ದೇಶಾದ್ಯಂತ ಲಾಕ್‍ಡೌನ್ ಇದ್ರೂ ದಿನಸಿ, ತರಕಾರಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ದಿನದ ನಿರ್ದಿಷ್ಟ ಸಮಯದಲ್ಲಿ ಅವಕಾಶ ಕಲ್ಪಿಸಲಾಗಿದೆ. ಹಾಗಂತ ಪ್ರತಿದಿನ ಒಂದೊಂದೇ ಸಾಮಗ್ರಿಗಳ ನೆಪದಲ್ಲಿ ಹೊರಹೋಗೋದು ಪ್ರಸಕ್ತ ಸನ್ನಿವೇಶದಲ್ಲಿ ಸುರಕ್ಷಿತವಲ್ಲ. ಹೊರಗೆ ಹೋಗಬೇಕಾದ ಅನಿವಾರ್ಯತೆಯನ್ನು ಆದಷ್ಟು ತಗ್ಗಿಸಿಕೊಳ್ಳಿ. ಕನಿಷ್ಠ ವಾರಕ್ಕಾದರೂ ಸಾಕಾಗುವಷ್ಟು ತರಕಾರಿ ಹಾಗೂ ಇತರ ಆಹಾರ ಸಾಮಗ್ರಿಗಳನ್ನು ಮನೆಯಲ್ಲಿ ಸ್ಟೋರ್ ಮಾಡಿಟ್ಟುಕೊಳ್ಳೋದು ಒಳ್ಳೆಯದು. ನೀವು ಖರೀದಿಸಿ ತಂದಿರುವ ಆಹಾರ ಪದಾರ್ಥಗಳನ್ನು ಹಾಳಾಗದಂತೆ ಸಂರಕ್ಷಿಸಿಕೊಳ್ಳೋದು ಕೂಡ ಮುಖ್ಯ. ಕೆಲವೊಮ್ಮೆ ತರಕಾರಿಗಳು ಹಾಗೂ ಇತರ ಆಹಾರ ಸಾಮಗ್ರಿಗಳನ್ನು ಫ್ರಿಜ್‍ನಲ್ಲಿಟ್ಟಿದ್ದರೂ ಅವು ಒಣಗಿ ಹೋಗೋದು ಇಲ್ಲವೆ ಹಾಳಾಗೋದನ್ನು ನೀವು ಗಮನಿಸಿರಬಹುದು. ಹೀಗಾಗಿ ಫ್ರಿಜ್‍ನಲ್ಲಿಟ್ಟ ತಕ್ಷಣ ಎಲ್ಲವೂ ಫ್ರೆಶ್ ಆಗಿರುತ್ತೆ ಎಂದು ಹೇಳಲಾಗದು. ಹಾಗಾದ್ರೆ ಏನ್ ಮಾಡ್ಬೇಕು? ಎಂಬುದು ಹಲವರಿಗೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿರಬಹುದು. ತರಕಾರಿಗಳು ಹಾಗೂ ಹಣ್ಣುಗಳನ್ನು ಸುದೀರ್ಘ ಕಾಲ ಸುರಕ್ಷಿತವಾಗಿಡಲು ಕೆಲವೊಂದು ವಿಧಾನಗಳಿವೆ. ಅವುಗಳನ್ನು ಅನುಸರಿಸಿದ್ರೆ ಅನೇಕ ದಿನಗಳು ಕಳೆದ ಬಳಿಕವೂ ತರಕಾರಿ ಹಾಗೂ ಹಣ್ಣುಗಳು ತಾಜಾತನ ಕಳೆದುಕೊಳ್ಳೋದಿಲ್ಲ.

ಕೊರೋನಾ ಭಯ ಬೇಡ: ಯಾವುದಕ್ಕೂ ಈ ವಸ್ತುಗಳ ಸ್ಟಾಕ್ ಇರಲಿ

ಸೊಪ್ಪುಗಳನ್ನು ನೇರವಾಗಿ ಫ್ರಿಜ್‍ನಲ್ಲಿಡಬೇಡಿ
ಸೊಪ್ಪನ್ನು ಮನೆಗೆ ತಂದ ತಕ್ಷಣ ನೇರವಾಗಿ ಫ್ರಿಜ್‍ನೊಳಗೆ ಇಡಬೇಡಿ. ಹೀಗೆ ಇಟ್ಟರೆ ಮರುದಿನವೇ ಸೊಪ್ಪು ಬಾಡುತ್ತದೆ. ಇನ್ನು ಅದರಲ್ಲಿ ನೀರಿನಂಶವಿದ್ದರೆ ಕೊಳೆಯಲು ಪ್ರಾರಂಭಿಸುತ್ತದೆ. ಆದಕಾರಣ ಸೊಪ್ಪನ್ನು ತಂದ ತಕ್ಷಣ ಚೆನ್ನಾಗಿ ನೀರಿನಲ್ಲಿ ತೊಳೆಯಬೇಕು. ಆ ಬಳಿಕ ಟಿಶ್ಯೂ ಅಥವಾ ಒಗೆದಿಟ್ಟಿರುವ ಟವಲ್‍ನಲ್ಲಿ ಸುತ್ತಿ ನೀರಿನಂಶವನ್ನು ತೆಗೆಯಬೇಕು. ಆ ಬಳಿಕ ಏರ್‍ಟೈಟ್ ಕಂಟೈನರ್ ಅಥವಾ ಸೀಲ್ಡ್ ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಹಾಕಿ ಫ್ರಿಜ್‍ನಲ್ಲಿಡಿ. ಅಗತ್ಯವಿದ್ದಾಗ ತೆಗೆದು ಬಳಸಿ. ಹೀಗೆ ಮಾಡೋದ್ರಿಂದ ಸೊಪ್ಪು ಅನೇಕ ದಿನಗಳ ತನಕ ಫ್ರೆಶ್ ಆಗಿರುತ್ತೆ. 

ಫ್ರಿಜ್‍ನಲ್ಲಿಡುವ ಮುನ್ನ ಬೇಯಿಸಿ
ಅಯ್ಯೋ ಇದೇನಿದು ಎಂದು ಗಾಬರಿ ಬೀಳಬೇಡಿ. ಬಟಾಣಿ, ಕೋಸುಗಡ್ಡೆ, ಫ್ರೆಂಚ್ ಬೀನ್ಸ್ ಮುಂತಾದವನ್ನು ನೇರವಾಗಿ ಫ್ರಿಜ್‍ನಲ್ಲಿಡುವ ಬದಲು 30 ಸೆಕೆಂಡ್‍ಗಳ ಕಾಲ ಬೇಯಿಸಿಟ್ಟರೆ ಬೇಗ ಹಾಳಾಗೋದಿಲ್ಲ. 

ಕತ್ತರಿಸಿ ಫ್ರಿಜ್‍ನಲ್ಲಿಡಿ
ಕ್ಯಾರೆಟ್, ಮೂಲಂಗಿ ಹಾಗೂ ಹೀರೇಕಾಯಿಯಂತಹ ತರಕಾರಿಗಳನ್ನು ನೇರವಾಗಿ ಫ್ರಿಜ್‍ನಲ್ಲಿಡುತ್ತೇವೆ. ಆದ್ರೆ ಕೆಲವೇ ದಿನಗಳಲ್ಲಿ ಇವುಗಳಲ್ಲಿರುವ ನೀರಿನಂಶ ಕಡಿಮೆಯಾಗಿ ಬಾಡಿಕೊಳ್ಳುತ್ತವೆ. ಹಾಗೆಯೇ ಫ್ರಿಜ್‍ನಲ್ಲಿಡುವ ಬದಲು ಈ ತರಕಾರಿಗಳನ್ನು ಕತ್ತರಿಸಿ ಬಾಕ್ಸ್ಗೆ ಹಾಕಿಟ್ಟರೆ ಜಾಸ್ತಿ ದಿನ ಫ್ರೆಶ್ ಆಗಿರುತ್ತವೆ.

ನಂಬಿದೋರನ್ನ ನಡುನೀರಲ್ಲಿ ಬಿಡದು ನೆಲ್ಲಿಕಾಯಿ!

ಸಂಸ್ಕರಿಸಿಡಿ
ತರಕಾರಿಗಳ ತಾಜಾತನವನ್ನು ಹಾಗೆಯೇ ಉಳಿಸಿಕೊಳ್ಳಲು ಅವುಗಳನ್ನು ವಿನೆಗರ್ ಅಥವಾ ವೆಜಿಟೇಬಲ್ ಆಯಿಲ್‍ನಲ್ಲಿ ಮುಳುಗಿಸಿಡಬಹುದು. ಇದರಿಂದ ಇವುಗಳ ಮೇಲ್ಮೈಯಲ್ಲಿ ಬಾಕ್ಟೀರಿಯಾದ ಬೆಳವಣಿಗೆ ತಗ್ಗುವುದರಿಂದ ಇವು ಬೇಗ ಕೆಡುವುದಿಲ್ಲ. ಸಾಸಿವೆ, ಬೆಳ್ಳುಳ್ಳಿ, ಲವಂಗ ಮುಂತಾದ ಸಾಂಬಾರು ಪದಾರ್ಥಗಳ ಜೊತೆಗೆ ಉಪ್ಪಿನಲ್ಲಿ ಕತ್ತರಿಸಿದ ತರಕಾರಿ ತುಂಡುಗಳನ್ನು ಹಾಕಿಟ್ಟರೆ ತರಕಾರಿ ಹಾಗೂ ಮಾಂಸ ಬೇಗ ಕೆಡುವುದಿಲ್ಲ. ಬೀಟ್ರೂಟ್, ಟೊಮ್ಯಾಟೋ, ಸೌತೆಕಾಯಿ, ಅಣಬೆ ಮುಂತಾದವನ್ನು ಈ ವಿಧಾನದಲ್ಲಿ ಸಂಸ್ಕರಿಸಿಟ್ಟರೆ ದೀರ್ಘಕಾಲ ಕೆಡುವುದಿಲ್ಲ.

ಜ್ಯೂಸ್ ಮಾಡಿಡಿ
ಸೇಬು ಹಣ್ಣನ್ನು ಅನೇಕ ದಿನಗಳ ಕಾಲ ಫ್ರಿಜ್‍ನಲ್ಲಿಡಬಹುದು. ಅದು ಬೇಗ ಕೆಡುವುದಿಲ್ಲ. ಆದ್ರೆ ಕೆಲವೊಂದು ಹಣ್ಣುಗಳು ಫ್ರಿಜ್‍ನಲ್ಲಿಟ್ಟರೂ ಹಾಳಾಗುತ್ತವೆ. ಹೀಗಾಗಿ ಅವುಗಳನ್ನು ಜ್ಯೂಸ್ ಮಾಡಿ ಒಂದು ಬಾಟಲಿಯಲ್ಲಿ ಹಾಕಿ ಫ್ರಿಜ್‍ನೊಳಗೆ ಶೇಖರಿಸಿಟ್ಟುಕೊಳ್ಳಿ. ಈಗ ಹೇಗೋ ಬೇಸಿಗೆ ಕಾಲ, ಬಾಯಾರಿಕೆ ಜಾಸ್ತಿ. ಜ್ಯೂಸ್ ಬೇಕೆನಿಸಿದಾಗ ತೆಗೆದು ಕುಡಿಯಿರಿ. ತಾಜಾ ಹಣ್ಣಿನ ರಸ ಆರೋಗ್ಯಕ್ಕೂ ಒಳ್ಳೆಯದು. ಬಾಳೆಹಣ್ಣನ್ನು ಫ್ರಿಜ್‍ನಲ್ಲಿ ನೇರವಾಗಿ ಸಂಗ್ರಹಿಸಿಡಬಹುದು. ಬಾಳೆಹಣ್ಣನ್ನು ಫ್ರಿಜ್‍ನಲ್ಲಿಟ್ಟರೆ ಸಿಪ್ಪೆ ಕಪ್ಪಾಗುತ್ತದೆ ಎಂಬುದೇನೋ ನಿಜ. ಆದ್ರೆ ಒಳಗಡೆಯಿರುವ ಹಣ್ಣಿಗೆ ಏನೂ ಆಗದು. ಬಾಳೆಹಣ್ಣಿನಲ್ಲಿ ಪಾಲಿಫೆನೈಲ್ ಆಕ್ಸಿಡೇಸ್ ಎಂಬ ಕಿಣ್ವವಿದೆ. ಇದು ಶೀತ ವಾತಾವರಣದಲ್ಲಿ ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಪಾಲಿಮೆರೈಸ್ ಫೆನಾಲ್ಸ್ ಅನ್ನು ಪಾಲಿಫೆನೋಲ್ಸ್ ಆಗಿ ಪರಿವರ್ತಿಸುತ್ತದೆ. ಇದರಿಂದಾಗಿ ಬಾಳೆಹಣ್ಣಿನ ಸಿಪ್ಪೆ ಕಪ್ಪಾಗುತ್ತದೆ. 

ರೆಸ್ಟೋರೆಂಟ್‌ಗಳಲ್ಲಿ ಟುಡೇಸ್ ಸ್ಪೆಷಲ್ ಬೋರ್ಡ್ ಏಕಿರುತ್ತೆ ಗೊತ್ತಾ?

ಹಾಲನ್ನು ಫ್ರಿಜರ್‍ನಲ್ಲಿಡಿ
ಹಾಲನ್ನು ಫ್ರಿಜ್‍ನ ಬಾಗಿಲು ಅಥವಾ ಇತರ ಸ್ಥಳಗಳಲ್ಲಿಡುವ ಬದಲು ಫ್ರಿಜರ್‍ನಲ್ಲಿಡುವುದು ಸೂಕ್ತ. ಇದರಿಂದ ಹಾಲು ಮತ್ತು ಡೈರಿ ಉತ್ಪನ್ನಗಳು ಬೇಗ ಕೆಡುವುದಿಲ್ಲ. ಬಳಕೆಗೂ ಮುನ್ನ ಸ್ವಲ್ಪ ಹೊತ್ತು ಹೊರಗಡೆ ಇಟ್ಟು, ಆಮೇಲೆ ಬಳಸಿದರಾಯಿತು. 

ಸಾಮಾನ್ಯ ಉಷ್ಣತೆಯಲ್ಲಿ ಶೇಖರಿಸಿಡಿ
ಟೊಮ್ಯಾಟೋಗಳು, ಆಲೂಗಡ್ಡೆ, ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಸಾಮಾನ್ಯ ಉಷ್ಣತೆಯಲ್ಲಿ ಶೇಖರಿಸಿಡಿ. ನೇರವಾಗಿ ಸೂರ್ಯನ ಕಿರಣಗಳು ಬೀಳದಂತೆ ಎಚ್ಚರ ವಹಿಸಿ.