2022ರಲ್ಲಿ ಈ ಎರಡು ದಿನ ಬಾಗಿಲು ಮುಚ್ಚಿರುತ್ತೆ ತಿರುಪತಿ ದೇವಸ್ಥಾನ!
ಈ ವರ್ಷ ಮುಗಿಯಲು ಇನ್ನು ಎರಡೂವರೆ ತಿಂಗಳಷ್ಟೇ ಉಳಿದಿದೆ. ಈ ಅವಧಿಯಲ್ಲಿ ಎರಡು ದಿನ ತಿರುಪತಿ ದೇವಾಲಯದ ಬಾಗಿಲು ಮುಚ್ಚಿರುತ್ತದೆ. ಯಾಕೆ, ಯಾವಾಗ ಎಂಬ ವಿವರ ಇಲ್ಲಿದೆ..
ಕಳೆದೆರಡು ವರ್ಷಗಳು ಕೊರೋನಾದಿಂದ ಮಂಕಾಗಿದ್ದ ಎಲ್ಲ ದೇವಾಲಯಗಳು 2022ರಲ್ಲಿ ಮರಳಿ ಮುಂಚಿನ ಭಕ್ತಗಣದ ಭೇಟಿ ಕಾಣುತ್ತಿವೆ. ಜಗತ್ತಿನ ಅತ್ಯಂತ ಶ್ರೀಮಂತ ದೇವಾಲಯವೆನಿಸಿದ ತಿರುಪತಿ ತಿರುಮಲ ದೇವಾಲಯವಂತೂ ಎಂದಿಗಿಂತ ಹೆಚ್ಚೇ ಭಕ್ತರ ಭೇಟಿಗೆ ಸಾಕ್ಷಿಯಾಗುತ್ತಿದೆ. ಕಳೆದ ವಾರವಷ್ಟೇ ತಿರುಪತಿಗೆ ಒಂದೇ ದಿನ ತಿರುಪತಿಯಲ್ಲಿ ಜನಜಂಗುಳಿ ಜೋರಾಗಿದ್ದು, ಸರತಿ ಸಾಲು 4 ಕಿ.ಮಿ. ಗೂ ಹೆಚ್ಚು ಉದ್ದವಾಗಿ 48 ಗಂಟೆಗಳ ಕಾಲ ಭಕ್ತರು ಸರತಿಯಲ್ಲಿದ್ದದ್ದು ಸುದ್ದಿಯಾಗಿತ್ತು. ನೀವು ಕೂಡಾ ಈ ವರ್ಷ ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಮಾಡಬೇಕೆಂಬ ಉತ್ಸಾಹದಲ್ಲಿರಬಹುದು. ಆದರೆ, ಹೋಗುವ ಮುಂಚೆ ಈ ವಿಷಯ ಗಮನದಲ್ಲಿರಲಿ, ಏಕೆಂದರೆ ಈ ವರ್ಷದಲ್ಲಿ ಉಳಿದ ಎರಡೂವರೆ ತಿಂಗಳಲ್ಲಿ ಎರಡು ದಿನ ತಿರುಪತಿಯಲ್ಲಿ ದೇವಾಲಯದ ಬಾಗಿಲು ಮುಚ್ಚಿರುತ್ತದೆ.
ಹೀಗೆ ಜಗತ್ಪ್ರಸಿದ್ಧ ತಿರುಪತಿ ತಿರುಮಲ ದೇವಾಲಯ(Tirumala temple) ಅಕ್ಟೋಬರ್ 25 ಮತ್ತು ನವೆಂಬರ್ 8ರಂದು ಬಾಗಿಲು ಮುಚ್ಚುತ್ತಿದೆ. ಇದಕ್ಕೆ ಕಾರಣವಾಗುತ್ತಿರುವುದು ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ(solar and lunar eclipses).
ಹೌದು, ಅಕ್ಟೋಬರ್ 25 ಮತ್ತು ನವೆಂಬರ್ 8ರಂದು ಕ್ರಮವಾಗಿ ಸೂರ್ಯ ಮತ್ತು ಚಂದ್ರ ಗ್ರಹಣದಿಂದಾಗಿ ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನವನ್ನು ಸುಮಾರು 12 ಗಂಟೆಗಳ ಕಾಲ ಮುಚ್ಚಲಾಗುತ್ತದೆ. ಟಿಟಿಡಿ ಪ್ರಕಾರ, ಶುದ್ಧಿ ಮತ್ತು ಪುಣ್ಯಾಹವಾಚನದಂತಹ ಆಚರಣೆಗಳ ನಂತರ ಬೆಟ್ಟದ ದೇವಾಲಯದಲ್ಲಿ ಪೂಜೆ ಪುನರಾರಂಭವಾಗುತ್ತದೆ. ಅಕ್ಟೋಬರ್ 25 ಮತ್ತು ನವೆಂಬರ್ 8ರಂದು ತಿರುಮಲ ದೇವಸ್ಥಾನದಲ್ಲಿ ಹೇಳಿದ ದಿನಗಳಲ್ಲಿ ವಿಐಪಿ, ಶ್ರೀವಾಣಿ, ₹300 ವಿಶೇಷ ಪ್ರವೇಶ ದರ್ಶನವನ್ನು, ಮತ್ತು ಇತರ ಎಲ್ಲಾ ರೀತಿಯ ಸವಲತ್ತು ದರ್ಶನವನ್ನು ಟಿಟಿಡಿ ರದ್ದುಗೊಳಿಸಿದೆ. ಆದಾಗ್ಯೂ, ದೇವಾಲಯದ ಮಂಡಳಿಯು ಎರಡೂ ದಿನಗಳಲ್ಲಿ ನಿಗದಿತ ಸಮಯದಲ್ಲಿ ಸಾಮಾನ್ಯ ಭಕ್ತರಿಗೆ ಸರ್ವ ದರ್ಶನಕ್ಕೆ ಅವಕಾಶ ನೀಡುತ್ತದೆ.
Surya Grahan 2022: ನಾಲ್ಕು ರಾಶಿಗಳ ಜೀವನಕ್ಕೆ ಗ್ರಹಣ ತರುವ ಸೂರ್ಯ!
ಕೇವಲ ತಿರುಪತಿ ದೇವಾಲಯವಲ್ಲ
ಬೆಟ್ಟದ ದೇವಸ್ಥಾನದ ಹೊರತಾಗಿ, ದೇಶಾದ್ಯಂತ ತಿರುಮಲ ತಿರುಪತಿ ದೇವಸ್ಥಾನಗಳ ಆಡಳಿತದಲ್ಲಿರುವ ಸುಮಾರು 60 ಇತರ ದೇವಾಲಯಗಳು ಅಕ್ಟೋಬರ್ 25ರಂದು ಸೂರ್ಯ ಗ್ರಹಣ(solar eclipse) ಮತ್ತು ನವೆಂಬರ್ 8ರಂದು ಚಂದ್ರಗ್ರಹಣದ ಕಾರಣದಿಂದ ಯಾತ್ರಿಗಳ ಪೂಜೆಗಾಗಿ ಮುಚ್ಚಲ್ಪಡುತ್ತವೆ.
ಅನ್ನದಾನ ಇರುವುದಿಲ್ಲ
ಸೂರ್ಯ ಮತ್ತು ಚಂದ್ರಗ್ರಹಣದ ಸಮಯದಲ್ಲಿ ನಿತ್ಯ ಅನ್ನದಾನ ಸಂಕೀರ್ಣದಲ್ಲಿ ಯಾವುದೇ ಆಹಾರ ನೀಡಲಾಗುವುದಿಲ್ಲ ಎಂದು ಟಿಟಿಡಿ ತಿಳಿಸಿದೆ.
ಗ್ರಹಣ ಕಾಲ(Eclipse time)
ಸೂರ್ಯಗ್ರಹಣವು ಅಕ್ಟೋಬರ್ 25ರ ಸಂಜೆ 5.11ರ ನಡುವೆ ಸಂಭವಿಸುತ್ತದೆ ಮತ್ತು 6.27 PMವರೆಗೆ ಇರುತ್ತದೆ. ನವೆಂಬರ್ 8ರಂದು, ಚಂದ್ರಗ್ರಹಣವು ಮಧ್ಯಾಹ್ನ 2.39ಕ್ಕೆ ಪ್ರಾರಂಭವಾಗುತ್ತದೆ ಮತ್ತು 6.19ಕ್ಕೆ ಕೊನೆಗೊಳ್ಳುತ್ತದೆ.
Temples renovation: ಮೋದಿ ನೇತೃತ್ವದಲ್ಲಿ ಗತವೈಭವ ಮರಳಿ ಪಡೆಯುತ್ತಿವೆ ದೇವಾಲಯಗಳು!
ಗ್ರಹಣ ಕಾಲದಲ್ಲಿ, ವಿಗ್ರಹದ ಸುತ್ತಲಿನ ಸೆಳವು ಸ್ವಲ್ಪಮಟ್ಟಿಗೆ ತೊಂದರೆಗೊಳಗಾಗುತ್ತದೆ. ಹಿಂದೂ ಗ್ರಂಥಗಳು ಮತ್ತು ಧರ್ಮ ಗ್ರಂಥಗಳ ಪ್ರಕಾರ, ಆಕಾಶಕಾಯಗಳು, ವಿಶೇಷವಾಗಿ ಸೂರ್ಯ ಮತ್ತು ಚಂದ್ರ ಗ್ರಹಣ ಸಮಯದಲ್ಲಿ ಅಸಹಜ ನಕಾರಾತ್ಮಕ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ. ಆದ್ದರಿಂದ ದೇವಾಲಯದ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಗುತ್ತದೆ. ಇದರಿಂದ ನಕಾರಾತ್ಮಕ ಶಕ್ತಿಯು ಆವರಿಸುವುದನ್ನು ಕಡಿಮೆ ಮಾಡಬಹುದು. ಹಾಗಾಗಿ, ಸಾಮಾನ್ಯವಾಗಿ ಗ್ರಹಣ ಕಾಲದಲ್ಲಿ ಎಲ್ಲ ದೇವಾಲಯಗಳ ಬಾಗಿಲನ್ನೂ ಮುಚ್ಚಲಾಗಿರುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.