2022ರ ಫಿಫಾ ವಿಶ್ವಕಪ್ ರಾಯಭಾರಿಗೆ ಸೋಂಕು..!
ಕೊರೋನಾ ವೈರಸ್ ಇದೀಗ 2022ರ ಪುಟ್ಬಾಲ್ ವಿಶ್ವಕಪ್ ರಾಯಭಾರಿಗೆ ತಗುಲಿದೆ. ಕತಾರ್ ಮಾಜಿ ಫುಟ್ಬಾಲಿಗ ಅದೆಲ್ ಕಾಮಿಸ್‌ಗೆ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ದೋಹಾ(ಮೇ.02): 2022ರ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಪ್ರಚಾರ ರಾಯಭಾರಿ, ಕತಾರ್‌ನ ಮಾಜಿ ಫುಟ್ಬಾಲಿಗ 54 ವರ್ಷ ವಯಸ್ಸಿನ ಅದೆಲ್ ಕಾಮಿಸ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಆಯೋಜಕರು ಹೇಳಿದ್ದಾರೆ.
ಮಿಡ್ ಫೀಲ್ಡರ್ ಆಗಿದ್ದ ಕಾಮಿಸ್ ಚಿಕಿತ್ಸೆ ಪಡೆಯುತ್ತಿದ್ದು ಶೀಘ್ರ ಗುಣಮುಖರಾಗುವ ವಿಶ್ವಾಸದಲ್ಲಿದ್ದಾರೆ ಎಂದು ಟ್ವೀಟ್ ಮೂಲಕ ಆಯೋಜಕರು ತಿಳಿಸಿದ್ದಾರೆ. ಕತಾರ್‌ನಲ್ಲಿ ವಿಶ್ವಕಪ್ ಆಯೋಜನೆಗೆ ಭರದಿಂದ ಸಿದ್ಧತೆಗಳು ಆರಂಭವಾಗಿವೆ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವಲಸಿಗ ಕಾರ್ಮಿಕರನ್ನು ಬಳಸಿಕೊಂಡು ಸ್ಟೇಡಿಯಂ ಕೆಲಸಗಳನ್ನು ನಡೆಸಲಾಗುತ್ತದೆ.
ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಮ್ಮ ಸಿಬ್ಬಂದಿಗಳಿಗೆ ಹಾಗೂ ಕಾರ್ಮಿಕರಿಗೆ ಅಗತ್ಯ ಮುನ್ನಚ್ಚರಿಕಾ ಕ್ರಮಗಳೊಂದಿಗೆ ಕೆಲಸ ಮಾಡಲು ಸೂಚಿಸಿದ್ದೇವೆ. ಇವರ ಆರೋಗ್ಯವೂ ನಮಗೆ ಮುಖ್ಯ. ಅಗತ್ಯವಿದ್ದಾಗ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಬಗ್ಗೆಯೂ ಆಲೋಚಿಸಿದ್ದೇವೆ ಎಂದು ಫಿಫಾ ಟೂರ್ನಿ ಆಯೋಜಕರು ತಿಳಿಸಿದ್ದಾರೆ.
2022ರ ಫುಟ್ಬಾಲ್ ಕ್ರೀಡಾಕೂಟಕ್ಕೆ ಅದೆಲ್ ಕಾಮಿಸ್ ಪ್ರಮುಖ ರಾಯಭಾರಿಗಳಲ್ಲಿ ಒಬ್ಬರಾಗಿದ್ದಾರೆ. ಇವರ ಜತೆಗೆ ಆಸ್ಟ್ರೇಲಿಯಾದ ಟಿಮ್ ಚಾಹಿಲ್ ಹಾಗೂ ಬಾರ್ಸಿಲೋನಾದ ದಿಗ್ಗಜ ಫುಟ್ಬಾಲಿಗ ಕ್ಸಿವಿ ಹೆಂಡ್ರಿಚ್ ಟೂರ್ನಿಯ ರಾಯಭಾರಿಗಳಾಗಿದ್ದಾರೆ.
ಬ್ರಿಟನ್ ಫುಟ್ಬಾಲ್ ದಿಗ್ಗಜ ಹಂಟರ್‌ಗೆ ಕೊರೋನಾ ಸೋಂಕು ಪತ್ತೆ
ಈ ಹಿಂದೆ ಬ್ರಿಟನ್ ಫುಟ್ಬಾಲ್ ದಿಗ್ಗಜ ನೊರ್ಮನ್ ಹಂಟರ್‌ಗೂ ಕೊರೋನಾ ಸೋಂಕು ತಗುಲಿತ್ತು. ಇನ್ನು ಸ್ಪೇನ್‌ನಲ್ಲಿ 21 ವರ್ಷದ ಫುಟ್ಬಾಲ್ ಕೋಚ್ ಫ್ರಾನ್ಸಿಸ್ಕೋ ಗ್ರಾಸಿಯಾ ಅವರನ್ನು ಕೊರೋನಾ ಬಲಿಪಡೆದಿತ್ತು.
ದೇಶದೆಲ್ಲೆಡೆ ಕೊರೋನಾ ವೈರಸ್ ಉಲ್ಬಣಿಸಿದ್ದು ಕತಾರ್‌ನಲ್ಲಿ 13,409 ಸೋಂಕಿತರಿದ್ದಾರೆ. 1,372 ಜನ ಗುಣಮುಖರಾಗಿದ್ದಾರೆ. 10 ಮಂದಿ ಮೃತಪಟ್ಟಿದ್ದಾರೆ.