Asianet Suvarna News Asianet Suvarna News

ಕಂಠೀರವ ಸ್ಟೇಡಿಯಂನಲ್ಲಿಂದು ಡಬಲ್‌ ಧಮಾಕ! ಕಬಡ್ಡಿ-ಫುಟ್ಬಾಲ್ ಅಭಿಮಾನಿಗಳ ಕಣ್ಣಿಗೆ ಹಬ್ಬ

ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿಂದು ಕಬಡ್ಡಿ-ಫುಟ್ಬಾಲ್‌ ಪಂದ್ಯ
ಕಂಠೀರವ ಹೊರಾಂಗಣ ಸ್ಟೇಡಿಯಂಲ್ಲಿ ಬಿಎಫ್‌ಸಿ-ನಾರ್ಥ್‌ಈಸ್ಟ್‌  ಯುನೈಟೆಡ್ ಫೈಟ್
ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ಪ್ರೊ ಕಬಡ್ಡಿ ಕಲರವ

Bengaluru Sree Kanteerava stadium to host Football and Kabaddi match on Same day kvn
Author
First Published Oct 8, 2022, 11:23 AM IST

ಬೆಂಗಳೂರು(ಅ.08) ಇತ್ತೀಚೆಗಷ್ಟೇ ಡುರಾಂಡ್‌ ಕಪ್‌ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಬೆಂಗಳೂರು ಎಫ್‌ಸಿ(ಬಿಎಫ್‌ಸಿ) ಶನಿವಾರ 9ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ನಾರ್ಥ್‌ ಈಸ್ಟ್‌ ಯುನೈಟೆಡ್‌ ವಿರುದ್ಧ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ.

2021-22ರ ಋುತುವಿನಲ್ಲಿ ಬಿಎಫ್‌ಸಿ 3ನೇ ಸ್ಥಾನ ಪಡೆದಿತ್ತು. ಮತ್ತೊಂದೆಡೆ ನಾರ್ಥ್‌ಈಸ್ಟ್‌ ತಂಡ ಕೇವಲ 3 ಗೆಲುವು ದಾಖಲಿಸಿ 10ನೇ ಸ್ಥಾನ ಗಳಿಸಿತ್ತು. ಸುನಿಲ್‌ ಚೆಟ್ರಿ ಬಿಎಫ್‌ಸಿಯ ನಾಯಕ ಹಾಗೂ ತಾರಾ ಸ್ಟ್ರೈಕರ್‌ ಎನಿಸಿದ್ದು, ಫಿಜಿ ದೇಶದ ರಾಯ್‌ ಕೃಷ್ಣ ಸೇರ್ಪಡೆ ತಂಡದ ಬಲ ಹೆಚ್ಚಿಸಿದೆ. ಇನ್ನು ಮತ್ತೊಂದೆಡೆ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ಇಂದು ಪ್ರೊ ಕಬಡ್ಡಿ ಟೂರ್ನಿಯಲ್ಲಿ 3 ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌-ಪುಣೇರಿ ಪಲ್ಟಾನ್ ತಂಡಗಳು ಕಾದಾಡಲಿವೆ. ಇನ್ನು ಎರಡನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್‌-ತಮಿಳ್ ತಲೈವಾಸ್ ತಂಡಗಳು ಹೋರಾಡಲಿವೆ. ಇನ್ನು ದಿನದ ಕೊನೆಯ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್‌-ಹರ್ಯಾಣ ಸ್ಟೀಲರ್ಸ್‌ ತಂಡಗಳು ಸೆಣಸಾಟ ನಡೆಸಲಿವೆ.

ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ಒಂದೇ ಸಮಯದಲ್ಲಿ ಫುಟ್ಬಾಲ್‌ ಹಾಗೂ ಕಬಡ್ಡಿ ನಡೆಯುವುದು ವಿಶೇಷ. ಹೊರಾಂಗಣ ಕ್ರೀಡಾಂಗಣದಲ್ಲಿ ಫುಟ್ಬಾಲ್‌ ನಡೆದರೆ, ಒಳಾಂಗಣ ಕ್ರೀಡಾಂಗಣದಲ್ಲಿ ಪ್ರೊ ಕಬಡ್ಡಿ ಪಂದ್ಯಗಳು ನಡೆಯಲಿವೆ.

ಜಿಯೋ ಸಿನಿಮಾದಲ್ಲಿ ಫಿಫಾ ವಿಶ್ವಕಪ್‌ ಪ್ರಸಾರ

ನವದೆಹಲಿ: ಮುಂದಿನ ತಿಂಗಳು ಆರಂಭಗೊಳ್ಳಲಿರುವ ಫಿಫಾ ಫುಟ್ಬಾಲ್‌ ವಿಶ್ವಕಪ್‌ನ ಪ್ರಸಾರ ಹಕ್ಕು ಪಡೆದಿರುವ ರಿಲಾಯನ್ಸ್‌ ಒಡೆತನದ ವಯಾಕಾಮ್‌ 18 ಸಂಸ್ಥೆಯು ತನ್ನ ಮೊಬೈಲ್‌ ಆ್ಯಪ್‌ ಜಿಯೋ ಸಿನಿಮಾದಲ್ಲಿ ಪಂದ್ಯಗಳನ್ನು ನೇರ ಪ್ರಸಾರ ಮಾಡುವುದಾಗಿ ಘೋಷಿಸಿದೆ. ಪಂದ್ಯಗಳನ್ನು ವೀಕ್ಷಿಸಲು ಚಂದಾದಾರರಾಗಬೇಕಿಲ್ಲ. ಆ್ಯಪ್‌ ಹೊಂದಿರುವ ಪ್ರತಿಯೊಬ್ಬರೂ ಉಚಿತವಾಗಿ ಪಂದ್ಯಗಳನ್ನು ವೀಕ್ಷಿಸಬಹುದು ಎಂದು ಸಂಸ್ಥೆ ತಿಳಿಸಿದೆ. ಇಂಗ್ಲಿಷ್‌, ಹಿಂದಿ, ಮಲಯಾಳಂ, ಬಂಗಾಳಿ ಮತ್ತು ತಮಿಳಿನಲ್ಲಿ ವೀಕ್ಷಕ ವಿವರಣೆ ಇರಲಿದೆ.

ಫುಟ್ಬಾಲ್‌ ಕ್ರೀಡಾಂಗಣದಲ್ಲಿ ಘರ್ಷಣೆಗೆ ಓರ್ವ ಬಲಿ

ಬ್ಯೂನಸ್‌ ಐರೆಸ್‌(ಅರ್ಜೆಂಟೀನಾ): ಇಂಡೋನೇಷ್ಯಾದ ಫುಟ್ಬಾಲ್‌ ಕ್ರೀಡಾಂಗಣದ ದುರಂತದ ಕಹಿ ನೆನಪು ಮಾಸುವ ಮೊದಲೇ ಅರ್ಜೆಂಟೀನಾದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಅಭಿಮಾನಿಯೋರ್ವರು ಮೃತಪಟ್ಟಿದ್ದಾರೆ. ಲಾ ಪ್ಲಾಟದ ಕ್ಯಾರ್ಮೆಲೊ ಜೆರಿಲ್ಲೊ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅರ್ಜೆಂಟೀನಾ ಪ್ರೀಮಿಯರ್‌ ಡಿವಿಷನ್‌ ಟೂರ್ನಿಯ ಬೊಕಾ ಜೂನಿಯ​ರ್ಸ್‌-ಜಿಮ್ನಾಸಿಯಾ ಎಸ್ಗಿ್ರಮಾ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ. 

Pro Kabaddi League: ತೆಲುಗು ಟೈಟಾನ್ಸ್‌ಗೆ ಡಿಚ್ಚಿ ಹೊಡೆದ ಬೆಂಗಳೂರಿನ ಗೂಳಿಗಳು..!

ಕ್ರೀಡಾಂಗಣದ ಹೊರಗೆ 10 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಅಶ್ರವಾಯು ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ವೇಳೆ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದ್ದು, ಕ್ರೀಡಾಂಗಣದಲ್ಲಿದ್ದ 57 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕ್ಯಾಮರಾಮ್ಯಾನ್‌ ಒಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಇಂಡೋನೇಷ್ಯಾದಲ್ಲಿ ಫುಟ್ಬಾಲ್‌ ಕ್ರೀಡಾಂಗಣದಲ್ಲಿ ಕಾಲ್ತುಳಿತ ಉಂಟಾಗಿ 125ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

Follow Us:
Download App:
  • android
  • ios