ಬಂಬೋಲಿಮ್(ನ.20): ಕೊರೋನಾ ಲಾಕ್‌ಡೌನ್‌ ಆದ 8 ತಿಂಗಳ ಬಳಿಕ ಭಾರತದಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದ ಟೂರ್ನಿಯೊಂದು ನಡೆಯುತ್ತಿದೆ. ನ.20 ರಿಂದ ಗೋವಾದಲ್ಲಿ 7ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿ ನಡೆಯಲಿದೆ. ಮಾಜಿ ಚಾಂಪಿಯನ್‌ ಎಟಿಕೆ ಮೋಹನ್‌ ಬಗಾನ್‌ ಹಾಗೂ ಕೇರಳ ಬ್ಲಾಸ್ಟರ್ಸ್‌ ತಂಡಗಳು, ಇಲ್ಲಿನ ಜಿಎಂಸಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಎದುರಾಗಲಿವೆ.

ನ.27 ರಂದು ಫತ್ರೋಡಾ ಸ್ಟೇಡಿಯಂನಲ್ಲಿ ನಡೆಯಲಿರುವ ಎಟಿಕೆ ಮೋಹನ್‌ ಬಗಾನ್‌ ಹಾಗೂ ಎಸ್‌ಸಿ ಈಸ್ಟ್‌ ಬೆಂಗಾಲ್‌ ನಡುವಿನ ಪಂದ್ಯ ರೋಚಕತೆ ಕೆರಳಿಸಿದೆ. 2020-21ರ ಐಎಸ್‌ಎಲ್‌ ಋುತುವಿನಲ್ಲಿ ಎಸ್‌ಸಿ ಬೆಂಗಾಲ್‌ ತಂಡ ಸೇರ್ಪಡೆಗೊಳ್ಳುವ ಮೂಲಕ 11 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಎಟಿಕೆ ತಂಡ, ಮೋಹನ್‌ ಬಗಾನ್‌ನೊಟ್ಟಿಗೆ ಸೇರ್ಪಡೆಗೊಂಡಿದೆ. ಕಳೆದ ಋುತುವಿನಲ್ಲಿ 95 ಪಂದ್ಯಗಳು ನಡೆದಿದ್ದವು. ಈ ಬಾರಿ 115 ಪಂದ್ಯಗಳು ನಡೆಯಲಿವೆ. ಕೊರೋನಾ ಭೀತಿ ಕಾರಣದಿಂದ ಎಲ್ಲಾ ಪಂದ್ಯಗಳು ಗೋವಾದ 3 ಕ್ರೀಡಾಂಗಣದಲ್ಲಿ ನಡೆಯಲಿವೆ.

ಪತ್ರೋಡಾದಲ್ಲಿರುವ ಜವಹಾರ್‌ಲಾಲ್‌ ನೆಹರು ಕ್ರೀಡಾಂಗಣ, ಬಂಬೋಲಿಮ್‌ನಲ್ಲಿರುವ ಜೆಎಂಸಿ ಕ್ರೀಡಾಂಗಣ ಹಾಗೂ ವಾಸ್ಕೋ ಡ ಗಾಮದಲ್ಲಿರುವ ತಿಲಕ್‌ ನಗರ ಮೈದಾನದಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ. ತಂಡಗಳ ಆಟಗಾರರ ಅಭ್ಯಾಸಕ್ಕಾಗಿ 12 ಮೈದಾನಗಳನ್ನು ಕಾಯ್ದಿರಿಸಲಾಗಿದೆ. ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಯಾವುದೇ ಪ್ರೇಕ್ಷಕರಿಗೆ ಕ್ರೀಡಾಂಗಣದೊಳಗೆ ಪ್ರವೇಶವಿಲ್ಲ. ಬಯೋ-ಬಬಲ್‌ ಸೆಕ್ಯುರ್‌ನಲ್ಲಿ ಆಟಗಾರರು ಪಂದ್ಯವನ್ನಾಡಲಿದ್ದಾರೆ. 11 ತಂಡಗಳನ್ನು 3 ಗುಂಪುಗಳಾಗಿ ವಿಂಗಡಿಸಲಾಗಿದೆ. ‘ಎ’, ‘ಬಿ’ ಮತ್ತು ‘ಸಿ’ ಗುಂಪನ್ನಾಗಿಸಲಾಗಿದೆ.

ಜಗತ್ತಿನ 82 ಪ್ರದೇಶಗಳಲ್ಲಿ ನೇರ ಪ್ರಸಾರ:

ಬಯೋ-ಬಬಲ್‌ನಲ್ಲಿ ನಡೆಯಲಿರುವ ಬಹು ನೀರಿಕ್ಷಿತ 7ನೇ ಆವೃತ್ತಿಯ ಐಎಸ್‌ಎಲ್‌ ಫುಟ್ಬಾಲ್‌ ಟೂರ್ನಿ ಜಗತ್ತಿನಾದ್ಯಂತ ಸುಮಾರು 82 ಪ್ರದೇಶಗಳಲ್ಲಿ ನೇರ ಪ್ರಸಾರವಾಗಲಿದೆ. ಐಎಸ್‌ಎಲ್‌, ಟಿವಿ ಮತ್ತು ಡಿಜಿಟಲ್‌ ವೇದಿಕೆಗಳಲ್ಲಿ 5 ಪಾಲುದಾರರ ಮೂಲಕ ವಿಶ್ವದ 82 ಪ್ರದೇಶಗಳಲ್ಲಿ ಪಂದ್ಯದ ನೇರ ಪ್ರಸಾರ ನೀಡಲು ಮುಂದಾಗಿದೆ. ಈ ಬಾರಿಯ ಐಎಸ್‌ಎಲ್‌ ಟೂರ್ನಿಯ ಪಂದ್ಯಗಳನ್ನು ಲಕ್ಷಾಂತರ ಭಾರತೀಯರು ವೀಕ್ಷಿಸುವುದಲ್ಲದೇ, ಅಂತಾರಾಷ್ಟ್ರೀಯವಾಗಿಯೂ ಯುಎಸ್‌ಎ, ಆಸ್ಪ್ರೇಲಿಯಾ, ಯುರೋಪ್‌, ಸೆಂಟ್ರಲ್‌ ಏಷ್ಯಾ, ಸೌತ್‌ ಈಸ್ಟ್‌ ಏಷ್ಯಾ, ಏಷ್ಯಾ ಫೆಸಿಪಿಕ್‌ನಲ್ಲಿ ಅಭಿಮಾನಿಗಳು ಫುಟ್ಬಾಲ್‌ ಪಂದ್ಯ ವೀಕ್ಷಿಸಲಿದ್ದಾರೆ. ಸ್ಟಾರ್‌ಸ್ಪೋರ್ಟ್ಸ್ 1,2,3, ಸ್ಟಾರ್‌ಗೋಲ್ಡ್‌ 2, ಸ್ಟಾರ್‌ಸ್ಪೋರಟ್ಸ್‌ ಕನ್ನಡ, ತಮಿಳು, ಬೆಂಗಾಲ್‌, ತೆಲುಗು, ಮರಾಠಿ, ಡಿಸ್ನಿ+ ಹಾಟ್‌ಸ್ಟಾರ್‌, ವಿಐಪಿ ಮತ್ತು ಜಿಯೋ ಟಿವಿ ಗಳಲ್ಲಿ ಪ್ರಸಾರವಾಗಲಿದೆ.

ಬೆಂಗಳೂರು ಎಫ್‌ಸಿ ವೇಳಾಪಟ್ಟಿ:

ದಿನಾಂಕ ಪಂದ್ಯ ಸಮಯ

ನ.22 ಬಿಎಫ್‌ಸಿ-ಗೋವಾ ರಾತ್ರಿ 7.30ಕ್ಕೆ

ನ.28 ಬಿಎಫ್‌ಸಿ-ಹೈದ್ರಾಬಾದ್‌ ಎಫ್‌ಸಿ ರಾತ್ರಿ 7.30ಕ್ಕೆ

ಡಿ.04 ಬಿಎಫ್‌ಸಿ-ಚೆನ್ನೈಯಿನ್‌ ಎಫ್‌ಸಿ ರಾತ್ರಿ 7.30ಕ್ಕೆ

ಡಿ.08 ಬಿಎಫ್‌ಸಿ-ನಾಥ್‌ರ್‍ ಈಸ್ಟ್‌ ಯುನೈಟೆಡ್‌ ರಾತ್ರಿ 7.30ಕ್ಕೆ

ಡಿ.13 ಬಿಎಫ್‌ಸಿ-ಕೇರಳ ಬ್ಲಾಸ್ಟರ್ಸ್‌ ರಾತ್ರಿ 7.30ಕ್ಕೆ

ಡಿ.17 ಬಿಎಫ್‌ಸಿ-ಒಡಿಶಾ ಎಫ್‌ಸಿ ರಾತ್ರಿ 7.30ಕ್ಕೆ

ಡಿ.21 ಬಿಎಫ್‌ಸಿ-ಎಟಿಕೆ ಮೋಹನ್‌ ಬಗಾನ್‌ ರಾತ್ರಿ 7.30ಕ್ಕೆ

ಡಿ.28 ಬಿಎಫ್‌ಸಿ-ಜೆಮ್ಶೆಡ್‌ಪುರ ಎಫ್‌ಸಿ ರಾತ್ರಿ 7.30ಕ್ಕೆ

ಜ.05 ಬಿಎಫ್‌ಸಿ-ಮುಂಬೈ ಸಿಟಿ ಎಫ್‌ಸಿ ರಾತ್ರಿ 7.30ಕ್ಕೆ

ಜ.09 ಬಿಎಫ್‌ಸಿ-ಎಸ್‌ಸಿ ಈಸ್ಟ್‌ ಬೆಂಗಾಲ್‌ ರಾತ್ರಿ 7.30ಕ್ಕೆ