Food Secrets: ಹೆಸರಿನಲ್ಲಷ್ಟೇ ಫ್ರೆಂಚ್..ಆದ್ರೆ ಇವು ಫ್ರೆಂಚ್ ಫುಡ್ ಅಲ್ಲ !
ಫ್ರೈಂಚ್ ಫ್ರೈಸ್ (French Fries) ಸಾಮಾನ್ಯವಾಗಿ ಎಲ್ರಿಗೂ ಇಷ್ಟ. ಎಷ್ಟು ಕೊಟ್ರೂ ಕೆಚಪ್ (Ketchup)ನಲ್ಲಿ ಮುಳುಗಿಸಿ ತಿನ್ತಾ ಇರೋಣ ಅನ್ಸುತ್ತೆ. ಫ್ರೆಂಚ್ ಟೋಸ್ಟ್, ಫ್ರೆಂಚ್ ಡ್ರೆಸ್ಸಿಂಗ್ ಸಹ ಹಲವರ ಫೇವರಿಟ್. ಆದ್ರೆ ಅಚ್ಚರಿಯ ವಿಷಯ ಕೇಳಿ. ಫ್ರೆಂಚ್ ಹೆಸ್ರು ಸೇರ್ಕೊಂಡಿರೋ ಈ ಫುಡ್‌ಗೂ, ಫ್ರೆಂಚ್‌ಗೂ ಸಂಬಂಧಾನೇ ಇಲ್ಲ.
ಭಾರತೀಯರು ಸ್ವಭಾತಹಃ ಆಹಾರ (Food)ಪ್ರಿಯರು. ಹಾಗಾಗಿಯೇ ಇಲ್ಲಿನ ಆಹಾರಪದ್ಧತಿಯಲ್ಲಿ ಹಲವಾರು ರುಚಿಕರವಾದ ತಿನಿಸುಗಳಿವೆ. ಸಿಹಿ, ರುಚಿ, ಖಾರದ ಸಂಯೋಜನೆಯ ಹಲವು ಆಹಾರಗಳಿವೆ. ಇಲ್ಲಿನ ಆಹಾರಪದ್ಧತಿ ಮಾತ್ರವಲ್ಲದೆ ವಿದೇಶದ ಹಲವು ಪಾಕವಿಧಾನಗಳು ಸಹ ನಮ್ಮ ದೇಶದಲ್ಲಿಯೂ ಪ್ರಸಿದ್ಧಿ ಹೊಂದಿವೆ. ಜನರು ಇವುಗಳನ್ನು ಎಷ್ಟರಮಟ್ಟಿಗೆ ನೆಚ್ಚಿಕೊಂಡಿದ್ದಾರೆ ಎಂದರೆ ಅವು ವಿದೇಶದಿಂದ ಶುರುವಾದ ಆಹಾರಗಳು ಎಂದು ಪ್ರತ್ಯೇಕಿಸುವುದೇ ಕಷ್ಟ. ಬರ್ಗರ್, ಪಿಜ್ಜಾ, ಫ್ರೆಂಚ್ ಫ್ರೈಸ್, ಸ್ಯಾಂಡ್‌ವಿಚ್ (Sandwich) ಎಲ್ಲವೂ ಈಗ ಸಾಮಾನ್ಯ ರಸ್ತೆಬದಿಯ ಅಂಗಡಿಯಲ್ಲಿಯೂ ಲಭ್ಯವಾಗುತ್ತದೆ.
ಆಹಾರದ ವಿಷಯಕ್ಕೆ ಬಂದಾಗ ಚೀನಾ, ಇಟಾಲಿಯನ್, ಫ್ರೆಂಚ್‌ನ ಆಹಾರಗಳು ಹೆಚ್ಚು ಪ್ರಸಿದ್ಧಿ ಹೊಂದಿವೆ. ನೂಡಲ್ಸ್, ಮಂಚೂರಿಯನ್, ಫ್ರೈಡ್ ರೈಸ್, ಫ್ರೈಂಚ್ ಫ್ರೈಸ್, ಫ್ರೆಂಚ್ ಟೋಸ್ಟ್ ಮೊದಲಾದವುಗಳನ್ನು ಜನರು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಆದರೆ, ಫ್ರೆಂಚ್ ಫ್ರೈಸ್, ಫ್ರೆಂಚ್ ಟೋಸ್ಟ್, ಫ್ರೆಂಚ್ ಡ್ರೆಸ್ಸಿಂಗ್ ಹೀಗೆ ಫ್ರೆಂಚ್ ಹೆಸರಿನಿಂದ ಕರೆಯಲ್ಪಡುವ ಈ ಆಹಾರದ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ. ಫ್ರೆಂಚ್ ಎಂಬ ಹೆಸರಿನಿಂದ ಕರೆಯಲ್ಪಡುವ ಆಹಾರಗಳೆಲ್ಲಾ ಮೂಲತಃ ಅಲ್ಲಿಂದ ಬಂದಿರೋದಲ್ಲ ಅನ್ನೋದು ನಿಮಗೆ ಗೊತ್ತಾ. ಇಲ್ಲಿದೆ ಫ್ರೆಂಚ್ ಹೆಸರಿನ ಆಹಾರ ತಿನಿಸುಗಳ ಬಗ್ಗೆ ನೀವು ತಿಳಿದಿರದ ವಿಚಾರಗಳು.
ಫ್ರೆಂಚ್ ಫ್ರೈಯಿಂದ ಕೋಲ್ಡ್ ಡ್ರಿಂಕಿನರೆಗೂ ಈ ಆಹಾರ ಮೆಮೊರಿ ಲಾಸ್ ಮಾಡುತ್ತೆ!
ಫ್ರೆಂಚ್ ಫ್ರೈಸ್ (French Fries)
ಫ್ರೆಂಚ್ ಫ್ರೈಸ್ ಸಾಮಾನ್ಯವಾಗಿ ಎಲ್ಲರ ಫೇವರಿಟ್. ಆಲೂಗಡ್ಡೆಯನ್ನು ಇಷ್ಟಪಡದವರು ಸಹ ಫ್ರೆಂಚ್ ಫ್ರೈಸ್‌ನ್ನು ಇಷ್ಟಪಟ್ಟು ತಿನ್ನುತ್ತಾರೆ. ಆಲೂಗಡ್ಡೆಯನ್ನು ತೆಳುವಾಗಿ ಕತ್ತರಿಸಿ ಆವಿಯಲ್ಲಿ ಬೇಯಿಸಿ ಸಿದ್ಧಪಡಿಸುವ ಈ ಸ್ನ್ಯಾಕ್ಸ್‌ನ್ನು ಕೆಚಪ್‌ನೊಂದಿಗೆ ತಿನ್ನಲಾಗುತ್ತದೆ. ಇದನ್ನು ಹೆಚ್ಚಾಗಿ ಬರ್ಗರ್‌ಗಳು ಮತ್ತು ಸ್ಯಾಂಡ್‌ವಿಚ್ ಜೊತೆಗೆ ಸರ್ವ್ ಮಾಡುತ್ತಾರೆ. ಈ ಕುರುಕುಲಾದ ಲೈಟ್ ಸ್ನ್ಯಾಕ್ಸ್ (Snacks) ಪ್ರಪಂಚದಾದ್ಯಂತ ಜನಪ್ರಿಯವಾಗಿದೆ. ಹೆಚ್ಚಿನವರು ಇದರ ಹೆಸರನ್ನು ಕೇಳಿ, ಹೆಸರೇ ಸೂಚಿಸುವಂತೆ ಫ್ರೆಂಚ್ ಫ್ರೈಸ್ ಮೂಲತಃ ಫ್ರಾನ್ಸ್‌ಗೆ ಸೇರಿದ ಆಹಾರವೆಂದೇ ತಿಳಿದಿದ್ದಾರೆ. ಆದರೆ ಫ್ರೆಂಚ್ ಫ್ರೈಸ್‌ಗೂ ಫ್ರೆಂಚ್ ಗೂ ಸಂಬಂಧವೇ ಇಲ್ಲ.
ಫ್ರೆಂಚ್ ಫ್ರೈಸ್ ವಾಸ್ತವವಾಗಿ ಬೆಲ್ಜಿಯಂ ದೇಶಕ್ಕೆ ಸೇರಿದ್ದಾಗಿದೆ. ಈ ಹೆಸರಿನ ಹಿಂದಿನ ಕಥೆಯು ವರ್ಲ್ಡ್ ವಾರ್ 1ನೇ ಘಟನೆಗೂ ಮೊದಲಿನದ್ದು. ಬೆಲ್ಜಿಯಂನಲ್ಲಿ ನೆಲೆಸಿರುವ ಸೈನಿಕರು ಆಲೂಗಡ್ಡೆ (Potato)ಯ ಈ ಫ್ರೈಗಳನ್ನು ತಿನ್ನಲು ಬಳಸುತ್ತಿದ್ದರು. ಬೆಲ್ಜಿಯಂನ ಅಧಿಕೃತ ಭಾಷೆ ಫ್ರೆಂಚ್ ಮತ್ತು ಈ ಸೈನಿಕರಲ್ಲಿ ಹೆಚ್ಚಿನವರು ಇದೇ ಭಾಷೆಯನ್ನು ಮಾತನಾಡುತ್ತಿದ್ದರು. ಹೀಗಾಗಿ, ಆಲೂಗಡ್ಡೆಯ ಈ ತಿಂಡಿಗೂ ಫ್ರೆಂಚ್ ಫ್ರೈಸ್ ಎಂಬ ಹೆಸರಿಡಲಾಯಿತು. ಮತ್ತು ಅದೇ ಹೆಸರು ಇವತ್ತಿಗೂ ಮುಂದುವರಿದಿದೆ.
ಪಿಜ್ಜಾ, ಫ್ರೆಂಚ್ ಫ್ರೈಸ್ ಪ್ರಿಯರೇ, ನಿಮ್ಮ ಆರೋಗ್ಯದ ಕಡೆ ಇರಲಿ ಗಮನ
ಫ್ರೆಂಚ್ ಟೋಸ್ಟ್ (French Toast)
ಫ್ರೆಂಚ್ ಟೋಸ್ಟ್ ಒಂದು ಸಿಹಿಯಾದ ಆಹಾರ ಪದಾರ್ಥವಾಗಿದೆ. ಬ್ರೆಡ್, ಮೊಟ್ಟೆ, ಹಾಲು ಮತ್ತು ಸಕ್ಕರೆಯನ್ನು ಬಳಸಿ ಫ್ರೆಂಚ್ ಟೋಸ್ಟ್‌ನ್ನು ಕ್ಷಣಾರ್ಧದಲ್ಲಿ ತಯಾರಿಸಬಹುದು. ಆದರೆ ಇದು ಫ್ರೆಂಚರಿಗೆ ಸ್ಥಳೀಯ ಆಹಾರವಲ್ಲ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಖಾದ್ಯವನ್ನು ಹೇಗೆ ಕರೆಯಲಾಯಿತು ಎಂಬುದರ ಹಿಂದಿನ ಕಥೆ ತುಂಬಾ ಆಸಕ್ತಿದಾಯಕವಾಗಿದೆ. ಮೊದಲಿಗೆ 1724ರಲ್ಲಿ ಜೋಸೆಫ್ ಫ್ರೆಂಚ್ ಎಂಬ ವ್ಯಕ್ತಿ ಈ ಸಿಹಿ ಪದಾರ್ಥವನ್ನು ತಯಾರಿಸಿದನು ಎಂದು ತಿಳಿದುಬರುತ್ತದೆ. ನಂತರ ಇದನ್ನು ‘ಫ್ರೆಂಚ್ ಟೋಸ್ಟ್’ ಎಂಬ ಹೆಸರಿನಲ್ಲಿ ಮಾರಾಟ ಮಾಡಿದನು.
ಫ್ರೆಂಚ್ ಡ್ರೆಸ್ಸಿಂಗ್ (French Dressing)
ಫ್ರೆಂಚ್ ಡ್ರೆಸ್ಸಿಂಗ್ ವಿದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇದರಲ್ಲಿ ಸಲಾಡ್‌ಗಳಿಗೆ ಟೊಮೇಟೋಗಳಿಂದ ಅಲಂಕರಿಸಲಾಗುತ್ತದೆ. ಫ್ರೆಂಚ್ ಡ್ರೆಸ್ಸಿಂಗ್ ಕೂಡ ಯಾವುದೇ ರೀತಿಯಲ್ಲಿ ಫ್ರೆಂಚ್‌ಗೆ ಸಂಬಂಧಿಸಿಲ್ಲ. ಸಾಂಪ್ರದಾಯಿಕ ಸಲಾಡ್ ಡ್ರೆಸ್ಸಿಂಗ್ ಅನ್ನು ಸಾಮಾನ್ಯವಾಗಿ ಎಣ್ಣೆ, ವಿನೇಗರ್ ಬಳಸಿ ತಯಾರಿಸಲಾಗುತ್ತದೆ ಮತ್ತು ಇದನ್ನು ವಿನೈಗ್ರೇಟ್ ಎಂದು ಕರೆಯಲಾಗುತ್ತದೆ.