Indian Super League: ಮುಂಬೈ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಬೆಂಗಳೂರು ಎಫ್‌ಸಿ..!
* ಬೆಂಗಳೂರು ಎಫ್‌ಸಿ ತಂಡ ಐಎಸ್‌ಎಲ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ
* ಮುಂಬೈ ಸಿಟಿ ಎಫ್‌ಸಿ ಎದುರು ಶೂಟೌಟ್‌ನಲ್ಲಿ ಬಿಎಫ್‌ಸಿಗೆ ರೋಚಕ ಜಯ
* ಬಿಎಫ್‌ಸಿ ಸತತ 11ನೇ ಗೆಲುವಿನೊಂದಿಗೆ ಮೂರನೇ ಬಾರಿಗೆ ಫೈನಲ್ ಪ್ರವೇಶ
ಬೆಂಗಳೂರು(ಮಾ.13): 9ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ. ಭಾನುವಾರ ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಸಿಟಿ ಎಫ್‌ಸಿ ವಿರುದ್ಧದ ಸೆಮಿಫೈನಲ್ನ 2ನೇ ಚರಣದ ಪಂದ್ಯದಲ್ಲಿ ಶೂಟೌಟ್‌ನಲ್ಲಿ 9-8 ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ 2018-19ರ ಚಾಂಪಿಯನ್ ಬಿಎಫ್‌ಸಿ ಸತತ 11ನೇ ಗೆಲುವಿನೊಂದಿಗೆ ಐಎಸ್ಎಲ್ನಲ್ಲಿ 3ನೇ ಬಾರಿ ಫೈನಲ್ ಪ್ರವೇಶಿಸಿದರೆ, 2ನೇ ಬಾರಿ ಪ್ರಶಸ್ತಿ ಸುತ್ತಿಗೇರುವ 2020-21ರ ಚಾಂಪಿಯನ್ ಮುಂಬೈನ ಕನಸು ಭಗ್ನಗೊಂಡಿತು.
ಮುಂಬೈನಲ್ಲಿ ನಡೆದಿದ್ದ ಸೆಮೀಸ್ನ ಮೊದಲ ಚರಣದ ಪಂದ್ಯದಲ್ಲಿ ಬಿಎಫ್‌ಸಿ 1-0 ಗೆಲುವು ಸಾಧಿಸಿತ್ತು. ಭಾನುವಾರದ ಪಂದ್ಯದಲ್ಲಿ ಮುಂಬೈ ನಿಗದಿತ ಅವಧಿ ಮುಕ್ತಾಯದ ವೇಳೆಗೆ 2-1ರಿಂದ ಮುಂದಿತ್ತು. ಹೀಗಾಗಿ ಎರಡೂ ಪಂದ್ಯಗಳ ಗೋಲು ಗಳಿಕೆಯಲ್ಲಿ ಉಭಯ ತಂಡಗಳು 2-2ರಿಂದ ಸಮಬಲ ಸಾಧಿಸಿದವು. ಬಳಿಕ ಹೆಚ್ಚುವರಿ 30 ನಿಮಿಷ ಆಡಿಸಿದರೂ ಯಾವುದೇ ಗೋಲು ದಾಖಲಾಗಲಿಲ್ಲ. ಆನಂತರ ಫಲಿತಾಂಶ ನಿರ್ಧರಿಸಲು ಶೂಟೌಟ್ ಮೊರೆ ಹೋಗಲಾಯಿತು. ಅತ್ಯಂತ ರೋಚಕವಾಗಿ ಸಾಗಿದ ಶೂಟೌಟ್‌ನಲ್ಲಿ ಕೊನೆಗೂ ಬಿಎಫ್‌ಸಿ ಗೆಲುವಿನ ನಗೆ ಬೀರಿತು.
ಹೇಗಿತ್ತು ಶೂಟೌಟ್?
ಮೊದಲ 5 ಅವಕಾಶಗಳಲ್ಲಿ ಎರಡೂ ತಂಡಗಳು ತಲಾ 5-5 ಗೋಲು ಬಾರಿಸಿತು. ಬಿಎಫ್‌ಸಿ ಪರ ಹೆರ್ನಾಂಡೆಜ್, ರಾಯ್ ಕೃಷ್ಣ, ಅಲಾನ್ ಕೋಸ್ಟಾ, ಸುನಿಲ್ ಚೆಟ್ರಿ, ಪೆರೆಜ್ ಗೋಲು ಬಾರಿಸಿದರು. ಬಳಿಕ ಸಡನ್ ಡೆತ್ ಅಳವಡಿಸಲಾಯಿತು. ಮೂರು ಯತ್ನಗಳಲ್ಲಿ ಎರಡೂ ತಂಡಗಳು ಗೋಲು ದಾಖಲಿಸಿದವು. ಆದರೆ ಮುಂಬೈನ 9ನೇ ಪ್ರಯತ್ನದಲ್ಲಿ ಮೆಹ್ತಾಬ್ ಸಿಂಗ್ ಬಾರಿಸಿದ ಚೆಂಡನ್ನು ಬಿಎಫ್ಸಿಯ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ತಡೆದರು. ಬಳಿಕ ಸಂದೇಶ್ ಜಿಂಗಾನ್ ಗೋಲು ಬಾರಿಸಿ ಬಿಎಫ್ಸಿಯನ್ನು ಫೈನಲ್ಗೇರಿಸಿದರು.
Indian Super League: 3ನೇ ಬಾರಿ ಫೈನಲ್‌ಗೇರುತ್ತಾ ಬೆಂಗಳೂರು ಎಫ್‌ಸಿ?
ಬಿಎಫ್‌ಸಿ ಆಟಗಾರರು ಕುಣಿದು ಕುಪ್ಪಳಿಸಿದರೆ, ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ತವರಿನ ಅಭಿಮಾನಿಗಳು ಸಂಭ್ರಮದ ಅಲೆಯಲ್ಲಿ ತೇಲಾಡಿದರು.
ಮಾ.18ಕ್ಕೆ ಫೈನಲ್
ಟೂರ್ನಿಯ ಫೈನಲ್ ಪಂದ್ಯ ಮಾ.18ರಂದು ಗೋವಾದಲ್ಲಿ ನಡೆಯಲಿದೆ. ಬಿಎಫ್‌ಸಿ ತಂಡ ಹಾಲಿ ಚಾಂಪಿಯನ್ ಹೈದರಾಬಾದ್ ಎಫ್‌ಸಿ ಅಥವಾ ಎಟಿಕೆ ಮೋಹನ್ ಬಗಾನ್ ವಿರುದ್ಧ ಸೆಣಸಾಡಲಿವೆ. ಹೈದರಾಬಾದ್-ಎಟಿಕೆ ತಂಡಗಳ ಸೆಮೀಸ್ನ ಮೊದಲ ಚರಣದ ಪಂದ್ಯ 0-0 ಡ್ರಾಗೊಂಡಿದ್ದು, 2ನೇ ಚರಣದ ಪಂದ್ಯ ಸೋಮವಾರ ನಡೆಯಲಿದೆ.