ಮಂಗಳಮುಖಿಯರ ಉಲ್ಲೇಖ ಮಹಾಭಾರತದಲ್ಲೇ ಇದೆ. ಒಬ್ಬಾಕೆ ಶಿಖಂಡಿ, ಇನ್ನೊಬ್ಬಾಕೆ ಬೃಹನ್ನಳೆ. ಭೀಷ್ಮಾಚಾರ್ಯರ ಮರಣಕ್ಕೆ ಕಾರಣವಾದವಳು ಶಿಖಂಡಿ. ಇವಳ ಹಿಂದೆ ಒಂದು ರೋಚಕ ಕತೆಯಿದೆ.

ಭೀಷ್ಮ ತನ್ನ ತಮ್ಮನಾದ ವಿಚಿತ್ರವೀರ್ಯನಿಗೆ ಮದುವೆ ಮಾಡಿಸಲೆಂದು ಕಾಶಿಯಿಂದು ಮೂವರು ರಾಜಕುಮಾರಿಯರನ್ನು ತರುತ್ತಾನೆ. ಅವರಲ್ಲಿ ಹಿರಿಯವಳಾದ ಅಂಬೆ, ತಾನು ಸೌಭದ ರಾಜ ಸಾಲ್ವನನ್ನು ಪ್ರೀತಿಸಿದ್ದು, ಅವನನ್ನೇ ಮದುವೆಯಾಗುವುದಾಗಿ ಭೀಷ್ಮನಲ್ಲಿ ತಿಳಿಸಿ ಸಾಲ್ವನಲ್ಲಿಗೆ ಹೋಗುತ್ತಾಳೆ. ಸಾಲ್ವ ಆಕೆಯನ್ನು ತಿರಸ್ಕರಿಸುತ್ತಾನೆ. ಅಂಬೆ ಭೀಷ್ಮನಲ್ಲಿಗೆ ಬಂದು, ತನ್ನನ್ನು ಮದುವೆಯಾಗುವಂತೆ ಕೇಳಿಕೊಳ್ಳುತ್ತಾಳೆ. ಭೀಷ್ಮನೂ ನಿರಾಕರಿಸುತ್ತಾನೆ. ರೊಚ್ಚಿಗೆದ್ದ ಅಂಬೆ ಭೀಷ್ಮನ ಗುರುಗಳಾದ ಪರಶುರಾಮರನ್ನೇ ಕರೆತರಿಸಿ ಭೀಷ್ಮರನ್ನು ಶಿಕ್ಷಿಸಲು ಪ್ರಯತ್ನಿಸಿದರೂ ಅದರಲ್ಲಿ ಸಫಲಳಾಗುವುದಿಲ್ಲ. ಆಕೆ ಕ್ರೋಧದಿಂದ, ಮುಂದಿನ ಜನ್ಮದಲ್ಲಿ ಗಂಡಾಗಿ ಹುಟ್ಟಿ ನಿನ್ನನ್ನು ಕೊಲ್ಲುತ್ತೇನೆ ಎಂದು ಶಪಥ ಮಾಡಿ ಅಗ್ನಿಪ್ರವೇಶ ಮಾಡುತ್ತಾಳೆ.

 

ಮುಂದೆ ಪಾಂಚಾಲ ರಾಜ್ಯದ ದೊರೆ ದ್ರುಪದನ ಮಗಳಾಗಿ ಹುಟ್ಟುತ್ತಾಳೆ. ಈಕೆಗೆ ಶಿಖಂಡಿ ಎಂಬ ಹೆಸರು. ಈಕೆಯನ್ನು ಗಂಡು ಎಂಬಂತೆಯೇ ಪೋಷಿಸುತ್ತಾರೆ ತಂದೆತಾಯಿಗಳು. ರಾಜಕುಮಾರನಂತೆಯೇ ಬೆಳೆಯುತ್ತಾಳೆ. ಹಸ್ತಿನಾಪುರಕ್ಕೆ ಬಂದು ದ್ರೋಣಾಚಾರ್ಯರಲ್ಲಿ ಯುದ್ಧವಿದ್ಯೆಗಳನ್ನೂ ಕಲಿಯುತ್ತಾಳೆ. ದಶಾರ್ಣ ದೇಶದ ದೊರೆ ಹಿರಣ್ಯವರ್ಮ ಎಂಬಾತನ ಮಗಳನ್ನು ಈಕೆಗೆ ಮದುವೆ ಮಾಡಿ ಕೊಡಲಾಗುತ್ತದೆ. ಮೊದಲ ರಾತ್ರಿ, ಈಕೆ ಗಂಡಲ್ಲ ಹೆಣ್ಣು ಎಂಬುದು ಆ ವಧುವಿಗೆ ತಿಳಿಯುತ್ತದೆ. ಹತಾಶಳಾದ, ಸಿಟ್ಟಿಗೆದ್ದ ಆಕೆ ತವರಿಗೆ ಮರಳಿ ತಂದೆಗೆ ವಿಷಯ ತಿಳಿಸುತ್ತಾಳೆ. ಈ ಮೋಸದಿಂದ ಸಿಟ್ಟಿಗೆದ್ದ ಹಿರಣ್ಯವರ್ಮ, ದ್ರುಪದನನ್ನು ಶಿಕ್ಷಿಸಲು ದಂಡೆತ್ತಿ ಬರುತ್ತಾನೆ. ತನ್ನಿಂದ ಹೀಗಾಯಿತಲ್ಲ ಎಂದು ನೊಂದ ಶಿಖಂಡಿ, ಕಾಡಿಗೆ ಪರಾರಿಯಾಗುತ್ತಾನೆ.

 

ಒಬ್ಬಾಕೆ ಐವರ ಪತ್ನಿಯಾಗುವ ದ್ರೌಪದಿ ಪದ್ಧತಿ ನಿಜಕ್ಕೂ ಭಾರತದಲ್ಲಿದೆ!

 

.ಕಾಡಿನಲ್ಲಿ ಈಕೆಗೆ ಸ್ಥೂಣಾಕರ್ಣನೆಂಬ ಯಕ್ಷನ ಭೇಟಿಯಾಗುತ್ತದೆ. ಈಕೆ ಕಾಡಿ ಬೇಡಿ, ಸ್ಥೂಣಾಕರ್ಣನ ಪುರುಷತ್ವವನ್ನು ಸ್ವಲ್ಪ ದಿನಗಳ ಕಾಲಕ್ಕೆ ಆತನಿಂದ ಸಾಲ ಪಡೆದು, ತನ್ನ ಸ್ತ್ರೀತ್ವವನ್ನು ಆತನಿಗೆ ನೀಡಿ, ಪುರುಷನಾಗಿ ಊರಿಗೆ ಮರಳುತ್ತಾಳೆ. ತಾನು ಪುರುಷನೆಂದು ಹೆಂಡತಿಗೆ ಸಾಬೀತುಪಡಿಸುತ್ತಾನೆ.ಇತ್ತ ಕಾಡಿನಲ್ಲಿದ್ದ ಯಕ್ಷ ಸ್ಥೂಣಾಕರ್ಣನನ್ನು ಯಕ್ಷರ ದೊರೆ ಕುಬೇರ ಭೇಟಿಯಾದಾಗ, ಆತ ಸ್ತ್ರೀಯಾಗಿರುವುದು ಗೊತ್ತಾಗುತ್ತದೆ. ಸಿಟ್ಟಿಗೆದ್ದ ಆತ ಇನ್ನು ಮುಂದೆ ನೀನು ಸ್ತ್ರೀಯಾಗಿಯೇ ಇರು ಎಂದು ಶಪಿಸುತ್ತಾನೆ.

 

ಕೃಷ್ಣ ಹೇಳುವ ಈ ಐದು ಮಾತು ನಮಗೆ ಸ್ಪೂರ್ತಿಯಾಗಲಿ!

 

ಹೀಗೆ ಸ್ಥೂಣಾಕರ್ಣನಿಗೆ ಸ್ತ್ರೀತ್ವವೂ ಶಿಖಂಡಿಗೆ ಪುರುಷತ್ವವೂ ಶಾಶ್ವತ ಆಗುತ್ತವೆ. ಇದೇ ಶಿಖಂಡಿ ಮುಂದೆ ಭೀಷ್ಮರ ವಧೆಗೆ ಕಾರಣನಾಗುತ್ತಾನೆ. ಕುರುಕ್ಷೇತ್ರ ಯುದ್ಧದಲ್ಲಿ ಏನು ಮಾಡಿದರೂ ಭೀಷ್ಮರು ಸೋಲದೆ ಹೋದಾಗ, ಶಿಖಂಡಿಯನ್ನು ಮುಂದೆ ನಿಲ್ಲಿಸಿದರೆ ಕೈ ಚೆಲ್ಲುವೆನೆಂಬ ಗುಟ್ಟನ್ನು ಭೀಷ್ಮರೇ ಧರ್ಮರಾಯನಿಗೆ ಹೇಳುತ್ತಾರೆ. ಅದರಂತೆ ಮರುದಿನ ಭೀಷ್ಮರ ಜೊತೆ ಅರ್ಜುನ ಯುದ್ಧ ಮಾಡುತ್ತಿರುವಾಗ ಅವರ ಮುಂದೆ ಶಿಖಂಡಿ ಬರುತ್ತಾನೆ. ಆತನನ್ನು ನೋಡಿ ಭೀಷ್ಮರು ಬಿಲ್ಲು ಕೆಳಗಿಡುತ್ತಾರೆ. ಆಗ ಅರ್ಜುನ ಅವರನ್ನು ಬಾಣಗಳ ಮಳೆ ಸುರಿಸಿ ಮಲಗಿಸಿಬಿಡುತ್ತಾನೆ.

 

ಈ ಶಿಖಂಡಿಯನ್ನು ಮುಂದೆ ಕುರುಕ್ಷೇತ್ರ ಯುದ್ಧದ ಕೊನೆಯ ದಿನ, ರಾತ್ರಿ ಪಾಂಡವರ ಶಿಬಿರಗಳ ಮೇಲೆ ದಾಳಿ ಮಾಡಿದ ಅಶ್ವತ್ಥಾಮ ಕೊಂದು ಹಾಕುತ್ತಾನೆ.ಮಹಾಭಾರತದಲ್ಲಿ ಬರುವ ಇನ್ನೊಬ್ಬ ಮಂಗಳಮುಖಿ ಎಂದರೆ ಬೃಹನ್ನಳೆ. ಸ್ವರ್ಗಕ್ಕೆ ಭೇಟಿ ನೀಡಿದ ಅರ್ಜುನ, ತನ್ನನ್ನು ರಮಿಸದೆ ಇದ್ದುದರಿಂದ ಕೋಪಗೊಂಡ ಊರ್ವಶಿ ನೀನು ನಪುಂಸಕನಾಗು ಎಂದು ಅರ್ಜುನನಿಗೆ ಶಾಪ ಕೊಟ್ಟಿರುತ್ತಾಳೆ.

 

ಪೌರಾಣಿಕ ಕತೆಗಳ ಪರಮ ಪ್ರೇಮಿಗಳಿವರು

 

ಈ ಶಾಪವನ್ನು ಒಂದು ವರ್ಷದ ಅಜ್ಞಾತವಾಸದ ಅವಧಿಯಲ್ಲಿ ಅರ್ಜುನ ಸದುಪಯೋಗ ಮಾಡಿಕೊಳ್ಳುತ್ತಾನೆ. ಮಂಗಳಮುಖಿ ರೂಪ ತಾಳಿ, ಬೃಹನ್ನಳೆ ಎಂಬ ಹೆಸರಿಟ್ಟುಕೊಂಡು ಅಂತಃಪುರದ ಹೆಣ್ಣುಮಕ್ಕಳಿಗೆ ನಾಟ್ಯ ಹೇಳಿಕೊಡುತ್ತ ಕಾಲ ಕಳೆಯುತ್ತಾನೆ.