾರೆ.
ಇಂದಿನ ಪಂದ್ಯಗಳು
ಜರ್ಮನಿ - ಇಂಗ್ಲೆಂಡ್ (ರಾತ್ರಿ 9.30)
ಸ್ವೀಡನ್ - ಉಕ್ರೇನ್ (ತಡರಾತ್ರಿ 12.30)