ಬೆಳಗಿನ ತಿಂಡಿ ಬೇಗನೆ ತಯಾರಾಗ್ಬೇಕು, ಅಕ್ಕಿ ನೆನೆಸಿ, ರುಬ್ಬೋಕೆ ಮರೆತು ಹೋಗಿದೆ ಅನ್ನೋರು ಟೆನ್ಷನ್ ಮಾಡ್ಕೊಳ್ಬೇಕಿಲ್ಲ. ಫಟಾಫಟ್ ಆಗುವ, ರುಚಿಯಾದ, ಆರೋಗ್ಯಕರ ಓಟ್ಸ್ ದೋಸೆ ಮಾಡೋದು ಹೇಗೆ ಅಂತ ನಾವು ಹೇಳ್ತೇವೆ.
ಬಹುತೇಕ ಮಹಿಳೆಯರಿಗೆ ರಾತ್ರಿ ಆದ್ಮೇಲೆ ನಾಳೆ ಬೆಳಿಗ್ಗೆ ಏನು ತಿಂಡಿ ಎನ್ನುವ ಪ್ರಶ್ನೆ ಕಾಡುತ್ತೆ. ಬೆಳಿಗ್ಗೆ ಅಕ್ಕಿ ನೆನೆಹಾಕಿ, ರಾತ್ರಿ ರುಬ್ಬಿಟ್ರೆ ಮಾತ್ರ ಒಳ್ಳೆ ಗರಿಗರಿ ದೋಸೆ ಮಾಡ್ಬಹುದು. ಅದು ಮರೆತಾಗ ಬೇರೆ ಆಯ್ಕೆ ಹುಡುಕೋದು ಕೆಲವರಿಗೆ ಕಷ್ಟ. ನೀವೂ ಅಕ್ಕಿ ನೆನೆಹಾಕಲು ಮರೆತಿರ್ತೀರಾ, ಚಪಾತಿ, ರೊಟ್ಟಿ ಮಾಡೋಕೆ ಟೈಂ ಇಲ್ಲ ಅಂದ್ರೆ ಓಟ್ಸ್ ದೋಸೆ ಟ್ರೈ ಮಾಡಿ. ಕೇವಲ 20 ನಿಮಿಷದಲ್ಲಿ ಈ ದೋಸೆಯನ್ನು ತಯಾರಿಸಬಹುದು.
ಓಟ್ಸ್ ದೋಸೆ ತಯಾರಿಸಲು ಬೇಕಾಗುವ ಆಹಾರ ಪದಾರ್ಥ
• ಓಟ್ಸ್ – 1 ಕಪ್
• ಅಕ್ಕಿ ಹಿಟ್ಟು – ಅರ್ಧ ಕಪ್
• ರವೆ – ಕಾಲು ಕಪ್
• ಮೊಸರು – 2 ಚಮಚ
• ಸಣ್ಣಗೆ ಹೆಚ್ಚಿದ ಈರುಳ್ಳಿ – 1
• ಹಸಿಮೆಣಸಿನಕಾಯಿ – 1
• ಜೀರಿಗೆ – ಅರ್ಧ ಚಮಚ
• ಕೊತ್ತಂಬರಿ ಸೊಪ್ಪು – 1 ಚಮಚ
• ನೀರು – 2 ರಿಂದ 2½ ಕಪ್
• ಉಪ್ಪು – ರುಚಿಗೆ ತಕ್ಕಷ್ಟು
• ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
ಬೇಕಿದ್ದರೆ ಇದಕ್ಕೆ ತುರಿದ ಕ್ಯಾರೆಟ್, ಕರಿಬೇವು ಅಥವಾ ಸ್ವಲ್ಪ ಕಾಳುಮೆಣಸಿನ ಪುಡಿಯನ್ನೂ ಸೇರಿಸಬಹುದು.
ಓಟ್ಸ್ ದೋಸೆ ಮಾಡುವ ವಿಧಾನ
ಓಟ್ಸ್ ಅನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ನಿಮ್ಮ ಬಳಿ ಈಗಾಗಲೇ ಓಟ್ಸ್ ಹಿಟ್ಟು ಇದ್ದರೆ ಅದನ್ನು ಬಳಸಬಹುದು. ನಂತ್ರ ಒಂದು ಪಾತ್ರೆಗೆ ಓಟ್ಸ್ ಹಿಟ್ಟು, ಅಕ್ಕಿ ಹಿಟ್ಟು, ರವೆ, ಮೊಸರು, ಉಪ್ಪು, ಜೀರಿಗೆ, ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ. ನಂತರ ಸ್ವಲ್ಪಸ್ವಲ್ಪ ನೀರು ಹಾಕುತ್ತಾ ಚೆನ್ನಾಗಿ ಕಲಸಿ. ಹಿಟ್ಟು ಸ್ವಲ್ಪ ತೆಳುವಾಗಿಯೇ ಇರಲಿ. ಹಿಟ್ಟು ತಯಾರಿಸಿ ಐದು ನಿಮಿಷ ಬಿಡಿ. ಓಟ್ಸ್ ಮತ್ತು ರವೆ ನೀರನ್ನು ಹೀರಿಕೊಳ್ಳುವುದರಿಂದ ಹಿಟ್ಟು ಸ್ವಲ್ಪ ದಪ್ಪವಾಗಬಹುದು. ಹಾಗಾಗಿ ದೋಸೆ ಮಾಡುವ ಮೊದಲು ಮತ್ತೆ ಚೆನ್ನಾಗಿ ಕಲಸಿ. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ.
ಹಿಟ್ಟನ್ನು 5 ನಿಮಿಷ ಬಿಡಿ. ನಂತರ ಅಗತ್ಯವಿದ್ದರೆ ನೀರು ಸೇರಿಸಿ. ನಾನ್ಸ್ಟಿಕ್ ಅಥವಾ ಕಬ್ಬಿಣದ ಕಾವಲಿಯನ್ನು ಮಧ್ಯಮ ಉರಿಯಲ್ಲಿ ಚೆನ್ನಾಗಿ ಕಾಯಿಸಿ. ನಂತರ ಸ್ವಲ್ಪ ಎಣ್ಣೆ ಸವರಿ. ಕಾವಲಿ ಸರಿಯಾಗಿ ಕಾಯದಿದ್ದರೆ ದೋಸೆ ಅಂಟಿಕೊಳ್ಳಬಹುದು ಮತ್ತು ಗರಿಗರಿಯಾಗುವುದಿಲ್ಲ. ಈ ದೋಸೆಯನ್ನು ಸಾಮಾನ್ಯ ದೋಸೆಯಂತೆ ಮಧ್ಯದಿಂದ ಹೊರಗೆ ಹರಡುವ ಬದಲು, ಕಾವಲಿಯ ಹೊರಭಾಗದಿಂದ ಮಧ್ಯದ ಕಡೆಗೆ ಹಿಟ್ಟನ್ನು ಸುರಿಯಿರಿ. ಅಂಚಿನ ಸುತ್ತಲೂ ಸ್ವಲ್ಪ ಎಣ್ಣೆ ಹಾಕಿ. ಕೆಳಭಾಗ ಹೊಂಬಣ್ಣಕ್ಕೆ ತಿರುಗಿ ಗರಿಗರಿಯಾಗುವವರೆಗೆ ಬೇಯಿಸಿ.
ಇದು ನೆನಪಿರಲಿ
ಓಟ್ಸ್ ಮತ್ತು ರವೆ ನೀರನ್ನು ಹೀರಿಕೊಳ್ಳುವುದರಿಂದ ದೋಸೆ ಮಾಡುತ್ತಾ ಹೋದಂತೆ ಹಿಟ್ಟು ದಪ್ಪವಾಗಬಹುದು. ಹಾಗಾಗಿ ಮಧ್ಯೆ ಮಧ್ಯೆ ಹಿಟ್ಟನ್ನು ಕಲಸಿ, ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ. ಕಾವಲಿ ತುಂಬಾ ತಣ್ಣಗಿದ್ದರೆ ದೋಸೆ ಮೆತ್ತಗೆ ಮತ್ತು ಅಂಟಿಕೊಳ್ಳುವಂತಾಗಬಹುದು. ಅದೇ ರೀತಿ ಕಾವಲಿ ತುಂಬಾ ಬಿಸಿಯಾಗಿದ್ದರೆ ಹಿಟ್ಟು ಸರಿಯಾಗಿ ಹರಡುವುದಿಲ್ಲ. ಕಬ್ಬಿಣದ ಕಾವಲಿ ಬಳಸುತ್ತಿದ್ದರೆ ಪ್ರತಿ ದೋಸೆ ಮಾಡುವ ಮೊದಲು ಎಣ್ಣೆ ಸವರಿದ ಈರುಳ್ಳಿಯ ತುಂಡಿನಿಂದ ಕಾವಲಿಯನ್ನು ಲಘುವಾಗಿ ಒರೆಸಬಹುದು. ದೋಸೆಯನ್ನು ತುಂಬಾ ದಪ್ಪವಾಗಿ ಮಾಡಬೇಡಿ. ತೆಳುವಾಗಿ ಮಾಡಿದರೆ ಚೆನ್ನಾಗಿ ಬೇಯುತ್ತದೆ ಮತ್ತು ಗರಿಗರಿಯಾಗುತ್ತದೆ.


