ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ವಿಶ್ವಕಪ್ ಗೆಲ್ಲುವ ಕನಸು ಮತ್ತೊಮ್ಮೆ ಭಗ್ನಗೊಂಡಿದೆ. ಸ್ಪೇನ್ ವಿರುದ್ಧದ ಸೋಲಿನ ನಂತರ, ಇದು ತಮ್ಮ ಕೊನೆಯ ವಿಶ್ವಕಪ್ ಎಂದು ಹೇಳಿರುವ ರೊನಾಲ್ಡೊ ಮೈದಾನದಲ್ಲೇ ಕಣ್ಣೀರಿಟ್ಟಿದ್ದು, ಅವರ 23 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನದ ವಿಶ್ವಕಪ್ ಅಭಿಯಾನಕ್ಕೆ ಭಾವನಾತ್ಮಕ ತೆರೆ ಬಿದ್ದಿದೆ.

ತಮ್ಮ ಕಾಲ್ಚಳಕದ ಮೂಲಕವೇ ಜಾಗತಿಕ ಮಟ್ಟದಲ್ಲಿ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆದ ಈ ಕಾಲಘಟ್ಟದ ಶ್ರೇಷ್ಠ ಫುಟ್ಬಾಲಿಗ ರೊನಾಲ್ಡೊ, ವಿಶ್ವ ಕಿರೀಟ ಮುಡಿಗೇರಿಸಲಾಗದೆ ಕಣ್ಣೀರಿಟ್ಟಿದ್ದಾರೆ. 23 ವರ್ಷಗಳಿಂದ ಅಂತಾರಾಷ್ಟ್ರೀಯ ಫುಟ್ಬಾಲ್‌ ಆಡುತ್ತಿರುವ ರೊನಾಲ್ಡೊ, 6 ಬಾರಿ ವಿಶ್ವಕಪ್‌ ಆಡಿದ್ದಾರೆ. ಆದರೆ ಒಮ್ಮೆಯೂ ಅವರಿಗೆ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಇದು ತಮ್ಮ ಕೊನೆ ವಿಶ್ವಕಪ್‌’ ಎಂದು ಈಗಾಗಲೇ ಸ್ಪಷ್ಟಪಡಿಸಿರುವ ರೊನಾಲ್ಡೊ, ಸೋಮವಾರ ಸ್ಪೇನ್‌ ವಿರುದ್ಧ ಪಂದ್ಯದ ಬಳಿಕ ಗಳಗಳನೆ ಅತ್ತಿದ್ದಾರೆ. ಇದರ ಜೊತೆಗೆ ಅವರ ಅಭಿಮಾನಿಗಳೂ ತಮ್ಮ ನೆಚ್ಚಿನ ಫುಟ್ಬಾಲಿಗನ ಕಂಡು ಮರುಗಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ರೊನಾಲ್ಡೊ, ‘ಈ ರೀತಿ ವಿಶ್ವಕಪ್‌ನಿಂದ ನಿರ್ಗಮಿಸುತ್ತಿರುವುದಕ್ಕೆ ಬೇಸರವಿದೆ. ನಾನು ತಂಡಕ್ಕಾಗಿ ಎಲ್ಲವನ್ನೂ ನೀಡಿದ್ದೇನೆ. ಪೋರ್ಚುಗಲ್‌ ತಂಡದಲ್ಲಿ 3 ಟ್ರೋಫಿ ಗೆದ್ದಿದ್ದೇನೆ. 2016ರ ಯುರೋ ಕಪ್‌ ವಿಶ್ವಕಪ್‌ಗೆ ಸಮಾನ’ ಎಂದಿದ್ದಾರೆ. 

ಅವರು ವಿಶ್ವಕಪ್‌ನಲ್ಲಿ 27 ಪಂದ್ಯಗಳನ್ನಾಡಿದ್ದು, 11 ಗೋಲು ಬಾರಿಸಿದ್ದಾರೆ. 6 ವಿಶ್ವಕಪ್‌ ಆವೃತ್ತಿಗಳಲ್ಲೂ ಗೋಲು ಹೊಡೆದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ.

Scroll to load tweet…

ರೊನಾಲ್ಡೋ ವಿಶ್ವಕಪ್ ಕನಸು ಭಗ್ನ:

ಸೋಮವಾರ ಮಧ್ಯರಾತ್ರಿ ನಡೆದ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಪೋರ್ಚುಗಲ್‌ ವಿರುದ್ಧ ಮಾಜಿ ಚಾಂಪಿಯನ್‌ ಸ್ಪೇನ್‌ 1-0 ಗೋಲಿನಿಂದ ಜಯಭೇರಿ ಬಾರಿಸಿತು. ಈ ಮೂಲಕ 2010ರ ಬಳಿಕ ಸ್ಪೇನ್ ಮೊದಲ ಬಾರಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿತು. ಅಂತಿಮ 8ರ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ಗೆ ಬೆಲ್ಜಿಯಂ ಸವಾಲು ಎದುರಾಗಲಿದೆ.

ಅಮೆರಿಕ ವಿರುದ್ಧ 4-1 ಗೋಲಿನ ಗೆಲುವು, ಬೆಲ್ಜಿಯಂ ಕ್ವಾರ್ಟರ್‌ಗೆ

ಸಿಯಾಟಲ್‌(ಅಮೆರಿಕ): ಆತಿಥೇಯ ಅಮೆರಿಕ ತಂಡ ಈ ಬಾರಿ ಫಿಫಾ ವಿಶ್ವಕಪ್‌ನಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಹಂತದಲ್ಲೇ ಅಭಿಯಾನ ಕೊನೆಗೊಳಿಸಿದೆ. ತಂಡ ಬೆಲ್ಜಿಯಂ ವಿರುದ್ಧ ಪಂದ್ಯದಲ್ಲಿ 1-4 ಗೋಲುಗಳಿಂದ ಹೀನಾಯವಾಗಿ ಸೋಲನುಭವಿಸಿತು. 25 ವರ್ಷದ ಚಾರ್ಲ್ಸ್ ಡೆ ಕೆಟೆಲೇರೆ 2 ಗೋಲು ಹಾಗೂ 1 ಅಸಿಸ್ಟ್‌ ಮೂಲಕ ಬೆಲ್ಜಿಯಂ ತಂಡವನ್ನು ಅಂತಿಮ 8ರ ಘಟ್ಟಕ್ಕೆ ತಲುಪಿಸಿದರೆ, ಅಮೆರಿಕವನ್ನು ಅದರದೇ ತವರಿನಲ್ಲಿ ಸೋಲುವಂತೆ ಮಾಡಿತು.

9ನೇ ನಿಮಿಷದಲ್ಲಿ ಕೆಟೆಲೇರೆ ಗೋಲು ಬಾರಿಸಿ ಬೆಲ್ಜಿಯಂಗೆ ಮುನ್ನಡೆ ಒದಗಿಸಿದರು. 31ನೇ ನಿಮಿಷದಲ್ಲಿ ಮಲಿಕ್ ಟಿಲ್‌ಮ್ಯಾನ್‌ ಹೊಡೆದ ಗೋಲಿನಿಂದಾಗಿ ಅಮೆರಿಕ ಸಮಬಲ ಸಾಧಿಸಿತು. ಆದರೆ ಇದಾಗಿ 2ನೇ ನಿಮಿಷದಲ್ಲೇ ಕೆಟೆಲೇರೆ ಮತ್ತೊಂದು ಗೋಲು ದಾಖಲಿಸಿ ಬೆಲ್ಜಿಯಂ ಮೇಲುಗೈ ಸಾಧಿಸಲು ನೆರವಾದರು.

ದ್ವಿತಿಯಾರ್ಧದಲ್ಲಿ ಹ್ಯಾನ್ಸ್‌ ವ್ಯಾನಾಕೆನ್‌(57ನೇ ನಿಮಿಷ) ಗೋಲು ಗಳಿಸಿ ಬೆಲ್ಜಿಯಂ ಮುನ್ನಡೆ ಹೆಚ್ಚಿಸಿದರು. ಇಂಜುರಿ ಸಮಯದಲ್ಲಿ ರೊಮೇಲು ಲುಕಾಕು ಬಾರಿಸಿ ಗೆಲುವಿನ ಅಂತರವನ್ನು ಹೆಚ್ಚಿಸಿದರು. ಇದರೊಂದಿಗೆ ತಂಡ 4ನೇ ಬಾರಿ ಕ್ವಾರ್ಟರ್‌ ಫೈನಲ್‌ಗೇರಿದ್ದು, ಸ್ಪೇನ್‌ ವಿರುದ್ಧ ಸೆಣಸಾಡಲಿದೆ.

ವಿಶ್ವಕಪ್‌ ಆತಿಥ್ಯದ ಮೂರೂ ದೇಶಗಳು ವಿಶ್ವಕಪ್‌ನಿಂದ ಔಟ್‌

ಈ ಬಾರಿ ಫಿಫಾ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿರುವ ಮೂರೂ ದೇಶಗಳು ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲೇ ಸೋತು ಹೊರಬಿದ್ದಿವೆ. ಕೆನಡಾ ತಂಡ ಮೊರಾಕ್ಕೊ ವಿರುದ್ಧ ಸೋತರೆ, ಮೆಕ್ಸಿಕೊಗೆ ಇಂಗ್ಲೆಂಡ್‌ ವಿರುದ್ಧ ಸೋಲು ಎದುರಾಗಿತ್ತು. ಅಮೆರಿಕ ತಂಡ ಬೆಲ್ಜಿಯಂ ವಿರುದ್ಧ ಸೋಲುವುದರೊಂದಿಗೆ ಆತಿಥೇಯ ದೇಶಗಳ ಅಭಿಯಾನ ಕೊನೆಗೊಂಡಿದೆ.

ಅಮೆರಿಕ ಸತತ 4 ವಿಶ್ವಕಪ್‌ನಲ್ಲಿ 16ರ ಸುತ್ತಿನಲ್ಲಿ ಹೊರಕ್ಕೆ

ಅಮೆರಿಕ ತಂಡ ತಾನಾಡಿದ ಕೊನೆ 4 ವಿಶ್ವಕಪ್‌ನಲ್ಲೂ ಅಂತಿಮ 16ರ ಸುತ್ತಿನಲ್ಲಿ ಹೊರಬಿದ್ದಿದೆ. 1930ರಲ್ಲಿ 3ನೇ ಸ್ಥಾನಿಯಾಗಿದ್ದ ತಂಡ, 2002ರಲ್ಲಿ ಕ್ವಾರ್ಟರ್‌ ಫೈನಲ್‌ಗೇರಿತ್ತು. 2010, 2014, 2022 ಹಾಗೂ 2026ರ ವಿಶ್ವಕಪ್‌ನಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಹಂತದಲ್ಲೇ ಅಭಿಯಾನ ಕೊನೆಗೊಳಿಸಿದೆ. 2018ರಲ್ಲಿ ತಂಡ ವಿಶ್ವಕಪ್‌ಗೆ ಅರ್ಹತೆ ಪಡೆದಿರಲಿಲ್ಲ.