ರಸಂ ಅಥವಾ ಸಾಸಿವೆಯಾಗಲಿ, ಬಿರಿಯಾನಿಯೇ ಆಗಿರಲಿ- ಕಡೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೇ ಅದು ಪೂರ್ಣವಾದಂಥ ಭಾವ ಅಡುಗೆ ಮಾಡುವವರಿಗೆ. ಇನ್ನು ಬಿರಿಯಾನಿಯಿಂದ ಹಿಡಿದು ಸಾಂಬಾರ್‌ವರೆಗೆ, ನೂರಾರು ಡಿಶ್, ಸೈಡ್ ಡಿಶ್‌ಗಳಿಗೆ ಕೊತ್ತಂಬರಿ ಪುಡಿ ಇರಲೇಬೇಕು. ಅದಿಲ್ಲದೆ ಮಾಡಿದರೆ ಕಾಡುವ ಕೊರತೆ ಪಾಕಪ್ರವೀಣರಿಗಷ್ಟೇ ಗೊತ್ತು. ಅಂಥದ್ದರಲ್ಲಿ ಕೊತ್ತಂಬರಿ ಸೊಪ್ಪು ಕಂಡರೆ ವಾಕರಿಕೆ ಎನ್ನುವವರು ಯಾರಾದರೂ ಇರಲು ಸಾಧ್ಯವೇ ಸ್ವಾಮಿ? 

ಪಾಪ, ಅದೊಂದು ನಿರುಪದ್ರವಿ, ಉಪಕಾರಿ ಸಸ್ಯೋತ್ಪತ್ತಿ. ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ಕೊತ್ತಂಬರಿ ಬೀಜವು ಕೆಟ್ಟ ಕೊಲೆಸ್ಟೆರಾಲ್ ತಗ್ಗಿಸುವಲ್ಲಿಯೂ ಸಹಕಾರಿ. ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಮಾಡಿ ಡಯಾಬಿಟಿಕ್ಸ್‌ಗೆ ವರವಾಗಬಲ್ಲಂಥ ಸಾಮರ್ಥ್ಯ ಇದಕ್ಕಿದೆ. ರೋಗ ನಿರೋಧಕ ವ್ಯವಸ್ಥೆ ಬಲಗೊಳಿಸುವಂಥ ಆ್ಯಂಟಿಆಕ್ಸಿಡೆಂಟ್‌ಗಳು ಇದರಲ್ಲಿ ಹೇರಳವಾಗಿವೆ. ತ್ವಚೆ ಹಾಗೂ ಕೂದಲ ಗುಣಮಟ್ಟ ಹೆಚ್ಚಿಸಬಲ್ಲಂಥ ದೊಡ್ಡ ಗುಣ ಇದರದು. ಹೃದಯ ಹಾಗೂ ಮೆದುಳಿನ ಆರೋಗ್ಯ ಕಾಪಾಡಿ ಪಾರ್ಕಿನ್‌ಸನ್ಸ್, ಅಲ್ಜೈಮರ್ಸ್ ಮುಂತಾದ ಕಾಯಿಲೆಗಳನ್ನು ದೂರವಿಡಬಲ್ಲದು. ಅಬ್ಬಬ್ಬಾ, ಹೇಳುತ್ತಾ ಹೋದರೆ ಮುಗಿಯುವುದಿಲ್ಲ ಇದರ ಪ್ರಯೋಜನಗಳ ಪಟ್ಟಿ. ಅಂಥದರಲ್ಲಿ ಇದನ್ನು ಯಾರಾದರೂ  ಏಕಾದರೂ ಹೇಟ್ ಮಾಡುತ್ತಾರೆ ಎಂದೆನಿಸುತ್ತಲ್ಲವೇ? 

ಪವರ್‌ಪ್ಯಾಕ್ ಮೊಳಕೆ ಕಾಳುಗಳಿಂದ ಸೂಪರ್ ಆರೋಗ್ಯ!...

ಐ ಹೇಟ್ ಕೋರಿಯಾಂಡರ್
ಹಾಗಿದ್ದರೆ ಒಮ್ಮೆ ನಿಮ್ಮ ಫೇಸ್ಬುಕ್‌ನ ಸರ್ಚ್ ಬಟನ್‌ನಲ್ಲಿ 'ಐ ಹೇಟ್ ಕೋರಿಯಾಂಡರ್' ಎಂದು ಟೈಪ್ ಮಾಡಿ ನೋಡಿ. ಈ ಹೆಸರಿನ ಪೇಜೊಂದು ಕಾಣಸಿಕ್ಕುತ್ತದೆ. ಈ ಪೇಜಿನ ಫಾಲೋವರ್ಸ್ ಸಂಖ್ಯೆ ಬರೋಬ್ಬರಿ 2,48,000! ಹೌದು, ದಿನಂಪ್ರತಿ ನಮ್ ದುನಿಯಾದ ಭಾಗವಾಗಿರುವ ಧನಿಯಾ ಎಂದರೆ ದೂರ ಓಡುವವರ ಸಂಖ್ಯೆ ಕಡಿಮೆ ಏನಿಲ್ಲ. ಇವರ ಪ್ರಕಾರ ಧನಿಯಾ ಎಂದರೆ ಡೆವಿಲ್ಸ್ ಹರ್ಬ್. ಸುಮ್ಮನೆ ಕೊತ್ತಂಬರಿ ತಮಗೆ ಸೇರುವುದಿಲ್ಲ ಎಂದು ಅದರ ಬಳಕೆ ಬಿಟ್ಟು ಸುಮ್ಮನಾಗುವವರಲ್ಲ ಇವರು. ಅದನ್ನು ಅಡಿಯಿಂದ ಮುಡಿತನಕ ಹುಚ್ಚಾಪಟ್ಟೆ ದ್ವೇಷ ಮಾಡುವವರ ವರ್ಗವಿದು. 

ಏನಿದೆ ಪೇಜ್‌ನಲ್ಲಿ?
 'ಐ ಹೇಟ್ ಕೋರಿಯಾಂಡರ್' ಪೇಜ್‌ನಲ್ಲಿ ಕೊತ್ತಂಬರಿಯನ್ನು ದ್ವೇಷಿಸುವವರೆಲ್ಲ ತಮ್ಮ ದ್ವೇಷವನ್ನು ತರಹೇವಾರಿಯಾಗಿ ಹೊರ ಹಾಕಬಹುದು. ಇದಕ್ಕಾಗಿ ಅವರು ವಿವಿಧ ಪೋಸ್ಟ್‌ಗಳು, ಜೋಕ್‌ಗಳು, ಮೀಮ್ಸ್, ಫೋಟೋಗಳು ಏನನ್ನು ಬೇಕಾದರೂ ಬಳಸಬಹುದು. ಈ ಮೂಲಕ ತಮ್ಮ ದ್ವೇಷ ಕಾರಿಕೊಂಡು ಹಗುರಾಗಬಹುದು. ಅಂತೆಯೇ ಕೊತ್ತಂಬರಿಯನ್ನು ದ್ವೇಷಿಸುವವರು ಇಲ್ಲಿ ತಮ್ಮ ಮೈಗೆ ಐ ಹೇಟ್ ಕೊರಿಯಾಂಡರ್ ಟ್ಯಾಟೂ ಹಾಕಿಸಿಕೊಂಡವರಿದ್ದಾರೆ, ಇದೇ ಕೋಟ್ ಹೊಂದಿದ ಟಿ ಶರ್ಟ್ ಹಾಕಿಕೊಂಡವರಿದ್ದಾರೆ, ಕೊತ್ತಂಬರಿಗೆ ಮಧ್ಯ ಬೆರಳನ್ನು ತೋರಿದವರಿದ್ದಾರೆ, ಕೊತ್ತಂಬರಿ ಏನಾದರೂ ದಿನವಾಗಿದ್ದಿದ್ದರೆ ಅದು ಸೋಮವಾರವೇ ಆಗಿರುತ್ತಿತ್ತು ಎಂದು ತಮ್ಮ ಮಂಡೇ ಬ್ಲೂಸ್‌ನ್ನು ಕೊತ್ತಂಬರಿಯ ಮೇಲೆ ತೋರಿದವರಿದ್ದಾರೆ. ಕೊತ್ತಂಬರಿಯ ಕುರಿತ ದ್ವೇಷವನ್ನು ಪದ್ಯವಾಗಿಸಿದವರೂ ಇದ್ದಾರೆ. 

ಇಷ್ಟೆಲ್ಲ ಏಕೆ ಈ ಪೇಜ್ ಒಂದು ಪೋಲ್ ನಡೆಸಿ- ಕೊತ್ತಂಬರಿಯು ರುಚಿಕರವಾಗಿರುತ್ತದೆ ಅಥವಾ ಸೋಪಿನಂತೆ ಕೆಟ್ಟ ರುಚಿ ಹೊಂದಿರುತ್ತದೆ ಎಂಬ ಎರಡು ಆಯ್ಕೆಗಳನ್ನು ನೀಡಿದೆ. ನೀವು ಈ ಪೋಲ್‌ನಲ್ಲಿ ಭಾಗವಹಿಸಿ ಉತ್ತರ ನೀಡಿದರೆ ಅದರ ಫಲಿತಾಂಶ ನಿಮ್ಮನ್ನು ದಂಗು ಬಡಿಸುತ್ತದೆ. ಏಕೆಂದರೆ, ಶೇ.95ರಷ್ಟು ಜನರು ಕೊತ್ತಂಬರಿಯು ಸೋಪನ್ನು ತಿಂದಂತಾಗುತ್ತದೆ ಎಂದಿದ್ದಾರೆ. ಇದೆಲ್ಲ ಬಿಡಿ, ಇದೇ ಫೇಸ್ಬುಕ್ ಪೇಜ್ ಕಳೆದ ಕೆಲ ವರ್ಷಗಳ ಹಿಂದೆ 24 ಫೆಬ್ರವರಿಯನ್ನು ಅಂತಾರಾಷ್ಟ್ರೀಯ ಕೊತ್ತಂಬರಿಯನ್ನು ದ್ವೇಷಿಸುವವರ ದಿನವೆಂದು ಘೋಷಿಸಿ, ಪ್ರತಿ ವರ್ಷ ಆ ದಿನವನ್ನು ಆಚರಿಸಿಕೊಂಡು ಬರುತ್ತಿದೆ. ಇನ್ನು ಇದೇ ವಿಷಯವನ್ನಿಟ್ಟುಕೊಂಡು ಮಾರ್ಕೆಟಿಂಗ್ ತಂತ್ರಗಳೂ ನಡೆಯುತ್ತವೆ. ಐ ಹೇಟ್ ಕೋರಿಯಾಂಡರ್ ಎಂದು ಕೋಟ್ ಇರುವ  ಕಪ್, ಮಗ್, ಟಿಶರ್ಟ್‌ಗಳು ಕೂಡಾ ಇಲ್ಲಿ ಒಳ್ಳೆ ಕ್ರಯಕ್ಕೆ ಬಿಕರಿಯಾಗುತ್ತವೆ. 

ಬೇಸಿಗೆಯಲ್ಲಿ ತಂಪಾಗಿಸುವ ಆರೋಗ್ಯಕರ ಜ್ಯೂಸ್!...

ಅಧ್ಯಯನ
ಈ ಬಗ್ಗೆ ಕೆಲ ಸಂಶೋಧಕರು ಕೊತ್ತಂಬರಿಯನ್ನು ಪ್ರೀತಿಸುವವರು ಹಾಗೂ ಕೊತ್ತಂಬರಿಯನ್ನು ಸಾರಾಸಗಟಾಗಿ ದ್ವೇಷಿಸುವವರನ್ನು ಒಳಗೊಂಡಂತೆ ಒಂದು ರಿಸರ್ಚ್ ನಡೆಸಿದ್ದಾರೆ. ಇವೆರಡು ವರ್ಗದವರ ನಡುವಿನ ಡಿಎನ್‌ಎ ಹೋಲಿಸಿ ನೋಡಿದಾಗ ಕೊತ್ತಂಬರಿಯನ್ನು ದ್ವೇಷಿಸುವವರಿಗೆ ಈ ಸೊಪ್ಪು ಸೋಪ್‌ನಂತೆ ರುಚಿ ಹೊಂದಿದೆ ಎನಿಸಲು ಅದ್ಯಾವುದೋ ಜೀನ್ ಕಾರಣ ಎಂದಿದ್ದಾರೆ. ಒಟ್ಟಿನಲ್ಲಿ ಇಂಥ ಮಜಮಜವಾದ ಫೇಸ್ಬುಕ್ ಪೇಜ್‌ಗಳು ಹೀಗೂ ಉಂಟೇ ಎಂದು ನಿಮ್ಮಲ್ಲಿ ಆಶ್ಚರ್ಯ ಹುಟ್ಟಿಸುವಲ್ಲಿ ಅನುಮಾನವಿಲ್ಲ.