ಫುಟ್ಬಾಲ್: ಡುರಾಂಡ್ ಕಪ್‌ನಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್ ಸ್ಪರ್ಧೆ
* ಡುರಾಂಡ್ ಕಪ್ ಫುಟ್ಬಾಲ್ ಟೂರ್ನಿಯ ವೇಳಾಪಟ್ಟಿ ಪ್ರಕಟ
* ಡುರಾಂಡ್ ಕಪ್ ಏಷ್ಯಾದ ಅತ್ಯಂತ ಹಳೆಯ ಫುಟ್ಬಾಲ್ ಟೂರ್ನಿ
* ಸೆಪ್ಟೆಂಬರ್ 5ರಿಂದ ಅಕ್ಟೋಬರ್ 3ರ ವರೆಗೂ ಕೋಲ್ಕತಾದಲ್ಲಿ ನಡೆಯಲಿರುವ ಟೂರ್ನಿ
ಬೆಂಗಳೂರು(ಆ.25): ಏಷ್ಯಾದ ಅತ್ಯಂತ ಹಳೆಯ ಫುಟ್ಬಾಲ್ ಟೂರ್ನಿ ಎನಿಸಿರುವ ಡುರಾಂಡ್ ಕಪ್‌ನಲ್ಲಿ ಇದೇ ಮೊದಲ ಬಾರಿಗೆ ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡ ಸ್ಪರ್ಧಿಸಲಿದೆ.
ಸೆಪ್ಟೆಂಬರ್ 5ರಿಂದ ಅಕ್ಟೋಬರ್ 3ರ ವರೆಗೂ ಕೋಲ್ಕತಾದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಪಾಲ್ಗೊಳ್ಳುವಂತೆ ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡಕ್ಕೆ ಆಹ್ವಾನ ನೀಡಲಾಗಿದೆ. ಎಫ್‌ಸಿ ಬೆಂಗಳೂರು ತಂಡ ಸೇರಿ 16 ತಂಡಗಳಿಗೆ ಆಹ್ವಾನ ನೀಡಲಾಗಿದೆ. ಡುರಾಂಡ್ ಕಪ್‌ನಲ್ಲಿ ಐಎಸ್‌ಎಲ್‌ನ 5 ಕ್ಲಬ್‌ಗಳು, ಭಾರತೀಯ ಸಶಸ್ತ್ರ ಪಡೆಗಳ 6 ಕ್ಲಬ್‌ಗಳು, ಐ-ಲೀಗ್‌ನಲ್ಲಿ ಆಡುವ 3 ಕ್ಲಬ್‌ಗಳು ಹಾಗೂ ಐ-ಲೀಗ್ 2ನೇ ಡಿವಿಜನ್‌ನಲ್ಲಿ ಆಡುವ 2 ಕ್ಲಬ್‌ಗಳು ಸ್ಪರ್ಧಿಸಲಿವೆ.
130 ವರ್ಷಗಳ ಇತಿಹಾಸವಿರುವ ಡುರಾಂಡ್ ಕಪ್ ಟೂರ್ನಿಯನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿದ್ದು ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡವು ಮೊದಲ ಗುಂಪಿನಲ್ಲಿ ಸ್ಥಾನ ಪಡೆದಿದ್ದರೆ, ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ ತಂಡವು ಮೂರನೇ ಗುಂಪಿನಲ್ಲಿದೆ.
ಎಎಫ್‌ಸಿ ಕಪ್: ಭರ್ಜರಿ ಗೆಲುವಿನೊಂದಿಗೆ ಅಭಿಯಾನ ಮುಗಿಸಿದ ಬಿಎಫ್‌ಸಿ
ಇಂಡಿಯನ್ ಸೂಪರ್ ಲೀಗ್‌ನ ಜೆಮ್ಶಡ್‌ಪುರ ಎಫ್‌ಸಿ, ಗೋವಾ ಎಫ್‌ಸಿ, ಬೆಂಗಳೂರು ಎಫ್‌ಸಿ, ಹೈದರಾಬಾದ್ ಎಫ್‌ಸಿ ಹಾಗೂ ಕೇರಳ ಬ್ಲಾಸ್ಟರ್ ತಂಡಗಳು ಈ ಬಾರಿ ಡುರಾಂಡ್ ಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಐ-ಲೀಗ್ 2ನೇ ಡಿವಿಜನ್‌ನಲ್ಲಿ ಆಡುವ 2 ಕ್ಲಬ್‌ಗಳಾದ ಎಫ್‌ಸಿ ಬೆಂಗಳೂರು ಯುನೈಟೆಡ್ ಹಾಗೂ ಡೆಲ್ಲಿ ಎಫ್‌ಸಿ ತಂಡಗಳು ಕೂಡಾ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ. ಇದಷ್ಟೇ ಅಲ್ಲದೇ ಭಾರತೀಯ ಸೇನೆಯ ಇಂಡಿಯನ್ ಏರ್‌ಪೋರ್ಸ್, ಇಂಡಿಯನ್ ನೇವಿ, ಸಿಆರ್‌ಪಿಎಫ್ ಹಾಗೂ ಅಸ್ಸಾಂ ರೈಫಲ್ಸ್ ತಂಡಗಳು ಸಹಾ ಡುರಾಂಡ್ ಕಪ್‌ನಲ್ಲಿ ಪಾಲ್ಗೊಳ್ಳಲಿವೆ.