Asianet Suvarna News Asianet Suvarna News

ವೇದವ್ಯಾಸರು ಮಹಿಳೆಯರಿಗೆ ಬಿಗ್ ಸ್ಕ್ರೀನಲ್ಲಿ ಮಹಾಭಾರತ ತೋರಿಸಿದ್ರಾ!

ಮಹಾಭಾರತಕ್ಕೆ ವೇದವ್ಯಾಸರು ಸೃಷ್ಟಿಕರ್ತರೂ ಹೌದು, ಅದರೊಳಗಿನ ಪಾತ್ರವೂ ಹೌದು, ಅದರ ವೀಕ್ಷಕರೂ ಹೌದು. 

Vedavyasa Creator of Hindu Epic Mahabharata but Was it Written During the Incidents or later
Author
First Published Sep 13, 2023, 12:01 PM IST | Last Updated Sep 13, 2023, 12:01 PM IST

- ಮಹಾಬಲ ಸೀತಾಳಭಾವಿ 

ಕುರುಕ್ಷೇತ್ರದಲ್ಲಿ ಮಹಾಭಾರತದ 18 ದಿನಗಳ ಯುದ್ಧ ಮುಗಿದಿತ್ತು. ಕೌರವರ ಸಂತತಿ ಬಹುತೇಕ ನಿರ್ನಾಮವಾಗಿತ್ತು. ಎಲ್ಲಾ 100 ಕೌರವರೂ ಯುದ್ಧದಲ್ಲಿ ಸತ್ತಿದ್ದರು. ಅವರ ತಂದೆ ತಾಯಿ ಧೃತರಾಷ್ಟ್ರ ಹಾಗೂ ಗಾಂಧಾರಿ ಬಹಳ ದುಃಖಿತರಾಗಿದ್ದರು. ಪಾಂಡವರ ಕಡೆಯಲ್ಲೂ ಅಪಾರ ಸಾವುನೋವು ಉಂಟಾಗಿತ್ತು. ಎರಡೂ ಕಡೆ ಲಕ್ಷಾಂತರ ಯೋಧರು ಹತರಾಗಿದ್ದರು. ಕೌರವರ ರಾಜಧಾನಿ ಹಸ್ತಿನಾಪುರದಲ್ಲಿ ದುಃಖ ಮಡುಗಟ್ಟಿತ್ತು. 

ಆ ಕಾಲದಲ್ಲಿ ಯುದ್ಧಭೂಮಿಗೆ ಮಹಿಳೆಯರು ಹೋಗುವಂತಿರಲಿಲ್ಲ. ಆದರೆ ಕೌರವರು ಮತ್ತು ಪಾಂಡವರ ಕಡೆ ಹೆಂಗಳೆಯರಿಗೆ ಯುದ್ಧದಲ್ಲಿ ತಾವು ಕಳೆದುಕೊಂಡ ಕುಟುಂಬಸ್ಥರನ್ನು ಕೊನೆಯ ಬಾರಿ ಒಮ್ಮೆ ನೋಡಿಬಿಡಬೇಕು ಎಂಬ ಆಸೆಯಾಯಿತು. ಎರಡೂ ಕಡೆಯವರು ತಮ್ಮ ಗಂಡ, ಗಂಡು ಮಕ್ಕಳು, ಮೊಮ್ಮಕ್ಕಳು, ಅಜ್ಜ, ಅಪ್ಪ, ಸಂಬಂಧಿಕರು ಹೀಗೆ ಬಹಳಷ್ಟು ಆಪ್ತರನ್ನು ಕಳೆದುಕೊಂಡಿದ್ದರು. ಕುರುಕ್ಷೇತ್ರದಲ್ಲಿ ಹೆಣವಾಗಿ ಬಿದ್ದ ಅವರ ಮುಖವನ್ನಾದರೂ ಕಡೆಯದಾಗಿ ನೋಡಬೇಕೆಂದು ಅವರೆಲ್ಲ ಹಂಬಲಿಸಿದರು. ಹೀಗಾಗಿ ಗಂಗಾ ನದಿಯ ದಡದಲ್ಲಿ ಎಲ್ಲರೂ ಒಂದೆಡೆ ಸೇರಿ ವೇದವ್ಯಾಸರನ್ನು ಕುರಿತು ಪ್ರಾರ್ಥನೆ ಮಾಡಿದರು. ಕುಂತಿ, ಗಾಂಧಾರಿ, ದ್ರೌಪದಿ, ಸುಭದ್ರಾ, ಉತ್ತರಾ ಹೀಗೆ ಕೌರವ ಮತ್ತು ಪಾಂಡವರ ಕಡೆಯ ಎಲ್ಲ ಮಹಿಳೆಯರೂ ಅಲ್ಲಿದ್ದರು.

ಲಕ್ಷ್ಮಿ, ಸರಸ್ವತಿ ಜಗಳಕ್ಕೆ ಇಂದ್ರ ಬಲಿಪಶು ಆಗಿ ಆನೆಯಾಗಿದ್ದು ಹೇಗೆ?

ಮಹಾಭಾರತವನ್ನು ಬರೆದವರು ಮಹಾಮುನಿ ವೇದವ್ಯಾಸ. ಅವರಿಗೆ ಯುದ್ಧದ ಪ್ರತಿಯೊಂದು ಕ್ಷಣವೂ ತಿಳಿದಿತ್ತು. ಅವರೇ ಬರೆದ ಮಹಾಭಾರತದಲ್ಲಿ ಅವರೂ ಒಂದು ಪಾತ್ರವಾಗಿದ್ದರು. ಹೆಂಗಳೆಯರ ದುಃಖವನ್ನು ಅವರಿಂದ ನೋಡಲು ಸಾಧ್ಯವಾಗಲಿಲ್ಲ. ಹೀಗಾಗಿ ಗಂಗಾ ನದಿ ದಡಕ್ಕೆ ಹೋಗಿ ಅವರನ್ನು ಸಮಾಧಾನ ಮಾಡಲು ಯತ್ನಿಸಿದರು. ಕೊನೆಗೆ ಅವರಿಗೆಲ್ಲ ಮಹಾಭಾರತದ ಯುದ್ಧದ ನಿರ್ಣಾಯಕ ಕ್ಷಣಗಳನ್ನು ತೋರಿಸುವ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.

ಧೃತರಾಷ್ಟ್ರ ಮತ್ತು ಪಾಂಡವರನ್ನೂ ಅಲ್ಲಿಗೆ ಕರೆಸಲಾಯಿತು. ಅಲ್ಲೊಂದು ಪವಾಡ ಘಟಿಸುವುದಿತ್ತು. ಮಹರ್ಷಿ ವೇದವ್ಯಾಸರು ಗಂಗಾ ದಡದಲ್ಲಿ ಪದ್ಮಾಸನ ಹಾಕಿ ಕುಳಿತು ಆಳವಾಗಿ ಪ್ರಾಣಾಯಾಮ ಮಾಡಿದರು. ಬಳಿಕ ದೇವಿ ಭಗವತಿಯನ್ನು ಕುರಿತು ಧ್ಯಾನ ಮಾಡಿದರು. ಅವರ ತಪಸ್ಸು ಎಷ್ಟು ತೀಕ್ಷ್ಣವಾಗಿತ್ತು ಅಂದರೆ, ಕೆಲವೇ ಸಮಯದಲ್ಲಿ ಅವರ ಪ್ರಾರ್ಥನೆಗೆ ಮಹಾದೇವಿ ಅಸ್ತು ಅಂದಳು.

ಆಗಸದಲ್ಲಿ ಜೋರಾಗಿ ಗುಡುಗು, ಮಿಂಚುಗಳು ಅಬ್ಬರಿಸಿದವು. ಇದ್ದಕ್ಕಿದ್ದಂತೆ ಕತ್ತಲಾಯಿತು. ಗಂಗೆಯ ಇನ್ನೊಂದು ಬದಿಯ ದಿಗಂತದಲ್ಲಿ ಬೃಹತ್ ಪರದೆಯೊಂದು ಸೃಷ್ಟಿಯಾಯಿತು. ಅದರಲ್ಲಿ ಎಲ್ಲರಿಗೂ ಮಹಾಭಾರತದ ಯುದ್ಧದ ಕ್ಷಣಗಳು ಗೋಚರಿಸಲಾರಂಭಿಸಿದವು!

Mythological Story: ನಾರದನನ್ನು ಹೆಣ್ಣಾಗಿಸಿ ವಿಷ್ಣು ಕುಚೋದ್ಯ ಮಾಡಿದ್ದೇಕೆ?

ಕೌರವರು ಮತ್ತು ಪಾಂಡವರ ಕಡೆಯ ಎಲ್ಲರಿಗೂ ಅವರವರ ಪ್ರೀತಿಪಾತ್ರರು ಯುದ್ಧದಲ್ಲಿ ಹೇಗೆ ಹೋರಾಡಿದರು ಎಂಬುದರ ಸಾಕ್ಷಾತ್ ದರ್ಶನ ಆ ಪರದೆಯಲ್ಲಿ ಆಗತೊಡಗಿತು. ಕುರುಕ್ಷೇತ್ರದ ಯುದ್ಧದಲ್ಲಿ ಯಾರು ಯಾರ ಜೊತೆ ಹೊಡೆದಾಡಿದರು, ಯಾರು ಯಾರನ್ನು ಕೊಂದರು, ಯಾರು ಹೇಗೆ ಸಾವನ್ನಪ್ಪಿದರು ಎಂಬುದೆಲ್ಲ ಅವರಿಗೆ ಕಾಣಿಸಿತು. ಒಬ್ಬೊಬ್ಬರನ್ನು ಸಾಯಿಸಿದಾಗಲೂ ಹೇಗೆ ವಿರೋಧಿ ಪಾಳೆಯ ಸಂಭ್ರಮಾಚರಣೆ ಮಾಡುತ್ತಿತ್ತು ಎಂಬುದು ಕೂಡ ಕಾಣಿಸಿತು. ನೋಡುತ್ತಿದ್ದ ಎಲ್ಲರ ಕಣ್ಣುಗಳಲ್ಲೂ ನೀರು ಧಾರಾಕಾರ ಸುರಿಯಿತು. ತುಂಡಾಗಿ ಬಿದ್ದ ಮೃತ ದೇಹದ ಚೂರುಗಳು, ಕೈಕಾಲುಗಳು, ಅಂಗಾಂಗಗಳೆಲ್ಲ ಸಂಬಂಧಪಟ್ಟವರಿಗೆ ಕಾಣಿಸಿದವು. ಪ್ರೀತಿಪಾತ್ರರು ಅವುಗಳನ್ನು ಗುರುತಿಸಿದರು. ಆದರೆ ಯಾರಿಗೂ ತಮ್ಮವರ ಜೊತೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗೆ ಬೃಹತ್ ಪರೆದಯ ಮೇಲೆ ಕುರುಕ್ಷೇತ್ರದ ಯುದ್ಧವನ್ನು ಅಲ್ಲಿದ್ದ ಎಲ್ಲರೂ ಮತ್ತೊಮ್ಮೆ ನೋಡಿದರು. ಮೃತಪಟ್ಟ ತಮ್ಮ ಕುಟುಂಬದವರಿಗೆ ಅಲ್ಲೇ ಅಂತಿಮ ನಮನ ಸಲ್ಲಿಸಿದರು. ಬಳಿಕ ಹಸ್ತಿನಾಪುರ ಮತ್ತು ಇಂದ್ರಪ್ರಸ್ಥಕ್ಕೆ ಮರಳಿ ಅವರಿಗೆಲ್ಲ ಅಂತ್ಯಸಂಸ್ಕಾರ ನೆರವೇರಿಸಿದರು.

ದೇವಿ ಭಾಗವತ ಪುರಾಣದಲ್ಲಿ ಬರುವ ಈ ಕತೆಯಲ್ಲಿ ವೇದವ್ಯಾಸರು ಮಹಾಭಾರತದ ಯಾವ ಭಾಗವನ್ನು ಯಾವಾಗ ಬೇಕಾದರೂ ಹೇಗೆ ಮರುಸೃಷ್ಟಿ ಮಾಡಬಲ್ಲವರಾಗಿದ್ದರು ಎಂಬ ರೋಚಕ ಸಂಗತಿಯನ್ನು ನಾವು ತಿಳಿದುಕೊಳ್ಳಬಹುದು.

ಹಾಗಿದ್ದರೆ ಮಹಾಭಾರತ ಘಟಿಸಿದ ಮೇಲೆ ವೇದವ್ಯಾಸರು ಅದರ ಕತೆಯನ್ನು ಬರೆದರೋ ಅಥವಾ ಅವರು ಮಹಾಭಾರತವನ್ನು ಬರೆದ ಮೇಲೆ ಅದು ಘಟಿಸಿತೋ? ಅಥವಾ ಅವರು ಇತ್ತ ಕತೆ ಬರೆಯುತ್ತಿದ್ದಾಗಲೇ ಅತ್ತ ಮಹಾಭಾರತ ಘಟಿಸಿತೋ? ಗೊತ್ತಿಲ್ಲ. ಮಹಾಭಾರತಕ್ಕೆ ಅವರು ಸೃಷ್ಟಿಕರ್ತರೂ ಹೌದು, ಅದರೊಳಗಿನ ಪಾತ್ರವೂ ಹೌದು, ಅದರ ವೀಕ್ಷಕರೂ ಹೌದು.

Indian Mythology: ಪರಶುರಾಮ ಏಕೆ ಗಣೇಶನ ಹಲ್ಲು ಮುರಿದ?

Latest Videos
Follow Us:
Download App:
  • android
  • ios