ಮಾವಿನ ಹಣ್ಣಿನ ಸಾಸಿವೆ

ಇದು ಕರಾವಳಿ ಹಾಗೂ ಮಲೆನಾಡಿನ ಭಾಗದವರು ಹೆಚ್ಚಾಗಿ ಮಾಡುವ ಅಡುಗೆ.  ಅನ್ನದೊಂದಿಗೆ ಸಾಂಬಾರಿನಂತೆ ಸೇರಿಸಿಕೊಂಡು ಸವಿಯಲು ಚೆನ್ನಾಗಿರುತ್ತದೆ. ಹಾಗೇ ಕುಡಿಯಲೂ ಸಕತ್ತಾಗಿರುತ್ತೆ. ಇದನ್ನು ಮಾಡೋಕೆ ಕಸಿ ಮಾವು ಬೇಕಿಲ್ಲ. ಊರಿನ ಹಣ್ಣು ಅಥವ ಕಾಡು ಮಾವಿನಹಣ್ಣು ಪ್ರಶಸ್ತ.
ಬೇಕಾಗುವ ಸಾಮಗ್ರಿ

ಹತ್ತಾರು ಸಣ್ಣ ಕಾಡುಮಾವಿನ ಹಣ್ಣು, 150 ಗ್ರಾಮ್ ಬೆಲ್ಲ, 1 ಚಮಚ ಉಪ್ಪು, 1 ಚಮಚ ಸಾಸಿವೆ, 1 ಒಣಮೆಣಸು, 1 ತೆಂಗಿನಕಾಯಿ 

ಮಾಡುವ ವಿಧಾನ

ಕಾಡು ಮಾವಿನ ಹಣ್ಣನ್ನು ತೊಟ್ಟು ತೆಗೆದು ಚೆನ್ನಾಗಿ ತೊಳೆದು ಕಿವುಚಿ, ಸಿಪ್ಪೆಯನ್ನೂ ಸ್ವಲ್ಪ‌ನೀರು ಹಾಕಿ ಕಿವುಚಿ, ಹಿಂಡಿ ತೆಗೆದಿಟ್ಟುಕೊಳ್ಳಬೇಕು. ಇದಕ್ಕೆ ಬೆಲ್ಲ ಹಾಗೂ ಉಪ್ಪು ಹಾಕಿ ತೆಂಗಿನಕಾಯಿ ತುರಿಗೆ ಒಂದು‌ ಒಣಮೆಣಸಿನಕಾಯಿ ಹಾಕಿ ರುಬ್ಬಿ, ಕಿವುಚಿಟ್ಟ ಮಾವಿನ ರಸಕ್ಕೆ ಬೆರೆಸಬೇಕು. ಇದು ಹೆಚ್ಚು ನೀರಾಗಬಾರದು. ಮಾವಿನಹಣ್ಣು ಸ್ವಲ್ಪ ಹುಳಿ ಇದ್ದರೆ ಇನ್ನೂ ಚೆನ್ನಾಗಿರುತ್ತದೆ.

ಮಾವಿನ ಹಣ್ಣಿನ ಗೊಜ್ಜು

ಇದನ್ನು ಸ್ವಲ್ಪ ಸಿಹಿಯಾಗಿ ತಯಾರಿಸಲಾಗುತ್ತದೆ. ಮಾವಿನ ಹುಳಿ ಸರಿದೂಗಿಸಲು ಈ ಸಿಹಿ. ಕರಾವಳಿಗರ ಮಧ್ಯಾಹ್ನದ ಊಟಕ್ಕೆ ಇದು ಇಲ್ಲದೆ ಈಗ ನಡೆಯುವಂತೆಯೇ ಇಲ್ಲ!

ಬೇಕಾಗುವ ಸಾಮಗ್ರಿ:

10 ಕಾಡುಮಾವಿನ ಹಣ್ಣು ಅಥವಾ ಸಕ್ಕರೆ ಗುತ್ತಿ ತರದ ಮಾವು, 250 ಗ್ರಾಮ್ ಬೆಲ್ಲ, 2 ಚಮಚ ಉಪ್ಪು, 4 ಹಸಿ ಮೆಣಸಿನಕಾಯಿ, ಒಗ್ಗರಣೆಗೆ 3 ಚಮಚ ಎಣ್ಣೆ, 2 ಒಣಮೆಣಸು, ಅರ್ಧ ಚಮಚ ಸಾಸಿವೆ.

ಮಾಡುವ ವಿಧಾನ

ಸ್ವಲ್ಪ ಹುಳಿ ಇರುವ ಕಾಡು ಮಾವಿನ ಹಣ್ಣನ್ನು ತೊಟ್ಟು ತೆಗೆದು ಚೆನ್ನಾಗಿ ತೊಳೆದು ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಿವುಚಿ, ಸಿಪ್ಪೆಯನ್ನು ಹಿಂಡಿ ರಸ ತೆಗೆಯಬೇಕು. ಅದಕ್ಕೆ ಉಪ್ಪು ಬೆಲ್ಲ ಹಾಕಿ, ನಂತರ ಹಸಿ ಮೆಣಸಿನಕಾಯಿ ಹೆಚ್ಚಿ ಹಾಕಬೇಕು. ಇದನ್ನು ಬೇಯಲಿಟ್ಟು ಕುದಿಸಿ, ಸಾಸಿವೆ ಒಗ್ಗರಣೆ ಕೊಡಬೇಕು. ಊಟದ ಜೊತೆಗೆ ಇದು ತುಂಬಾ ರುಚಿ.

ಲಾಕ್‌ಡೌನ್‌ ಮುಗಿಯುವ ಮೊದಲು ಈ ತಿಂಡಿಗಳ ರುಚಿ ನೋಡಿ.. 

ಮಾವಿನ ಹಣ್ಣಿನ ಷರಬತ್ತು

ಬಿಸಿಲಲ್ಲಿ ಓಡಾಡಿ ಬಂದಾಗ ಇದನ್ನು ಕುಡಿದರೆ ಹಾಯೆನಿಸುವ ಅನುಭವ. ದೇಹಕ್ಕೆ ತಂಪಾದ ಫೀಲ್ ಕೊಡುತ್ತೆ. ನೀರಿನಂಶ ಅಧಿಕವಾಗಿರುವ ಕಾರಣ‌ ಬೇಸಿಗೆಯ ನಿರ್ಜಲೀಕರಣ ಸಮಸ್ಯೆ ನಿವಾರಣೆಯಾಗುತ್ತೆ. ಆಟ ಆಡಿ ಬರುವ ಮಕ್ಕಳಿಗೆ ಬಹಳ ಇಷ್ಟವಾಗುತ್ತೆ. ಈ ಷರಬತ್ತನ್ನು ಸ್ವಲ್ಪ ಹೊತ್ತು ಫ್ರಿಡ್ಜ್ ನಲ್ಲಿಟ್ಟು ಕುಡಿದರೆ ಇನ್ನೂ ಸಖತ್ತಾಗಿರುತ್ತೆ. 

ಬೇಕಾಗುವ ಸಾಮಗ್ರಿ

ಮಾವಿನ ಹಣ್ಣು 2, ಎರಡು ದೊಡ್ಡ ಲೋಟ ನೀರು,  ಐದಾರು ಸ್ಪೂನ್, ಏಲಕ್ಕಿ ಸ್ವಲ್ಪ, ಎರಡು ಹರಳು ಉಪ್ಪು.

ಹಲಸಿನ ರುಚಿ ಬಲ್ಲವರು ಈ ರೆಸಿಪಿ ಇಷ್ಟಪಡೋದ್ರಲ್ಲಿ ಡೌಟಿಲ್ಲ 

ಮಾಡುವ ವಿಧಾನ

ಮೊದಲು ಮಾವಿನ ಹಣ್ಣಿನ ಸಿಪ್ಪೆ ತೆಗೆದು ಒಂದು ಪಾತ್ರೆಗೆ ಚೆನ್ನಾಗಿ ಕಿವಿಚಿಕೊಳ್ಳಿ. ರಸವನ್ನು ಹಿಂಡಿ ತೆಗೆಯಿರಿ. ಈಗ ಒಂದು ಪಾತ್ರೆಗೆ ಎರಡು ಲೋಟ ನೀರು ಹಾಕಿ ಸಕ್ಕರೆ ಸೇರಿಸಿ. ಎರಡು ಹರಳು ಉಪ್ಪು ಆ್ಯಡ್ ಮಾಡಿ. ಸಕ್ಕರೆ ಹಾಗೂ ಉಪ್ಪನ್ನು ನೀರಲ್ಲಿ ಕರಗಿಸಿ. ಬಳಿಕ ಕಿವಿಚಿಟ್ಟ ಮಾವಿನ ಹಣ್ಣಿನ ರಸ ಸೇರಿಸಿ. ಮಾವಿನ ಹಣ್ಣಿನ ನಾರು ಸಮೇತ ಹಾಕಿ. ಸೋಸುವುದು ಬೇಡ. ನಾರಿನಂಶ ದೇಹಕ್ಕೆ ಉತ್ತಮ ಅನ್ನುವುದು ಒಂದು ಕಾರಣವಾದರೆ, ಮಾವಿನ ಹಣ್ಣಿನ ರಿಯಲ್ ಸ್ವಾದ ತಿಳಿಯಬೇಕಾದರೆ ನಾರಿನಂಶ ಇರಬೇಕು. ಇದನ್ನೆಲ್ಲ ಚೆನ್ನಾಗಿ ಮಿಕ್ಸ್ ಮಾಡಿ. ಬೇಕಿದ್ದರೆ ಸ್ವಲ್ಪ ಹೊತ್ತು ಫ್ರಿಜ್ ನಲ್ಲಿಡಿ. ಕುಡಿಯಿರಿ. ಬೇಸಿಗೆಯ ಬಳಲಿಕೆ, ಸುಸ್ತೆಲ್ಲ ಇಂಗಿ ಉಲ್ಲಾಸ ಮೂಡುತ್ತದೆ.