Asianet Suvarna News Asianet Suvarna News

Tradition: ಮಹಿಳೆಯರು ಸಾಷ್ಟಾಂಗ ನಮಸ್ಕಾರ ಮಾಡಬಾರದೇ?

ಸಾಮಾನ್ಯವಾಗಿ ದೇವಾಲಯಗಳಲ್ಲಿ ಸಾಷ್ಟಾಂಗ ನಮಸ್ಕಾರ ಮಾಡುವುದನ್ನು ನೋಡಿರಬಹುದು.. ಸಾಷ್ಟಾಂಗ ನಮಸ್ಕಾರ  ಎಂದರೇನು? ಹೇಗೆ ಮಾಡುವುದು? ಇದರ ಪ್ರಯೋಜನಗಳೇನು? ಮಹಿಳೆಯರು ಸಾಷ್ಟಾಂಗ ನಮಸ್ಕಾರ ಮಾಡಬಾರದೇ?

Why Women should not do the sashtanga namaskara skr
Author
First Published Nov 14, 2022, 11:26 AM IST

ದೇವಾಲಯಗಳಲ್ಲಿ ಕೆಲವರು ಮುಖ ಕೆಳಗೆ ಮಾಡಿ ಉದ್ದನೆ ಮಲಗಿ ನಮಸ್ಕಾರ ಮಾಡುವುದನ್ನು ನೀವು ನೋಡಿರಬಹುದು. ಈ ಸಾಷ್ಟಾಂಗ ನಮಸ್ಕಾರವು ದೇವರು, ದೇವತೆಗಳು, ಋಷಿಗಳು, ಹಿರಿಯರು ಇತ್ಯಾದಿಗಳಿಗೆ ನಮಸ್ಕಾರ ಮಾಡುವ ಅತ್ಯುತ್ತಮ ಮಾರ್ಗವಾಗಿದೆ. ಇದು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ಈ ಸಾಷ್ಟಾಂಗ ನಮಸ್ಕಾರ ಮಾಡುವುದು ಹೇಗೆ, ಇದರ ಅರ್ಥವೇನು, ಪ್ರಯೋಜನಗಳೇನು, ಮಹಿಳೆಯರು ಮಾಡಬಾರದೇ ಎಂಬುದನ್ನು ತಿಳಿಯೋಣ. 

ಮೊದಲನೆಯದಾಗಿ, 'ಸಾಷ್ಟಾಂಗ' ಪದದ ಸರಿಯಾದ ಅರ್ಥವನ್ನು ನಾವು ತಿಳಿದುಕೊಳ್ಳೋಣ: 
ಸಾಷ್ಟಾಂಗ = ಸ + ಅಷ್ಟ = ಅಂಗ. ಇಲ್ಲಿ, ಸ ಎಂದರೆ ಎಲ್ಲದರ ಜೊತೆಗೆ, ಅಷ್ಟ ಎಂದರೆ ಎಂಟು, ಅಂಗ ಎಂದರೆ ದೇಹದ ಅಂಗಗಳು.
ಅಂದರೆ ಸಾಷ್ಟಾಂಗ ನಮಸ್ಕಾರದ ಒಟ್ಟು ಅರ್ಥ, ನಮ್ಮ ದೇಹದ 8 ಭಾಗಗಳನ್ನು ಬಳಸಿಕೊಂಡು ನಮಸ್ಕಾರ ಮಾಡುವುದು.

ಸಾಷ್ಟಾಂಗ ನಮಸ್ಕಾರಕ್ಕೆ ಬಳಸುವ ದೇಹದ ಎಂಟು ಭಾಗಗಳು:

1. ಎರಡು ಕಾಲ್ಬೆರಳುಗಳು
2. ಎರಡು ಮೊಣಕಾಲುಗಳು
3. ಎರಡು ಅಂಗೈಗಳು
4. ಎದೆ
5. ಹಣೆ
ಇದರರ್ಥ, ದೇವರಿಗೆ ಭಕ್ತಿಪೂರ್ವಕವಾಗಿ ನಮಿಸುತ್ತಲೇ ಸಂಪೂರ್ಣ ಶರಣಾಗತಿಯನ್ನು ವ್ಯಕ್ತಪಡಿಸುವುದು. 

ದೇವರು, ಇತರ ದೇವತೆಗಳು, ಗುರುಗಳು, ಹಿರಿಯರು ಎಲ್ಲರಿಗೆ ನಮಸ್ಕಾರ, ಗೌರವ ಇತ್ಯಾದಿಗಳನ್ನು ಸಲ್ಲಿಸುವಾಗ ನಾವು ನಮ್ಮ ದೈನಂದಿನ ಜೀವನದಲ್ಲಿ ಇಂದಿಗೂ ಅನುಸರಿಸುತ್ತಿರುವ ಸನಾತನ ಧರ್ಮ ಮತ್ತು ಸಂಸ್ಕೃತಿಯ ಅತ್ಯುತ್ತಮ ಸಂಪ್ರದಾಯ ಇದಾಗಿದೆ. ಇಲ್ಲಿ ನಮ್ಮೆಲ್ಲ ಅಹಂ ಬದಿಗಿಟ್ಟು ಶರಣಾಗತಿ ಸೂಚಿಸಲಾಗುತ್ತದೆ. 

ಅಹಂ ಭಾವ ತೊಡೆದ ಶರಣಾಗತಿ
'ಸಾಷ್ಟಾಂಗ ನಮಸ್ಕಾರ'ವನ್ನು ಅತ್ಯಂತ ಭಕ್ತಿ, ನಮ್ರತೆಯಿಂದ ಮಾಡಬೇಕೇ ಹೊರತು ವಾಡಿಕೆಯ ಕಸರತ್ತಾಗಿ ಅಲ್ಲ. ಇದು ನಮ್ಮನ್ನು ನಾವು ಅರಿತುಕೊಳ್ಳುವ ಮಾರ್ಗವಾಗಿದೆ. ಇದು ಅಹಂಕಾರವನ್ನು ಹೋಗಲಾಡಿಸುತ್ತದೆ.

ಮಹಿಳೆಯರು ಸಾಷ್ಟಾಂಗ ನಮಸ್ಕಾರ ಮಾಡಬಾರದೇ?
ಶಾಸ್ತ್ರದಲ್ಲಿ ಮಹಿಳೆಯರು 'ಸಾಷ್ಟಾಂಗ ನಮಸ್ಕಾರ' ಮಾಡುವುದನ್ನು ನಿರ್ಬಂಧಿಸಲಾಗಿದೆ. ಏಕೆಂದರೆ ಅವರ ವಕ್ಷ ಸ್ಥಳ, ಹೊಟ್ಟೆ ಮತ್ತು ಸೊಂಟವು ನೆಲವನ್ನು ಸ್ಪರ್ಶಿಸಬಾರದು. ಮಹಿಳೆಯರ ವಿಷಯದಲ್ಲಿ 'ಪಂಚಾಂಗ ನಮಸ್ಕಾರ'(ದೇಹದ ಐದು ಭಾಗಗಳ ನಮಸ್ಕಾರ) ಮಾಡಲು ಸೂಚಿಸಲಾಗುತ್ತದೆ. ಇದಕ್ಕೆ ಕಾರಣ ಮಹಿಳೆಯು ತನ್ನ ಮಗುವಿಗೆ ಹಾಲುಣಿಸುತ್ತಾಳೆ ಮತ್ತು 9 ತಿಂಗಳವರೆಗೆ ತನ್ನ ಗರ್ಭದಲ್ಲಿರುವ ಮಗುವನ್ನು ರಕ್ಷಿಸುತ್ತಾಳೆ. ಇವು ಜೀವ ಕೊಡುವ, ಬೆಳೆಸುವ ಸಾಮರ್ಥ್ಯವಿರುವ ಅಂಗವಾಗಿರುವುದರಿಂದ ಅದು ಭೂಮಿಗೆ ತಾಕಬಾರದು ಎಂಬುದಾಗಿದೆ. ಮತ್ತೊಂದು ವಿಷಯವೆಂದರೆ ಹಿಂದಿನ ಕಾಲದಲ್ಲಿ ಮಹಿಳೆ ಋತುಮತಿಯಾದಾಗಲೇ ವಿವಾಹವಾಗುತ್ತಿತ್ತು. ವಿವಾಹವಾದಂದಿನಿಂದ ಪ್ರತಿ ವರ್ಷವೂ ಮಕ್ಕಳನ್ನು ಹೆರಲಾಗುತ್ತಿತ್ತು. ಇದರಿಂದ ಜೀವಿತದ ಬಹುತೇಕ ಅವಧಿ ಆಕೆ ಸದಾ ಬಸುರಿಯೋ, ಬಾಣಂತಿಯೋ, ಹಾಲುಣಿಸುವವಳೋ ಆಗಿರುತ್ತಿದ್ದಳು. ಈ ಸಮಯದಲ್ಲಿ ಸಾಷ್ಟಾಂಗ ನಮಸ್ಕಾರ ಮಾಡುವುದು ಕಷ್ಟವಾಗುತ್ತದೆ ಎಂಬ ತರ್ಕಬದ್ಧ ಕಾರಣವನ್ನೂ ನೋಡಬಹುದು. 

ಮಹಾರಾಷ್ಟ್ರದ ಗುಂಟೂರಿನಲ್ಲಿರುವ ಶ್ರೀ ಶೃಂಗೇರಿ ಶಂಕರ ಮಠದ ಶ್ರೀ ಶಾರದಾ ಪರಮೇಶ್ವರಿ ದೇವಸ್ಥಾನದಲ್ಲಿ ಮಹಿಳೆ ಮತ್ತು ಪುರುಷ ದೇವರಿಗೆ ಹೇಗೆ ನಮಸ್ಕಾರ ಮಾಡಬೇಕೆಂಬುದನ್ನು ಕಲ್ಲಿನಲ್ಲಿ ಕೆತ್ತಿ ತೋರಿಸಲಾಗಿದೆ.

ಸಾಷ್ಟಾಂಗ ನಮಸ್ಕಾರದಿಂದ ವೈಕುಂಠ ಪ್ರಾಪ್ತಿ
ಶ್ರೀ ಕೃಷ್ಣಾಮೃತಮಹಾರ್ಣವದಲ್ಲಿ ಶ್ರೀ ಮಧ್ವಾಚಾರ್ಯರು ಹೀಗೆ ಹೇಳುತ್ತಾರೆ:
ರೇಣುಕುಂಠಿತಗಾತ್ರಸ್ಯ ಕಣಾ ಯಾವಂತಿ ಭಾರತ ।
ತಾವದ್ವರ್ಷ ಸಹಸ್ರಾಣಿ ವಿಷ್ಣುಲೋಕೇ ಮಹೀಯತೇ ।। 

ಈ ರಾಶಿಯ ಜನರು ಕೆಂಪು ತಿಲಕವಿಟ್ಟರೆ ಕಷ್ಟಗಳು ಹೆಚ್ಚುತ್ತವೆ!

'ನಾವು ಭಗವಂತನ ಮುಂದೆ ‘ಸಾಷ್ಟಾಂಗ ನಮಸ್ಕಾರ’ ಮಾಡುವಾಗ ನಮ್ಮ ದೇಹವು ಆ ದೇವಸ್ಥಾನದಲ್ಲಿ ಭಗವಂತನನ್ನು ಪೂಜಿಸಿದ ‘ಭಕ್ತರ’ ಪಾದದ ನೆಲದ ಧೂಳನ್ನು ಸ್ಪರ್ಶಿಸುತ್ತದೆ. ಮತ್ತು ಹೀಗೆ ನಮ್ಮ ದೇಹಕ್ಕೆ ಎಷ್ಟು ಧೂಳಿನ ಕಣಗಳು ತಾಕುತ್ತವೆಯೋ ಅದಕ್ಕೆ ಸಮನಾದಷ್ಟು  ವರ್ಷ ‘ವಿಷ್ಣುಲೋಕ’ದಲ್ಲಿ ಬದುಕಲು ಸ್ಥಾನ ಸಿಗುತ್ತದೆ. ನೂರು ಜನ್ಮಗಳಲ್ಲಿ ಕೂಡಿದ ಪಾಪಗಳು ನಿವಾರಣೆಯಾಗುತ್ತವೆ.

  • ಸಾಷ್ಟಾಂಗ ನಮಸ್ಕಾರದ ಹೆಚ್ಚು ಮತ್ತು ಸರಿಯಾದ ಫಲಗಳನ್ನು ಪಡೆಯಲು ‘ಸಾಷ್ಟಾಂಗ ನಮಸ್ಕಾರ’ವನ್ನು ನಿಯಮಿತವಾಗಿ ಪ್ರತಿ ದಿನ ಮಾಡಬೇಕು.
  • ನಾವು ಅದನ್ನು ಯಾವುದೇ ನಿರೀಕ್ಷೆಗಳಿಲ್ಲದೆ ಮಾಡಬೇಕು.
  • ಇದು ಭಗವಾನ್ ಶ್ರೀ ಮಹಾ ವಿಷ್ಣುವಿನ ಪಾದಕಮಲಗಳಲ್ಲಿ ಸಂಪೂರ್ಣ ಶರಣಾಗತಿಯ ಸಂಕೇತವಾಗಿದೆ.
  • ‘ಸಾಷ್ಟಾಂಗ ನಮಸ್ಕಾರ’ ಮಾಡುವುದರಿಂದ ನಮ್ಮ ಅಹಂಕಾರವನ್ನು ಕೂಡ ನಾಶ ಪಡಿಸಿಕೊಳ್ಳಬಹುದು. ಆದರೆ ಇದನ್ನು ಸುಲಭವಾಗಿ ಸಾಧಿಸಲು ಸಾಧ್ಯವಿಲ್ಲ. ಅದಕ್ಕೆ ಭಗವಾನ್ ವಿಷ್ಣುವಿನ ಕಡೆಗೆ ದೀರ್ಘ ಕಾಲದ ಭಕ್ತಿ ಬೇಕು.
Follow Us:
Download App:
  • android
  • ios