ಚಿಪ್ಸ್ ಪ್ಯಾಕೆಟ್ ಖರೀದಿಸುವಾಗ ಅದರ ಮೇಲೆ ನಮೂದಿಸಿರುವ ತೂಕದಷ್ಟಾದರೂ ಉತ್ಪನ್ನ ಇರುತ್ತದೆ ಎಂದು ಗ್ರಾಹಕರು ನಿರೀಕ್ಷಿಸುತ್ತಾರೆ. ಆದರೆ, ಲೇಸ್ (Lay’s) ಆಲೂಗಡ್ಡೆ ಚಿಪ್ಸ್ ಪ್ಯಾಕೆಟ್ನಲ್ಲಿ ನಮೂದಿಸಿದ್ದಕ್ಕಿಂತ ಕಡಿಮೆ ಪ್ರಮಾಣದ ಚಿಪ್ಸ್ ಇತ್ತು ಎಂಬ ದೂರಿನ ಪ್ರಕರಣವೊಂದು ಈಗ ಗಮನ ಸೆಳೆದಿದೆ.
ಚಿಪ್ಸ್ ಪ್ಯಾಕೆಟ್ ಖರೀದಿಸುವಾಗ ಅದರ ಮೇಲೆ ನಮೂದಿಸಿರುವ ತೂಕದಷ್ಟಾದರೂ ಉತ್ಪನ್ನ ಇರುತ್ತದೆ ಎಂದು ಗ್ರಾಹಕರು ನಿರೀಕ್ಷಿಸುತ್ತಾರೆ. ಆದರೆ, ಲೇಸ್ (Lay’s) ಆಲೂಗಡ್ಡೆ ಚಿಪ್ಸ್ ಪ್ಯಾಕೆಟ್ನಲ್ಲಿ ನಮೂದಿಸಿದ್ದಕ್ಕಿಂತ ಕಡಿಮೆ ಪ್ರಮಾಣದ ಚಿಪ್ಸ್ ಇತ್ತು ಎಂಬ ದೂರಿನ ಪ್ರಕರಣವೊಂದು ಈಗ ಗಮನ ಸೆಳೆದಿದೆ. ಪ್ಯಾಕೆಟ್ನಲ್ಲಿ 15 ಗ್ರಾಂ ಚಿಪ್ಸ್ ಇರಬೇಕಾಗಿದ್ದರೆ, ಕೇವಲ 4 ಗ್ರಾಂ ಮಾತ್ರ ಇತ್ತು ಎಂದು ಗ್ರಾಹಕರೊಬ್ಬರು ಆರೋಪಿಸಿದ್ದರು. ಈ ಪ್ರಕರಣದಲ್ಲಿ ಪೆಪ್ಸಿಕೋ ಇಂಡಿಯಾ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ಗೆ ಗ್ರಾಹಕ ಆಯೋಗವು ಪರಿಹಾರ ಪಾವತಿಸುವಂತೆ ಆದೇಶಿಸಿದೆ.
ಲೈವ್ ಲಾ ವರದಿಯ ಪ್ರಕಾರ, ರಾಜಸ್ಥಾನದ ಜೈಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗ-2 ಈ ಆದೇಶ ನೀಡಿದೆ. ಕಂಪನಿಯು ಗ್ರಾಹಕರಿಗೆ ₹5 ಮರುಪಾವತಿ ಮಾಡುವುದರ ಜೊತೆಗೆ, ಮಾನಸಿಕ ಕಿರುಕುಳಕ್ಕೆ ₹5,000 ಪರಿಹಾರ ಮತ್ತು ಕಾನೂನು ಹೋರಾಟದ ವೆಚ್ಚವಾಗಿ ₹3,000 ಪಾವತಿಸಬೇಕು ಎಂದು ಸೂಚಿಸಿದೆ.
ಏನಿದು ಪ್ರಕರಣ?
ಜೈಪುರದ ಎಂ/ಎಸ್ ಜಲನ್ ಬಿಲ್ಡಿಂಗ್ ಆ್ಯಂಡ್ ಹಾರ್ಡ್ವೇರ್ ಸ್ಟೋರ್ನ ಮಾಲೀಕ ಚಂದ್ರಮನ್ ಜಲನ್ ಅವರು 2020ರ ನವೆಂಬರ್ 10ರಂದು ಮೆಟ್ರೋ ಕ್ಯಾಶ್ ಆ್ಯಂಡ್ ಕ್ಯಾರಿ ಇಂಡಿಯಾ ಸಂಸ್ಥೆಯಿಂದ ವಿವಿಧ ಆಹಾರ ಪದಾರ್ಥಗಳನ್ನು ಖರೀದಿಸಿದ್ದರು. ತಮ್ಮ ಮನೆಗೆ ಬಂದ ಅತಿಥಿಗಳಿಗೆ ನೀಡಲು ಈ ಪದಾರ್ಥಗಳನ್ನು ಖರೀದಿಸಿದ್ದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಖರೀದಿಸಿದ ವಸ್ತುಗಳ ಪೈಕಿ ಪೆಪ್ಸಿಕೋ ಕಂಪನಿ ತಯಾರಿಸಿದ ಲೇಸ್ ಆಲೂಗಡ್ಡೆ ಚಿಪ್ಸ್ ಪ್ಯಾಕೆಟ್ ಕೂಡ ಇತ್ತು. ಅತಿಥಿಗಳಿಗೆ ಚಿಪ್ಸ್ ನೀಡುವಾಗ ಪ್ಯಾಕೆಟ್ ಸಾಮಾನ್ಯಕ್ಕಿಂತ ಹಗುರವಾಗಿದೆ ಎಂದು ಅವರಿಗೆ ಅನಿಸಿತು. ಬಳಿಕ ಪ್ಯಾಕೆಟ್ನಲ್ಲಿದ್ದ ಚಿಪ್ಸ್ ತೂಕ ಪರಿಶೀಲಿಸಿದಾಗ, ಪ್ಯಾಕೆಟ್ ಮೇಲೆ ನಮೂದಿಸಿದ್ದ 15 ಗ್ರಾಂ ಬದಲಿಗೆ ಕೇವಲ 4 ಗ್ರಾಂ ಚಿಪ್ಸ್ ಇತ್ತು ಎಂದು ಅವರು ಆರೋಪಿಸಿದರು.
ಅಂಗಡಿಗೆ ದೂರು ನೀಡಿದರೂ ತೃಪ್ತಿಯಾಗಲಿಲ್ಲ!
ಪ್ಯಾಕೆಟ್ನಲ್ಲಿ ಚಿಪ್ಸ್ ಪ್ರಮಾಣ ಕಡಿಮೆ ಇರುವುದನ್ನು ಗಮನಿಸಿದ ಬಳಿಕ ಜಲನ್ ಅವರು ಮೆಟ್ರೋ ಕ್ಯಾಶ್ ಆ್ಯಂಡ್ ಕ್ಯಾರಿ ಸಂಸ್ಥೆಯನ್ನು ಸಂಪರ್ಕಿಸಿದ್ದರು. ಆದರೆ, ಅಲ್ಲಿಂದ ದೊರೆತ ಪ್ರತಿಕ್ರಿಯೆಯಿಂದ ತೃಪ್ತರಾಗದ ಅವರು, ಗ್ರಾಹಕ ಸೇವೆಯಲ್ಲಿ ಲೋಪ ಮತ್ತು ಅನ್ಯಾಯದ ವ್ಯಾಪಾರ ಪದ್ಧತಿ ಅನುಸರಿಸಲಾಗಿದೆ ಎಂದು ಆರೋಪಿಸಿ 2022ರ ಏಪ್ರಿಲ್ 6ರಂದು ಗ್ರಾಹಕ ಆಯೋಗದ ಮೊರೆ ಹೋಗಿದ್ದರು.
ಚಿಪ್ಸ್ ಕಂಪನಿಗೆ ಹೊಣೆ, ಮಾರಾಟಗಾರನಿಗೆ ರಿಲೀಫ್
ಪ್ರಕರಣದ ವಿಚಾರಣೆ ವೇಳೆ ಮೆಟ್ರೋ ಕ್ಯಾಶ್ ಆ್ಯಂಡ್ ಕ್ಯಾರಿ ಸಂಸ್ಥೆಯು, ಚಿಪ್ಸ್ ಪ್ರಮಾಣದಲ್ಲಿ ವ್ಯತ್ಯಾಸವಾಗಿದ್ದರೆ ಅದು ಉತ್ಪಾದನಾ ಹಂತದಲ್ಲೇ ಸಂಭವಿಸಿರಬಹುದು. ಹೀಗಾಗಿ ತಯಾರಕ ಕಂಪನಿಯೇ ಹೊಣೆ ಹೊರಬೇಕು ಎಂದು ವಾದಿಸಿತು.
ಇತ್ತ ಪೆಪ್ಸಿಕೋ ಕಂಪನಿಗೆ ನೋಟಿಸ್ ನೀಡಲಾಗಿದ್ದರೂ ವಿಚಾರಣೆಗೆ ಹಾಜರಾಗಿರಲಿಲ್ಲ. ಲಭ್ಯವಿದ್ದ ದಾಖಲೆಗಳು ಮತ್ತು ಖರೀದಿ ಬಿಲ್ ಸೇರಿದಂತೆ ದೂರುದಾರರು ಸಲ್ಲಿಸಿದ ಸಾಕ್ಷ್ಯಗಳನ್ನು ಪರಿಶೀಲಿಸಿದ ಆಯೋಗವು, ಮಾರಾಟಗಾರನ ವಿರುದ್ಧದ ದೂರನ್ನು ವಜಾಗೊಳಿಸಿ ಪೆಪ್ಸಿಕೋ ವಿರುದ್ಧದ ದೂರನ್ನು ಪುರಸ್ಕರಿಸಿತು.
₹8,000 ಪರಿಹಾರ ಪಾವತಿಸಲು ಆದೇಶ
ಆಯೋಗದ ಆದೇಶದ ಪ್ರಕಾರ, ಪೆಪ್ಸಿಕೋ ಕಂಪನಿಯು ₹5 ಮೊತ್ತವನ್ನು 2022ರ ಏಪ್ರಿಲ್ 6ರಿಂದ ಪಾವತಿಸುವ ದಿನದವರೆಗೆ ವಾರ್ಷಿಕ ಶೇ. 6ರ ಬಡ್ಡಿಯೊಂದಿಗೆ ಮರುಪಾವತಿಸಬೇಕು. ಇದರ ಜೊತೆಗೆ ಮಾನಸಿಕ ಕಿರುಕುಳಕ್ಕೆ ₹5,000 ಮತ್ತು ಕಾನೂನು ವೆಚ್ಚವಾಗಿ ₹3,000 ಪಾವತಿಸಲು ಸೂಚಿಸಲಾಗಿದೆ.
ಆದೇಶದ ಪ್ರಕಾರ ಒಂದು ತಿಂಗಳೊಳಗೆ ₹8,000 ಪರಿಹಾರ ಮತ್ತು ಕಾನೂನು ವೆಚ್ಚವನ್ನು ಪಾವತಿಸದಿದ್ದರೆ, ಆ ಮೊತ್ತಕ್ಕೂ ಆದೇಶದ ದಿನಾಂಕದಿಂದ ಪಾವತಿಸುವವರೆಗೆ ವಾರ್ಷಿಕ ಶೇ. 6ರ ಬಡ್ಡಿ ಅನ್ವಯವಾಗಲಿದೆ.




