Pani Puri Shawarma: ದೇವರೇ ಕಾಪಾಡಬೇಕು! ಪಾನಿಪುರಿಗೆ ಈತ ಏನೆಲ್ಲಾ ಹಾಕಿದಾನೆ ನೋಡಿ
ಸಾಮಾಜಿಕ ಜಾಲತಾಣದಲ್ಲಿ ಆಹಾರದ ವಿಡಿಯೋಗಳು ವೈರಲ್ ಆಗ್ತಿರುತ್ತವೆ. ಈಗ ಮತ್ತೊಂದು ವಿಡಿಯೋ ಎಲ್ಲರ ಗಮನ ಸೆಳೆದಿದೆ. ಪಾನಿಪುರಿಯನ್ನು ಆತ ವಿಚಿತ್ರವಾಗಿ ತಯಾರಿಸಿದ್ದು, ಸಾಂಪ್ರದಾಯಿಕ ಆಹಾರ ಪ್ರೇಮಿಗಳು ಇದನ್ನು ತಿರಸ್ಕರಿಸಿದ್ದಾರೆ.
ಪಾನಿಪುರಿ ಎಂದಾಕ್ಷಣ ಬಾಯಲ್ಲಿ ನೀರು ಬರುತ್ತೆ. ಪಾನಿಪುರಿ, ಗೊಲ್ ಗಪ್ಪಾ ಭಾರತೀಯರ ಫೆವರೆಟ್ ಫುಡ್. ಮೂಡ್ ಸರಿ ಮಾಡುವ ಸಾಮರ್ಥ್ಯವನ್ನು ಪಾನಿಪುರಿ ಹೊಂದಿದೆ. ಬಾಯಿ ರುಚಿಯನ್ನು ಹೆಚ್ಚಿಸುವ ಕೆಲಸವನ್ನು ಈ ಪಾನಿಪುರಿ ಮಾಡುತ್ತೆ. ಮೂಡ್ ಬೂಸ್ಟರ್ ಆಗಿ ಕೆಲಸ ಮಾಡುವ ಪಾನಿಪುರಿಯನ್ನು ತಿನ್ನೋಕೆ ಸಮಯ ಬೇಕಾಗಿಲ್ಲ. ಬೆಳಿಗ್ಗೆ, ಸಂಜೆ, ಕಚೇರಿಯಿಂದ ವಾಪಸ್ ಬರುವ ವೇಳೆ, ಊಟದ ಸಮಯದಲ್ಲಿ ಹೀಗೆ ಯಾವಾಗ ಬೇಕಾದ್ರೂ ಇದನ್ನು ತಿಂದು ಖುಷಿಯಾಗ್ತಾರೆ ಜನರು.
ಇದೇ ಕಾರಣಕ್ಕೆ ನಗರದ ಗಲ್ಲಿ ಗಲ್ಲಿಯಲ್ಲಿ ನೀವು ಪಾನಿಪುರಿ (Paani Puri) ಅಂಗಡಿ ನೋಡ್ಬಹುದು. ರಸ್ತೆ ಬದಿಯಲ್ಲಿ ಸಿಗುವು ಪಾನಿಪುರಿ ಅಂಗಡಿ ಬಳಿ ಜನರ ದಂಡೇ ನೆರೆದಿರುತ್ತದೆ. ಇಂಥ ಸೆಕೆಯಲ್ಲೂ ಜನರು ಪಾನಿಪುರಿ ಬಿಡೋಕೆ ಮನಸ್ಸು ಮಾಡೋದಿಲ್ಲ. ಜನರನ್ನು ಸೆಳೆಯಲು ಮಾರಾಟಗಾರರು ಹೊಸ ಹೊಸ ತಂತ್ರಗಳನ್ನು ಅಳವಡಿಸಿಕೊಳ್ತಾರೆ. ಹಳೆ ಖಾದ್ಯಕ್ಕೆ ಹೊಸ ರೂಪ ನೀಡ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಚಿತ್ರ ವಿಚಿತ್ರ ಖಾದ್ಯಗಳು ವೈರಲ್ (Viral) ಆಗೋದನ್ನು ನೀವು ನೋಡಿರಬಹುದು. ಈಗ ಪಾನಿಪುರಿ ಷಾವರ್ಮಾ (Shawarma) ಜೊತೆ ಚೀಸ್ ವಿಡಿಯೋ ಒಂದು ವೈರಲ್ ಆಗಿದೆ.
ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಪಾನಿಪುರಿ ವಿಶೇಷವೇನು? : ದಿ ಫುಡೀ ಕ್ಯಾಮ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವತ್ಸಲ್ ಜರಿವಾಲಾ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಪಾನಿ ಪುರಿ ಷಾವರ್ಮಾವನ್ನು ತಯಾರಿಸುತ್ತಿದ್ದಾನೆ. ವ್ಯಕ್ತಿ ಮೊದಲು ರೋಟಿಸ್ಸೆರಿ ಚಿಕನ್ ಅನ್ನು ಸ್ಲೈಸ್ ಮಾಡ್ತಾನೆ. ನಂತ್ರ ಅದಕ್ಕೆ ಕತ್ತರಿಸಿದ ತರಕಾರಿಗಳು, ಬಿಳಿ ಸಾಸ್ ಮತ್ತು ಕೆಂಪು ಸಾಸ್ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ ಸ್ಟಫಿಂಗ್ ಸಿದ್ಧಪಡಿಸ್ತಾನೆ. ನಂತರ ಈ ಸ್ಟಫಿಂಗನ್ನು ಪಿತಾ ಬ್ರೆಡ್ ಬದಲಿಗೆ ಪಾನಿಪುರಿಯ ಪುರಿಯಲ್ಲಿ ತುಂಬುತ್ತಾನೆ. ಇಷ್ಟಕ್ಕೆ ಆತನ ಈ ರೆಸಿಪಿ ಮುಗಿದಿಲ್ಲ. ಸ್ಟಪಿಂಗ್ ಪುರಿ ಮೇಲೆ ಬಿಳಿ ಮತ್ತು ಕೆಂಪು ಸಾಸ್ ಹಾಕಿ ನಂತ್ರ ಚೀಸ್ ಹಾಕ್ತಾನೆ. ಆ ನಂತ್ರ ಚೀಸ್ ಸ್ವಲ್ಪ ಬಿಸಿ ಮಾಡಿ ಸರ್ವ್ ಮಾಡ್ತಾನೆ. ಇದನ್ನು ತಿಂದ ವತ್ಸಲ್, ಸೂಪರ್ ಅಂತಾ ಕಮೆಂಟ್ ಮಾಡೋದನ್ನು ನಾವು ವಿಡಿಯೋದಲ್ಲಿ ನೋಡ್ಬಹುದು. ವೈರಲ್ ಫುಡ್ ವೀಡಿಯೋಕ್ಕೆ ಭಾರತದ ಮೊದಲ ಪಾನಿ ಪುರಿ ಷಾವರ್ಮಾ ಎಂದು ಶೀರ್ಷಿಕೆ ನೀಡಲಾಗಿದೆ.
ವೈರಲ್ ವಿಡಿಯೋ ಬಗ್ಗೆ ಬಳಕೆದಾರರ ಕಮೆಂಟ್ : ಪಾನಿ ಪುರಿ ಷಾವರ್ಮಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡ್ತಿದ್ದಂತೆ ವಿಡಿಯೋ ಸಾಕಷ್ಟು ಸದ್ದು ಮಾಡಿದೆ. ಸಾಂಪ್ರದಾಯಿಕ ಅಡುಗೆ ಪ್ರೇಮಿಗಳು ಇದನ್ನು ವಿರೋಧಿಸಿದ್ದಾರೆ. ದೇವರೇ ಕಾಪಾಡಬೇಕು, ಏನಂತ ಉತ್ತರಿಸಲಿ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಆತನನ್ನು ಬಂಧಿಸಿ, ಲೈಸೆನ್ಸ್ ರದ್ದು ಮಾಡಿ ಅಂತಾ ಬರೆದಿದ್ದಾರೆ. ಈ ಅಸಾಮಾನ್ಯ ಆಹಾರ ಸಂಯೋಜನೆ ಆಹಾರಪ್ರಿಯರಿಗೆ ಇಷ್ಟವಾಗಲಿಲ್ಲ. ಸಾಮಾಜಿಕ ಮಾಧ್ಯಮದಲ್ಲಿನ ಗಮನಾರ್ಹ ಟೀಕೆಗಳನ್ನು ನಾವು ನೋಡ್ಬಹುದು. ಪಾನಿಪುರಿಗೆ ಇಂಥ ರೂಪ ನೀಡ್ತಿರೋದು ಹೊಸದಲ್ಲ. ಈ ಹಿಂದೆ ಐಸ್ ಕ್ರೀಮ್ ಮತ್ತು ಚಾಕೊಲೇಟ್ ಪಾನಿಪುರಿಯಿಂದ ಹಿಡಿದು ಥಮ್ಸ್ ಅಪ್, ಪಿಜ್ಜಾ ಪಾನಿಪುರಿವರೆಗಿನ ವಿಲಕ್ಷಣ ಮತ್ತು ಅಸಾಮಾನ್ಯ ಪಾನಿಪುರಿಯ ವಿಡಿಯೋ ವೈರಲ್ ಆಗಿದೆ. ಅದನ್ನು ನೋಡಿದ ಜನರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟೀಕೆಗಳು ಎಷ್ಟೇ ಬಂದ್ರೂ ಪಾನಿ ಪುರಿ ಷಾವರ್ಮಾದ ಈ ವಿಡಿಯೋವನ್ನು ಈವರೆಗೆ 1. 4 ಮಿಲಿಯನ್ ಗೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. 47.2 ಕೆ ಲೈಕ್ಸ್ ಬಂದಿದೆ. ಒಂದು ಸಾವಿರಕ್ಕಿಂತಲೂ ಹೆಚ್ಚು ಕಮೆಂಟ್ ನೋಡ್ಬಹುದು.