Asianet Suvarna News Asianet Suvarna News

FIFA Awards: ಕ್ರಿಸ್ಟಿಯಾನೋ ರೊನಾಲ್ಡೋ ಮತ ಚಲಾಯಿಸಿದಿದ್ದರೂ ಪ್ರಶಸ್ತಿ ಗೆದ್ದ ಲಿಯೋನೆಲ್ ಮೆಸ್ಸಿ..!

2022ನೇ ಸಾಲಿನ ಫಿಫಾ ವಾರ್ಷಿಕ ಪ್ರಶಸ್ತಿ ಜಯಿಸಿದ ಲಿಯೋನೆಲ್ ಮೆಸ್ಸಿ
ಫಿಫಾ ವಿಶ್ವಕಪ್ ವಿಜೇತ ನಾಯಕ ಮೆಸ್ಸಿಗೆ ಒಲಿದ ಮತ್ತೊಂದು ಪ್ರಶಸ್ತಿ
ಕಿಲಿಯಾನ್ ಎಂಬಾಪೆ ಹಿಂದಿಕ್ಕಿ ಪ್ರಶಸ್ತಿ ಗೆದ್ದ ಮೆಸ್ಸಿ

Cristiano Ronaldo Did Not Cast Vote At FIFA Awards Where Lionel Messi Won kvn
Author
First Published Mar 1, 2023, 3:35 PM IST

ಪ್ಯಾರಿಸ್(ಮಾ.01): ಅರ್ಜೆಂಟೀನಾ ಫುಟ್ಬಾಲ್ ತಂಡದ ನಾಯಕ ಲಿಯೋನೆಲ್ ಮೆಸ್ಸಿ, 2022ನೇ ಸಾಲಿನ ಫಿಫಾ ವರ್ಷದ ಪುರುಷ ಫುಟ್ಬಾಲಿಗ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 2016ರಿಂದ ಫಿಫಾ ವಾರ್ಷಿಕ ಪ್ರಶಸ್ತಿ ಸ್ಪರ್ಧೆಯಲ್ಲಿ ಲಿಯೋನೆಲ್ ಮೆಸ್ಸಿ ಎರಡನೇ ಬಾರಿಗೆ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ಹೌದು, 35 ವರ್ಷದ ಲಿಯೋನೆಲ್ ಮೆಸ್ಸಿ, ಪ್ಯಾರಿಸ್ ಸೇಂಟ್ ಜರ್ಮೈನ್ ತಂಡದ ಸಹ ಆಟಗಾರ ಕಿಲಿಯಾನ್ ಎಂಬಾಪೆ ಹಾಗೂ ಕರಿಮ್‌ ಬೆಂಜೆಮಾ ಅವರನ್ನು ಹಿಂದಿಕ್ಕಿ ಪ್ರಶಸ್ತಿ ಜಯಿಸುವಲ್ಲಿ ಸಫಲರಾಗಿದ್ದಾರೆ. ಈ ಪ್ರಶಸ್ತಿಯನ್ನು ಕೆಲವು ಆಯ್ದ ರಾಷ್ಟ್ರೀಯ ತಂಡದ ನಾಯಕರು ಹಾಗೂ ಕೋಚ್‌ಗಳು ಮತ ಚಲಾಯಿಸುವ ಮೂಲಕ ವಿಜೇತರನ್ನು ಆಯ್ಕೆ ಮಾಡುತ್ತಾರೆ. 

ಒಂದು ಅಚ್ಚರಿಯ ಸಂಗತಿಯೆಂದರೆ, ಪೋರ್ಚುಗಲ್‌ ತಂಡದ ಪರ ಕ್ರಿಸ್ಟಿಯಾನೋ ರೊನಾಲ್ಡೋ ಬದಲಿಗೆ ಪೆಪೆ ಮತ ಚಲಾಯಿಸಿದರು. ಅಲ್‌ ನಸ್ರ್‌ ತಂಡದ ತಾರಾ ಆಟಗಾರರಾಗಿರುವ ಕ್ರಿಸ್ಟಿಯಾನೋ ರೊನಾಲ್ಡೋ, ಇತ್ತೀಚೆಗಷ್ಟೇ ಮುಕ್ತಾಯವಾದ ಕತಾರ್ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಕೆಲವು ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದರು. ಹೀಗಾಗಿ ಪೋರ್ಚುಗಲ್ ತಂಡದ ಪರ ಮತ ಚಲಾಯಿಸಲು ಪೆಪೆಗೆ ಅವಕಾಶ ನೀಡಲಾಗಿತ್ತು.

ಪೆಪೆ ಮೊದಲ ಆಯ್ಕೆಯ ರೂಪದಲ್ಲಿ ಕಿಲಿಯಾನ್ ಎಂಬಾಪೆ, ಆ ನಂತರದ ಆಯ್ಕೆಯ ರೂಪದಲ್ಲಿ ಲೂಕಾ ಮೊಡ್ರಿಕ್‌ ಮತ್ತು ಕರೀಂ ಬೆಂಜೆಮಾಗೆ ಮತ ಹಾಕಿದ್ದರು. ಈ ಪ್ರಶಸ್ತಿಗೆ ಆಯ್ಕೆ ಮಾಡಲು ಕೇವಲ ಕೆಲವು ರಾಷ್ಟ್ರಗಳು ನಾಯಕರು, ಕೋಚ್‌ಗಳು ಮಾತ್ರವಲ್ಲದೇ, ಪತ್ರಕರ್ತರು ಹಾಗೂ ಅಭಿಮಾನಿಗಳಿಗೂ ಅವಕಾಶ ನೀಡಲಾಗಿತ್ತು. ಕಳೆದ ವರ್ಷ ಅರ್ಜೆಂಟೀನಾಗೆ ಫಿಫಾ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಲಿಯೋನೆಲ್‌ ಮೆಸ್ಸಿ, ಇದೀಗ ಪ್ರತಿಷ್ಠಿತ ಪ್ರಶಸ್ತಿ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಕತಾರ್‌ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನಾ ಹಾಗೂ ಫ್ರಾನ್ಸ್‌ ತಂಡಗಳು ಮುಖಾಮುಖಿಯಾಗಿದ್ದವು. ದೋಹಾದಲ್ಲಿ ನಡೆದ ಫೈನಲ್‌ನಲ್ಲಿ ಲಿಯೋನೆಲ್ ಮೆಸ್ಸಿ ಎರಡು ಗೋಲು ಬಾರಿಸಿದ್ದರು. ಪಂದ್ಯ 3-3 ಅಂತರದಲ್ಲಿ ಟೈ ಆಗಿದ್ದಾಗ ಪೆನಾಲ್ಟಿ ಶೂಟೌಟ್‌ನಲ್ಲಿ ಮೆಸ್ಸಿ ಮತ್ತೊಂದು ಗೋಲು ಬಾರಿಸುವ ಮೂಲಕ ತಂಡವು ರೋಚಕ ಗೆಲುವು ಸಾಧಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. 

ಇನ್ನು ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಲಿಯೋನೆಲ್ ಮೆಸ್ಸಿ, " ಈ ವರ್ಷವೂ ನನ್ನ ಪಾಲಿಗೆ ಅತ್ಯಂತ ಸ್ಮರಣೀಯ ವರ್ಷವಾಗಿದೆ. ನಾನು ಸಾಕಷ್ಟು ಕಷ್ಟಪಟ್ಟು ನನ್ನ ಜೀವಮಾನದ ಕನಸನ್ನು ನನಸಾಗಿಸಿಕೊಂಡೆ. ಕೊನೆಯಲ್ಲಿ ಇದೀಗ ಮತ್ತೊಂದು ಸುಂದರ ಪ್ರಶಸ್ತಿಯು ನನ್ನದಾಗಿದ್ದಕ್ಕೆ ಖುಷಿಯಾಗುತ್ತಿದೆ" ಎಂದು ಹೇಳಿದ್ದಾರೆ.

Follow Us:
Download App:
  • android
  • ios