Chitradurga: ಭಾವೈಕ್ಯತೆ ಸಾರುವ ವದ್ದಿಕೆರೆ ಸಿದ್ದಪ್ಪನ ಅದ್ದೂರಿ ರಥೋತ್ಸವ ಆಚರಣೆ: ಕಣ್ತುಂಬಿಕೊಂಡ ಭಕ್ತಗಣ
ಐತಿಹಾಸಿಕ ಹಿನ್ನೆಲೆಯನ್ನ ಹೊಂದಿದೆ ವದ್ದಿಕೆರೆಯ ಸಿದ್ದೇಶ್ವರನ ಜಾತ್ರೆ. ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ಬ್ರಹ್ಮ ರಥೋತ್ಸವದ ಸಂಭ್ರಮದಲ್ಲಿ ಸಾಕ್ಷಿ ಆಗ್ತಾರೆ. ಧರ್ಮ ದಂಗಲ್ ಮಧ್ಯೆಯೂ ಇಲ್ಲಿನ ವಿಶೇಷತೆಯೇ ಭಾವೈಕ್ಯತೆ ಸಾರುವ ಸಂದೇಶ.
ವರದಿ: ಕಿರಣ್.ಎಲ್.ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಏ.03): ಐತಿಹಾಸಿಕ ಹಿನ್ನೆಲೆಯನ್ನ ಹೊಂದಿದೆ ವದ್ದಿಕೆರೆಯ ಸಿದ್ದೇಶ್ವರನ ಜಾತ್ರೆ. ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ಬ್ರಹ್ಮ ರಥೋತ್ಸವದ ಸಂಭ್ರಮದಲ್ಲಿ ಸಾಕ್ಷಿ ಆಗ್ತಾರೆ. ಧರ್ಮ ದಂಗಲ್ ಮಧ್ಯೆಯೂ ಇಲ್ಲಿನ ವಿಶೇಷತೆಯೇ ಭಾವೈಕ್ಯತೆ ಸಾರುವ ಸಂದೇಶ. ಹಿಂದೂ, ಮುಸ್ಲಿಂ ಎನ್ನದೇ ಭಕ್ತರು ಆಗಮಿಸಿ ಸ್ವಾಮಿದ ದರ್ಶನ ಪಡೆಯುತ್ತಾರೆ. ಈ ಕುರಿತಾದ ಒಂದು ವಿಶೇಷ ವರದಿ ಇಲ್ಲಿದೆ ನೋಡಿ. ಕಣ್ಣಾಯಿಸಿದಷ್ಟು ದೂರಕ್ಕೆ ಕಾಣಸಿಗುವ ಲಕ್ಷಾಂತರ ಜನಸ್ಥೋಮ. ದೇವರ ದರ್ಶನಕ್ಕೆ ಜಾತಿ, ಧರ್ಮದ ಭೇದ ಭಾವವಿಲ್ಲದೇ, ಸರದಿ ಸಾಲಿನಲ್ಲಿ ನಿಂತಿರೊ ಭಕ್ತರು.
ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಕೋಟೆನಾಡು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವದ್ದಿಕೆರೆ ಶ್ರೀಸಿದ್ದೇಶ್ವರ ಸ್ವಾಮಿ ದೇಗುಲ. ಹೌದು, ಭಕ್ತರ ಇಷ್ಟಾರ್ಥ ನೆರವೇರಿಸಲೆಂದೇ ಪಕ್ಕದ ರಾಜ್ಯವಾಗಿರೋ ಆಂಧ್ರಪ್ರದೇಶದಿಂದ ವದ್ದಿಕೆರೆಗೆ ಬಂದು ನೆಲೆನಿಂತಿರುವ ಶ್ರೀ ಸಿದ್ದೇಶ್ವರ ಸ್ವಾಮಿಯ ಪವಾಡ ಅಪಾರ. ಈ ತಾಂತ್ರಿಕ ಯುಗದಲ್ಲೂ ವೈದ್ಯಕೀಯ ಲೋಕಕ್ಕೆ ಸವಾಲೆನಿಸಿರುವ ರೋಗರುಜಿನಗಳನ್ನು ಸ್ಥಳದಲ್ಲಿಯೇ ನಿವಾರಿಸುವ ಭವರೋಗ್ಯ ವೈದ್ಯ ಎನಿಸಿದ್ದಾರೆ. ಹೀಗಾಗಿ ಈ ಎರೆನಾಡ ದೊರೆಯನ್ನು ಹಿಂದು,ಮುಸ್ಲಿಂ ಎಂಬ ತಾರತಮ್ಯವಿಲ್ಲದೇ ಎಲ್ಲಾ ಧರ್ಮದವರು ಆರಾಧಿಸುತ್ತಾರೆ. ತಮ್ಮ ಇಷ್ಟಾರ್ಥ ಸಿದ್ದಿಗಾಗಿ ವಿವಿಧ ಹರಕೆ ಸಲ್ಲಿಸಲು ರಾಜ್ಯ ಹಾಗು ಹೊರರಾಜ್ಯಗಳಾದ ಆಂದ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿದೆಡೆಗಳಿಂದ ಭಕ್ತರು ಆಗಮಿಸುತ್ತಾರೆ.
ಅಲ್ದೇ ಕಳೆದ ಎರಡು ವರ್ಷ ಕೋವಿಡ್ ನಿಂದಾಗಿ ಸಿದ್ದೇಶ್ವರ ಸ್ವಾಮಿ ಜಾತ್ರೆಯನ್ನು ಸರಳವಾಗಿ ಆಚರಿಸಲಾಗಿತ್ತು.ಆದ್ರೆ ಈ ಬಾರಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಿದ್ದೇಶ್ವರ ಸ್ವಾಮಿಯ ಜಾತ್ರೆ ವಿಜೃಂಭಣೆಯಿಂದ ನಡೆಯಿತು. ಹೀಗಾಗಿ ಭಕ್ತರು ಸಕುಟುಂಬ ಸಮೇತರಾಗಿ ಆಗಮಿಸಿ ಬ್ರಹ್ಮ ರಥೋತ್ಸವ ವೀಕ್ಷಿಸಿ ಪುನೀತರಾದರು. ಇನ್ನು ಸಿದ್ದಪ್ಪನ ಜಾತ್ರೆ ವೇಳೆ ಪ್ರತಿವರ್ಷ ಅದ್ಬುತವೊಂದು ನಡೆಯಲಿದೆ. ಅದೇನಂದ್ರೆ ವರ್ಷದ 365 ದಿನಗಳಲ್ಲಿ ಎಂತಹ ಬರಗಾಲ ಬಂದರೂ ನೀರಿನಿಂದ ತುಂಬಿ ತುಳುಕುವ ಇಲ್ಲಿನ ಮಜ್ಜನಬಾವಿ ಜಾತ್ರೆಯ ಮೂರನೇ ದಿನ ಒಂದು ಹನಿ ನೀರಿಲ್ಲದಂತೆ ಬತ್ತಿ ಬರಿದಾಗಲಿದೆ.
ಕಾಂಗ್ರೆಸ್‌ನಿಂದ ಮಾತ್ರ ಬಡವರ ಏಳ್ಗೆ: ಮಾಜಿ ಸಚಿವ ಮೇಟಿ
ಸತತ ಐದು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಉಂಡೆ,ಮಂಡೆ ಸಿದ್ದ ಭಕ್ತಿ ನಡೆಯಲಿದ್ದೂ, ಅಂದು ಭಕ್ತರು ಊಟೋಪಚಾರದ ವೇಳೆ ಅಂಟು ಮುಂಟು ಮಾಡುವರೆಂಬ ಹಿನ್ನೆಲೆಯಲ್ಲಿ ಬಾವಿಯಲ್ಲಿನ ಗಂಗೆ ಬತ್ತಲಿದೆ.ಮರುದಿನ ಮತ್ತೆ ಜಲ ಉಕ್ಕಿ ಬರಲಿದೆ ಎಂಬ ನಂಬಿಕೆ ಇಲ್ಲಿದೆ ಅಂತಾರೆ ಭಕ್ತರು. ಒಟ್ಟಾರೆ ಧರ್ಮ ದಂಗಲ್ ನಡುವೆಯೂ ಕೋಟೆನಾಡಿನ ವದ್ದಿಕೆರೆ ಸಿದ್ದೇಶ್ವರ ಸ್ವಾಮಿ ದೇಗುಲ ಭಾವೈಕ್ಯತಾ ಮಂದಿರ ಎನಿಸಿದೆ. ಇಲ್ಲಿನ ಭಕ್ತರು ಜಾತಿ,ಧರ್ಮ ಭೇದವನ್ನು ಮರೆತು ಭಕ್ತಿ ಭಾವದಿಂದ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಸಾಮೂಹಿಕವಾಗಿ ಮಜ್ಜನ ಬಾವಿಯ ನೀರು ಹಾಕಿಸಿಕೊಂಡು ಪುನೀತರಾಗಿದ್ದಾರೆ.