ಸ್ವಾಮಿ ಕೊರಗಜ್ಜ ಎಂಬ ದೈವದ ಕಾರಣಿಕ ತುಳುನಾಡಿನಲ್ಲಿ ಮಾತ್ರವಲ್ಲ, ಅಲ್ಲಿಂದ ಜೀವನೋಪಾಯಕ್ಕಾಗಿ ಬೆಂಗಳೂರಿನಲ್ಲೂ ಮುಂಬಯಿಯಲ್ಲೂ ಹೋಗಿ ನೆಲೆಸಿದವರಿಗೂ ಚಿರಪರಿಚಿತ. ತುಳುನಾಡಿನ ಬಂಟ, ಬಿಲ್ಲವ, ಜೈನ ಮುಂತಾದ ಸಮುದಾಯದವರು ಬೇಸಿಗೆಯಲ್ಲಿ ದೈವಾರಾಧನೆಯ ಸೀಸನ್‌ನಲ್ಲಿ ತಮ್ಮ ತವರಿಗೆ ತಪ್ಪದೆ ಹೋಗಿ ಕೊರಗಜ್ಜ ಸ್ವಾಮಿಯ ಆರಾಧನೆಯಲ್ಲಿ ಭಾಗವಹಿಸಿ ಬರುತ್ತಾರೆ. ಇಂಥ ಕೊರಗಜ್ಜ ಸ್ವಾಮಿ ದೈವದ ಭಕ್ತಿಗೀತೆಯೊಂದನ್ನು ಇಂಟರ್ನೆಟ್‌ನಲ್ಲಿ ವೈರಲ್ ಆದಾತ ಒಬ್ಬ ಪುಟ್ಟ ಹುಡುಗ, ಹೆಸರು ಕಾರ್ತಿಕ್ ಹಿರ್ಗಾನ.

ಕಾರ್ಕಳದ ಹಿರ್ಗಾನ ಗ್ರಾಮದ ಕಾರ್ತಿಕ್‌ ಹಾಡಿರುವ ಕೊರಗಜ್ಜ ದೈವದ ಕುರಿತ ಹಾಡು ಭಾರಿ ಜನಮನ್ನಣೆ ಗಳಿಸಿದೆ. ಬಾಲಕನ ತಂದೆ ತಾಯಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹುಟ್ಟಿನಿಂದಲೇ ವಿಶೇಷಚೇತನನಾಗಿರುವ ಕಾರ್ತಿಕ್‌ ಕ್ರಮೇಣ ನಡೆಯಲಾರಂಭಿಸಿದ್ದು, ದೈವಾನುಗ್ರಹವೆಂದೇ ಹೆತ್ತವರು ನಂಬಿದ್ದಾರೆ. ಕಾರ್ತಿಕ್‌ನ ಧ್ವನಿ ಇಂಪಾಗಿದೆ. ಇದೀಗ ಕಾರ್ತಿಕ್‌ ಹಾಡಿರುವ ಕೊರಗಜ್ಜ ದೈವದ ಕುರಿತ ಹಾಡು ವೈರಲ್ ಆಗಿದೆ. ಬಾಲಕನ ಅತ್ಯಂತ ಮಧುರವಾಗಿರುವ ಧ್ವನಿಯ ಜೊತೆಗೆ ಕೊರಗಜ್ಜ ಸ್ವಾಮಿ ಕೋಲದ ವಿಡಿಯೋ ಚಿತ್ರಣವೂ ಸೇರಿಕೊಂಡು ನೋಡುಗ ಕೇಳುಗರ ಕಣ್ಣು ಕಿವಿಗಳನ್ನು ತಂಪಾಗಿಸುತ್ತವೆ. ಸಣ್ಣ ವಯಸ್ಸಿನಲ್ಲೇ ಸುಂದರ ಹಾಗೂ ಸುಲಲಿತವಾಗಿ ಹಾಡುವ ಸಾಮರ್ಥ್ಯ ಕಾರ್ತಿಕ್‌ಗೆ ಆ ದೈವವೇ ನೀಡಿದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಹುಡುಗನ ಹಾಡು ವೈರಲ್ ಆಗುತ್ತಿದ್ದಂತೆ ಇದನ್ನು ಗಮನಿಸಿದ ಕಾರ್ಕಳ ದೈವಾರಾಧಕರ ಸಂಘದ ಪದಾಧಿಕಾರಿಗಳು ಕಾರ್ತಿಕ್‌ ಮನೆಗೆ ಭೇಟಿ ನೀಡಿ ಆತನನ್ನು ಸನ್ಮಾನಿಸಿದರು. 

ತುಳುನಾಡಿನವರು ತಮ್ಮ ಬೆಲೆಬಾಳುವ ಸ್ವತ್ತು ಅಥವಾ ದನ ಕರು ಕಾಣೆಯಾದರೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತುವ ಕ್ರಮವಿಲ್ಲ. ಬದಲು ಕೊರಗಜ್ಜನ ಮೊರೆ ಹೋಗುತ್ತಾರೆ. ಕುತ್ತಾರು, ಪಡುಪಣಂಬೂರು ಮುಂತಾದ ಕಡೆ ಸ್ವಾಮಿ ಕೊರಗಜ್ಜನ ದೈವಮಾಡಗಳಿವೆ. ಇಲ್ಲಿ ಪ್ರತಿವರ್ಷ ಅಜ್ಜನಿಗೆ ಅದ್ಧೂರಿ ಕೋಲ ನಡೆಯುವುದು ಹಾಗೂ ಭಕ್ತರು ಹರಕೆಗಳನ್ನು ಸಲ್ಲಿಸುವುದು ರೂಢಿ.

ಪಣಂಬೂರಿನ ಓಡಿ ಮತ್ತು ಅಚ್ಚು ಮೈರದಿ ಎಂಬ ಕೊರಗ ದಂಪತಿಗಳಿಗೆ ಜನಿಸಿದ ಮಗು ತನಿಯ ಕೊರಗ. ಬಾಲ್ಯದಲ್ಲಿ ಪೋಷಕರ ವಿಯೋಗವಾಗಿ ಅನಾಥನಾದಾಗ ಮೈರಕ್ಕ ಬೈದದಿ ಎಂಬ ಮಹಿಳೆ ಸಾಕುತ್ತಾಳೆ. ಬೈದರೆ ಜನಾಂಗದ ಕೆಲಸ ಸೇಂದಿ ಮಾಡಿ ಮಾರುವುದು. ತನಿಯ ಬಾಲ್ಯದಿಂದಲೇ ಅಸಾಮಾನ್ಯ ವ್ಯಕ್ತಿಯಾಗಿದ್ದ. ಒಮ್ಮೆ ಸೇಂದಿ ತುಂಬು ಎಂದಾಗ, ಹಂಡೆಗೆ ತುಂಬಿದ. ಅದನ್ನು ಎಷ್ಟು ತೆಗೆದರೂ ಖಾಲಿಯಾಗಲೇ ಇಲ್ಲ. ಕಡೆಗೆ ಕದ್ರಿ ಮಂಜುನಾಥನಿಗೆ ಹರಕೆ ಹೊತ್ತು ಅಡಕೆ ಎಲೆಯಿಂದ ಪೇಂಣಲಿ ಮಾಡಿಸುತ್ತಾರೆ. ಸಮಸ್ಯೆ ನಿವಾರಣೆಯಾಗುತ್ತದೆ. ಏಳು ಜನ ಹೊರಲಾಗದ್ದನ್ನು ತನಿಯ ಒಬ್ಬನೇ ಹೊರುವ. ಇದೆ ರೀತಿ ಸೇಂದಿಗಾಗಿ ಮಾಗಿದ ಹಣ್ಣುಗಳನ್ನು ತರಲು ಹೋದಾಗ ಮಾಯವಾದ/ಕಲ್ಲಾದ. ಈತ ಮುಂದೆ ತನ್ನ ನೆಲದ ಜನರನ್ನು ಕಾಯುವ ಭರವಸೆ ನೀಡಿದ. ಅದಕ್ಕೆ ಪ್ರತಿಯಾಗಿ ಇಲ್ಲಿನ ಜನರೂ ಏಳು  ಕಲ್ಲುಗಳಲ್ಲಿ ಕೊರಗಜ್ಜನ ಸಾನಿಧ್ಯವನ್ನು ಸ್ಥಾಪಿಸಿ ಪೂಜಿಸತೊಡಗಿದರು. 

ರಕ್ಷಿತ್ ಶೆಟ್ಟಿ ಕೈ ಹಿಡಿದ ಕೊರಗಜ್ಜನ ಪವಾಡ ...

ಇಂದಿಗೂ ಕಳೆದು ಹೋದ ವಸ್ತುಗಳಿಗೆ ಜನರು ಮೊದಲು ಹೇಳುವ ಹೆಸರು ಕೊರಗಜ್ಜ, ಆತನನ್ನು ಮನದಲ್ಲೇ ನೆನೆದು ಮುಂದೆ ಹರಕೆ ತೀರಿಸುತ್ತಾರೆ. ಸಾಧ್ಯವಾದರೆ ಹೋಗಿ ತಾಂಬೂಲ, ಬೀಡಿ, ಸೇಂದಿ, ಮಧ್ಯ ಇಟ್ಟು ಪ್ರಾರ್ಥಿಸುತ್ತಾರೆ. ಮಂಗಳೂರಿನ ಕುತ್ತಾರು ಕಟ್ಟೆಯ ಬಳಿ ಕೊರಗಜ್ಜನ ಸಾನಿಧ್ಯವಿದೆ. ಈ ಕಟ್ಟೆಯ ಬಳಿ ಸಂಜೆಯ ನಂತರ ಯಾವುದೇ ಬೆಂಕಿ ಕಿಡಿಯನ್ನು ಸಹ ಹೊತ್ತಿಸುವುದಿಲ್ಲ, ಹೊತ್ತಿಸಬಾರದು ಎಂಬ ನಿಯಮವಿದೆ. ವಾಹನಗಳು ಆ ರಸ್ತೇಲಿ ದೀಪ ಹಾಕದೆ ಬರುತ್ತಾರೆ. ಯಾರಾದರೂ ಮೀರಿದರೆ ಅವರಿಗೆ ಕೆಡುಕೇ ಆಗಿದ್ದು ಅನೇಕ ಉದಾಹರಣೆ ಇವೆ. ಇತ್ತೀಚೆಗೆ ಹೀಗೆ ಟೀಕೆ ಮಾಡಿದ ವ್ಯಕ್ತಿಯೊಬ್ಬ ತೀವ್ರ ಅನಾರೋಗ್ಯ ಸಮಸ್ಯೆ ಉಂಟಾಗಿ ಮತ್ತೆ ಸೇವೆ ಸಲ್ಲಿಸಿ ನಿರಾಳನಾದ. ಈ ರೀತಿಯಾಗಿ, ದೇವಸ್ವ ಅಪಹರಣ, ಅಶ್ಲೀಲ ಪಧಾರ್ಥಗಳನ್ನು ಹುಂಡಿಯಲ್ಲೂ ಹಾಕಿ ಕಷ್ಟಗಳನ್ನು ಅನುಭವಿಸಿದ್ದಾರೆ.

ಕೊರಗಜ್ಜನ ಆಶೀರ್ವಾದ ಪಡೆದ ದರ್ಶನ್, ಜತೆಗೆ ಯಾರಿದ್ದರು? ...

ಕುತ್ತಾರು ಕಟ್ಟೆಯ ಮೂಲ ದೇವರುಗಳಾದ ಪಂಜನ್ದಾಯ ಮತ್ತು ಬಂಟ ದೈವಗಳ ನಡುವೆ ಹೊರಗಿನಿಂದ ಬಂದ ಅರಸು ದೇವತೆಗಳು ಕೂರುತ್ತಾರೆ, ಆಗ ಮೂಲ ದೇವತೆಗಳು ಕೊರಗಜ್ಜನ ಸಹಾಯ ಬೇಡಿ ಅದಕ್ಕೆ ಪರ್ಯಾಯವಾಗಿ ಪೂಜಾ ಸ್ಥಾನವನ್ನು ನೀಡುತ್ತಾರೆ. ಕೊರಗಜ್ಜ ದನದ ರಕ್ತವನ್ನು ಚೆಲ್ಲಿ ಅರಸು ದೇವತೆಗಳನ್ನು ಓಡಿಸುತ್ತಾನೆ.. ಡೆಕ್ಕಾರು, ಬೊಲ್ಯ, ಸೋಮೇಶ್ವರ, ದೇರಳಕಟ್ಟೆ, ಕುತ್ತಾರು ಸೇರಿ ಒಟ್ಟು 7 ಕಲ್ಲುಗಳು ಕೋಲ ಸೇವೆಗೆ ಸೇರುತ್ತದೆ. ಸಂಜೆಯ ನಂತರ ಇಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. ಅಜ್ಜನಿಗೆ ನೀಡುವ ಅಗೆಲು ಸೇವೆ ಮತ್ತು ಕೋಲದಲ್ಲಿ ಹುರುಳಿ, ಬಸಳೆ, ಮೀನು, ಕೋಳಿ,ಉಪ್ಪಿನಕಾಯಿ, ಚಕ್ಕಲಿ,ಸೇಂದಿ, ಮಧ್ಯ, ತಾಂಬೂಲ ಅಜ್ಜನಿಗೆ ಬಡಿಸಲಾಗುತ್ತದೆ. ಕೊರಗತನಿಯ ಪಾತ್ರಿಗಳು ಮೈಯೆಲ್ಲಾ ಕಪ್ಪು ಬಣ್ಣ ಬಳೆದು, ಸೊಂಟಕ್ಕೆ ಪೇಂಣಲಿ (ಕವಚ) ಗೆಜ್ಜೆಯ ಸಮೇತ ಕಟ್ಟಿ ಕೈಯಲ್ಲೊಂದು ಬೆತ್ತವನ್ನು ಹಿಡಿದು ಆವೇಶದಿಂದ ಕುಣಿಯುತ್ತಾರೆ. ನಂತರ ಭಕ್ತರಿಗೆ ನುಡಿ ಕೊಡುತ್ತಾರೆ.

ಕೊರಗಜ್ಜನ ಪವಾಡ ಇಂದಿಗೂ ನಡೆಯುತ್ತಾ? ...

ಅಂತೂ ಕಾರ್ತಿಕ್ ಹಾಡಿದ ಹಾಡು ಮೂರು ಗಂಟೆಯಲ್ಲಿ ಹದಿನಾರು ಸಾವಿರ ವ್ಯೂ ಕಂಡಿದೆ. ಇನ್ನೂ ವೈರಲ್ ಆಗಲಿ, ಕಾರ್ತಿಕ್‌ ಭವ್ಯ ಭವಿಷ್ಯ ದೊರೆಯಲಿ ಎಂಬುದು ನಮ್ಮ ಹಾರೈಕೆ.