ಹಳ್ಳಿಗಳಲ್ಲಿ ಚಿಕ್ಕ ಮಕ್ಕಳಿಗೆ ಶೀತ, ಕೆಮ್ಮು ಪ್ರಾರಂಭವಾದ ತಕ್ಷಣ ಮೊದಲು ನೀಡುವ ಔಷಧಿಯೇ ದೊಡ್ಡಪತ್ರೆ ಎಲೆಯ ರಸ. ದೊಡ್ಡಪತ್ರೆ ಅಥವಾ ಸಾಂಬಾರ ಎಲೆಯನ್ನು ಬೆಂಕಿಗೆ ಹಿಡಿದು ಬಾಡಿಸಿ ರಸ ತೆಗೆದು ಮಕ್ಕಳಿಗೆ ಕುಡಿಸಿದ್ರೆ ನೆಗಡಿ, ಕೆಮ್ಮು ಉಪಶಮನವಾಗುತ್ತದೆ. ಮಕ್ಕಳಿಗೆ ಮಾತ್ರವಲ್ಲ,ದೊಡ್ಡವರು ಕೂಡ ಈ ಎಲೆಯನ್ನು ಬಳಸೋದ್ರಿಂದ ನೆಗಡಿ,ಕಫ,ತಲೆಭಾರ, ಅಜೀರ್ಣ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಬಾಣಂತಿಯರಿಗೆ ಎದೆಹಾಲು ಹೆಚ್ಚಿಸಲು ಕೂಡ ಇದನ್ನು ನೀಡುತ್ತಾರೆ. ದೊಡ್ಡಪತ್ರೆ ಎಲೆಯಲ್ಲಿ ವಿಟಮಿನ್ ಎ ಹಾಗೂ ಸಿ ಹೇರಳವಾಗಿರೋದ್ರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಇಷ್ಟೆಲ್ಲ ಔಷಧೀಯ ಗುಣಗಳನ್ನು ಹೊಂದಿರೋ ದೊಡ್ಡಪತ್ರೆ ಎಲೆಗಳಿಂದ ನಾನಾ ಖಾದ್ಯಗಳನ್ನು ಕೂಡ ಸಿದ್ಧಪಡಿಸಬಹುದು. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ದೊಡ್ಡಪತ್ರೆ ಎಲೆಗಳಿಂದ ಸಿದ್ಧಪಡಿಸೋ ಕೆಲವು ಖಾದ್ಯಗಳ ವಿವರ ಇಲ್ಲಿದೆ. ಈ ಖಾದ್ಯಗಳು ಬಾಯಿಗೆ ರುಚಿಸೋ ಜೊತೆ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸೋ ಮೂಲಕ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡೋ ನೆಗಡಿ, ಜ್ವರದಂತಹ ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ಒದಗಿಸುತ್ತವೆ. 

ಮೊಟ್ಟೆಯಲ್ಲಿ ಹೆಚ್ಚು ಪ್ರೋಟೀನ್ ಇದೆ: ಆದ್ರೆ ಬೇಕಾಬಿಟ್ಟಿ ತಿನ್ನೋದು ಒಳ್ಳೆಯದಲ್ಲ

ದೊಡ್ಡಪತ್ರೆ ಚಟ್ನಿ
ಬೇಕಾಗೋ ಸಾಮಗ್ರಿ: ದೊಡ್ಡಪತ್ರೆ ಎಲೆ-10, ಕಾಯಿತುರಿ-1/2 ಕಪ್, ಹಸಿಮೆಣಸು-1,ಹುಣಸೆಹಣ್ಣು, ಬೆಲ್ಲ,ಉದ್ದಿನಬೇಳೆ,ಬೆಳ್ಳುಳ್ಳಿ,ಇಂಗು, ಎಣ್ಣೆ, ಉಪ್ಪು, ಕರಿಬೇವಿನ ಎಲೆ, ಸಾಸಿವೆ
ತಯಾರಿಸೋ ವಿಧಾನ
-ಪಾತ್ರೆಗೆ ಒಂದು ಚಮಚ ಎಣ್ಣೆ ಹಾಕಿ ಕಾದ ಬಳಿಕ ಉದ್ದಿನಬೇಳೆ, ಹಸಿಮೆಣಸು, ಬೆಳ್ಳುಳ್ಳಿ, ದೊಡ್ಡಪತ್ರೆ ಎಲೆಗಳನ್ನು ಹಾಕಿ ಹುರಿದುಕೊಳ್ಳಿ. ಬಳಿಕ ಕಾಯಿತುರಿ, ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ಬೆಲ್ಲದ ಜೊತೆ ಹುರಿದ ವಸ್ತುಗಳನ್ನು ಸೇರಿಸಿ ರುಬ್ಬಿ. ಪುಟ್ಟ ಪಾತ್ರೆಗೆ ಎಣ್ಣೆ ಹಾಕಿ ಸಾಸಿವೆ, ಇಂಗು ಹಾಗೂ ಕರಿಬೇವಿನ ಎಲೆಗಳನ್ನು ಸೇರಿಸಿ ಒಗ್ಗರಣೆ ಸಿದ್ಧಪಡಿಸಿ ಚಟ್ನಿಗೆ ಸೇರಿಸಿ. ದೊಡ್ಡಪತ್ರೆ ಎಲೆ ಚಟ್ನಿ ಅನ್ನ ಹಾಗೂ ದೋಸೆ ಜೊತೆ ಸವಿಯಲು ಚೆನ್ನಾಗಿರುತ್ತೆ.

ಬಟರ್‌ಫ್ರೂಟ್‌ - ಬಾದಾಮಿ: ಸೆಕ್ಸ್ ಡ್ರೈವ್ ಉತ್ತಮಗೊಳಿಸುವ 9 ಆಹಾರಗಳು

ದೊಡ್ಡಪತ್ರೆ ಎಲೆ ದೋಸೆ
ಬೇಕಾಗೋ ಸಾಮಗ್ರಿ: ಅಕ್ಕಿ-2 ಕಪ್, ದೊಡ್ಡಪತ್ರೆ ಎಲೆಗಳು- 5, ತೆಂಗಿನ ತುರಿ-1/4 ಕಪ್, ಅವಲಕ್ಕಿ-4 ಚಮಚ, ಈರುಳ್ಳಿ-1, ಕ್ಯಾರೆಟ್-1, ಸಕ್ಕರೆ-2 ಚಮಚ, ಎಣ್ಣೆ, ಉಪ್ಪು
ತಯಾರಿಸೋ ವಿಧಾನ
-ಅಕ್ಕಿಯನ್ನು 4-5 ಗಂಟೆಗಳ ಕಾಲ ನೆನೆಹಾಕಬೇಕು. ಆ ಬಳಿಕ ಅಕ್ಕಿಯನ್ನು ತೊಳೆದು ಕಾಯಿ ತುರಿ, ಅವಲಕ್ಕಿ ಹಾಗೂ ದೊಡ್ಡಪತ್ರೆ ಎಲೆಗಳೊಂದಿಗೆ ರುಬ್ಬಿಕೊಳ್ಳಬೇಕು.
-ರುಬ್ಬಿದ ಹಿಟ್ಟಿಗೆ ಈರುಳ್ಳಿಯನ್ನು ಸಣ್ಣಗೆ ಹಚ್ಚಿ ಸೇರಿಸಬೇಕು. ಕ್ಯಾರೆಟ್ ಅನ್ನು ತುರಿದು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಗೂ 2 ಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
-ಕಾವಲಿ ಬಿಸಿಯಾದ ತಕ್ಷಣ ಹಿಟ್ಟು ಹಾಕಿ ದೋಸೆ ಮಾಡಿ. ದೋಸೆ ಮೇಲೆ ಒಂದು ಚಮಚ ಎಣ್ಣೆ ಹಾಕಿ ಕಾಯಿಸಿ. ದೋಸೆಯ ಒಂದು ಬದಿ ಕಾದ ಬಳಿಕ ಇನ್ನೊಂದು ಬದಿಯನ್ನು ಕೂಡ ಚೆನ್ನಾಗಿ ಕಾಯಿಸಿ. 
-ದೊಡ್ಡಪತ್ರೆ ದೋಸೆ ಕಾಯಿ ಚಟ್ನಿಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

ಮಳೆಗಾಲದಲ್ಲಿ ಬೆಚ್ಚನೆ ಹಿತದ ಜೊತೆ ಇಮ್ಯುನಿಟಿ ಹೆಚ್ಚಿಸಲು ನಿಮ್ಮ ಟೀ ಹೀಗಿರಲಿದೊಡ್ಡಪತ್ರೆ ತಂಬುಳಿ
ಬೇಕಾಗೋ ಸಾಮಗ್ರಿ: 
ದೊಡ್ಡಪತ್ರೆ ಎಲೆಗಳು-10, ಮೊಸರು-1/2 ಕಪ್, ಜೀರಿಗೆ-1 ಚಮಚ, ತೆಂಗಿನತುರಿ- 4 ಚಮಚ, ಕಾಳುಮೆಣಸು, ಸಾಸಿವೆ, ಕರಿಬೇವು, ಉಪ್ಪು, ತುಪ್ಪ, ಇಂಗು
ತಯಾರಿಸೋ ವಿಧಾನ
-ದೊಡ್ಡಪತ್ರೆ ಎಲೆಗಳನ್ನು ಚೆನ್ನಾಗಿ ತೊಳೆಯಬೇಕು. ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಅದರಲ್ಲಿ ದೊಡ್ಡಪತ್ರೆ ಎಲೆಗಳನ್ನು ಹಾಕಿ ಹುರಿಯಬೇಕು. ದೊಡ್ಡಪತ್ರೆ ಎಲೆಗಳಲ್ಲಿನ ನೀರಿನಾಂಶ ಆವಿಯಾಗಿ ಬಾಡೋ ತನಕ ಹುರಿದು ಅದನ್ನು ಮಿಕ್ಸಿ ಜಾರಿಗೆ ಹಾಕಿಡಿ.
-ಈಗ ಅದೇ ಬಾಣಲೆಗೆ ಜೀರಿಗೆ ಹಾಗೂ ಕಾಳುಮೆಣಸು ಹಾಕಿ ಹುರಿದು ಮಿಕ್ಸಿಗೆ ಜಾರಿಗೆ ಹಾಕಿ ತೆಂಗಿನತುರಿ ಹಾಗೂ ಸ್ವಲ್ಪ ಮೊಸರಿನೊಂದಿಗೆ ರುಬ್ಬಿಕೊಳ್ಳಿ.
-ಈ ಮಿಶ್ರಣಕ್ಕೆ ಉಳಿದ ಮೊಸರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 
-ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಸಾಸಿವೆ, ಜೀರಿಗೆ, ಕರಿಬೇವು ಹಾಗೂ ಇಂಗು ಸೇರಿಸಿ ಒಗ್ಗರಣೆ ಸಿದ್ಧಪಡಿಸಿ ತಂಬುಳಿಗೆ ಸೇರಿಸಿ. 
-ದೊಡ್ಡಪತ್ರೆ ಎಲೆ ತಂಬುಳಿಯನ್ನು ಅನ್ನದ ಜೊತೆ ಸವಿಯಿರಿ.