Udupi: ಮನೆಬಾಗಿಲಿಗೆ ಬಂದು ಕುಣಿಯುವ ಯಕ್ಷರು: ಮಳೆಗಾಲದಲ್ಲಿ ಚಿಕ್ಕಮೇಳಗಳ ಕಲರವ

ಕತ್ತಲು ಕವಿಯುತ್ತಿದ್ದಂತೆ ತಾಳ-ಮೇಳಗಳ ಸಹಿತ ದೇವರೇ ಮನೆ ಬಾಗಿಲಿಗೆ ಬರುವ ವಿಶಿಷ್ಟ ಸಂಪ್ರದಾಯವೊಂದು ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ಜೀವಂತವಾಗಿದೆ. ತುಳುನಾಡ ಯಕ್ಷರ ಈ ರಾತ್ರಿ ಸಂಚಾರ ಕಲಾ ಪ್ರೇಮಿಗಳಿಗೆ ರೋಮಾಂಚನವನ್ನೇ ಉಂಟು ಮಾಡುತ್ತೆ. 

small show of Yakshagana artists in the rainy season at udupi gvd

ವರದಿ: ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್, ಉಡುಪಿ

ಉಡುಪಿ (ಜೂ.12): ಕತ್ತಲು ಕವಿಯುತ್ತಿದ್ದಂತೆ ತಾಳ-ಮೇಳಗಳ ಸಹಿತ ದೇವರೇ ಮನೆ ಬಾಗಿಲಿಗೆ ಬರುವ ವಿಶಿಷ್ಟ ಸಂಪ್ರದಾಯವೊಂದು ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ಜೀವಂತವಾಗಿದೆ. ತುಳುನಾಡ ಯಕ್ಷರ ಈ ರಾತ್ರಿ ಸಂಚಾರ ಕಲಾ ಪ್ರೇಮಿಗಳಿಗೆ ರೋಮಾಂಚನವನ್ನೇ ಉಂಟು ಮಾಡುತ್ತೆ. ಯಕ್ಷಗಾನದ ದೊಡ್ಡ ಮೇಳಗಳ ತಿರುಗಾಟಗಳ ವಿರಾಮದನಂ ತರ ಆರಂಭವಾಗುವ ಈ ಕಲಾ ಪ್ರಸ್ತುತಿಯನ್ನು ಚಿಕ್ಕಮೇಳದ ತಿರುಗಾಟ ಎನ್ನುತ್ತಾರೆ. ಸಂಜೆಯ ರಾಗಕ್ಕೆ ಯಕ್ಷರುಗಳ ಸಂಚಾರ, ಮನೆಮನೆಗೆ ದೇವರೇ ಹೀಗೆ ಬರುವ ಪರಿ ಕರಾವಳಿಯ ಒಂದು ಅಪೂರ್ವ ಸಂಪ್ರದಾಯ. 

ಯಕ್ಷಗಾನದ ಜನಪ್ರಿಯತೆ ನಿಮಗೆಲ್ಲಾ ಗೊತ್ತಿದೆ. ಆದರೆ ಮಳೆಗಾಲದಲ್ಲಿ ಟೆಂಟ್ ಮೇಳಗಳಾಗಲೀ, ಹರಕೆ ಮೇಳಗಳಾಗಲೀ ಪ್ರದರ್ಶನ ನಡೆಸೋಲ್ಲ. ಹಾಗಾಗಿ ವಿಶ್ರಾಂತ ಕಲಾವಿದರು ತಾವಾಗೇ ಮನೆ ಮನೆಗೆ ಬಂದು ಒಂದು ಪುಟ್ಟ ಕಥಾನಕವನ್ನು ಆಡಿ ತೋರಿಸುತ್ತಾರೆ. ದಿನಕ್ಕೊಂದು ವಠಾರವನ್ನು ಆಯ್ಕೆಮಾಡಿಕೊಂಡು ಮುಂಚಿತವಾಗಿ ಮಾಹಿತಿ ಕೊಟ್ಟು ಕತ್ತಲು ಕವಿದ ನಂತರ ಮನೆ ಭೇಟಿ ಮಾಡುತ್ತಾರೆ. ಯಕ್ಷಗಾನಕ್ಕೆ ಕಲೆಯ ಜೊತೆಗೆ ಆರಾಧನೆಯ ಸ್ವರೂಪವೂ ಇರುವುದರಿಂದ ಈ ಸಾಂಪ್ರದಾಯಿಕ ಆಚರಣೆ ಇಂದಿಗೂ ಜೀವಂತವಾಗಿದೆ. ಮನೆಗೆ ಬಂದು ಗಣಪತಿ ಸ್ತುತಿಯೊಂದಿಗೆ ಆರಂಭಿಸಿ, ಮಾತು ಕುಣಿತದ ವೈಭವ ತೋರಿಸಿ ಈ ತಂಡಗಳು ತೆರಳುತ್ತವೆ.

ಕಾಲ್ನಡಿಗೆಯಲ್ಲೇ ಪವಿತ್ರ ಹಜ್ ಯಾತ್ರೆ: ಕೇರಳದ ಯುವಕನಿಗೆ ಉಡುಪಿಯಲ್ಲಿ ಸ್ವಾಗತ

ಕೈಯ್ಯಲ್ಲಿ ದೀಪ ಹೊತ್ತುಕೊಂಡು ಅದರ ಬೆಳಕಲ್ಲಿ ಮನೆಮನೆಗೆ ಈ ಚಿಕ್ಕ ಮೇಳದ ಸಂಚಾರ ಹೊರಡುತ್ತೆ, ಮನೆಯವರು ಆತ್ಮೀಯವಾಗಿ ಕಲಾವಿದರನ್ನು ಬರಮಾಡಿಕೊಳ್ಳುತ್ತಾರೆ. ಆದರದಿಂದ ಗೌರವಿಸುತ್ತಾರೆ. ಮನೆಮಂದಿಯೆಲ್ಲಾ ಚಾವಡಿಯಲ್ಲಿ ಬಂದು ಕೂರುತ್ತಿದ್ದಂತೆ ಓರ್ವ ಪುರುಷ ಹಾಗೂ ಮಹಿಳಾ ವೇಷಧಾರಿಗಳು ತಮ್ಮ ಪ್ರದರ್ಶನ ಆರಂಭಿಸುತ್ತಾರೆ. ಭಾಗವತರ ಹಾಡಿಗೆ ಲಯಬದ್ಧವಾಗಿ ಹೆಜ್ಜೆ ಹಾಕುತ್ತಾರೆ. ವೇದಿಕೆಯಲ್ಲಿ ಪ್ರದರ್ಶನ ಕಾಣುವುದಕ್ಕಿಂತಲೂ ಮನೆಯಂಗಳದಲ್ಲೇ ಈ ಯಕ್ಷರ ನರ್ತನ ನೋಡುವುದೆಂದರೆ ರೋಮಾಂಛಕ ಅನುಭವ.

Udupi; 16 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ

ಕೊನೆಯಲ್ಲಿ ತಮ್ಮಿಂದಾದಷ್ಟು ಗೌರವಧನ ನೀಡಿ ಈ ಕಲಾವಿದರನ್ನು ಆದರಿಸಲಾಗುತ್ತೆ. ರಂಗದಲ್ಲಿ ರಾಜರಾದರೂ ಈ ಬಡ ಕಲಾವಿದರು ಮಳೆಗಾಲದ ಜೀವನೋಪಾಯಕ್ಕೆ ಈ ಚಿಕ್ಕಮೇಳದ ತಿರುಗಾಟ ನಡೆಸುತ್ತಾರೆ. ಆಧುನಿಕ ಕಾಲಘಟ್ಟದಲ್ಲೂ ಚಿಕ್ಕಮೇಳದ ಪ್ರೀತಿ ಕಲಾರಸಿಕರಿಗೆ ಕಡಿಮೆಯಾಗಿಲ್ಲ. ಇವತ್ತಿಗೂ ಉಡುಪಿಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಂಜೆಯಾಗುತ್ತಿದ್ದಂತೆ ಚಿಕ್ಕ ಮಳೆಗಳ ಸಂಚಾರ ಆರಂಭವಾಗುತ್ತದೆ. ಜನರೂ ಕೂಡಾ ಅಷ್ಟೇ ಅಭಿಮಾನದಿಂದ ಕಲಾವಿದರನ್ನು ಬರಮಾಡಿಕೊಂಡು ಸತ್ಕರಿಸಿ ಕಳಿಸುತ್ತಾರೆ.

Latest Videos
Follow Us:
Download App:
  • android
  • ios