ಈ ಬಾರಿ ಭಾಗಶಃ ಸೂರ್ಯ ಗ್ರಹಣ ಮಾತ್ರ ಏಪ್ರಿಲ್ 30ರಂದು ನಡೆಯುತ್ತಿದ್ದು, ಇದು ಭಾರತದಲ್ಲಿ ಕಾಣಿಸುವುದಿಲ್ಲ. ಆದರೂ ಕೂಡಾ ಖಗೋಳ ಶಾಸ್ತ್ರ ಆಸಕ್ತರು ಈ ಗ್ರಹಣವನ್ನು ನೋಡಲು ಸಾಧ್ಯವಿದೆ. ಹೇಗೆ ನೋಡೋಣ.
ಈ ವರ್ಷದ ಮೊದಲ ಸೂರ್ಯಗ್ರಹಣವು ಈ ತಿಂಗಳ ಕೊನೆಯ ದಿನ ಅಂದರೆ ಏಪ್ರಿಲ್ 30ರಂದು ನಡೆಯುತ್ತಿದೆ. ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ ಸೂರ್ಯನ ಕಿರಣವು ಭೂಮಿಗೆ ಬೀಳಲು ತಡೆಯಾಗುತ್ತದೆ. ಈ ಸಂದರ್ಭದಲ್ಲಿ ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದು ಸೂರ್ಯಗ್ರಹಣ ಸಂಭವಿಸುತ್ತದೆ. ಕೆಲವೊಮ್ಮೆ ಪೂರ್ತಿಯಾಗಿ ಸೂರ್ಯನಿಗೆ ಚಂದ್ರ ಅಡ್ಡ ಬಂದರೆ ಕೆಲವು ಬಾರಿ ಭಾಗಶಃ ಅಡ್ಡ ಬರುತ್ತಾನೆ. ಈ ಬಾರಿ ಕೂಡಾ ಭಾಗಶಃ ಸೂರ್ಯಗ್ರಹಣ(partial solar eclipse) ನಡೆಯುತ್ತಿದೆ. ಪ್ರತಿ ಬಾರಿಯೂ ಅಮಾವಾಸ್ಯೆಯ ದಿನ ಮಾತ್ರ ಸೂರ್ಯಗ್ರಹಣ ಸಂಭವಿಸಲು ಸಾಧ್ಯವಾಗಿದೆ. ಹಾಗಾಗಿ ಈ ಬಾರಿಯೂ ಶನಿವಾರ(Saturday), ಅಮಾವಾಸ್ಯೆಯ ದಿನ ಗ್ರಹಣ ನಡೆಯುತ್ತಿದೆ.
ಸೂರ್ಯಗ್ರಹಣದ ಸಮಯ(Eclipse timings)
ಈ ವರ್ಷದ ಮೊದಲ ಸೂರ್ಯಗ್ರಹಣವು ಭಾರತದ ಸಮಯದ (Indian Time) ಪ್ರಕಾರ, ಏಪ್ರಿಲ್ 30 ರಂದು ಮಧ್ಯಾಹ್ನ 12:15 ಕ್ಕೆ ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲೇ ಮೊದಲು ಗೋಚರವಾಗುವುದು. ನಂತರ ಎರಡು ಗಂಟೆಯ ಬಳಿಕ ಎಂದರೆ ಮಧ್ಯಾಹ್ನ 2:11ಕ್ಕೆ ಗ್ರಹಣ ಗರಿಷ್ಠ ಮಟ್ಟ ತಲುಪುತ್ತದೆ. ಸಂಜೆ 4:07 ರವರೆಗೆ ಇರುತ್ತದೆ. ಆದರೆ ಈ ಬಾರಿ ಸೂರ್ಯ ಗ್ರಹಣವು ಭಾರತದಲ್ಲಿ ಕಂಡು ಬರುವುದಿಲ್ಲ.
ಎಲ್ಲಿ ಗ್ರಹಣ ಕಾಣಿಸಿಕೊಳ್ಳುತ್ತದೆ(Where will the eclipse be visible from?)
ವರ್ಷದ ಮೊದಲ ಸೂರ್ಯಗ್ರಹಣವು ಭಾಗಶಃವಾಗಿದೆ. ಇದು ಭಾರತದಲ್ಲಿ ಅಥವಾ ಯುಎಸ್‌ನಲ್ಲಿ ಕಾಣಿಸುವುದಿಲ್ಲ. ಬದಲಿಗೆ ಸೂರ್ಯಗ್ರಹಣವು ದಕ್ಷಿಣ ಅಮೆರಿಕದ ನೈಋತ್ಯ ಭಾಗದಲ್ಲಿ ಆಕಾಶ ಸ್ಪಷ್ಟವಾಗಿದ್ದರೆ ಕಾಣಿಸುತ್ತದೆ. ಇದಲ್ಲದೆ ಅಟ್ಲಾಂಟಿಕ್ ಸಾಗರ, ಅಂಟಾರ್ಕ್ಟಿಕಾದ ವಾಯುವ್ಯ ಕರಾವಳಿಯ ಭಾಗಗಳಲ್ಲಿ ಮತ್ತು ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ, ಚಿಲಿ, ಅರ್ಜೆಂಟೀನಾ, ಉರುಗ್ವೆಯ ಹೆಚ್ಚಿನ ಭಾಗ, ಪಶ್ಚಿಮ ಪರಾಗ್ವೆ, ನೈಋತ್ಯ ಬೊಲಿವಿಯಾ, ಆಗ್ನೇಯ ಪೆರು ಮತ್ತು ನೈಋತ್ಯ ಬ್ರೆಜಿಲ್‌ನ ಸಣ್ಣ ಪ್ರದೇಶದಿಂದ ಇದು ಗೋಚರಿಸುತ್ತದೆ ಎಂದು ಬಾಹ್ಯಾಕಾಶ ಸಂಸ್ಥೆ ನಾಸಾ ತಿಳಿಸಿದೆ.
ಸೂರ್ಯಗ್ರಹಣ 2022: ರಾಶಿ ಪ್ರಕಾರ ಪರಿಹಾರ ಕೈಗೊಂಡರೆ ಹೆಚ್ಚುವ ಲಾಭ
ನೋಡುವುದು ಹೇಗೆ?(How to watch)
ಖಗೋಳ ವದ್ಯಮಾನ ಪ್ರಿಯರಿಗೆ ಗ್ರಹಣ ನೋಡುವ ಬಯಕೆ ಇರುತ್ತದೆ. ನೀವೂ ಅವರಲ್ಲಿ ಒಬ್ಬರಾಗಿದ್ದರೆ ಭಾರತದಲ್ಲಿ ಕಾಣುವುದಿಲ್ಲ ಎಂದು ನಿರಾಶರಾಗುವ ಅವಕಾಶವಿಲ್ಲ. ಗ್ರಹಣ ವೀಕ್ಷಿಸಲು ಇಂದಿನ ತಂತ್ರಜ್ಞಾನ ಯುಗದಲ್ಲಿ ಸಾಕಷ್ಟು ಅವಕಾಶಗಳಿವೆ.
ಹೌದು, ಗ್ರಹಣ ನೋಡುವ ಬಯಕೆ ನಿಮಗಿದ್ದಲ್ಲಿ ಈ ಬಾರಿ ಆನ್‌ಲೈನ್ ಮೂಲಕ ವೀಕ್ಷಿಸಬಹುದು. ಭಾರತ ಮೂಲದ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಸ್ಟ್ರೀಮ್ ಮೂಲಕ ಭಾಗಶಃ ಸೂರ್ಯ ಗ್ರಹಣವನ್ನು ವೀಕ್ಷಿಸಬಹುದು. ಸೂರ್ಯ ಗ್ರಹಣದ ವೆಬ್‌ಕಾಸ್ಟ್ ಏಪ್ರಿಲ್ 30ರಂದು ಸೂರ್ಯ ಗ್ರಹಣದ ಅವಧಿಯನ್ನು ಪ್ರಾರಂಭದಿಂದ ಅಂತ್ಯದವರೆಗೂ ತೋರಿಸುತ್ತದೆ.
ಶನೈಶ್ಚರಿ ಅಮಾವಾಸ್ಯೆ 2022 ಯಾವಾಗ? ಶನಿ ದೋಷದ ಸಮಸ್ಯೆಗಳಿಂದ ಮುಕ್ತರಾಗಲು ನೀವೇನು ಮಾಡಬೇಕು?
ಏತನ್ಮಧ್ಯೆ, ಗೋಚರತೆಯ ಪ್ರದೇಶದೊಳಗೆ ಇರುವವರು, ಬರಿಗಣ್ಣಿನಿಂದ ನೇರವಾಗಿ ಸೂರ್ಯನನ್ನು ನೋಡಕೂಡದು. ನಾಸಾದ ಪ್ರಕಾರ, ಸೂರ್ಯನನ್ನು ಸುರಕ್ಷಿತವಾಗಿ ವೀಕ್ಷಿಸಲು ಅಥವಾ ಗ್ರಹಣವನ್ನು ವೀಕ್ಷಿಸಲು ವಿಶೇಷ ರಕ್ಷಣಾತ್ಮಕ ಕನ್ನಡಕ ಅಥವಾ ಪ್ರಮಾಣೀಕೃತ ಗ್ರಹಣ ಕನ್ನಡಕವನ್ನು ಧರಿಸಬೇಕು. ಎಕ್ಸ್‌ರೇಯಂಥ ತಪ್ಪಾದ ವಸ್ತು ಬಳಸಿ ನೋಡುವುದು ಅಥವಾ ಬರಿಗಣ್ಣಿನಿಂದ ನೇರವಾಗಿ ಗ್ರಹಣವನ್ನು ವೀಕ್ಷಿಸುವುದರಿಂದ ಕಣ್ಣಿನ ಪಾಪೆಗೆ ಸರಿ ಪಡಿಸಲಾಗದ ಹಾನಿಯುಂಟಾಗುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
