Fish Cake Recipe: ಟೇಸ್ಟೀ ಫಿಶ್ ಕೇಕ್ ತಯಾರಿಸುವುದು ಹೇಗೆ ?
ಮೀನು (Fish) ಆರೋಗ್ಯಕ್ಕೆ ಹಿತಕಾರಿ. ಹೀಗಾಗಿಯೇ ಮಾಂಸಾಹಾರಿಗಳು ಮೀನಿನ ವಿವಿಧ ಖಾದ್ಯಗಳನ್ನು ಮಾಡಿ ಸವಿಯುತ್ತಾರೆ. ಮೀನಿನಿಂದ ಮಾಡುವ ಫಿಶ್ ಕರಿ, ಫಿಶ್ ಫ್ರೈ ಬಗ್ಗೆ ಎಲ್ಲಾ ಕೇಳಿರ್ತೀರಾ. ಆದ್ರೆ ಮೀನಿನಿಂದ ಮಾಡೋ ಕೇಕ್ (Cake) ಬಗ್ಗೆ ಕೇಳಿದ್ದೀರಾ. ಹೌದು, ಇದು ನಾನ್ ವೆಜ್ (Non-veg) ಪ್ರಿಯರ ಫೇವರಿಟ್ ಫಿಶ್ ಕೇಕ್
ಮೀನೂಟವನ್ನು ಇಷ್ಟಪಡದವರು ವಿರಳ. ಮಾಂಸಾಹಾರಿಗಳಿಗಂತೂ ಮೀನಿಲ್ಲದೆ ಊಟವೇ ಮುಗಿಯುವುದಿಲ್ಲ. ಕರಾವಳಿಯ ಮಂದಿಯಂತೂ ತಮ್ಮ ಮೂರು ಹೊತ್ತಿನ ಊಟದಲ್ಲೂ ಮೀನನ್ನು ಬಳಸುತ್ತಾರೆ. ಸೀ ಫುಡ್ ಅನ್ನು ಆರೋಗ್ಯಕ್ಕೂ ಉತ್ತಮವೆಂದು ಪರಿಗಣಿಸಲಾಗುತ್ತದೆ. ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಮೀನನ್ನು ನಾನ್ ವೆಜ್ ಪ್ರಿಯರು ಇಷ್ಟಪಟ್ಟು ಸೇವಿಸುತ್ತಾರೆ. ಫಿಶ್ ಕರಿ, ಫಿಶ್ ಫ್ರೈ, ಫಿಶ್ ಬಿರಿಯಾನಿ, ಫಿಶ್ ಕಬಾಬ್, ಫಿಶ್ ಗ್ರೇವಿ ಮೊದಲಾದವುಗಳನ್ನು ಮಾಡಿ ಸವಿಯುತ್ತಾರೆ. ಆದರೆ ಮೀನಿನ ಮಾಂಸದಿಂದ ರುಚಿಕರವಾದ ಕೇಕ್ ಅನ್ನು ತಯಾರಿಸುತ್ತಾರೆ ಅನ್ನೋದು ನಿಮಗೆ ಗೊತ್ತಾ. ಹೌದು ನೀವು ಕೇಳಿರುವುದು ಸರಿಯಾಗೇ ಇದೆ. ಮೀನಿನಿಂದ ಟೇಸ್ಟೀಯಾದ ಕೇಕ್ ಕೂಡಾ ತಯಾರಿಸುತ್ತಾರೆ.
ಕೇಕ್ ಎಂದ ಕೂಡ್ಲೇ ಬ್ಲ್ಯಾಕ್ ಫಾರೆಸ್ಟ್, ರೆಡ್ ವೆಲ್ವೆಟ್, ಪೈನಾಪಲ್ ಕೇಕ್ ಹೀಗೆ ವಿವಿಧ ಕೇಕ್ ಗಳು ನೆನಪಾಗುತ್ತವೆ. ಹಲವು ಫ್ಲೇವರ್‌ಗಳನ್ನು ಸೇರಿಸಿಕೊಂಡು ಕೇಕ್ ತಯಾರಿಸಲಾಗುತ್ತದೆ. ಆದರೆ ಇಲ್ಲಿ ಮೀನಿನ ಮಾಂಸವನ್ನು ಬಳಸಿಕೊಂಡು ಕೇಕ್ ಮಾಡಲಾಗುತ್ತದೆ. ಫಿಶ್ ಕೇಕ್‌ಗಳ ಉತ್ತಮ ಭಾಗವೆಂದರೆ ಅವುಗಳನ್ನು ಡೀಪ್ ಫ್ರೈ ಮಾಡದೆ ಬೇಯಿಸಲಾಗುತ್ತದೆ, ಆದ್ದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಸೆಲೆಕ್ಟೆಡ್ ಫುಡ್ ತಿನ್ನುವವರು ಸಹ ಇದನ್ನು ಯಾವುದೇ ಯೋಚನೆಯಿಲ್ಲದೆ ತಿನ್ನಬಹುದು. ಹಾಗಿದ್ರೆ ಬೇಯಿಸಿದ ಫಿಶ್ ಕೇಕ್ ಮಾಡೋದು ಹೇಗೆ ತಿಳಿಯೋಣ
ಬೇಕಾಗಿರುವ ಸಾಮಗ್ರಿಗಳು:
3 ಕಪ್ ಮೀನು
ಅಗತ್ಯವಿರುವಷ್ಟು ಉಪ್ಪು
ಅರ್ಧ ಕಪ್ ಬ್ರೆಡ್ ತುಂಡುಗಳು
1 ಚಮಚ ಎಣ್ಣೆ
1 ಹಿಡಿ ಸ್ಪ್ರಿಂಗ್ ಆನಿಯನ್
2 ಆಲೂಗಡ್ಡೆ
ಅಗತ್ಯವಿರುವಷ್ಟು ಕರಿಮೆಣಸು ಪುಡಿ
3 ಚಮಚ ನಿಂಬೆ ರಸ
2 ಹಿಡಿ ಕೊತ್ತಂಬರಿ ಸೊಪ್ಪು
2 ಹಸಿರು ಮೆಣಸಿನಕಾಯಿಗಳು
ಮಾಡುವ ವಿಧಾನ:
ಮೀನನ್ನು ಕತ್ತರಿಸಿಟ್ಟುಕೊಳ್ಳಿ: ಮೀನನ್ನು ತೊಳೆದು ನೀಟಾಗಿ ಕತ್ತರಿಸಿಟ್ಟುಕೊಳ್ಳಿ. ನಂತರ 200 ಡಿಗ್ರಿ ಸೆಲ್ಸಿಯಸ್ ನಲ್ಲಿ ಓವೆನ್ ಬಿಸಿ ಮಾಡಿ
ಆಲೂಗಡ್ಡೆ ಬೇಯಿಸಿ: ಆಲೂಗಡ್ಡೆ (Potato)ಯನ್ನು ಸರಿಯಾಗಿ ತೊಳೆದು ಮತ್ತು ನೀರಿನಲ್ಲಿಟ್ಟು ಬೇಯಿಸಲು ಇಡಿ. ಆಲೂಗಡ್ಡೆ ಚೆನ್ನಾಗಿ ಬೆಂದ ನಂತರ ನೀರಿನಿಂದ ತೆಗೆದು ಆಲೂಗಡ್ಡೆ ಆರಿದ ಬಳಿಕ ಸಿಪ್ಪೆಯನ್ನು ತೆಗೆಯಿರಿ. ಮೆತ್ತಗಾಗಿರುವ ಆಲೂಗಡ್ಡೆಯನ್ನು ಚೆನ್ನಾಗಿ ಪುಡಿ ಮಾಡಿಟ್ಟಿಕೊಳ್ಳಿ
ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ: ಒಂದು ಬಟ್ಟಲಿನಲ್ಲಿ, ಮೀನು (Fish), ಕತ್ತರಿಸಿದ ಹಸಿರು ಮೆಣಸಿನಕಾಯಿಗಳು, ಸ್ಪ್ರಿಂಗ್ ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಹಿಸುಕಿದ ಆಲೂಗಡ್ಡೆ ಸೇರಿಸಿ. ಉಪ್ಪು ಮತ್ತು ಮೆಣಸು ಮತ್ತು ಕೆಲವು ಹನಿ ನಿಂಬೆ ರಸವನ್ನು ಸೇರಿಸಿ. ಅವೆಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ. ಮಿಶ್ರಣ ಮಾಡಿದ ನಂತರ, ಮಿಶ್ರಣದ ಸಣ್ಣ ಭಾಗವನ್ನು ತೆಗೆದುಕೊಂಡು ಅದಕ್ಕೆ ದುಂಡನೆಯ ಆಕಾರವನ್ನು ನೀಡಿ. ಎಲ್ಲಾ ಮಿಶ್ರಣವನ್ನು ಇದೇ ರೀತಿ ಉಂಡೆಗಟ್ಟಿ ಚಪ್ಪಟೆಯಾಗಿ ಮಾಡಿಕೊಳ್ಳಿ.
ಬ್ರೆಡ್ ತುಂಡುಗಳಲ್ಲಿ ಸುತ್ತಿಕೊಳ್ಳಿ: ದೊಡ್ಡ ತಟ್ಟೆಯಲ್ಲಿ ಬ್ರೆಡ್ (Bread) ತುಂಡುಗಳನ್ನು ಹರಡಿ ಮತ್ತು ಅದರ ಮೇಲೆ ಈ ದುಂಡನೆಯ ಆಕಾರದ ಹಿಟ್ಟನು ಹಾಕಿ ತೆಗೆಯಿರಿ.
ಬೇಕಿಂಗ್ ಟ್ರೇನಲ್ಲಿ ಇರಿಸಿ: ಎಣ್ಣೆಯಿಂದ ಬೇಕಿಂಗ್ ಟ್ರೇಯನ್ನು ಗ್ರೀಸ್ ಮಾಡಿ ಮತ್ತು ಅದರ ಮೇಲೆ ಮೀನಿನ ಕೇಕ್‌ಗಳನ್ನು ಇರಿಸಿ.ಒವೆನ್ ನಲ್ಲಿ ಬೇಕಿಂಗ್ ಟ್ರೇ ಇರಿಸಿ ಸುಮಾರು 15 ರಿಂದ 20 ನಿಮಿಷ ಬೇಯಿಸಿಕೊಳ್ಳಿ. ಓವನ್‌ನಿಂದ ಕೇಕ್ (Cake)ಗಳನ್ನು ತೆಗೆದು ಅವುಗಳನ್ನು ಸರ್ವಿಂಗ್ ಪ್ಲೇಟ್‌ಗೆ ವರ್ಗಾಯಿಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಮತ್ತು ಬಡಿಸಿ. ಸಂಜೆಯ ಸ್ನ್ಯಾಕ್ಸ್‌ಗೆ, ಫ್ರೆಂಡ್ಸ್, ಗೆಸ್ಟ್ ಬಂದಾಗ ಸರ್ವ್ ಮಾಡಲು ರುಚಿಕರವಾದ ಫಿಶ್ ಕೇಕ್‌ಗಳು ಸಿದ್ಧ.