Asianet Suvarna News Asianet Suvarna News

ವಿವಾಹದಲ್ಲಿ ಪತಿ ಪತ್ನಿಗೆ ಅರುಂಧತಿ ನಕ್ಷತ್ರ ತೋರಿಸೋದ್ಯಾಕೆ?

ದಕ್ಷಿಣ ಭಾರತದ ವಿವಾಹ ಆಚರಣೆಗಳಲ್ಲಿ ಅರುಂಧತಿ ನಕ್ಷತ್ರ ತೋರಿಸುವುದೊಂದು ವಾಡಿಕೆ. ವಧು ವರರಿಬ್ಬರನ್ನೂ ಪುರೋಹಿತರು ಹೊರಾಂಗಣಕ್ಕೆ ಕರೆದುಕೊಂಡು ಹೋಗಿ ಕಾಣದ ಅರುಂಧತಿ ನಕ್ಷತ್ರದತ್ತ ಕೈ ತೋರುವಂತೆ ಮಾಡುತ್ತಾರೆ. ಇದರ ಹಿಂದೆ ಮಹದುದ್ದೇಶವಿದೆ. ಅದೇನು ಗೊತ್ತಾ?

What is the purpose of showing Arundhati star in Indian marriages skr
Author
First Published Dec 5, 2022, 1:21 PM IST

'ಅರುಂಧತಿ ವಶಿಷ್ಠಾಭ್ಯಾಂ ನಮಃ'

ದಕ್ಷಿಣ ಭಾರತದ ಮದುವೆಗಳಲ್ಲಿ, ಮದುವೆಯಾದ ನಂತರ, ಜೋಡಿಯನ್ನು ಮಂಟಪದಿಂದ ಹೊರಾಂಗಣಕ್ಕೆ ಕರೆದೊಯ್ಯಲಾಗುತ್ತದೆ. ಪ್ರಕಾಶಮಾನವಾಗಿ ಗೋಚರಿಸುವ ನಕ್ಷತ್ರದಿಂದ ಪ್ರಾರಂಭಿಸಿ ಅರುಂಧತಿ ನಕ್ಷತ್ರವನ್ನು ಕಂಡುಹಿಡಿಯಲು ಅವರಿಗೆ ಸೂಚನೆಗಳನ್ನು ನೀಡಲಾಗುತ್ತದೆ. ನಕ್ಷತ್ರ ಕಾಣಿಸದಿದ್ದರೂ ವರನು ವಧುವಿಗೆ ಅರುಂಧತಿ ನಕ್ಷತ್ರವನ್ನು ತೋರುವಂತೆ ಕೈ ಬೆರಳನ್ನು ಚಾಚುತ್ತಾನೆ. ಈ ಆಚರಣೆಯ ಹಿಂದಿನ ಉದ್ದೇಶವೇನು ಎಂಬುದನ್ನು ಇಂದು ತಿಳಿಸುತ್ತೇವೆ. 

ಇದು ಕೇವಲ ಅರುಂಧತಿ ನಕ್ಷತ್ರವಲ್ಲ, ಬದಲಿಗೆ ನಾವು ಯಾವಾಗಲೂ ಅರುಂಧತಿ ವಸಿಷ್ಠ ಎಂಬ ಹೆಸರನ್ನು ಜೋಡಿಯಾಗಿ ತೆಗೆದುಕೊಳ್ಳಬೇಕು. ವೈದಿಕ ಗ್ರಂಥಗಳಲ್ಲಿ ಋಷಿ ವಸಿಷ್ಠ (ಶ್ರೀರಾಮನ ಗುರು) ದೇವಿ ಅರುಂಧತಿಯನ್ನು ವಿವಾಹವಾದರು. ಅವರಿಬ್ಬರೂ ಪರಿಪೂರ್ಣ ದಂಪತಿಯಾಗಿದ್ದರು.  ಇಬ್ಬರೂ ಬೇರೆ ಬೇರೆ ವರ್ಣ ವ್ಯವಸ್ಥೆಯಿಂದ ಬಂದರೂ, ಅವರು ಒಬ್ಬರನ್ನೊಬ್ಬರು ಗೌರವಿಸುತ್ತಿದ್ದರು ಮತ್ತು ಎಲ್ಲರಿಂದ ಗೌರವವನ್ನು ಪಡೆದಿದ್ದರು. ಅವರ ವೈವಾಹಿಕ ಜೀವನ(married life) ಎಲ್ಲ ದಂಪತಿಗೆ ಮಾದರಿಯಾಗಿತ್ತು. ಅವರು ಒಬ್ಬರಿಗೊಬ್ಬರು ಹೇಗಿದ್ದರು ಎಂಬುದನ್ನು ಸೂಚಿಸುವಂತೆ ಜೋಡಿಯಾಗಿರುವ ಎರಡು ನಕ್ಷತ್ರಪುಂಜಗಳಿಗೆ ಅರುಂಧತಿ ವಸಿಷ್ಠ(Arundhati Vasista) ಎಂದು ಹೆಸರಿಸಲಾಗಿದೆ. 

ಹೌದು, ಅರುಂಧತಿ ವಸಿಷ್ಠ ಎಂಬುದು ಎರಡು ನಕ್ಷತ್ರಪುಂಜಗಳ ರಾಶಿ(Star constellations). ಸಾಮಾನ್ಯವಾಗಿ ಎರಡು ನಕ್ಷತ್ರಗಳ ಪುಂಜವು ಜೊತೆಗಿದ್ದಾಗ ಒಂದು ನಕ್ಷತ್ರವು ಮಧ್ಯದಲ್ಲಿದ್ದರೆ ಇನ್ನೊಂದು ಕೇಂದ್ರ ನಕ್ಷತ್ರದ ಸುತ್ತ ಸುತ್ತುತ್ತಿರುತ್ತದೆ. ಆದರೆ ಅರುಂಧತಿ ವಸಿಷ್ಠ ನಕ್ಷತ್ರಪುಂಜಗಳು ಹಾಗಲ್ಲ. ಅವು ಪರಸ್ಪರ ಒಂದನ್ನೊಂದು ಸುತ್ತುತ್ತವೆ. ಎರಡರಲ್ಲಿ ಯಾವುದೇ ಒಂದು ಮಾತ್ರ ಕೇಂದ್ರದಲ್ಲಿ ಉಳಿಯದೆ ಸಮಾನವಾಗಿ ಒಂದರ ಸುತ್ತ ಮತ್ತೊಂದು ಸುತ್ತುತ್ತದೆ. ಜೊತೆಯಾಗಿ ಚಲಿಸುತ್ತವೆ. ವಿವಾಹಿತ ದಂಪತಿ ಹೇಗಿರಬೇಕು ಎಂಬುದನ್ನು ಇದು ಸೂಚಿಸುತ್ತದೆ. ಅಂದರೆ, ಆದರ್ಶ ದಾಂಪತ್ಯದಲ್ಲಿ ಯಾರೊಬ್ಬರದೂ ಮೇಲುಗೈಯಾಗದೆ ಇಬ್ಬರೂ ಸಮಾನ ಸ್ಥಾನ ಹೊಂದಿರಬೇಕು. ಇದರಲ್ಲಿ ಇನ್ನೊಂದು ಆಶ್ಚರ್ಯಕರ ಸಂಗತಿಯೆಂದರೆ, ನಮ್ಮ ಪೂರ್ವಜರು ಅಂತಹ ಅವಳಿ ನಕ್ಷತ್ರ ವ್ಯವಸ್ಥೆಯು ಅಸ್ತಿತ್ವದಲ್ಲಿರುವುದನ್ನು ಆಧುನಿಕ ಉಪಕರಣಗಳ್ಯಾವುದರ ಸಹಾಯವೂ ಇಲ್ಲದೆ ಗುರುತಿಸಿದ್ದರು.  

Garuda Purana: ಈ 4 ವಿಷಯಗಳು ಮನುಷ್ಯನ ಅವನತಿಗೆ ಕಾರಣವಾಗಬಹುದು, ಎಚ್ಚರ!

ಆದ್ದರಿಂದ, ಹಳೆಯ ದಿನಗಳಲ್ಲಿ ಪುರೋಹಿತರು ವಿವಾಹಿತ ದಂಪತಿಗಳಿಗೆ ಈ ನಕ್ಷತ್ರಪುಂಜವನ್ನು ತೋರಿಸಿ ದಾಂಪತ್ಯ ಜೀವನ ಹೀಗಿರಲಿ ಎಂದು ಹಾರೈಸುತ್ತಿದ್ದರು.  ಆದರೆ ಇಂದು ಆಚರಣೆಯ ಉದ್ದೇಶವರಿಯದೆ ಸುಮ್ಮನೆ ಏನೋ ತಮಾಷೆಯಾಗಿ ಆಕಾಶ ನೋಡಿ ಬರುತ್ತಾರೆ. 

ನಕ್ಷತ್ರ ಕಾಣಿಸದು!
ವಾಸ್ತವವಾಗಿ, ಈ ನಕ್ಷತ್ರಗಳು ಗೋಚರವಾಗುವುದು ಬೆಳಗಿನ ಜಾವ 3.45ರ ಸಮಯದಲ್ಲಿ. ಆದರೆ, ಈ ಸಮಯದಲ್ಲಿ ವಿವಾಹವಾಗದ ಕಾರಣ ಹಾಗೂ ನಮ್ಮಲ್ಲಿ ಯಾರಿಗೂ ಸಮಯವಿಲ್ಲದ ಕಾರಣ, ಪುರೋಹಿತರು ಈಗ ದಂಪತಿಗೆ ಹಿರಿಯರ ಆಶೀರ್ವಾದವನ್ನು ತೆಗೆದುಕೊಂಡು ಬಂದು ಅರುಂಧತಿ ನಕ್ಷತ್ರವನ್ನು ನೋಡಿದಂತೆ ಮಾಡುವ ಸಂಪ್ರದಾಯ ಮಾಡಿಸುತ್ತಾರೆ. ಈ ಮೂಲಕ ಪತಿ ಪತ್ನಿಯ ಸುತ್ತ ತಿರುಗಬಾರದು ಅಥವಾ ಹೆಂಡತಿ ತನ್ನ ಗಂಡನ ತಾಳಕ್ಕೆ ತಕ್ಕಂತೆ ಕುಣಿಯಬಾರದು. ಯಾರೊಬ್ಬರೂ ಪ್ರಾಬಲ್ಯ ಸಾಧಿಸಬಾರದು. ಬದಲಿಗೆ ಇಬ್ಬರೂ ಸಮಾನವಾಗಿ ಗೌರವ ಕೊಟ್ಟು ಗೌರವ ತೆಗೆದುಕೊಳ್ಳಬೇಕು. ಇಬ್ಬರೂ ಸಮಾನರೆಂದು ಪರಿಗಣಿಸಿ ಬಾಳಬೇಕೆಂದು ಸೂಚ್ಯವಾಗಿ ಹೇಳಲಾಗುತ್ತದೆ.  ಈ ಸಂದೇಶದಂತೆಯೇ ಎಲ್ಲ ದಂಪತಿಯೂ ಬಾಳ್ವೆ ನಡೆಸಿದರೆ ದಾಂಪತ್ಯ ಜೀವನ ಮಧುರ ಗೀತೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಅಲ್ಲವೇ?

Worshipping Shani: ಶನಿಯನ್ನು ಪೂಜಿಸುವಾಗ ಹೀಗೆ ಮಾಡಿದ್ರೆ ಅಪಾಯ ತಪ್ಪಿದ್ದಲ್ಲ!

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios