ಕಾಲಿಫ್ಲವರ್‌ನಿಂದ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಬಹುದು. ಅದರಲ್ಲಿ ಗೋಬಿ ರೋಸ್ಟ್ ಕೂಡ ಬಹುತೇಕರಿಗೆ ಇಷ್ಟವಾಗುವ ರುಚಿಕರ ಖಾದ್ಯ. ಮಸಾಲೆಯುಕ್ತ, ಖಾರ-ಖಾರವಾಗಿರುವ ಈ ಗೋಬಿ ರೋಸ್ಟ್ ಅನ್ನು ಅನ್ನ, ಚಪಾತಿ, ರೊಟ್ಟಿ ಜೊತೆಗೆ ಸವಿಯಬಹುದು.

ಕಾಲಿಫ್ಲವರ್‌ನಿಂದ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಬಹುದು. ಅದರಲ್ಲಿ ಗೋಬಿ ರೋಸ್ಟ್ ಕೂಡ ಬಹುತೇಕರಿಗೆ ಇಷ್ಟವಾಗುವ ರುಚಿಕರ ಖಾದ್ಯ. ಮಸಾಲೆಯುಕ್ತ, ಖಾರ-ಖಾರವಾಗಿರುವ ಈ ಗೋಬಿ ರೋಸ್ಟ್ ಅನ್ನು ಅನ್ನ, ಚಪಾತಿ, ರೊಟ್ಟಿ ಜೊತೆಗೆ ಸವಿಯಬಹುದು. ಸಂಜೆ ಸ್ನ್ಯಾಕ್ಸ್ ಆಗಿಯೂ ತಿನ್ನಬಹುದು. ಮನೆಯಲ್ಲಿ ಸಿಗುವ ಸರಳ ಸಾಮಗ್ರಿಗಳಿಂದಲೇ ರುಚಿಯಾದ ಗೋಬಿ ರೋಸ್ಟ್ ತಯಾರಿಸಬಹುದು. ಹಾಗಾದರೆ ಇದನ್ನು ಮಾಡುವ ವಿಧಾನ ಹೇಗೆ? ಇಲ್ಲಿದೆ ಸರಳ ರೆಸಿಪಿ.

ಗೋಬಿ ರೋಸ್ಟ್ ಮಾಡಲು ಬೇಕಾಗುವ ಸಾಮಗ್ರಿಗಳು

ಕಾಲಿಫ್ಲವರ್ - 1 ಕೆಜಿ

ಬೆಳ್ಳುಳ್ಳಿ - 5-6 ಎಸಳು

ಟೊಮೆಟೊ - 2

ಎಣ್ಣೆ - 4 ಟೇಬಲ್ ಸ್ಪೂನ್

ಕಾಳುಮೆಣಸಿನ ಪುಡಿ - 1 ಟೀ ಸ್ಪೂನ್

ಅರಿಶಿನ ಪುಡಿ - 1/2 ಟೀ ಸ್ಪೂನ್

ಉಪ್ಪು - ರುಚಿಗೆ ತಕ್ಕಷ್ಟು

ಕರಿಬೇವು - ಸ್ವಲ್ಪ

ಜೀರಿಗೆ - 1 ಟೀ ಸ್ಪೂನ್

ಚಕ್ಕೆ - ಚಿಕ್ಕ ತುಂಡು

ಹಸಿಮೆಣಸಿನಕಾಯಿ - 2

ಹೆಚ್ಚಿದ ಈರುಳ್ಳಿ - ಸ್ವಲ್ಪ

ಮೆಣಸಿನ ಪುಡಿ - 1 ಟೀ ಸ್ಪೂನ್

ಜೀರಿಗೆ ಪುಡಿ - 1 ಟೀ ಸ್ಪೂನ್

ಕೊತ್ತಂಬರಿ ಪುಡಿ - 1 ಟೀ ಸ್ಪೂನ್

ಗರಂ ಮಸಾಲಾ ಪುಡಿ - 1 ಟೀ ಸ್ಪೂನ್

ಕೊತ್ತಂಬರಿ ಸೊಪ್ಪು - ಸ್ವಲ್ಪ

ಗೋಡಂಬಿ - ಸ್ವಲ್ಪ

ಗೋಬಿ ರೋಸ್ಟ್ ಮಾಡುವ ವಿಧಾನ

ಮೊದಲಿಗೆ ಕಾಲಿಫ್ಲವರ್ ಅನ್ನು ಸಣ್ಣ ಸಣ್ಣ ತುಂಡುಗಳಾಗಿ ಬಿಡಿಸಿ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಬಿಸಿ ನೀರಿಗೆ ಸ್ವಲ್ಪ ಉಪ್ಪು ಮತ್ತು ಅರಿಶಿನ ಹಾಕಿ ಕಾಲಿಫ್ಲವರ್ ತುಂಡುಗಳನ್ನು ಹಾಕಿ ಕೆಲವು ನಿಮಿಷ ಬಿಡಿ. ಬಳಿಕ ನೀರನ್ನು ಸಂಪೂರ್ಣವಾಗಿ ಬಸಿದುಕೊಳ್ಳಿ. ಈಗ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಜೀರಿಗೆ, ಚಕ್ಕೆ ಹಾಗೂ ಕರಿಬೇವು ಹಾಕಿ ಒಗ್ಗರಣೆ ಮಾಡಿ. ನಂತರ ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ ಈರುಳ್ಳಿ ಸ್ವಲ್ಪ ಮೃದುವಾಗುವವರೆಗೆ ಹುರಿಯಿರಿ. ಬಳಿಕ ಸಣ್ಣಗೆ ಹೆಚ್ಚಿದ ಅಥವಾ ರುಬ್ಬಿದ ಬೆಳ್ಳುಳ್ಳಿ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.

ಇದಕ್ಕೆ ಹೆಚ್ಚಿದ ಟೊಮೆಟೊ ಹಾಕಿ ಚೆನ್ನಾಗಿ ಬೇಯಿಸಿ. ಟೊಮೆಟೊ ಮೆತ್ತಗಾಗಿ ಮಸಾಲೆಯಂತೆ ಆದ ಬಳಿಕ ಅರಿಶಿನ ಪುಡಿ, ಮೆಣಸಿನ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಕಾಳುಮೆಣಸಿನ ಪುಡಿ ಮತ್ತು ಗರಂ ಮಸಾಲಾ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಸಿದ್ಧಪಡಿಸಿಕೊಂಡ ಕಾಲಿಫ್ಲವರ್ ತುಂಡುಗಳನ್ನು ಬಾಣಲೆಗೆ ಹಾಕಿ ಮಸಾಲೆಯೊಂದಿಗೆ ಚೆನ್ನಾಗಿ ಕಲಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಬಾಣಲೆಯನ್ನು ಮುಚ್ಚಿ ಮಧ್ಯಮ ಉರಿಯಲ್ಲಿ ಕಾಲಿಫ್ಲವರ್ ಚೆನ್ನಾಗಿ ಬೇಯಲು ಬಿಡಿ. ಆಗಾಗ ಕೈಯಾಡಿಸುತ್ತಾ ಮಸಾಲೆ ಎಲ್ಲಾ ಕಾಲಿಫ್ಲವರ್‌ಗೆ ಚೆನ್ನಾಗಿ ಹಚ್ಚುವಂತೆ ಮಾಡಿ. ಕಾಲಿಫ್ಲವರ್ ಬೇಯುತ್ತಾ ಬಂದಾಗ ಮುಚ್ಚಳ ತೆಗೆದು ಹೆಚ್ಚಿನ ಉರಿಯಲ್ಲಿ ಸ್ವಲ್ಪ ಹೊತ್ತು ಹುರಿಯಿರಿ. ಇದರಿಂದ ಗೋಬಿಗೆ ಚೆನ್ನಾಗಿ ರೋಸ್ಟ್ ಆದ ರುಚಿ ಬರುತ್ತದೆ. ಕೊನೆಯಲ್ಲಿ ಹುರಿದ ಗೋಡಂಬಿ ಮತ್ತು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ. ಇದೀಗ ಬಿಸಿಬಿಸಿಯಾದ, ಮಸಾಲೆಯುಕ್ತ ಗೋಬಿ ರೋಸ್ಟ್ ಸವಿಯಲು ಸಿದ್ಧ.

ಅನ್ನ, ಚಪಾತಿ ಜೊತೆ ಸಖತ್ ಕಾಂಬಿನೇಷನ್!

ಖಾರ-ಖಾರವಾದ ಈ ಕಾಲಿಫ್ಲವರ್ ಗೋಬಿ ರೋಸ್ಟ್ ಅನ್ನು ಚಪಾತಿ, ರೊಟ್ಟಿ, ಪೂರಿ ಅಥವಾ ಅನ್ನದ ಜೊತೆ ಸವಿಯಬಹುದು. ಸಂಜೆ ವೇಳೆಯಲ್ಲಿ ಸ್ನ್ಯಾಕ್ಸ್ ಆಗಿಯೂ ತಿನ್ನಬಹುದು. ಮನೆಯಲ್ಲೇ ಹೋಟೆಲ್ ಶೈಲಿಯ ಗೋಬಿ ರೋಸ್ಟ್ ಮಾಡಬೇಕೆಂದಿದ್ದರೆ ಈ ಸರಳ ವಿಧಾನವನ್ನು ಒಮ್ಮೆ ಟ್ರೈ ಮಾಡಿ.