Mahashivratri 2022: ಶಿವರಾತ್ರಿಗೆ ರಾಜ್ಯದ ಈ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ
ಶಿವ ಮುಕ್ಕೋಟಿ ದೇವರಲ್ಲಿ ಅತಿ ಪ್ರಮುಖನಾದವ. ಆತನಿಗೆ ಭಾರತದಾದ್ಯಂತ ಬಹಳಷ್ಟು ಭಕ್ತರಿದ್ದಾರೆ. ಹಾಗೇ ದೊಡ್ಡ ಸಂಖ್ಯೆಯ ದೇವಾಲಯಗಳು ಆತನಿಗಾಗಿ ಮೀಸಲಾಗಿವೆ. ಕರ್ನಾಟಕದಲ್ಲೂ ಶಿವನ ಬಹಳಷ್ಟು ದೇವಾಲಯಗಳು ಪ್ರಖ್ಯಾತವಾಗಿವೆ. ಶಿವರಾತ್ರಿಯ ದಿನ ಈ ದೇವಾಲಯಗಳಿಗೆ ಭೇಟಿ ನೀಡಿ ಪುನೀತರಾಗಿ.
ಸಾಮಾನ್ಯವಾಗಿ ಯಾವುದೇ ಹಬ್ಬಹರಿದಿನಗಳಿರಲಿ, ದೇವಾಲಯಕ್ಕೆ ಭೇಟಿ ನೀಡುವ ಅಭ್ಯಾಸ ನಮ್ಮಲ್ಲಿದೆ. ಈಗಂತೂ ಬಂದಿರುವುದು ಮಹಾಶಿವರಾತ್ರಿ. ಭಕ್ತರು ಶಿವನ ದೇವಾಲಯಕ್ಕೆ ತೆರಳಿ ಆತನನ್ನು ಕಣ್ತುಂಬಿಕೊಂಡು ವಿಶೇಷ ಪೂಜೆ ಮಾಡಿಸಲು ಸಜ್ಜಾಗುತ್ತಿದ್ದಾರೆ. ಈ ನಡುವೆ ನಮ್ಮ ರಾಜ್ಯದಲ್ಲಿ ಯಾವೆಲ್ಲ ಶಿವ ದೇವಾಲಯಗಳು ಅತ್ಯಂತ ಪ್ರಸಿದ್ಧಿ ಪಡೆದಿವೆ ಎಂದು ಹೇಳುತ್ತೇವೆ. ಸಾಧ್ಯವಾದರೆ ಇವುಗಳಲ್ಲೊಂದು ದೇವಾಲಯಕ್ಕೆ ಶಿವರಾತ್ರಿಯಂದು ಭೇಟಿ ನೀಡಿ.
ಮಂಜುನಾಥ ದೇವಾಲಯ, ಧರ್ಮಸ್ಥಳ(Dharmasthala)
ಧರ್ಮಸ್ಥಳದ ಮಂಜುನಾಥ ಅತಿ ಕಾರಣಿಕ ಕ್ಷೇತ್ರ. ಮಾತಿಗೆ ಮಂಜುನಾಥ ಎಂದೇ ಹೆಸರಾಗಿರುವ ಈ ಕ್ಷೇತ್ರದ ಹೆಸರೇಳಿ ಯಾರೂ ಸುಳ್ಳಾಡಲಾರರು. ಇಲ್ಲಿ ಜೈನರ ಆಡಳಿತದಲ್ಲಿ ಶೈವ ದೇವಾಲಯ ನಡೆಯುತ್ತಿರುವುದು ವಿಶೇಷ. ಕರ್ನಾಟಕದ ಅತಿ ಪ್ರಸಿದ್ಧ ಶಿವ ದೇವಾಲಯ ಇದಾಗಿದೆ.
ಕೋಟಿಲಿಂಗೇಶ್ವರ ದೇವಾಲಯ, ಕೋಲಾರ(Kolar)
ಕೋಲಾರ ಜಿಲ್ಲೆಯ ಕಮ್ಮಸಂದ್ರದಲ್ಲಿನ ಈ ದೇವಾಲಯದ ವಿಶೇಷವೆಂದರೆ ಇಲ್ಲಿ ಜಗತ್ತಿನಲ್ಲೇ ಒಂದೆಡೆ ಅತಿ ಹೆಚ್ಚು ಶಿವ ಲಿಂಗಗಳನ್ನು ಕಾಣಬಹುದು. ದೇವಾಲಯದಲ್ಲಿ 108 ದೊಡ್ಡ ಲಿಂಗಗಳಿದ್ದು, 35 ಎತ್ತರದ ನಂದಿ ವಿಗ್ರಹಗಳಿವೆ.
ಮಹಾಬಲೇಶ್ವರ ದೇವಾಲಯ, ಗೋಕರ್ಣ(Gokarna)
ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿರುವ ಮಹಾಬಲೇಶ್ವರ ದೇವಾಲಯ ಗೋಕರ್ಣದಲ್ಲಿದೆ. ಕಾರವಾರದ ಅರೇಬಿಯನ್ ಸಮುದ್ರಕ್ಕೆ ಮುಖ ಮಾಡಿ ನಿಂತಿರುವ ಈ ದೇವಾಲಯದಲ್ಲಿ ಶಿವನ ಆತ್ಮಲಿಂಗವಿದೆ ಎಂಬ ಕಾರಣಕ್ಕೆ ಇದೊಂದು ಮುಕ್ತಿ ಕ್ಷೇತ್ರ ಎಂದು ಹೆಚ್ಚು ಪ್ರಸಿದ್ಧಿ ಪಡೆದಿದೆ.
Maha Shivratri 2022: ಶಿವರಾತ್ರಿಯಂದು ಈ ರುದ್ರಾಕ್ಷಿ ಧರಿಸಿ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ನಿಮ್ಮದೇ!
ಮುರುಡೇಶ್ವರ ದೇವಾಲಯ, ಭಟ್ಕಳ(Bhatkal)
ಜಗತ್ತಿನ ಎರಡನೇ ಅತೀ ಎತ್ತರದ ಶಿವನ ಪ್ರತಿಮೆ ಹೊಂದಿರುವ ಸ್ಥಳ ಶ್ರೀ ಮುರುಡೇಶ್ವರ(Murudeshwar) ಕ್ಷೇತ್ರ. ಭಟ್ಕಳದಲ್ಲಿರುವ ಈ ದೇವಾಲಯವು ಮೂರು ದಿಕ್ಕಿನಲ್ಲಿ ಸಮುದ್ರದಿಂದ ಆವೃತವಾಗಿದ್ದು, ಒಂದು ಕಡೆ ಕಂದುಕ ಬೆಟ್ಟವಿದೆ. ಅತಿ ವಿಹಂಗಮ ನೋಟ ಕೊಡುವ ಈ ದೇವಾಲಯದ ಶಿವ ಮಹಿಮೆಯೂ ಅಪಾರವಾಗಿದೆ.
ಬಡವಿ ಲಿಂಗ, ಹಂಪಿ(Hampi)
ಭಾರತದ ಅತಿ ಎತ್ತರದ ಶಿವಲಿಂಗಗಳಲ್ಲಿ ಒಂದು ಹಂಪಿಯ ಬಡವಿಲಿಂಗ. 15ನೇ ಶತಮಾನದಲ್ಲಿ ಒಬ್ಬ ರೈತ ಮಹಿಳೆ ಇಲ್ಲಿ ಲಿಂಗವನ್ನು ಸ್ಥಾಪಿಸಿದ್ದಾಳೆ. ಹಾಗಾಗಿ, ಈ ಲಿಂಗಕ್ಕೆ ಬಡವಿ ಲಿಂಗ ಎಂದೇ ಹೆಸರು ಬಂದಿದೆ. ಇಲ್ಲಿಗೆ ಹೋದವರು ಮಹಾಶಿವರಾತ್ರಿಯಂದು ಹಂಪಿಯ ವಿರೂಪಾಕ್ಷ ದೇವಾಲಯಕ್ಕೆ ಭೇಟಿ ನೀಡುವುದನ್ನೂ ಮರೆಯಬೇಡಿ. ತುಂಗಭದ್ರಾ ತಟದಲ್ಲಿರುವ ಈ ವಿರೂಪಾಕ್ಷ ದೇವಾಲಯವನ್ನು ವಿಜಯನಗರ ಅರಸರು ನಿರ್ಮಿಸಿದ್ದಾರೆ.
ಶಿವೋಹಂ ದೇವಾಲಯ, ಬೆಂಗಳೂರು(Bangalore)
ಶಿವೋಹಂ ದೇವಾಲಯವು ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿದ್ದು, ಶಿವರಾತ್ರಿಯಂದು ಇಲ್ಲಿಗೆ ಹತ್ತಿರತ್ತಿರ 3 ಲಕ್ಷ ಭಕ್ತರು ಆಗಮಿಸುತ್ತಾರೆ. ಇಲ್ಲಿ 65 ಅಡಿ ಎತ್ತರದ ಶಿವನ ಮೂರ್ತಿಯಿದ್ದು, ಭಕ್ತರನ್ನು ಆಕರ್ಷಿಸುತ್ತದೆ.
Mahashivratri 2022: ಮಕ್ಕಳು ಬೇಕೆಂದರೆ ಮಹಾಶಿವರಾತ್ರಿಯಂದು ಈ ಪರಿಹಾರ ಕೈಗೊಳ್ಳಿ
ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನ, ಬೆಂಗಳೂರು
ಬೆಂಗಳೂರಿನ ಶ್ರೀನಿವಾಸಪುರದ ಬಳಿ ಓಂಕಾರೇಶ್ವರ ಗುಡ್ಡದಲ್ಲಿ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನವಿದೆ. ಇಲ್ಲಿ 12 ಜ್ಯೋತಿರ್ಲಿಂಗ ಹಾಗೂ ಓಂಕಾರೇಶ್ವರ ಜ್ಯೋತಿರ್ಲಿಂಗವಿದೆ. ಕರ್ನಾಟಕದ ಅತಿ ದೊಡ್ಡ ದೇವಾಲಯಗಳಲ್ಲಿ ಇದು ಒಂದಾಗಿದೆ.
ಹೊಯ್ಸಳೇಶ್ವರ ದೇವಾಲಯ, ಹಳೇಬೀಡು(Halebidu)
ಹಳೇಬೀಡಿನಲ್ಲಿರು ಈ ಬೃಹತ್ ದೇವಾಲಯವು ಹೊಯ್ಸಳೇಶ್ವರ ಹಾಗೂ ಶಾಂತಲೇಶ್ವರ ಶಿವಲಿಂಗಗಳನ್ನು ಹೊಂದಿದೆ. ಹೊಯ್ಸಳರ ರಾಜ ವಿಷ್ಣುವರ್ಧನ(King Vishnuvardhana)ನು ಹಳೇಬೀಡಿನ ಕೇದಾರೇಶ್ವರ ಹಾಗೂ ಹೊಯ್ಸಳೇಶ್ವರ ದೇವಾಲಯ ಕಟ್ಟಿಸಿದ್ದಾನೆ.
ಭೈರವೇಶ್ವರ ದೇವಾಲಯ, ಯಾಣ(Yana)
ಯಾಣದ ಶಿಲಾ ಸೌಂದರ್ಯ, ಹಸಿರ ಪ್ರಕೃತಿಯ ನಡುವೆ ನಿಂತಿದ್ದಾನೆ ಭೈರವೇಶ್ವರ. ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಯಾಣ ಪೌರಾಣಿಕವಾಗಿಯೂ ಮಹತ್ವದ ಸ್ಥಳವಾಗಿದೆ. ಶಿಲಾ ಕೈಲಾಸದಲ್ಲಿ ಶಿವ ನಿಂತಂತೆ ಇಲ್ಲಿ ಭೈರವೇಶ್ವರ ಕಾಣಿಸುತ್ತಾನೆ.
ಈ ಶಿವರಾತ್ರಿಗೆ ಇವುಗಳಲ್ಲಿ ಯಾವೊಂದು ದೇವಾಲಯಕ್ಕೆ ಕೂಡಾ ಭೇಟಿ ನೀಡಿ ಪುನೀತರಾಗಬಹುದು.