ಗಣೇಶ ಹಬ್ಬಕ್ಕೆ ಚಕ್ಕುಲಿ, ಉಂಡೆ ಮಾಡೋದು ಮರೀಬೇಡಿ, ಇಲ್ಲಿದೆ ರೆಸಿಪಿ
ಸಂಭ್ರಮದ ಗಣೇಶ ಹಬ್ಬಕ್ಕಿನ್ನು ಕೆಲವೇ ದಿನಗಳು ಬಾಕಿ. ಭಾದ್ರಪದ ಮಾಸದ ಶುಕ್ಲಪಕ್ಷ ಗಣೇಶನ ಆರಾಧನೆಗೆ ವಿಶೇಷವಾಗಿ ಮೀಸಲಾಗಿದೆ. ಈ ದಿನ ಮನೆ ಮನೆಗಳಲ್ಲಿ ಗಣೇಶನನ್ನು ಕೂರಿಸಿ ಪೂಜೆ ಮಾಡಲಾಗುತ್ತದೆ. ವಿಶೇಷ ಸಿಹಿತಿಂಡಿಗಳನ್ನು ತಯಾರಿಸಲಾಗುತ್ತದೆ. ಗಣೇಶ ಚತುರ್ಥಿ ಅಂದ್ರೆ ಗಣಪನಿಗೆ ಪ್ರಿಯವಾದ ಚಕ್ಕುಲಿ, ಉಂಡೆ ಇರ್ಲೇಬೇಕು. ಅದನ್ನು ಮನೆಯಲ್ಲೇ ಸುಲಭವಾಗಿ ಮಾಡೋದು ಹೇಗೆ ತಿಳ್ಕೊಳ್ಳೋಣ.
ಗಣೇಶ ಚತುರ್ಥಿ ಬಂತು ಅಂದ್ರೆ ಎಲ್ಲೆಡೆ ಸಂಭ್ರಮ ಮನೆ ಮಾಡುತ್ತದೆ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ ದಿನ ಈ ಹಬ್ಬ ಆಚರಿಸಲಾಗುತ್ತದೆ. ಮೊದಲು ಗೌರಿ ಪೂಜೆ ನಡೆಯುತ್ತದೆ. ನಂತರ ಗಣಪತಿಯನ್ನು ಪೂಜಿಸಲಾಗುತ್ತದೆ. ಜನರು ಬೀದಿ ಬೀದಿಗಳಲ್ಲಿ, ಮನೆ ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಕೂರಿಸಿ ಪೂಜೆ ಸಲ್ಲಿಸುತ್ತಾರೆ. ಹಲವು ಸಿಹಿತಿಂಡಿಗಳನ್ನು ಮನೆಯಲ್ಲೇ ತಯಾರಿಸಿ, ವಿಘ್ನ ವಿನಾಯಕನಿಗೆ ನೈವೇದ್ಯವಾಗಿ ಸಲ್ಲಿಸಿ ಖುಷಿ ಪಡುತ್ತಾರೆ. ಗಣೇಶನ ಹಬ್ಬ ಅಂದ್ರೆ ಅಲ್ಲಿ ಮೋದಕ, ಕರ್ಜಿಕಾಯಿ ಇರ್ಲೇಬೇಕು. ಮಾತ್ರವಲ್ಲ ಚಕ್ಕುಲಿ, ಉಂಡೆಯನ್ನು ಸಹ ತಯಾರು ಮಾಡುತ್ತಾರೆ. ಹಾಗಿದ್ರೆ ಸಿಂಪಲ್ ಆಗಿ ಅದನ್ನು ಮನೆಯಲ್ಲೇ ಮಾಡೋದು ಹೇಗೆ ತಿಳ್ಕೊಳ್ಳೋಣ.
ಹುರಿಗಡಲೆ ಚಕ್ಕುಲಿ
ಬೇಕಾಗುವ ಪದಾರ್ಥಗಳು
ಅಕ್ಕಿ ಎರಡು ಕಪ್
ಹುರಿದ ಉದ್ದಿನ ಹುಡಿ-ಮುಕ್ಕಾಲು ಕಪ್
ಹುರಿಗಡಲೆ ಪುಡಿ-ಅರ್ಧ ಕಪ್
ಬೆಣ್ಣೆ ಸ್ಪಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಜೀರಿಗೆ ಒಂದು ಚಮಚ
ಮಾಡುವ ವಿಧಾನ: ಅಕ್ಕಿಯನ್ನು ಒಂದು ಗಂಟೆ ನೀರಲ್ಲಿ ನೆನೆಸಿಟ್ಟುಕೊಳ್ಳಿ. ನಂತರ ನೀರು ಸೋಸಿಕೊಂಡು ಉಪ್ಪು ಸೇರಿಸಿ ನುಣ್ಣಗೆ ಮಿಕ್ಸಿ ಮಾಡಿಕೊಳ್ಳಿ. ಇದಕ್ಕೆ ಹುರಿಗಡಲೆ ಪುಡಿ, ಉದ್ದಿನ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಸ್ಪಲ್ಪ ಬೆಣ್ಣೆ (Butter)ಯನ್ನು ಸೇರಿಸಿ. ಒಂದು ಚಮಚ ಜೀರಿಗೆಯನ್ನು ಸೇರಿಸಿ ಹಿಟ್ಟನ್ನು ನಾದಿಕೊಳ್ಳಿ. ನಂತರ ಚಕ್ಕುಲಿ ಮೇಕರ್‌ನಲ್ಲಿ ಹಾಕಿ ಚಕ್ಕುಲಿ ಸಿದ್ಧಪಡಿಸಿ, ಬಿಸಿ ಬಿಸಿಯಾದ ಎಣ್ಣೆಗೆ ಹಾಕಿ ತೆಗೆಯಿರಿ
ಗಣೇಶನ ಹಬ್ಬಕ್ಕಿನ್ನು ಒಂದೇ ವಾರ, ಮೋದಕ ಮಾಡೋದು ಹೇಗೆ ತಿಳ್ಕೊಂಡು ಬಿಡಿ
ಖರ್ಜೂರದ ಉಂಡೆ
ಬೇಕಾದ ಪದಾರ್ಥಗಳು
ಖರ್ಜೂರ 1 ಕಪ್
ಸಣ್ಣಾಗಿ ಕತ್ತರಿಸಿದ ಬಾದಾಮಿ ಅರ್ಧ ಕಪ್
ಗೋಡಂಬಿ ಚೂರು-ಅರ್ಧ ಕಪ್
ಗಸಗಸೆ-4 ಚಮಚ
ಕೊಬ್ಬರಿ-1 ಕಪ್
ಸಣ್ಣದಾಗಿ ಕತ್ತರಿಸಿದ ಖರ್ಜೂರದ ಚೂರು ಸ್ವಲ್ಪ
ತುಪ್ಪ-2 ಟೀ ಚಮಚ
ಗಣಪನಿಗೆ ಪ್ರಿಯವಾದ ಕರ್ಜಿಕಾಯಿ ತಯಾರಿಸುವುದು ಹೇಗೆ?
ಮಾಡುವ ವಿಧಾನ: ಬಿಸಿ ತುಪ್ಪದಲ್ಲಿ ಗೋಡಂಬಿ, ಬಾದಾಮಿ, ಕೊಬ್ಬರಿ, ಗಸಗಸೆ ಮತ್ತು ಖರ್ಜೂರದ ಚೂರುಗಳನ್ನು ಐದು ನಿಮಿಷ ಕಾಲ ಚೆನ್ನಾಗಿ ಹುರಿದುಕೊಳ್ಳಿ. ಮಿಕ್ಸಿ ಜಾರ್‌ಗೆ ಖರ್ಜೂರ ಹಾಕಿ ನುಣ್ಣಗೆ ಪುಡಿ ಮಾಡಿ. ಗೋಡಂಬಿ, ಬಾದಾಮಿ, ಕೊಬ್ಬರಿ ಮತ್ತು ಗಸಗಸೆಯನ್ನು ಪುಡಿ ಮಾಡಿಟ್ಟುಕೊಳ್ಳಿ. ಖರ್ಜೂರದ (Dates) ಮಿಶ್ರಣಕ್ಕೆ ಬೆರೆಸಿ ಸ್ವಲ್ಪ ಹುರಿಯಿರಿ. ಬಿಸಿಯಾಗಿದ್ದಾಗಲೇ ಉಂಡೆ ಮಾಡಿಟ್ಟುಕೊಳ್ಳಿ. ರುಚಿಯಾದ ಖರ್ಜೂರದ ಉಂಡೆ ಸವಿಯಲು ಸಿದ್ಧವಾಗಿದೆ.