ಶ್ರೀಕಂಠ ಶಾಸ್ತ್ರಿ

ಜ್ಯೋತಿಷಿ, ಸುವರ್ಣ ನ್ಯೂಸ್‌

ಮಕರ-ಧನಸ್ಸು-ಕುಂಭ ಈ ಮೂರು ರಾಶಿಗಳಲ್ಲಿ ನಡೆಯುವ ಗುರು ಸಂಚಾರ ಜಗತ್ತಿಗೆ ಸಂಚಕಾರ ತರುತ್ತದೆ ಎಂಬುದು ಉಡುಪಿ ಕೃಷ್ಣ ಪಂಚಾಗದವರ ಮಾತು. ಈ ಮಾತಿನಂತೆ ಭೂಮಿ ಪ್ರೇತಪೂರ್ಣಳಾದ ವಸುಂಧರೆಯಾಗಿರುವುದು ಅಕ್ಷರಶಃ ಸತ್ಯ. ಕೊರೋನಾ ದಾಳಿ ಮನುಷ್ಯರನ್ನು ತಿಂದು ತೇಗಿದೆ. ಹಾಲಾಡಿ ಪಂಚಾಂಗ ಕೂಡ ಈ ವರ್ಷ ರೋಗ ಭಯ ಹೆಚ್ಚಾಗಿರುತ್ತದೆ ಎಂಬ ಅಂಶವನ್ನು ಸ್ಪಷ್ಟಪಡಿಸಿದೆ. ಆ ಭಯ ಇನ್ನೂ ಜನರಲ್ಲಿ ಇದೆ. ಅಂತೂ ಈ ಶಾರ್ವರೀ ಸಂವತ್ಸರ ಹೆಸರಿಗೆ ತಕ್ಕ ಹಾಗೆ ಲೋಕಕ್ಕೆ ಕತ್ತಲನ್ನೇ ತಂದಿದೆ. ಇನ್ನೂ ಈ ಸಂವತ್ಸರ ಮುಗಿದಿಲ್ಲ. ನಾವು ಕ್ರೈಸ್ತ ವರ್ಷದ ಆರಂಭದಲ್ಲಿದ್ದೇವಾದರೂ ನಮ್ಮ ಹೊಸ ವರ್ಷಕ್ಕೆ ಇನ್ನೂ ಮೂರು ತಿಂಗಳ ಮೇಲೆ 12 ದಿನ ಬಾಕಿ ಇದೆ. ಅಷ್ಟರಲ್ಲಿ ಗ್ರಹಗಳ ಸಂಚಾರದ ಪ್ರಭಾವ 12 ರಾಶಿಗಳ ಮೇಲೆ ಹೇಗಿರಲಿದೆ ಎಂಬುದನ್ನು ಗಮನಿಸೋಣ. ಯಾರೂ ಕೂಡ ಕಂಗಾಲಾಗುವ ಅವಶ್ಯಕತೆ ಇಲ್ಲ. ಸೂಚಿಸಿದ ಪರಿಹಾರ ಮಾಡಿಕೊಳ್ಳಿ. ಪ್ರತಿಯೊಬ್ಬರೂ ಆರೋಗ್ಯ ರಕ್ಷಣೆಗಾಗಿ ವಿಶೇಷವಾಗಿ ದುರ್ಗಾ ಕವಚ ಹಾಗೂ ಶಿವ ಕವಚಗಳನ್ನು ಪಠಿಸಿ.

2021ರ ನ್ಯೂಮರಾಲಜಿ ಭವಿಷ್ಯ;ನಿಮ್ಮ ಸಂಖ್ಯೆ ಯಾವುದು? ಹೀಗೆ ತಿಳಿಯಿರಿ! 

ಮೇಷ

ಜವಾಬ್ದಾರಿ ಮರೆಯಬೇಡಿ

ರಾಶ್ಯಧಿಪತಿಯಾದ ಕುಜ ಸ್ವಸ್ಥಾನದಲ್ಲಿ ವಿರಾಜಮಾನನಾಗಿರುವುದರಿಂದ ದೇಹದ ಆರೋಗ್ಯ ಚೆನ್ನಾಗಿರುತ್ತದೆ. ವಿದ್ಯಾರ್ಥಿಗಳಲ್ಲಿ ಅಸಮಾಧಾನ, ಆತಂಕ ಮನೆಮಾಡಿರುತ್ತದೆ. ಶುಕ್ರನು ಭಾಗ್ಯ-ಕರ್ಮ ಸ್ಥಾನಗಳಲ್ಲಿ ಸಂಚರಿಸುವಾಗ ಸಂಪತ್ತು, ವಾಹನ, ವಸ್ತ್ರ ಇತ್ಯಾದಿ ಐಷಾರಾಮಿ ಸುಖ ಭೋಗಗಳನ್ನು ಕರುಣಿಸುತ್ತಾನೆ. ಏಪ್ರಿಲ್‌ ನಂತರ ಗುರುವಿನ ಕುಂಭ ರಾಶಿಯ ಸಂಚಾರದಿಂದ ಬ್ಯಾಂಕಿಂಗ್‌ ಕ್ಷೇತ್ರಗಳಲ್ಲಿರುವವರಿಗೆ, ಬೋಧಕ ಹಾಗೂ ಅರ್ಚಕ ವರ್ಗಗಳಿಗೆ ಅನುಕೂಲವನ್ನು ಉಂಟುಮಾಡುತ್ತದೆ. ಅಭಿಮಾನ ಭಂಗವಾಗುವ ಮುನ್ನ ಎಚ್ಚರವಹಿಸಿ, ಜವಾಬ್ದಾರಿಯಿಂದ ಜೀವನ ನಿರ್ವಹಿಸುವುದು ಉತ್ತಮ.

ಪರಿಹಾರ: ಸುಬ್ರಹ್ಮಣ್ಯ ಸ್ವಾಮಿಗೆ ಜೇನು ಸಮರ್ಪಣೆ ಮಾಡಿ, ಗುರು ಚರಿತ್ರೆ ಓದಿ

ವೃಷಭ

ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ಸ್ವಲ್ಪ ಆರೋಗ್ಯದಲ್ಲಿ ವ್ಯತ್ಯಾಸ ಕಾಣುವ ಸಾಧ್ಯತೆ ಇದೆ. ಸ್ತ್ರೀಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಉದ್ಯೋಗಿಗಳಿಗೆ ಸ್ವಲ್ಪ ಶ್ರಮ ಹೆಚ್ಚಾಗಲಿದೆ. ಇದೇ ಜನವರಿ 15ರ ನಂತರ ತಂದೆ- ಮಕ್ಕಳಲ್ಲಿ ಸ್ವಲ್ಪ ಭಿನ್ನಾಭಿಪ್ರಾಯಗಳು ಉಂಟಾಗಲಿವೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಗಲಿದೆ. ಸ್ತ್ರೀ-ಪುರುಷರ ನಡುವೆ ರಕ್ತಿ - ವಿರಕ್ತಿ ಎರಡೂ ಇರಲಿದೆ. ಏಪ್ರಿಲ… ನಂತರ ಉದ್ಯೋಗಿಗಳಿಗೆ ಉತ್ತಮ ಫಲ. ಅಧಿಕಾರ ಪ್ರಾಪ್ತಿಯಂಥ ಶುಭ ಫಲಗಳಿವೆ. ವಿದೇಶ ವಹಿವಾಟಿನಲ್ಲಿ ವಿಶೇಷ ಲಾಭ ಇರಲಿದೆ. ವಾಹನ ಚಾಲಕರು-ವ್ಯಾಪಾರಿಗಳಿಗೆ ಲಾಭದಾಯಕ ಫಲ, ಕೃಷಿ ಚಟುವಟಿಕೆಯಲ್ಲಿರುವವರಿಗೆ ಸಹಾಯ, ಅನುಕೂಲ.

ಪರಿಹಾರ: ಮಹಾಲಕ್ಷ್ಮಿ ಅಷ್ಟಕ ಪಠಿಸಿ

ಪಂಚಾಂಗ : ಲಲಿತಾ ಸಹಸ್ರನಾಮ. ಸೌಂದರ್ಯ ಲಹರಿ ಪಠಣದಿಂದ ಮನಸ್ಸು ಶುದ್ಧಿಯಾಗುವುದು 

ಮಿಥುನ

ವ್ಯಾಪಾರಿಗಳು ಎಚ್ಚರಿಕೆ ವಹಿಸಬೇಕು

ರಾಶ್ಯಾಧಿಪತಿ ಪ್ರಸ್ತುತ ಸಪ್ತಮ ಸ್ಥಾನದಲ್ಲಿರುವುದರಿಂದ ಸಂಗಾತಿಯಿಂದ ಸಹಾಯ-ಸಹಕಾರ ಇರಲಿದೆ, ಆರೋಗ್ಯವೂ ಚೇತರಿಕೆಯಾಗಲಿದೆ. ವ್ಯಾಪಾರಿಗಳು ಮಾತ್ರ ಎಚ್ಚರಿಕೆಯಿಂದ ಇರಬೇಕು. ನಷ್ಟಫಲವನ್ನು ಅನುಭವಿಸುವ ಸಾಧ್ಯತೆ ಇದೆ. ಒಪ್ಪಂದದ ವ್ಯಾಪಾರಿಗಳಿಗೆ ಲಾಭದಲ್ಲಿ ತಕರಾರು ಮೂಡಲಿದೆ. ಹಿರಿಯರ ಮಾತಿಗೆ ಗೌರವ ಇರುವುದಿಲ್ಲ. ಅನನುಭವಿಗಳಿಗೆ ಅಧಿಕಾರ-ಜವಾಬ್ದಾರಿ ಸಿಗಲಿದೆ. ಏಪ್ರಿಲ್‌ ನಂತರ ಗುರು ಸ್ಥಾನ ಬದಲಾವಣೆಯಿಂದ ಉದ್ಯೋಗಿಗಳಿಗೆ ಉತ್ಕೃಷ್ಟಫಲ, ಅದೃಷ್ಟಕೈಹಿಡಿಯಲಿದೆ, ಮಂಗಳಕಾರ್ಯಗಳಿಗೆ ಚಾಲನೆ ಸಿಗಲಿದೆ. ಗುರುಬಲ ನಿಮ್ಮ ಜೀವನವನ್ನು ಹರ್ಷದಾಯಕ ಮಾಡಲಿದೆ.

ಪರಿಹಾರ: ತಿರುಪತಿ ತಿಮ್ಮಪ್ಪನ ದರ್ಶನ, ಸ್ಮರಣೆ ಮಾಡಿ

ಕಟಕ

ಏಪ್ರಿಲ್‌ ನಂತರ ಗುರುಬಲ ಇರಲ್ಲ

ನಿಮ್ಮ ರಾಶಿಯಿಂದ ಗ್ರಹ ಸ್ಥಿತಿಯನ್ನು ಗಮನಿಸಿದಾಗ ಸಪ್ತಮದ ಗುರು-ಶನಿಯರು ದಾಂಪತ್ಯದಲ್ಲಿ ಸಾಮರಸ್ಯವನ್ನು ಕೊಂಚ ಕಡಿಮೆ ಮಾಡುತ್ತಾರೆ. ಭಾಗ್ಯಧಿಪತಿ ನೀಚನಾಗಿದ್ದರೆ ದೈವಾನುಕೂಲ ಇರುವುದಿಲ್ಲ. ಉಳಿದ ಗ್ರಹಗಳ ಚಾರ ಗಮನಿಸಿದಾಗ ಉದ್ಯೋಗಿಗಳಿಗೆ ಅನುಕೂಲ, ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಲಾಭಫಲ, ವಸ್ತ್ರ ವ್ಯಾಪಾರಿಗಳಿಗೆ, ಕಲಾವಿದರಿಗೆ, ಕರಕುಶಲ ಕರ್ಮಿಗಳಿಗೆಲ್ಲ ಅನುಕೂಲದ ಫಲಗಳಿವೆ. ದ್ರವ ವ್ಯಾಪಾರಿಗಳಿಗೆ ಅನುಕೂಲದ ಫಲಗಳಿದ್ದಾವೆ. ಏಪ್ರಿಲ… ನಂತರ ಗುರುಬಲವಿರುವುದಿಲ್ಲ. ಮಂಗಳಕಾರ್ಯಗಳಿಗೆ ಅಡ್ಡಿ-ಆತಂಕಗಳಿರಲಿವೆ. ಹಣಕಾಸಿಗೆ ಕೊರತೆ ಇರುವುದಿಲ್ಲ ಯೋಚನೆ ಮಾಡುವ ಅಗತ್ಯವಿಲ್ಲ.

ಪರಿಹಾರ: ದುರ್ಗಾ ಸ್ತುತಿ ಹೇಳಿಕೊಳ್ಳಿ. ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ, ಅಕ್ಕಿದಾನ ಮಾಡಿ

2021ರ ಸುಖ-ಸಮೃದ್ಧಿಗಾಗಿ ಗ್ರಹದೋಷ ನಿವಾರಣಾ ಮಂತ್ರಗಳು! 

ಸಿಂಹ

ಯುಗಾದಿ ನಂತರ ಅನುಕೂಲ

ರಾಶ್ಯಾಧಿಪತಿ ರವಿ ಸದ್ಯಕ್ಕೆ ಅನುಕೂಲಕರನಾಗಿದ್ದಾನೆ. ಜನವರಿ 15ರ ನಂತರ ಸ್ವಲ್ಪ ಶತ್ರುಬಾಧೆ, ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಹೊಂದಾಣಿಕೆ ಕಷ್ಟಸಾಧ್ಯದಂಥ ಫಲಗಳಿವೆ. ಉದ್ಯೋಗಿಗಳಿಗೆ ಸ್ವಲ್ಪ ಸ್ವಲ್ಪವಾಗಿ ಉತ್ತಮ ಫಲ ಸಿಗಲಿದೆ. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಹೊಂದುತ್ತೀರಿ. ಏಪ್ರಿಲ… ನಂತರ ಗುರುಬಲ ಬರಲಿದ್ದು ಕಷ್ಟಗಳು ಕಳೆದು ಮಂಗಳಕಾರ್ಯಗಳು ಜರುಗಲಿವೆ. ವಿದ್ಯಾರ್ಥಿಗಳಿಗೆ ಕೊಂಚ ಅಸಮಾಧಾನ, ಬೇಸರ, ದುಃಖ, ಖಿನ್ನತೆಗಳು ಕಾಡಲಿವೆ. ಚಿಂತೆ ಮಾಡುವ ಅಗತ್ಯ ಇಲ್ಲ. ಕ್ರಮೇಣ ಅನುಕೂಲದ ಫಲಗಳು ಬರಲಿವೆ. ಪ್ರತಿ ದಿನ ಗುರು ಪ್ರಾರ್ಥನೆ ಮಾಡಿ. ವ್ಯಾಪಾರಿಗಳಿಗೆ ಕೊಂಚ ಅಸಮಾಧಾನದ ಫಲ, ಅಲೆದಾಟ ಹೆಚ್ಚಾಗಿರಲಿದೆ. ಯುಗಾದಿ ನಂತರ ಅನುಕೂಲ ಇದೆ.

ಪರಿಹಾರ: ಶಿವನಿಗೆ ಭಸ್ಮಾಭಿಷೇಕ ಮಾಡಿಸಿ, ಶಿವಸ್ತೋತ್ರ ಪಠಿಸಿ

ಕನ್ಯಾ

ಶೃಂಗೇರಿಗೆ ಹೋಗಿ ಬನ್ನಿ

ರಾಶ್ಯಾಧಿಪತಿ ಸದ್ಯದ ದಿನಗಳಲ್ಲಿ ಅನುಕೂಲಕರನಾಗಿದ್ದಾನೆ. ಆಶಾದಾಯಕ ಫಲಗಳನ್ನು ಕರುಣಿಸುತ್ತಾನೆ. ವಿದ್ಯಾರ್ಥಿಗಳಿಗೂ ಶುಭಫಲಗಳನ್ನು ಗ್ರಹಗಳು ಕೊಡಲಿವೆ. ಉನ್ನತ ಶಿಕ್ಷಣ ಮಾಡುವವರಿಗೂ ಹೆಚ್ಚಿನ ಸಹಕಾರ ಇರಲಿದೆ. ಕೋರ್ಟು - ಕಚೇರಿ ವ್ಯವಹಾರಗಳಲ್ಲಿ ಸಮಾಧಾನ ಫಲ ಕಾಣುತ್ತೀರಿ. ಏಪ್ರಿಲ… ನಂತರ ಗುರುಬಲ ಇರದ ಕಾರಣ ಶೃಂಗೇರಿಯಂಥ ಗುರುವಿನ ಸನ್ನಿಧಾನಕ್ಕೆ ಹೋಗಿಬನ್ನಿ. ಉದ್ಯೋಗಿಗಳಿಗೆ ಸ್ವಲ್ಪ ಬಲ ಕುಸಿಯಲಿದೆ. ವ್ಯವಹಾರಗಳಲ್ಲಿ ಅತಂತ್ರತೆ ಕಾಡುತ್ತದೆ. ಶ್ರಮ ಜೀವನ ನಿಮ್ಮನ್ನು ಕುಗ್ಗಿಸುತ್ತದೆ. ಯುಗಾದಿ ನಂತರ ಮತ್ತೆ ಜೀವನ ಸರಿಹೋಗಲಿದೆ ಆತಂಕ ಮಾಡಿಕೊಳ್ಳಬೇಡಿ.

ಪರಿಹಾರ: ಲಕ್ಷಿ ್ಮೕ ರಂಗನಾಥ ದರ್ಶನ, ಸ್ಮರಣೆ ಮಾಡಿ

ತುಲಾ

ಸ್ತ್ರೀಯರ ವಿಚಾರದಲ್ಲಿ ಎಚ್ಚರದಿಂದಿರಿ

ರಾಶ್ಯಾಧಿಪತಿ ಉಚ್ಚ ಸ್ಥಾನದ ಕಡೆ ಪಯಣಿಸುತ್ತಿರುವುದರಿಂದ ಅನುಕೂಲ ಫಲಗಳನ್ನು ಕಾಣಬಹುದು. ಆರೋಗ್ಯದಲ್ಲಿ ಸುಧಾರಣೆ, ಆರ್ಥಿಕ ಸುಧಾರಣೆ, ಗೃಹ-ವಾಹನ ಸೌಖ್ಯಾದಿಗಳನ್ನು ಕಾಣುತ್ತೀರಿ. ಸ್ತ್ರೀನಿಮಿತ್ತ ಕೊಂಚ ಅಪವಾದ, ಅವಮಾನಗಳಾಗುವ ಸಾಧ್ಯತೆ ಸೂಚಿಸುತ್ತಿರುವುದರಿಂದ ಎಚ್ಚರವಾಗಿರಬೇಕು. ರೈತರಿಗೆ ಕೊಂಚ ಸಮಾಧಾನದ ಫಲಗಳಿದ್ದಾವೆ. ವಿದ್ಯಾರ್ಥಿಗಳಲ್ಲಿ ಸ್ವಲ್ಪ ಆಲಸ್ಯ, ಬೇಜವಾಬ್ದಾರಿತನ ಹೆಚ್ಚಾಗಲಿದೆ. ಅನವರತ ಆಂಜನೇಯ ಪ್ರಾರ್ಥನೆ ಮಾಡಿ. ಯುಗಾದಿ ನಂತರ ಮತ್ತಷ್ಟುಸುಖ ಸಮೃದ್ಧಿ ಹೊಂದಲಿದ್ದೀರಿ.

ಪರಿಹಾರ: ದುರ್ಗಾ ದೇವಸ್ಥಾನಕ್ಕೆ ಅವರೆ ಧಾನ್ಯ ದಾನ ಮಾಡಿ

ವೃಶ್ಚಿಕ

ಈ ವರ್ಷ ಸಾಲ ತೀರಬಹುದು

ಪ್ರಸ್ತುತ ರಾಶ್ಯಾಧಿಪತಿ ಬಲಿಷ್ಠನಾಗಿರುವುದರಿಂದ ಸಾಲ ಬಾಧೆಯಿಂದ ಮುಕ್ತರಾಗುತ್ತೀರಿ. ನಿಮ್ಮ ಶತ್ರುಗಳು ದೂರಾಗುತ್ತಾರೆ. ಆರೋಗ್ಯ ಸುಧಾರಣೆಯೂ ಇದೆ. ಶ್ರಮ ಜೀವಿಗಳಿಗೆ ಉತ್ತಮ ಫಲಗಳಿದ್ದಾವೆ. ಆದರೆ ಹಣಕಾಸಿನ ವಿಷಯದಲ್ಲಿ ಸ್ವಲ್ಪ ಅಸಮಾಧಾನ ಇರಲಿದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಕೊಂಚ ಕಿರಿಕಿರಿ ವಾತಾವರಣ ಇರಲಿದೆ. ಯುಗಾದಿ ನಂತರ ಉದ್ಯೋಗಿಗಳಲ್ಲಿ ಭರವಸೆ ಮೂಡಲಿದೆ. ವಿದ್ಯಾರ್ಥಿಗಳು ಮಂಕಾಗುತ್ತಾರೆ. ಭಯದ ವಾತಾವರಣ ಇರಲಿದೆ. ಬೃಹತ್‌ ಯೋಜನೆಗಳಿಂದ ನಿರೀಕ್ಷಿಸಿದ ಲಾಭ ಬರದು. ಚಿಲ್ಲರೆ ವ್ಯಾಪಾರಿಗಳಿಗೆ ಕೊಂಚ ಸಮಾಧಾನದ ಫಲ. ಗೃಹ ಸಂಬಂಧಿ ಚಟುವಟಿಕೆಗಳಿಗೆ ಅನುಕೂಲದ ಫಲ, ಆಹಾರ ಉತ್ಪನ್ನಕಾರರಿಗೆ ಶುಭಫಲ.

ಪರಿಹಾರ: ದುರ್ಗಾ ಪರಮೇಶ್ವರಿ ಪ್ರಾರ್ಥನೆ ಮಾಡಿ

ಧನಸ್ಸು

ವಸ್ತ್ರ, ಹಾಲು, ಹೈನು ವ್ಯಾಪಾರಿಗಳಿಗೆ ಶುಭ

ರಾಶ್ಯಾಧಿಪತಿಗೆ ಬಲವಿಲ್ಲದ ಕಾರಣ ಸ್ವಲ್ಪ ಜಾಗ್ರತೆಯಿಂದ ಇರಬೇಕು. ಆರೋಗ್ಯದ ಕಡೆ ಗಮನಕೊಡಿ. ಸಣ್ಣ-ಪುಟ್ಟದರಲ್ಲೇ ತಪಾಸಣೆ ಮಾಡಿಸಿಕೊಳ್ಳಿ. ವಿದ್ಯಾರ್ಥಿಗಳಿಗೆ ಕೊಂಚ ಆಲಸ್ಯ, ಗುರುಗಳ ಬಗ್ಗೆ ಅಸಮಾಧಾನ, ಅಸಡ್ಡೆ ಭಾವಗಳು ಮೂಡಲಿವೆ. ಉದ್ಯೋಗಿಗಳಿಗೂ ಕೊಂಚ ಬಲವಿಲ್ಲ, ಕಚೇರಿಗಳಲ್ಲಿ ಮಾನ್ಯತೆ ಸಿಗದೆ ಹೋಗುತ್ತದೆ. ತಂದೆ-ಮಕ್ಕಳಲ್ಲಿ ವಿರೋಧಗಳು ಉಂಟಾಗಲಿವೆ. ಆದರೆ ಹಣಕಾಸಿಗೆ ಸಂಬಂಧಿಸಿದ ಹಾಗೆ ಅನುಕೂಲತೆ ಇದೆ, ಕುಟುಂಬದಲ್ಲಿ ಹಿರಿಯರ ಸಹಕಾರ ಇರಲಿದೆ. ವಸ್ತ್ರ-ಹಾಲು-ಹೈನು ವ್ಯಾಪಾರಿಗಳಿಗೆ ಶುಭಫಲಗಳಿದ್ದಾವೆ. ಸ್ತ್ರೀಯರಿಗೂ ಅನುಕೂಲ ಫಲಗಳಿವೆ. ಯುಗಾದಿ ನಂತರ ನಿಮ್ಮ ಸಮಸ್ಯೆಗಳು ಕಳೆದು ಸಮಾಧಾನ ಸಿದ್ಧಿಯಾಗುತ್ತದೆ.

ಪರಿಹಾರ: ಗುರು ಚರಿತ್ರೆ ಓದಿ

ಮಕರ

ಬಡ್ತಿ, ಅಧಿಕಾರ ಪ್ರಾಪ್ತಿ ದೊರೆಯಬಹುದು

ರಾಶಿಯ ಅಧಿಪತಿ ಶನಿ ಬಲದ ಮೇಲೆ ಶುಭಫಲಗಳನ್ನು ಕಾಣುತ್ತೀರಿ. ಧೈರ್ಯ, ಸಾಹಸಗಳಿಂದ ಕಾರ್ಯ ಸಾಧನೆ, ಉದ್ಯೋಗಿಗಳಿಗೆ ಬಡ್ತಿ, ಅಧಿಕಾರ ಪ್ರಾಪ್ತಿಯಂಥ ಫಲಗಳನ್ನು ಕಾಣಬಹುದು. ಪಂಚಮ ರಾಹು ಸ್ವಲ್ಪ ಉದರ ಸಂಬಂಧಿ ರೋಗಗಳಿಗೆ ಕಾರಣವಾಗಬಹುದು. ಆಹಾರದಲ್ಲಿ ಸಮತೆ ಕಾಪಾಡಿಕೊಳ್ಳಿ. ವಾತ- ಕಫ ಸಂಬಂಧಿ ರೋಗಗಳು ಕೊಂಚ ಬಾಧಿಸುವ ಸಾಧ್ಯತೆ ಇದೆ. ಹತ್ತಿರದವರು ಕೊಂಚ ದೂರಾಗುವ ಸನ್ನಿವೇಶಗಳೂ ಎದುರಾಗಲಿವೆ. ಸ್ತ್ರೀ-ಪುರುಷರ ನಡುವೆ ಸ್ವಲ್ಪ ವಾಗ್ವಾದ- ಘರ್ಷಣೆಗಳಿಂದ ಭಾವನೆಗಳಲ್ಲಿ ಏರುಪೇರು. ಯುಗಾದಿ ನಂತರ ಗುರುಬಲದಿಂದಾಗಿ ಮಂಗಳಕಾರ್ಯಗಳಿಗೆ ಚಾಲನೆ ಸಿಗಲಿದೆ. ಹಣ ಸಮೃದ್ಧಿವಾಗಲಿದೆ.

ಪರಿಹಾರ: ಧರ್ಮಸ್ಥಳ ಮಂಜುನಾಥ ದರ್ಶನ ಮಾಡಿ

ಕುಂಭ

ಆದಾಯಕ್ಕಿಂತ ಖರ್ಚು ಹೆಚ್ಚಾದೀತು

ಆದಾಯಕ್ಕಿಂತ ವ್ಯಯವೇ ಹೆಚ್ಚು. ಹಣಕಾಸಿನ ಸಮಸ್ಯೆ ನಿಮ್ಮನ್ನು ಬಾಧಿಸಲಿದೆ. ಉದ್ಯೋಗಿಗಳಿಗೆ ಕೊಂಚ ಶ್ರಮದ ಜೀವನ. ನಿಮ್ಮದಲ್ಲದ ತಪ್ಪುಗಳಿಗೆ ವ್ಯಥೆ ಪಡಬೇಕಾಗುತ್ತದೆ. ನಿಮ್ಮ ಸಾಹಸ ಕಾರ್ಯಗಳಿಂದ ಜಯ, ಲಾಭ ಸಿಗಲಿದೆ. ಕ್ರೀಡಾಪಟುಗಳಿಗೆ ಉತ್ತಮ ಫಲಗಳಿದ್ದಾವೆ. ವಿದ್ಯಾರ್ಥಿಗಳಿಗೆ ಸದ್ಯಕ್ಕೆ ಸಮಾಧಾನದ ಫಲಗಳಿಲ್ಲ. ದುಗುಡ-ದುಮ್ಮಾನದ ಬದುಕಾಗಲಿದೆ. ಯುಗಾದಿ ನಂತರ ಜೀವನ ಕೊಂಚ ಬದಲಾಗಲಿದೆ. ಲಾಭದ ಅಧಿಪತಿ ಹಾಗೂ ಧನಾಧಿಪತಿಯಾದ ಗುರು ಜನ್ಮ ರಾಶಿಗೆ ಬರುವುದರಿಂದ ಹಣಕಾಸಿನ ಪರಿಸ್ಥಿತಿ ಅನುಕೂಲವಾಗಲಿದೆ. ವ್ಯಾಪಾರಿಗಳಲ್ಲಿ ನಗೆ ಮೂಡಲಿದೆ. ಅಂದುಕೊಂಡದ್ದನ್ನು ಪಡೆಯುವ ಕಾಲ ಬರಲಿದೆ. ಶುಕ್ರನಿಂದ ಗೃಹ ಸಂಬಂಧಿ ಕಾರ್ಯಗಳಲ್ಲಿ ಅನುಕೂಲ ಫಲವಿದೆ.

ಪರಿಹಾರ: ನಾಗ ಪ್ರಾರ್ಥನೆ, ದುರ್ಗಾ ಪ್ರಾರ್ಥನೆ ಮಾಡಿ.

ಮೀನ

ಶನೇಶ್ವರನನ್ನು ಪ್ರಾರ್ಥಿಸಿ

ಧನಾಧಿಪತಿ ಕುಜನೇ ನಿಮಗೆ ಧೈರ್ಯ-ಧೃತಿಗಳನ್ನು ತಂದುಕೊಡುತ್ತಾನೆ. ಕೊಂಚ ಹಣಕಾಸಿನ ಸಹಾಯ ಇರಲಿದೆ. ಕುಟುಂಬದಲ್ಲಿ ಸಹಕಾರ ಇರಲಿದೆ. ಹೋಟೆಲ… ವ್ಯಾಪಾರಿಗಳಿಗೆ ವಿಶೇಷ ಲಾಭ. ವಿದ್ಯಾರ್ಥಿಗಳಿಗೆ ಸ್ವ ಶ್ರಮದಿಂದ ಅನುಕೂಲ ಫಲ, ಸಹೋದರರ ಸಹಕಾರ, ಬಲ ಎರಡೂ ಇರಲಿದೆ. ಭೂ ವ್ಯಾಪಾರಿಗಳಿಗೆ ಮಾತ್ರ ಕೊಂಚ ಅಸಮಾಧಾನದ ಫಲ. ಆದರೆ ಶನೈಶ್ಚರ ಪ್ರಾರ್ಥನೆಯಿಂದ ಉತ್ತಮ ಫಲ ಹೊಂದಬಹುದು. ಉದ್ಯೋಗಿಗಳಿಗೆ ಕೊಂಚ ಆತಂಕದ ದಿನಗಳಿದ್ದಾವೆ. ಆದರೆ ಯುಗಾದಿ ನಂತರ ಅನುಕೂಲ ಫಲವನ್ನು ಕಾಣುತ್ತೀರಿ ಯೋಚನೆ ಬೇಡ.

ಪರಿಹಾರ: ಗಾಣಗಾಪುರ ದತ್ತಾತ್ರೇಯ ದರ್ಶನ ಮಾಡಿ