ಇದಕ್ಕೂ ಮುನ್ನ ನೀವು 2021ನೇ ವರ್ಷದ ಮೂಲ ಸಂಖ್ಯೆಯನ್ನು ತಿಳಿದುಕೊಳ್ಳಬೇಕು. 2021=2+0+2+1=5 ಅಂದರೆ, ಈ ವರ್ಷದ ಸಂಖ್ಯೆ 5. ಈಗ ನಿಮ್ಮ ಸಂಖ್ಯೆಯನ್ನು ತಿಳಿದುಕೊಳ್ಳಲು ಮಾಡಬೇಕಾದ ವಿಧಾನ, ನಿಮ್ಮ ಜನ್ಮ ದಿನಾಂಕ + ಜನನ ತಿಂಗಳು + 5 ಸೇರಿಸಿ. ಆಗ ಬರುವ ಫಲಿತಾಂಶವನ್ನು ಒಂದಂಕಿಗಿಳಿಸಿ (ಆ ಸಂಖ್ಯೆ 1ರಿಂದ 9 ಅಂಕಿಯ ಮಧ್ಯದಲ್ಲಿರಬೇಕು. 10, 11 ಅಥವಾ 12 ಬಂದರೆ ಇದರಲ್ಲಿನ ಎರಡು ಅಂಕಿಗಳನ್ನು ಸೇರಿಸಿ ಒಂದಂಕಿಗಿಳಿಸಿ). ಉದಾಹರಣೆಗೆ ನೀವು ಜುಲೈ 23ರಂದು ಜನಿಸಿದ್ದರೆ, 23+ 07+5= 35 (3+5)= 8. ಅಂದರೆ ನಿಮ್ಮ ಸಂಖ್ಯೆ 8.

---

ಸಂಖ್ಯೆ 1

ವೃತ್ತಿಯಲ್ಲಿ ಯಶಸ್ಸು ಸಿಗುತ್ತದೆ

ಈ ಬಾರಿ ನೀವು ಉದ್ಯೋಗದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆ ಜಂಪ್‌ ಆಗುವ ಸಾಧ್ಯತೆ ಹೆಚ್ಚಿದೆ. ನೀವು ಯಾವುದೇ ಕಂಪನಿಯಲ್ಲಿ ಇದ್ದರೂ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಹೀಗಾಗಿ ಆ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ನೀವು ವಿದ್ಯಾರ್ಥಿಯಾಗಿದ್ದರೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಯೂ ನಿಮಗೆ ಯಶಸ್ಸು ಇದೆ. ಆರ್ಥಿಕ ಪರಿಸ್ಥಿತಿ ಸಮತೋಲಿತವಾಗಿರಲಿದೆ. ಸದ್ಯ ವೈವಾಹಿಕ ಜೀವನದಲ್ಲಿ ಇರುವಂತಹ ಸಮಸ್ಯೆಗಳು ಈ ವರ್ಷದ ಮಧ್ಯ ಭಾಗದ ನಂತರ ಪರಿಹಾರ ಆಗಲಿದೆ.

ಸಂಖ್ಯೆ 2

ಕಠಿಣ ಪರಿಶ್ರಮಕ್ಕೆ ಫಲ ಸಿಗುತ್ತೆ

ಈ ವರ್ಷ ನೀವು ಕಠಿಣ ಪರಿಶ್ರಮದ ಫಲ ಅನುಭವಿಸುವ ಕಾಲ ಬರುತ್ತದೆ ಎಂದು ಭವಿಷ್ಯವಾಣಿ ಹೇಳುತ್ತಿದೆ. ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ ಹೆಚ್ಚು. ವರ್ಗಾವಣೆಯಾದ ಮೇಲೆಯೇ ನೀವು ಸೇವೆ ಸಲ್ಲಿಸುತ್ತಿರುವ ಕ್ಷೇತ್ರದಲ್ಲಿ ನಿಮ್ಮದೇ ಆದ ಛಾಪು ಮೂಡಿಸಲಿದ್ದೀರಿ. ವಿವಾಹಿತರು ತಮ್ಮ ವೈವಾಹಿಕ ಜೀವನದಲ್ಲಿ ಅನೇಕ ರೀತಿಯ ಸವಾಲು ಎದುರಿಸಬೇಕಾಗುತ್ತದೆ. ಜಗಳ ಆಡಿಕೊಳ್ಳುವಾಗ ಎಚ್ಚರಿಕೆ ಇರಲಿ. ಪರಸ್ಪರ ಅಪನಂಬಿಕೆಯನ್ನು ಬಿಟ್ಟು ಪ್ರೀತಿಯಿಂದ ಜೀವನ ಮಾಡಲು ಪ್ರಯತ್ನಿಸಿ. ಸಮಯ ಬಿಡುವು ಮಾಡಿಕೊಂಡು ಪ್ರವಾಸಿ ಸ್ಥಳಗಳಿಗೆ ಹೋದರೆ ಉತ್ತಮ. ವಿದ್ಯಾರ್ಥಿಗಳಾಗಿದ್ದರೆ ಅದೃಷ್ಟಕ್ಕಾಗಿ ಕಾಯುವ ಪ್ರಸಂಗವೇ ಇಲ್ಲ, ಶ್ರಮವಹಿಸಿದರೆ ಮಾತ್ರ ಫಲ ಸಿಗುತ್ತೆ.

ಸಂಖ್ಯೆ 3

ನಿಮಗೆ ಮಿಶ್ರಫಲ ದರ್ಶನ

ಈ ವರ್ಷ ನಿಮಗೆ ಮಿಶ್ರಫಲ ಕಂಡುಬರಲಿದೆ. ವಿಭಿನ್ನ ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ಕೌತುಕ ನಿಮ್ಮಲ್ಲಿ ಉಂಟಾಗಲಿದೆ. ಕೌತುಕ ಸೃಷ್ಟಿಸಿರೋ ವಿಷಯದಲ್ಲಿ ಗೊಂದಲಕ್ಕೆ ಒಳಗಾಗದೇ ಮುಂದೆ ನುಗ್ಗಿ, ಯಶಸ್ಸು ಹಿಂಬಾಲಿಸಲಿದೆ. ಆಧ್ಯಾತ್ಮಿಕ ಚಟಿವಟಿಕೆಗಳತ್ತ ಆಕರ್ಷಿತರಾಗುತ್ತೀರಿ. ಅದು ನಿಮ್ಮ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ತಂದುಕೊಡಲಿದೆ. ಕೆಲವು ಅದೃಷ್ಟವಂತಹ ಯುವಕರಿಗೆ ಪ್ರಿಯತಮೆಯನ್ನು ಮದುವೆ ಆಗುವ ಭಾಗ್ಯ ದೊರೆಯಲಿದೆ. ನೀವು ವಿದ್ಯಾರ್ಥಿಯಾಗಿದ್ದರೆ ಶ್ರಮವಹಿಸಿ ಅಭ್ಯಾಸ ಮಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸಾಕಷ್ಟುಅವಕಾಶಗಳು ಇವೆ. ಪತಿ, ಪತ್ನಿಯರಿಗೆ ಇದು ಸಾಮಾನ್ಯ ವರ್ಷವಾಗಲಿದ್ದು, ಭಾರೀ ಸಿಹಿಯೂ ಇಲ್ಲ, ಕಹಿಯೂ ಇಲ್ಲ.

ಸಂಖ್ಯೆ 4

ಪ್ರಾಮಾಣಿಕತೆ ಕೈ ಹಿಡಿಯುತ್ತೆ

ಪ್ರಾಮಾಣಿಕತೆ, ಬುದ್ಧಿವಂತಿಕೆ ನಿಮ್ಮ ಕೈ ಹಿಡಿಯಲಿದೆ. ಗುರಿ ತಲುಪಲು ಹಠ ಹಿಡಿದು ಉತ್ಸಾಹದಿಂದ ಶ್ರಮವಹಿಸಿ. ನಿಮ್ಮ ಶ್ರಮದ ಮೇಲೆ ಯಶಸ್ಸು ನಿಂತಿದೆ. ಎಷ್ಟೋ ವರ್ಷದಿಂದ ಕನಸು ಕಾಣುತ್ತಿದ್ದ ಆಸೆಯೊಂದು ಈ ವರ್ಷ ಈಡೇರಲಿದೆ. ಆ ಕನಸು ನನಸಾಗುವ ಸಂದರ್ಭದಲ್ಲಿ ನೀವು ಆನಂದ ಬಾಷ್ಪವನ್ನೇ ಹರಿಸುತ್ತೀರಿ. ನೀವು ಪ್ರೀತಿಯ ಬಲೆಯಲ್ಲಿ ಬಿದ್ದವರಾಗಿದ್ದರೆ ವರ್ಷವಿಡೀ ನಿಮ್ಮ ಜೀವನ ರೋಮ್ಯಾಂಟಿಕ್‌ ಆಗಿರಲಿದೆ. ಪ್ರೀತಿಯ ವಿಷಯದಲ್ಲಿ ನೀವು ತುಂಬಾ ಅದೃಷ್ಟಶಾಲಿ. ವಿದ್ಯಾರ್ಥಿಗಳಿಗೆ ವರ್ಷ ಆರಂಭ ಚೆನ್ನಾಗಿರುತ್ತೆ, ಆ ನಂತರ ಸಮಸ್ಯೆ ಎದುರಿಸಬೇಕಾಗುತ್ತೆ. ಸಂಸಾರಿಯಾದವರಿಗೆ ಚಿಕ್ಕಪುಟ್ಟಸಮಸ್ಯೆಗಳು ಎದುರಾಗಲಿವೆ. ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ವಿಷಯದಲ್ಲಿ ಅನುಕೂಲ ಇದೆ.

ಸಂಖ್ಯೆ 5

ಅಡೆತಡೆ ಎದುರಿಸಲು ಸಿದ್ಧರಾಗಿ

ಗುರಿ ಬೆನ್ನುಹತ್ತುವುದನ್ನು ಬಿಡಬೇಡಿ. ಹಲವಾರು ಸವಾಲು, ಅಡೆತಡೆಗಳನ್ನು ಎದುರಿಸಿ ಗುರಿ ತಲುಪುತ್ತೀರಿ ಅಂತ ನಿಮ್ಮ ಭವಿಷ್ಯವಾಣಿ ಹೇಳುತ್ತಿದೆ. ದೀರ್ಘ ಕಾಲದ ಆರೋಗ್ಯ ಸಮಸ್ಯೆ ಎದುರಿಸುತ್ತಿರುವರು ಈ ವರ್ಷ ಚೇತರಿಕೆ ಕಾಣಲಿದ್ದಾರೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಸಾಧಿಸುತ್ತೀರಿ. ಪ್ರೀತಿಸುವ ಜೋಡಿಗೆ ವರ್ಷದ ಕೊನೆಯಲ್ಲಿ ಮದುವೆಯ ಯೋಗವಿದೆ. ದಂಪತಿಗಳಲ್ಲಿ ಅನ್ಯೋನ್ಯ ಪ್ರೀತಿ ಮುಂದುವರಿಯಲಿದೆ. ಆದರೆ, ಕುಟುಂಬದ ಸದಸ್ಯರ ಜೊತೆ ಹೆಚ್ಚಿನ ಸಮಯ ಕಳೆಯಲು ನೀವು ಪ್ರಯತ್ನಿಸಬೇಕು. ಇಲ್ಲದಿದ್ದರೆ ಕುಟುಂಬದಲ್ಲಿ ಮನಸ್ತಾಪ, ಅಶಾಂತಿ ತಲೆದೊರುವ ಸಾಧ್ಯತೆ ಇದೆ. ಹಣಕಾಸು ವಿಚಾರದಲ್ಲಿ ಮಿಶ್ರ ಫಲ ಇದೆ. ಉದ್ಯಮದಲ್ಲಿ ಹೂಡಿಕೆ ಮಾಡಿದರೆ, ವರ್ಷದ ಕೊನೆಯಲ್ಲಿ ಲಾಭ ಬರಲಿದೆ.

ಸಂಖ್ಯೆ 6

ಪ್ರೇಮಿಗಳಿಗೆ ಅತ್ಯುತ್ತಮ ವರ್ಷ

ಪ್ರೇಮಿಗಳಿಗೆ ಇದು ಅತ್ಯುತ್ತಮ ವರ್ಷವಾಗಲಿದೆ. ನೀವಿಬ್ಬರೂ ದೂರದ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಇದರಿಂದಾಗಿ ನಿಮ್ಮ ಜೀವನದಲ್ಲಿ ತುಂಬಾ ಸಂತೋಷವನ್ನು ಅನುಭವಿಸುತ್ತೀರಿ. ನಿಮ್ಮ ಕುಟುಂಬದವರಿಂದಲೂ ನಿಮಗೆ ಕಾಳಜಿ, ಪ್ರೀತಿ ಸಿಗಲಿದೆ. ಹೀಗಾಗಿ ಸಂಬಂಧಗಳು ಉತ್ತಮವಾಗಿರುತ್ತವೆ. ನೀವು ಉದ್ಯೋಗ ಮಾಡುವವರಾಗಿದ್ದರೆ ಕೆಲಸ ಮಾಡುವ ಕಂಪನಿಯನ್ನು ಬಿಟ್ಟು ಬೇರೆ ಕಡೆ ಹೆಚ್ಚಿನ ವೇತನಕ್ಕೆ ಸೇರಲಿದ್ದೀರಿ. ಇದು ನಿಮಗೆ ಆರ್ಥಿಕ ಭದ್ರತೆ ನೀಡುವ ಜೊತೆಗೆ ಹದಗೆಟ್ಟನಿಮ್ಮ ಹಣಕಾಸಿನ ಸ್ಥಿತಿಗತಿಯನ್ನು ಹಳಿಗೆ ತರಲಿದೆ. ಪಾಲುದಾರಿಕೆ ಉದ್ಯಮದಲ್ಲಿ ತೊಡಗಿದವರು ಲಾಭಾಂಶವನ್ನು ಪಡೆಯಲಿದ್ದೀರಿ. ವೈವಾಹಿಕ ಜೀವನ ಸಂತೋಷವಾಗಿರಲಿದೆ.

ಸಂಖ್ಯೆ 7

ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತೆ

ಪ್ರಮುಖವಾಗಿ ಈ ವರ್ಷ ನಿಮಗೆ ಹಣಕಾಸಿನ ಪರಿಸ್ಥಿತಿ ಸುಭದ್ರತೆಗೆ ಬರಲಿದೆ. ಇದರಿಂದಾಗಿ ಕೆಲವು ವರ್ಷಗಳಿಂದ ನೀವು ಅನುಭವಿಸಿದ ಮಾನಸಿಕ ಕಿರಿಕಿರಿ ದೂರವಾಗಲಿದೆ. ಹೂಡಿಕೆಗೆ ಧೈರ್ಯವಾಗಿ ಮುನ್ನುಗ್ಗಬಹುದು. ಮುಂದಿನ ದಿನಗಳಲ್ಲಿ ಲಾಭಾಂಶವನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳು ನಿರ್ಲಕ್ಷ ್ಯ ವಹಿಸಿದರೆ ಅಪಾಯ ಕಟ್ಟಿಟ್ಟಬುತ್ತಿ. ಹೀಗಾಗಿ ನೀವು ತುಂಬಾ ಜಾಗರೂಕತೆಯಿಂದ ಇರಬೇಕು. ದಂಪತಿಗಳಿಗೆ ವೈವಾಹಿಕ ಜೀವನ ವರ್ಷದ ಆರಂಭ ಒತ್ತಡದಿಂದ ಕೂಡಿರಲಿದೆ. ಆದರೆ, ವರ್ಷದ ಮಧ್ಯಭಾಗದಿಂದ ಸಂಬಂಧ ಸುಧಾರಿಸಿಕೊಳ್ಳಲಿದೆ. ನೀವು ಪ್ರೀತಿಯಲ್ಲಿ ಬಿದ್ದವರಾಗಿದ್ದರೆ ಧೈರ್ಯವಾಗಿ ಕುಟುಂಬದವರಿಗೆ ತಿಳಿಸಿ, ಮದುವೆಯ ಯೋಗ ನಿಮಗಿದೆ. ವ್ಯವಹಾರದಲ್ಲಿ ಉತ್ತಮ ಪ್ರಗತಿ ಸಾಧಿಸುತ್ತೀರಿ.

ಸಂಖ್ಯೆ 8

ಸಂಗಾತಿ ಜೊತೆ ಕಿರಿಕ್‌ ಬೇಡ

ನಿಮಗೆ ಅಷ್ಟೇನೂ ಉತ್ತಮವೂ ಅಷ್ಟೇನೂ ಅನಿಷ್ಟವೂ ಅಲ್ಲದ ವರ್ಷ ಇದು. ಪ್ರಾಯೋಗಿಕವಾಗಿ ಬದುಕು ಸಾಗಿಸಬೇಕಿದೆ. ವೈವಾಹಿಕ ಜೀವನದಲ್ಲಿ ಏರಿಳಿತ ಕಾಣುತ್ತೀರಿ. ಸಂಗಾತಿಯ ಜತೆ ಜಾಸ್ತಿ ಕಿರಿಕ್‌ ಮಾಡಿಕೊಳ್ಳಲು ಹೋಗಬೇಡಿ. ಅವರ ಮನಸ್ಸು ಗೆಲ್ಲಲು ಹೊಗಳಿಕೆ ಮೂಲಕ ಪ್ರಯತ್ನಿಸಿ. ಆರೋಗ್ಯದ ಸಮಸ್ಯೆ ಕಂಡುಬರುವ ಸಾಧ್ಯತೆ ಇದೆ. ಹೀಗಾಗಿ ಆಹಾರ ಸೇವನೆಯಲ್ಲಿ ಜಾಗೃತೆ ಇರಲಿ. ನೌಕರರಾಗಿದ್ದರೆ ಸಹೋದ್ಯೋಗಿಗಳಿಂದ ಕೆಲವಷ್ಟುಅನುಕೂಲಗಳು ಕಂಡುಬರಲಿವೆ. ಉದ್ಯೋಗದಲ್ಲಿ ಒತ್ತಡ ಕಡಿಮೆ. ಬ್ಯುಸಿನೆಸ್‌ ಮಾಡುತ್ತಿರುವವರು ಬಂಡವಾಳ ಹೂಡಿಕೆಗೆ ಹಿಂದೆ ಮುಂದೆ ನೋಡುವ ಅಗತ್ಯ ಇಲ್ಲ, ನಿಮಗೆ ತುಂಬಾ ಅನುಕೂಲಕರ ವಾತಾವರಣ ಕಂಡುಬರುತ್ತಿದೆ.

ಸಂಖ್ಯೆ 9

ಪ್ರಗತಿಪರ ವರ್ಷ ನಿಮ್ಮದು

ಈ ಬಾರಿ ಪ್ರಗತಿಪರ ವರ್ಷ ನಿಮ್ಮದು. ಹಾಗೇ ಬಹಳಷ್ಟುಕಲಿಯುವುದು ಇದೆ. ಬಹುಮುಖ್ಯವಾಗಿ ಖರ್ಚು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಗಂಡ, ಹೆಂಡತಿಯ ಸಂಬಂಧ ಉತ್ತಮವಾಗಿ ಇರಲಿದೆ. ಆಗಾಗ ಚಿಕ್ಕಪುಟ್ಟಜಗಳ ಆದರೂ ಅದು ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರದು. ಮಾನಸಿಕವಾಗಿ ನೆಮ್ಮದಿಯಿಂದ ಜೀವನ ಮಾಡಬಹುದಾಗಿದೆ. ವಿದ್ಯಾರ್ಥಿಗಳಿಗೆ ನಕಾರಾತ್ಮಕ ಫಲಿತಾಂಶ ಎದುರಾಗುವ ಸಾಧ್ಯತೆ ಹೆಚ್ಚಿದ್ದು, ಜಾಗ್ರತೆಯಿಂದ ಇರಬೇಕು. ಉದ್ಯೋಗಿಗಳು ವರ್ಷದ ಆರಂಭದಲ್ಲಿ ಬಡ್ತಿ ಮತ್ತು ವೇತನ ಹೆಚ್ಚಳವನ್ನು ನಿರೀಕ್ಷಿಸಬಹುದು. ನಿಮಗೆ ಮಹಿಳೆಯಿಂದ ಸೋಂಕು ಬರುವ ಸಾಧ್ಯತೆ ಹೆಚ್ಚಿದ್ದು, ಜಾಗೃತರಾಗಿರಿ.