ಕೊಡಗಿನ ಕಣಿವೆ ರಾಮಲಿಂಗೇಶ್ವರ ದೇವಾಲಯದಲ್ಲಿ ಮರಳಿನ ಲಿಂಗ ಪ್ರತಿಷ್ಠಾಪಿಸಿ ಪೂಜಿಸಿದ್ದ ಶ್ರೀರಾಮ: ಇಂದಿಗೂ ನಡೆಯುತ್ತೆ ಪೂಜೆ!
ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲನಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪಿಸಲು ಸಿದ್ಧತೆ ನಡೆಯುತ್ತಿವೆ. ಇದೇ ವೇಳೆ ಶ್ರೀರಾಮ ಪ್ರಭು ಭರತ ಖಂಡದ ಹಲವೆಡೆ ಓಡಾಡಿದ್ದ ಎನ್ನುವ ಐತಿಹ್ಯಗಳು ಸುರುಳಿ, ಸುರಳಿಯಾಗಿ ಬಿಚ್ಚಿಕೊಳುತ್ತಿವೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಜ.15): ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲನಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪಿಸಲು ಸಿದ್ಧತೆ ನಡೆಯುತ್ತಿವೆ. ಇದೇ ವೇಳೆ ಶ್ರೀರಾಮ ಪ್ರಭು ಭರತ ಖಂಡದ ಹಲವೆಡೆ ಓಡಾಡಿದ್ದ ಎನ್ನುವ ಐತಿಹ್ಯಗಳು ಸುರುಳಿ, ಸುರಳಿಯಾಗಿ ಬಿಚ್ಚಿಕೊಳುತ್ತಿವೆ. ಅದರಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಅಂದು ರಾಮಪುರ ಎಂದೇ ಖ್ಯಾತಿಯಾಗಿದ್ದ ಇಂದಿನ ಕಣಿವೆ ಗ್ರಾಮಕ್ಕೂ ಶ್ರೀರಾಮ, ಲಕ್ಷ್ಮಣ ಹಾಗೂ ಹನುಮಂತ ಬಂದಿದ್ದರೆಂಬ ಪ್ರತೀತಿ ಇದೆ. ಅಷ್ಟೇ ಅಲ್ಲ ಶ್ರೀರಾಮ ಬಂದು ಸಂಧ್ಯಾವಂದನೆ ಮಾಡುವುದಕ್ಕಾಗಿ ಮರಳಿನಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಎಂಬುದಕ್ಕೆ ಐತಿಹ್ಯದ ಕುರುಹುಗಳಿವೆ.
ಹೌದು ರಾವಣನು ಸೀತೆಯನ್ನು ಅಪಹರಿಸಿದಾಗ ಸೀತೆಯನ್ನು ಹುಡುಕಿ ಬಂದ ರಾಮ, ಲಕ್ಷ್ಮಣ ಹಾಗೂ ಹನುಮಂತರು ಇಲ್ಲಿನ ಕಾವೇರಿ ನದಿ ದಂಡೆಯಲ್ಲಿ ಇರುವ ವ್ಯಾಘ್ರಮುನಿಯ ಕುಟೀರದಲ್ಲಿ ತಂಗುತ್ತಾರೆ. ಅಲ್ಲದೆ ಸಂಜೆಯಾಗುತ್ತಲೇ ಸಂಧ್ಯಾವಂದನೆಗೆ ಮುಂದಾಗುತ್ತಾರೆ. ಈ ವೇಳೆ ಹನುಮಂತ ಹಾಗೂ ಲಕ್ಷ್ಮಣರು ಶಿವಲಿಂಗವನ್ನು ತರಲು ಕಾಶಿಗೆ ಹೋದವರು ವಾಪಸ್ ಬರುವುದು ತಡವಾಗಿದ್ದರಿಂದ ರಾಮ ಅಲ್ಲಿಯೇ ಮರಳನ್ನು ತಂದು ಶಿವಲಿಂಗವನ್ನು ಮಾಡಿ ಪೂಜೆಸಿದನೆಂದು ಹೇಳಲಾಗುತ್ತದೆ. ನಂತರ ಈ ಶಿವಲಿಂಗಕ್ಕೆ ಚೋಳರ ಕಾಲದಲ್ಲಿ ಕಲ್ಲಿನ ಗುಡಿಯನ್ನು ನಿರ್ಮಿಸಿದರು ಎನ್ನಲಾಗುತ್ತದೆ. ದೇವಾಲಯದಲ್ಲಿ ಇಂದಿಗೂ ಮರಳಿನ ಶಿವಲಿಂಗವಿದೆ.
ಅಭಿಮನ್ಯು ಎದುರು ಭೀಮನ ಘರ್ಜನೆ: ನಿಖಿಲ್ ಚಿತ್ರಕ್ಕೆ ವಿಲನ್ ಆದ ದುನಿಯಾ ವಿಜಯ್!
ಈ ಶಿವಲಿಂಗಕ್ಕೆ ಎಲ್ಲಾ ರೀತಿಯ ಅಭಿಷೇಕ ಮಾಡುತ್ತೇವೆ. ಆದರೆ ಶಿವಲಿಂಗವನ್ನು ಒರೆಸುವುದಿಲ್ಲ, ತಾನಾಗಿಯೇ ಒಣಗುತ್ತದೆ ಎನ್ನುತ್ತಾರೆ ಅರ್ಚಕರಾದ ರಾಘವೇಂದ್ರ ಆಚಾರ್. ಇದರ ಜೊತೆಗೆ ಇತ್ತೀಚೆಗೆ ಶಿವಲಿಂಗಕ್ಕೆ ವಿವಿಧ ಲೋಹಗಳ ಪ್ರಭಾವಳಿಗಳನ್ನು ಮಾಡಿಸಿದ್ದೇವೆ. ಜೊತೆಗೆ ಶ್ರೀರಾಮ, ಲಕ್ಷ್ಮಣ ಮತ್ತು ಸೀತೆಯ ವಿಗ್ರಹಗಳನ್ನು ಮಾಡಿ ಪೂಜಿಸುತ್ತಿದ್ದೇವೆ. ಪ್ರತಿ ಶಿವರಾತ್ರಿ ಮತ್ತು ರಾಮನವಮಿಯಲ್ಲಿ ರಥೋತ್ಸವ ನಡೆಯುತ್ತದೆ ಎನ್ನುತ್ತಾರೆ ಅರ್ಚಕರು. ಹೀಗೆ ರಾಮ ಶಿವಲಿಂಗ ಪ್ರತಿಷ್ಠಾಪಿಸಿದ ಈ ದೇವಾಲಯ ರಾಮಲಿಂಗೇಶ್ವರ ದೇವಾಲಯ ನಿರ್ಮಾಣವಾಗಿದೆ ಎಂದು ಇಲ್ಲಿನ ಜನರು ಹೇಳುತ್ತಾರೆ.
ಸಂಧ್ಯಾವಂದನೆ ಮುಗಿದ ಬಳಿಕ ಲಕ್ಷ್ಮಣ ಹಾಗೂ ಹನುಮಂತರು ಶಿವಲಿಂಗವನ್ನು ತಂದರು. ಆದರೆ ಅದನ್ನು ಏನು ಮಾಡಬೇಕೆಂಬ ಜಿಜ್ಞಾಸೆ ಮೂಡಿದಾಗ ರಾಮಲಿಂಗೇಶ್ವರ ದೇವಾಲಯದ ಹಿಂಬದಿಯಲ್ಲಿ ಇರುವ ಬೆಟ್ಟದಲ್ಲಿ ಕಾಶಿಯಿಂದ ತಂದ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಯಿತು. ಹೀಗಾಗಿ ಇದು ಲಕ್ಷ್ಮಣೇಶ್ವರ ದೇವಾಲಯವಾಯಿತು ಎನ್ನುವ ಪ್ರತೀತಿ ಇದೆ. ಜೊತೆಗೆ ಬೆಟ್ಟದಲ್ಲಿ ತಪಸ್ಸು ಮಾಡುತ್ತಿದ್ದ ವ್ಯಾಘ್ರಮುನಿಯ ಗುಹೆ ಇಂದಿಗೂ ಇದೆ. ಅದರಲ್ಲಿ ಒಂದು ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಅಲ್ಲದೆ ಇದೇ ಬೆಟ್ಟದ ಎಡಭಾಗದಲ್ಲಿ ಹರಿಹರೇಶ್ವರ ದೇವಾಲಯವಿದ್ದರೆ, ಗ್ರಾಮದಲ್ಲಿ ಬಸವೇಶ್ವರ ದೇವಾಲಯವಿದೆ ಎನ್ನುತ್ತಾರೆ ದೇವಾಲಯದ ಅಧ್ಯಕ್ಷ ಸುರೇಶ್.
ಯಶ್ ರಾವಣ ಟೆಸ್ಟ್ ಲುಕ್ ಫೋಟೋ ವೈರಲ್: ರಾಕಿಂಗ್ ಸ್ಟಾರ್ ರಾವಣ ಆಗೋದು ಕನ್ಫರ್ಮ್!
ದಕ್ಷಿಣದಿಂದ ಪೂರ್ವಕ್ಕೆ ಕಾವೇರಿ ಹೊಳೆ ಹರಿದರೆ, ಉತ್ತರಕ್ಕೆ ಸ್ಮಶಾನವಿದೆ. ಇಂತಹ ವ್ಯವಸ್ಥೆ ಇರುವುದು ಕಾಶಿಯನ್ನು ಬಿಟ್ಟರೆ ಕೊಡಗಿನ ಕಣಿವೆಯಲ್ಲಿ ಮಾತ್ರ ಎನ್ನುತ್ತಾರೆ ಸುರೇಶ್. ವ್ಯಾಘ್ರಮುನಿ ಇಲ್ಲಿಯೇ ತಪಸ್ಸು ಮಾಡಿ, ಇದೇ ಗುಹೆಯಲ್ಲಿ ತಂಗುತ್ತಿದ್ದರು. ಆದರೆ ಇಂದು ಈ ಗುಹೇ ಸಾಕಷ್ಟು ಶಿಥಿಲಗೊಂಡಿದೆ. ಮುಂದಿನ ದಿನಗಳಲ್ಲಿ ಇದೆಲ್ಲವನ್ನು ಜೀರ್ಣೋದ್ಧಾರ ಮಾಡುವ ಉದ್ದೇಶ ಹೊಂದಿದ್ದೇವೆ ಎನ್ನುತ್ತಾರೆ ಸುರೇಶ್. ಒಟ್ಟಿನಲ್ಲಿ ಗ್ರಾಮದಲ್ಲಿ ಪಂಚಲಿಂಗೇಶ್ವರಗಳನ್ನು ನೋಡಬಹುದು. ಹೀಗೆ ಕೆಲವು ದಿನಗಳು ಇದ್ದ ಶ್ರೀರಾಮ, ಲಕ್ಷ್ಮಣ ಹಾಗೂ ಹನುಮಂತರು ನಂತರ ಮುಂದೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರಾಮನಾಥಪುರಕ್ಕೆ ತೆರಳಿದರು ಎನ್ನುವ ಪ್ರತೀತಿ ಇದೆ.