ಕ್ವಾರಂಟೈನ್ ಟೈಮ್; ಕಿಚನ್‌ನಲ್ಲಿ ಸಮಯ ಉಳಿಸೋಕೊಂದಿಷ್ಟು ಟ್ರಿಕ್ಸ್
ನಮ್ಮ ಬ್ಯುಸಿ ಜೀವನವು ಇಡೀ ದಿನ ಅಡುಗೆಮನೆಯಲ್ಲೇ ಕಳೆಯಲು ಬಿಡದ್ದರಿಂದ, ಈಗ ಹಲವರ ಮನೆಯ ಅಡುಗೆ ಕೋಣೆ ಸಂತೆ ಮಾರ್ಕೆಟ್ಟಿನಂತಾಗಿದೆ. ಅದನ್ನು ಸರಿಯಾಗಿ ಸ್ವಚ್ಛಗೊಳಿಸಲು, ಜೋಡಿಸಲು ಅವರಲ್ಲಿ ಟೈಮೇ ಇಲ್ಲ.
ಲಾಕ್‌ಡೌನ್‌ನಿಂದಾಗಿ ಮನೆಯೊಳಗೇ ಉಳಿಯಬೇಕಾಗಿ ಬಂದ ಮೇಲೆ ಎಲ್ಲರಿಗೂ ಬಾಯಿಚಪಲ ಜಾಸ್ತಿಯಾಗಿದೆ. ಮುಂಚಿನಂತೆ ಹೊರಗೆ ಹೋಗಿ ತಿನ್ನುವ ಅವಕಾಶವಿಲ್ಲದೆ, ಅನಿವಾರ್ಯವಾಗಿ ಈಗ ಎಲ್ಲರೂ ಮನೆಯಲ್ಲಿಯೇ ಬೇಕುಬೇಕಾದ್ದನ್ನು ಮಾಡಿ ತಿನ್ನುವ ಉತ್ತಮ ಅಭ್ಯಾಸ ರೂಢಿಸಿಕೊಳ್ಳುತ್ತಿದ್ದಾರೆ. ಆದರೆ, ಇದರಿಂದ ದಿನದ ಪೂರ್ತಿ ಸಮಯ ಮನೆಯೊಳಗೇ ಕಳೆದು ಹೋಗುತ್ತಿದೆ. ಅಲ್ಲದೆ, ಅಡುಗೆಗೆ ಜನ ಇಟ್ಟುಕೊಂಡು ಅಭ್ಯಾಸವಿದ್ದವರಂತೂ ಈಗ ಅಡುಗೆಮನೆಗೇ ಸೀಮಿತವಾಗಿರುವ ತಮ್ಮ ನಸೀಬನನ್ನು ಹಳಿದುಕೊಳ್ಳುತ್ತಿದ್ದಾರೆ. ಅಡುಗೆ ಮಾಡು, ಪಾತ್ರೆ ತೊಳಿ ಇಷ್ಟೇ ಜೀವನ ಎಂದು ಬೇಸರ ಪಟ್ಟಿಕೊಳ್ಳುತ್ತಿದ್ದಾರೆ. ಆದರೆ, ಸ್ವಲ್ಪ ಜಾಣತನ ಬಳಸಿದರೆ ಅಡುಗೆಮನೆಯಲ್ಲಿ ಸಮಯ ಉಳಿಸುವ ಕೆಲ ಟ್ರಿಕ್‌ಗಳನ್ನು ಕಲಿತುಕೊಂಡು ಸಮಯ ಹಿಗ್ಗಿಸಬಹುದು.
ಸೊಪ್ಪುಗಳು
ಸೊಪ್ಪುಗಳನ್ನು ತಂದಿಡುತ್ತಿದ್ದಂತೆಯೇ ಈ ಬಿಸಿಲ ಝಳಕ್ಕೆ ಅವು ಬಾಡಿ ಹೋಗುತ್ತವೆ. ಹೀಗಾಗಿ, ಸೊಪ್ಪುಗಳನ್ನು ತಂದು ಸೋಸಿಡುವ ದೊಡ್ಡ ಕೆಲಸ ಮುಗಿಸಿಯೂ ಕಡೆಗದನ್ನು ಡಸ್ಟ್‌ಬಿನ್‌ಗೆ ಹಾಕುವಂತಾಗುತ್ತದೆ. ಹಾಗಾಗಿ, ಪಾಲಕ್, ಮೆಂತ್ಯೆ ಇತ್ಯಾದಿ ಸೊಪ್ಪುಗಳನ್ನು ತಂದ ದಿನವೇ ಅದರ ಸಾಂಬಾರ್ ಮಾಡಬಹುದು. ಉಳಿದದದ್ದನ್ನು ಪ್ಯೂರಿ ಮಾಡಿ ಫ್ರೀಜರ್‌ನಲ್ಲಿಡಿ. ಸಾಸಿವೆ, ತಂಬುಳಿ, ಸ್ಮೂತಿ ಮಾಡುವಾಗ ತೆಗೆದು ಬಳಸಿದರಾಯ್ತು.
ಕೋವಿಡಿ ಸೋಲಿಸಲು ಪ್ರಾಣಾಯಾಮ ಬೆಸ್ಟ್ ಮದ್ದು
ಅಡುಗೆ ಮನೆಯ ನೆಲಕ್ಕೆ ಪೇಪರ್ ಹಾಸಿಕೊಂಡು ಕೆಲಸ ಮಾಡುವುದು, ಸೊಪ್ಪು ಸೋಸುವಾಗ, ಬೆಳ್ಳುಳ್ಳಿ ಬಿಡಿಸುವಾಗ ಪೇಪರ್ ಹಾಸಿಕೊಳ್ಳುವುದು- ಇಂಥ ಅಭ್ಯಾಸ ರೂಢಿಸಿಕೊಂಡರೆ ಹಿಟ್ಟು ಮತ್ತಿತರ ಕಸ ಚೆಲ್ಲಿದಾಗ ಅವನ್ನು ಸ್ವಚ್ಛಗೊಳಿಸಲು ಒದ್ದಾಡಬೇಕಿಲ್ಲ. ಪೇಪರ್ ಅಥವಾ ಪ್ಲ್ಯಾಸ್ಟಿಕ್ಕನ್ನು ಕೊಡವಿ ಮಡಚಿಟ್ಟರೆ ಸಾಕು.
ಒನ್ ಪಾಟ್ ಮೀಲ್ಸ್
ಅಡುಗೆಯನ್ನೂ ಮಾಡಿ, ಪಾತ್ರೆ ತೊಳೆದು, ಅಡುಗೆಮನೆ ಸ್ವಚ್ಛಗೊಳಿಸುವುದು ಸುಲಭದ ಕೆಲಸವಲ್ಲ. ಹಾಗಾಗಿ, ಅಡುಗೆ ಮಾಡುವಾಗ ಸ್ವಲ್ಪ ಯೋಜಿಸಿ ಮಾಡಿ. ಬಿರಿಯಾನಿ, ಪಲಾವ್, ಚಿತ್ರಾನ್ನದಂಥ ಒನ್ ಪಾಟ್ ಅಡುಗೆಗಳನ್ನು ಮಾಡಿದರೆ ಪಾತ್ರೆಯೂ ಕಡಿಮೆ ಸಾಕು, ಜೊತೆಗೆ ಎರಡು ಹೊತ್ತಿಗೂ ತಿನ್ನಬಹುದು. ತಿಂಡಿಯೂ ಅಷ್ಟೆ, ದೋಸೆ ಚಟ್ನಿ ಮಾಡಿದರೆ, ರಾತ್ರಿಗೂ ಸೇರಿಸಿ ಚಟ್ನಿ ಹೆಚ್ಚಾಗಿ ಮಾಡಿಡಿ. ಆಗ ರಾತ್ರಿಯೂ ದೋಸೆ ಇಲ್ಲವೇ ದೋಸೆಯ ಇತರೆ ವೆರೈಟಿ ಮಾಡಿ ತಿನ್ನಬಹುದು. ಚಪಾತಿ ಅಥವಾ ರೊಟ್ಟಿ ಮಾಡಿದರೂ ಎರಡು ಹೊತ್ತಿಗಾಗುವಷ್ಟು ಮಾಡಿಟ್ಟರೆ, ರಾತ್ರಿಗೆ ಅದನ್ನೇ ಬಿಸಿ ಮಾಡಿ ಸೇವಿಸಬಹುದು.
ತರಕಾರಿ ಹೆಚ್ಚಿಟ್ಟುಕೊಳ್ಳಿ
ಪ್ರತಿ ಬಾರಿ ಅಡುಗೆ ಮಾಡುವಾಗಲೂ ತರಕಾರಿ ಹೆಚ್ಚುವ ಸಮಯ ತಗ್ಗಿಸಲು ಟಿವಿ ನೋಡುವಾಗ ಅಥವಾ ಹರಟೆ ಹೊಡೆಯುವಾಗ ಕ್ಯಾರೆಟ್, ಬೀನ್ಸ್, ದೊಣ್ಣೆ ಮೆಣಸು, ಕೋಸು ಮುಂತಾದ ತರಕಾರಿಗಳನ್ನು ಹೆಚ್ಚಿಟ್ಟುಕೊಳ್ಳಿ. ಇದರ ಜೊತೆಗೆ ವಾರಕ್ಕಾಗುವಷ್ಟು ಕಾಯಿ ಹೆರೆದಿಡಿ. ಸೊಪ್ಪುಗಳನ್ನು ಸೋಸಿ. ಇನ್ನು ಮಾತಾಡುತ್ತಲೇ ಬೆಳ್ಳುಳ್ಳಿ ಬಿಡಿಸುವುದರಿಂದ ಶ್ರಮವೇ ಗೊತ್ತಾಗುವುದಿಲ್ಲ. 30 ಸೆಕೆಂಡ್‌ಗಳ ಕಾಲ ಬೆಳ್ಳುಳ್ಳಿ ಮೈಕ್ರೋವೇವ್ ಮಾಡಿದರೆ ಸುಲಭವಾಗಿ ಸಿಪ್ಪೆ ಬಿಡಿಸಬಹುದು. ಇವೆಲ್ಲವನ್ನೂ ಜಿಪ್‌ಲಾಕ್ ಕವರ್‌ಗೆ ಪ್ರತ್ಯೇಕವಾಗಿ ಹಾಕಿ ಫ್ರಿಡ್ಜ್‌ನಲ್ಲಿಡಿ. ಇದರಿಂದ ಅಡುಗೆಕೋಣೆಯಲ್ಲಿ ಕಳೆಯಬೇಕಾದ ಸಮಯ ಅರ್ಧದಷ್ಟು ತಗ್ಗಿಸಬಹುದು.
ತೂಕ ಇಳಿಸಲು ಸಹಕಾರಿ ಈ ಟೀ ವೆರೈಟಿ
ಮೈಕ್ರೋವೇವ್ ಬಳಸಿ
ಮೈಕ್ರೋವೇವ್ ಇದ್ದರೆ ಅದರ ಸದುಪಯೋಗ ಪಡೆಯಿರಿ. ಎಲ್ಲ ತಯಾರಿ ಮಾಡಿಟ್ಟರೆ ತನ್ನ ಪಾಡಿಗೆ ತಾನು ಅದು ಆಹಾರ ತಯಾರಿಸುತ್ತದೆ. ಇದರಿಂದ ಸಮಯ ಹಾಗೂ ಶಕ್ತಿ ಎರಡೂ ಉಳಿಸಬಹುದು. ಜೊತೆಗೆ ಪಾತ್ರೆ ಕೂಡಾ ಕಡಿಮೆ ಸಾಕಾಗುತ್ತದೆ.
ಬೋರ್ಡ್ ರೆಡಿ ಇಡಿ
ಮನೆಯಲ್ಲಿ ಏನೇನಿದೆ, ಎಷ್ಟಿದೆ ಎಂಬ ಬಗ್ಗೆ ಬೋರ್ಡ್‌ನಲ್ಲಿ ಬರೆದು ಕಾಣುವಂತೆ ಇಟ್ಟುಕೊಳ್ಳಿ. ಆಗ ಅಡುಗೆಗೆ ಏನು ಮಾಡಬಹುದು, ಯಾವುದನ್ನು ಬೇಗ ಮಾಡಬೇಕು ಮುಂತಾದ ಐಡಿಯಾ ಸಿಗುತ್ತದೆ. ಜೊತೆಗೆ, ಈ ವಾರದಲ್ಲಿ ಮಾಡಬಹುದಾದ ತಿಂಡಿ, ಅಡುಗೆ, ಚಾಟ್ಸ್ ಪಟ್ಟಿ ಬರೆದಿಟ್ಟುಕೊಳ್ಳಿ.