Asianet Suvarna News Asianet Suvarna News

ಬೆಂಗಳೂರು: ಧರ್ಮ ದಂಗಲ್‌ ನಡುವೆ ಸುಬ್ರಹ್ಮಣ್ಯ ರಥೋತ್ಸವ ಸಂಪನ್ನ

ಅನ್ಯ ಧರ್ಮೀಯರಿಗೆ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದಿದ್ದ ಹಿಂದೂ ಸಂಘಟನೆಗಳು

Subramanya Swamy Fair Successfully Completed in Bengaluru grg
Author
First Published Nov 30, 2022, 9:00 AM IST

ಬೆಂಗಳೂರು(ನ.30):  ಹಿಂದು ದೇಗುಲದ ಆವರಣದಲ್ಲಿ ಹಿಂದೂಯೇತರರ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂಬ ವಿವಾದದ ನಡುವೆಯೇ ವಿಶ್ವೇಶ್ವರಪುರದಲ್ಲಿರುವ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸಡಗರ ಸಂಭ್ರಮದಿಂದ ರಥೋತ್ಸವ ಯಶಸ್ವಿಯಾಗಿ ನೆರವೇರಿತು.

ಮಾರ್ಗಶಿರ ಮಾಸದ ಶುಕ್ಲಪಕ್ಷದ ಆರನೇ ದಿನವಾದ ಸುಬ್ರಹ್ಮಣ್ಯ ಷಷ್ಠಿಯ ದಿನವಾದ ಮಂಗಳವಾರ ಸಾಲಂಕೃತ ಉತ್ಸವಮೂರ್ತಿಯಿದ್ದ ರಥದ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಭಕ್ತಾದಿಗಳು ಮುಂಜಾನೆಯಿಂದಲೇ ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ಸಾಲುಗಟ್ಟಿನಿಂತಿದ್ದರು. ದೇಗುಲದ ಹೊರಗಿನಿಂದಲೇ ದೇವರ ದರ್ಶನಕ್ಕೆಂದು ದೊಡ್ಡ ಎಲ್‌ಇಡಿ ಪರದೆಯನ್ನು ಅಳವಡಿಸಲಾಗಿತ್ತು. ಎಲ್ಲೆಲ್ಲೂ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು.

ಧರ್ಮ ದಂಗಲ್‌ ಮಧ್ಯೆ ಸುಬ್ರಮಣ್ಯ ಸ್ವಾಮಿ ರಥೋತ್ಸವಕ್ಕೆ ಕ್ಷಣಗಣನೆ: ಬಿಗಿ ಪೊಲೀಸ್‌ ಬಂದೋಬಸ್ತ್‌

ಸುಬ್ರಹ್ಮಣ್ಯ ರಥೋತ್ಸವದಲ್ಲಿ ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶ ನೀಡುವ ಕುರಿತು ಶಾಸಕ ಉದಯ್‌ ಗರುಡಾಚಾರ್‌ ಪ್ರತಿಕ್ರಿಯಿಸಿ, ‘ಒಂದು ದಿನ ವ್ಯಾಪಾರ ಮಾಡಿ ಕುಟುಂಬವನ್ನು ಸಾಕುತ್ತಾರೆ. ನಾವು ಯಾಕೆ ಅವರ ಹೊಟ್ಟೆಮೇಲೆ ಹೊಡೆಯಬೇಕು. ದರ್ಗಾ ಬಳಿ ಹಿಂದೂಗಳು ಕೂಡ ವ್ಯಾಪಾರ ಮಾಡಬಹುದು’ ಎಂದರು.

ಬಿಗಿ ಬಂದೋಬಸ್ತ್‌

ವಿವಿಪುರಂನ ಸುಬ್ರಹ್ಮಣ್ಯ ಸ್ವಾಮಿ ಜಾತ್ರೆ ವೇಳೆಯಲ್ಲಿ ಹಿಂದೂಯೇತರರ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಬಜರಂಗದಳ ಆಗ್ರಹಿಸಿತ್ತು. ಈ ಬಗ್ಗೆ ಸ್ಥಳೀಯ ಶಾಸಕರು ಮತ್ತು ದೇವಸ್ಥಾನದ ಆಡಳಿತ ಮಂಡಳಿಗೂ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಇದಕ್ಕೆ ಶಾಸಕ ಉದಯ್‌ ಗರುಡಾಚಾರ್‌ ವಿರೋಧಿಸಿದ್ದರು. ಶಾಸಕರ ಧೋರಣೆಗೆ ಹಿಂದು ಸಂಘಟನೆ ಉಗ್ರವಾಗಿ ಪ್ರತಿಕ್ರಿಯಿಸಿದ್ದವು. ಈ ಹಿನ್ನೆಲೆಯಲ್ಲಿ ಜಾತ್ರೆಯ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ 600ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ತನ್ಮೂಲಕ ಯಾವುದೇ ಅಹಿತಕರ ಘಟನೆ ನಡೆಯದೆ ಜಾತ್ರೆ ಯಶಸ್ವಿಯಾಗಿ ನಡೆಯಿತು.
 

Follow Us:
Download App:
  • android
  • ios