ದಸರಾ 2022: ವಿಜಯ ದಶಮಿ ಯಾವಾಗ? ಮುಹೂರ್ತ, ಪೂಜಾ ವಿಧಾನ ಇಲ್ಲಿದೆ..
ದಸರಾದಂದು ಆಯುಧಗಳನ್ನು ಪೂಜಿಸುವ ಸಂಪ್ರದಾಯವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ವರ್ಷ ವಿಜಯ ದಶಮಿ ಯಾವಾಗ, ಪೂಜಾ ಮುಹೂರ್ತವೇನು,ಪೂಜಾ ವಿಧಾನವೇನು?
ವಿಜಯದಶಮಿ ಎಂದೂ ಕರೆಯಲ್ಪಡುವ ದಸರಾ ಹಬ್ಬವು ಕೆಡುಕಿನ ಮೇಲೆ ಒಳಿತಿನ ವಿಜಯವನ್ನು ಆಚರಿಸುತ್ತದೆ. ರಾವಣ ದೇವಿ ಸೀತೆಯನ್ನು ಅಪಹರಿಸಿ ಲಂಕೆಗೆ ಕರೆದೊಯ್ದ. ಪರಿಣಾಮವಾಗಿ, ಭಗವಾನ್ ರಾಮನು ರಾಕ್ಷಸ ರಾಜ ರಾವಣನನ್ನು ಕೊಂದ. 'ದಸರಾ'ವು ಈ ದಿನದ ಸ್ಮರಣಾರ್ಥವಾಗಿದೆ. ದಸರಾ ಪದದಲ್ಲಿ ‘ದಸ್’ ಎಂದರೆ ಹತ್ತು ಮತ್ತು ‘ಹಾರ’ ಎಂದರೆ ದಿನ. ಹತ್ತು ತಲೆಯವನನ್ನು ಸಂಹರಿಸಿದ ದಿನ ಇದಾಗಿದೆ. ಅಷ್ಟೇ ಅಲ್ಲ, ದುರ್ಗೆಯು ಮಹಿಷಾಸುರನನ್ನು ಕೊಂದ ದಿನ ಕೂಡಾ ಇದೇ ಆಗಿದೆ.
ದಸರಾ 2022 ಯಾವಾಗ?
ಈ ಬಾರಿಯ ವಿಜಯ ದಶಮಿ ಅಂದರೆ ದಸರಾವನ್ನು 5 ಅಕ್ಟೋಬರ್ 2022ರಂದು ಆಚರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವರಾತ್ರಿ 26 ಸೆಪ್ಟೆಂಬರ್ 2022ರಿಂದ ಪ್ರಾರಂಭವಾಗುತ್ತದೆ ಮತ್ತು 4 ಅಕ್ಟೋಬರ್ 2022ರವರೆಗೆ ಇರುತ್ತದೆ. ನಂತರದ ದಿನವೇ ದಸರಾ.
ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ, ದಸರಾವನ್ನು ಅಶ್ವಿನ್ ಮಾಸದ ಶುಕ್ಲ ಪಕ್ಷದ ದಶಮಿ ದಿನಾಂಕದಂದು ಆಚರಿಸಲಾಗುತ್ತದೆ. ಇದು ಅಕ್ಟೋಬರ್ 4, 2022ರಂದು ಮಧ್ಯಾಹ್ನ 2:20ರಿಂದ ಮರುದಿನ, ಅಕ್ಟೋಬರ್ 5ರಂದು ಮಧ್ಯಾಹ್ನ 12ರವರೆಗೆ ನಡೆಯುತ್ತದೆ. ಅಕ್ಟೋಬರ್ 5ರಂದು ದಸರಾ ಆಚರಿಸಲಾಗುತ್ತದೆ.
ವಿಜಯ ಮುಹೂರ್ತ - 02:26 PM ರಿಂದ 03:13 PM
ಅವಧಿ - 00 ಗಂಟೆಗಳು 48 ನಿಮಿಷಗಳು
Navratri 2022 day 4: ತಾಯಿ ಕೂಷ್ಮಾಂಡಾ ಪೂಜೆಯಿಂದ ವಯಸ್ಸು, ಕೀರ್ತಿ, ಆರೋಗ್ಯ ಪ್ರಾಪ್ತಿ
ವಿಜಯ ದಶಮಿ ಪೂಜಾ ವಿಧಾನ(worshipping method)
ಬೆಳಿಗ್ಗೆ ಸ್ನಾನ ಮಾಡಿದ ನಂತರ, ಶ್ರೀರಾಮ, ಸೀತಾ ಮಾತೆ ಮತ್ತು ಆಂಜನೇಯನನ್ನು ಪೂಜಿಸಿ. ಅವರಿಗೆ ಸಿಹಿತಿಂಡಿಗಳು ಮತ್ತು ಹಣ್ಣುಗಳನ್ನು ನೀಡಿ. ಈ ದಿನ ಶಮೀ ವೃಕ್ಷವನ್ನು ಪೂಜಿಸುವುದರಿಂದ ಕೂಡಾ ಫಲ ಸಿಗುತ್ತದೆ.
ದಸರಾದಂದು ಆಯುಧ ಪೂಜೆ ಏಕೆ ಮಾಡುತ್ತಾರೆ?
ದಸರಾ ಎಂದರೆ ಕೆಡುಕಿನ ಮೇಲೆ ಒಳ್ಳೆಯದು ಮತ್ತು ಸುಳ್ಳಿನ ಮೇಲೆ ಸತ್ಯದ ವಿಜಯದ ಆಚರಣೆ. ನಂಬಿಕೆಯ ಪ್ರಕಾರ, ದಸರಾದಂದು ಆಯುಧಗಳನ್ನು ಪೂಜಿಸುವ ಸಂಪ್ರದಾಯವು ವರ್ಷಗಳಿಂದಲೂ ಇದೆ. ಭಾರತೀಯ ಸೇನೆಯು ಈ ದಿನದಂದು ಶಸ್ತ್ರ ಪೂಜೆಯನ್ನು ಮಾಡುತ್ತದೆ. ಅಜ್ಞಾತವಾಸದ ಸಮಯದಲ್ಲಿ ಪಾಂಡವರು ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲಾ ಬನ್ನಿ ಮರದ ಬುಡದಲ್ಲಿ ಬಚ್ಚಿಡುತ್ತಾರೆ. ವಿಜಯದಶಮಿ ಅಂದರೆ ತಮ್ಮ ಅಜ್ಞಾತವಾಸ ಮುಗಿದ ದಿನ ಶಮಿ ವೃಕ್ಷದ ಬುಡದಲ್ಲಿ ಬಚ್ಚಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲ ತೆಗೆದು ವಿರಾಟರಾಜನ ಶತ್ರುಗಳ ವಿರುದ್ಧ ಪಾಂಡವರು ವಿಜಯ ಸಾಧಿಸುತ್ತಾರೆ.
ಅಕ್ಟೋಬರ್‌ನಲ್ಲಿ 7 ಗ್ರಹಗಳ ಗೋಚಾರ; ಈ ರಾಶಿಗಳಿಗೆ ಸಮೃದ್ಧಿ ಸಮಾಚಾರ
ದಸರಾ ದಿನ ರಾವಣ ದಹನ, ದುರ್ಗಾ ವಿಸರ್ಜನೆ
ದಸರಾ ಹಬ್ಬದ ದಿನ ದೇಶಾದ್ಯಂತ ರಾವಣ ದಹನ ಕಾರ್ಯಕ್ರಮ ನಡೆಯುತ್ತದೆ. ರಾವಣ, ಕುಂಭಕರ್ಣ ಹಾಗೂ ಮೇಘನಾದರ ದೊಡ್ಡ ಆಕೃತಿಗಳನ್ನು ಮಾಡಿ ಅವುಗಳಿಗೆ ಬೆಂಕಿಯ ಬಾಣ ಹೊಡೆದು ದಹಿಸಲಾಗುತ್ತದೆ. ಆ ಮೂಲಕ ರಾಮನ ವಿಜಯವನ್ನು ಹಾಗೂ ಕೆಟ್ಟದ್ದರ ವಿರುದ್ಧ ಒಳಿತಿನ ಗೆಲುವನ್ನು ಸಂಭ್ರಮಿಸಲಾಗುತ್ತದೆ. ಅಂತೆಯೇ ಜನರು ತಮ್ಮಲ್ಲಿರುವ ಕೆಟ್ಟ ಗುಣಗಳನ್ನು ದಹಿಸಬೇಕೆಂಬುದನ್ನೂ ಇದು ಸೂಚಿಸುತ್ತದೆ. ರಾಮನ ಈ ಗೆಲುವಿನ 20 ದಿನಗಳ ಬಳಿಕ ಆತ ಅಯೋಧ್ಯೆಗೆ ಮರಳಿದ ದಿನವನ್ನು ದೀಪಾವಳಿಯಾಗಿ ಆಚರಿಸಲಾಗುತ್ತದೆ. ಮತ್ತೊಂದೆಡೆ ಮನೆಯಲ್ಲಿ ಹಾಗೂ ತಮ್ಮ ಏರಿಯಾಗಳಲ್ಲಿ ದುರ್ಗೆಯನ್ನು ಕೂರಿಸಿದವರು 10 ದಿನಗಳ ಪೂಜೆಯ ಬಳಿಕ ಆಕೆಯನ್ನು ನೀರಿನಲ್ಲಿ ಮುಳುಗಿಸುವ ಮೂಲಕ ವಿಸರ್ಜಿಸುತ್ತಾರೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.