ದೋಸೆ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಆದ್ರೆ ಸಾಂಪ್ರದಾಯಿಕ ದೋಸೆ ಮಾಡೋಕೆ ಸಾಕಷ್ಟು ಪ್ರೊಸೆಸ್‌ ಇದೆ. ಎಲ್ಲದಕ್ಕೂ ಟೈಮ್‌ ಬೇಕು. ಆದ್ರೆ ಇದ್ಯಾವುದು ಇಲ್ದೆ ಸಿಂಪಲ್‌ ಆಗಿ ದೋಸೆ ಮಾಡೋದು ಹೇಗೆ ಅಂತ ನಾವು ಹೇಳ್ತೇವೆ.

ದೋಸೆ ಮಾಡೋಕೆ ಹೆಚ್ಚಿನ ಟೆನ್ಷನ್‌ ತೆಗೆದುಕೊಳ್ಳೋ ಅಗತ್ಯ ಇಲ್ಲ. ಸಿಂಪಲ್‌ ಆಗಿ ಕಡಲೆ ಹಿಟ್ಟಿನಲ್ಲಿ ರುಚಿಯಾದ ದೋಸೆ ತಯಾರಿಸಬಹುದು. ಅದು ಹೇಗೆ ಅಂತ ನಾವು ಹೇಳ್ತೇವೆ.

ಕಡಲೆ ಹಿಟ್ಟಿನ ದೋಸೆ ಮಾಡಲು ಬೇಕಾಗುವ ಪದಾರ್ಥ

1 ಕಪ್ ಕಡಲೆಹಿಟ್ಟು

2 ಚಮಚ ಅಕ್ಕಿ ಹಿಟ್ಟು ಅಥವಾ ರವೆ

2 ಚಮಚ ಮೊಸರು

ಅರ್ಧ ಚಮಚ ಓಮ

ಕಾಲು ಚಮಚ ಅರಿಶಿನ

ಅರ್ಧ ಚಮಚ ಕಾಶ್ಮೀರಿ ಖಾರದ ಪುಡಿ

ಕಾಲು ಚಮಚ ಇಂಗು

ಅರ್ಧ ಚಮಚ ಶುಂಠಿ-ಹಸಿಮೆಣಸಿನ ಪೇಸ್ಟ್

ರುಚಿಗೆ ತಕ್ಕಷ್ಟು ಉಪ್ಪು

ಅಗತ್ಯವಿರುವಷ್ಟು ನೀರು

ದೋಸೆ ಬೇಯಿಸಲು ಸ್ವಲ್ಪ ಎಣ್ಣೆ ಅಥವಾ ತುಪ್ಪ

ಹಿಟ್ಟು ತಯಾರಿಸುವುದು ಹೇಗೆ?

ಮೊದಲು ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು ಮತ್ತು ಅಕ್ಕಿ ಹಿಟ್ಟನ್ನು ಹಾಕಿ. ಇದಕ್ಕೆ ಮೊಸರು, ಅರಿಶಿನ, ಖಾರದ ಪುಡಿ, ಇಂಗು, ಓಮ, ಶುಂಠಿ-ಹಸಿಮೆಣಸಿನ ಪೇಸ್ಟ್ ಮತ್ತು ಉಪ್ಪು ಸೇರಿಸಿ. ನಂತರ ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ಗಂಟುಗಳಿಲ್ಲದಂತೆ ಚೆನ್ನಾಗಿ ಕಲಸಿ. ಹಿಟ್ಟು ತುಂಬಾ ಗಟ್ಟಿಯಾಗಿರಬಾರದು, ತುಂಬಾ ತೆಳುವಾಗಿಯೂ ಇರಬಾರದು. ಸಾಮಾನ್ಯ ದೋಸೆ ಹಿಟ್ಟಿನ ಹದದಲ್ಲಿರಬೇಕು. ಹಿಟ್ಟನ್ನು 5ರಿಂದ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದರಿಂದ ರವೆ ಅಥವಾ ಅಕ್ಕಿ ಹಿಟ್ಟು ಸ್ವಲ್ಪ ಉಬ್ಬಿಕೊಳ್ಳುತ್ತದೆ.

ದೋಸೆ ಅಂಟಿಕೊಳ್ಳದಂತೆ ಮಾಡಲು ಈ ಟ್ರಿಕ್ ಬಳಸಿ

ನಾನ್ಸ್ಟಿಕ್ ಅಥವಾ ಕಬ್ಬಿಣದ ತವಾವನ್ನು ಚೆನ್ನಾಗಿ ಬಿಸಿ ಮಾಡಿ. ಸ್ವಲ್ಪ ಎಣ್ಣೆ ಹಚ್ಚಿ, ನಂತರ ತವೆಯ ಮೇಲೆ ಸ್ವಲ್ಪ ನೀರು ಚಿಮುಕಿಸಿ. ಒಂದು ಸ್ವಚ್ಛವಾದ ಬಟ್ಟೆಯಿಂದ ತವೆಯನ್ನು ಒರೆಸಿ. ಹೀಗೆ ಮಾಡುವುದರಿಂದ ತವೆಯ ಉಷ್ಣತೆ ಸ್ವಲ್ಪ ಸಮತೋಲನಕ್ಕೆ ಬಂದು ದೋಸೆ ಅಂಟಿಕೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ.

ದೋಸೆ ಮಾಡುವುದು ಹೇಗೆ?

ಈಗ ಉರಿಯನ್ನು ಕಡಿಮೆ ಮಾಡಿ. ತವೆಯ ಮಧ್ಯದಲ್ಲಿ ಒಂದು ದೊಡ್ಡ ಚಮಚ ಹಿಟ್ಟು ಹಾಕಿ, ಚಮಚದ ಹಿಂಭಾಗದಿಂದ ಒಳಗಿನಿಂದ ಹೊರಕ್ಕೆ ನಿಧಾನವಾಗಿ ತೆಳುವಾಗಿ ಹರಡಿ. ನಂತರ ಉರಿಯನ್ನು ಮಧ್ಯಮ-ಹೆಚ್ಚಿನ ಮಟ್ಟಕ್ಕೆ ಇಡಿ. ದೋಸೆಯ ಅಂಚು ಮತ್ತು ಮಧ್ಯಭಾಗಕ್ಕೆ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ. ಮೇಲಿನ ಭಾಗ ಒಣಗಿದಂತೆ ಕಾಣಲು ಆರಂಭಿಸಿ, ಕೆಳಭಾಗ ಸ್ವಲ್ಪ ಗೋಲ್ಡನ್ ಬಣ್ಣಕ್ಕೆ ಬಂದು ಕ್ರಿಸ್ಪಿಯಾಗುತ್ತಿದ್ದಂತೆ ದೋಸೆಯ ಅಂಚು ತವೆಯಿಂದ ಸುಲಭವಾಗಿ ಬಿಡಲು ಆರಂಭಿಸುತ್ತದೆ. ಆಗ ದೋಸೆಯನ್ನು ಮಡಚಿ ಅಥವಾ ರೋಲ್ ಮಾಡಿ ತೆಗೆಯಿರಿ.

ಬೇಕಿದ್ದರೆ ಟಾಪಿಂಗ್ ಕೂಡ ಹಾಕಬಹುದು

ದೋಸೆಯ ಮೇಲೆ ಸ್ವಲ್ಪ ಹುರಿದ ಜೀರಿಗೆ ಪುಡಿ, ಕೊತ್ತಂಬರಿ ಸೊಪ್ಪು, ತುರಿದ ಪನೀರ್ ಅಥವಾ ಆಲೂಗಡ್ಡೆ ಮಸಾಲೆ ಹಾಕಬಹುದು. ಇದನ್ನು ತೆಂಗಿನಕಾಯಿ ಚಟ್ನಿ, ಸಾಂಬಾರ್ ಅಥವಾ ಹಸಿರು ಚಟ್ನಿಯೊಂದಿಗೆ ಬಿಸಿಬಿಸಿಯಾಗಿ ಸೇವಿಸಿ.