ದುರ್ವಾಸ ಋುಷಿಗಳು ಸಿಟ್ಟಿಗೆ ಮತ್ತೊಂದು ಹೆಸರು. ಅವರ ಕೋಪ ದೇವಾನು ದೇವತೆಗಳನ್ನೂ ಬಿಟ್ಟಿಲ್ಲ. ಒಮ್ಮೆ ಅವರ ಶಾಪದಿಂದಾಗಿ ಇಂದ್ರನೇ ರಾಜ್ಯಭ್ರಷ್ಟನಾದ. ಆತನ ಅನುಪಸ್ಥಿತಿಯಲ್ಲಿ ಸ್ವರ್ಗ ಲಕ್ಷ್ಮಿಗೂ ಅಲ್ಲಿರಲಾಗಲಿಲ್ಲ. ಆಕೆ ಸ್ವರ್ಗಬಿಟ್ಟು ವೈಕುಂಠವನ್ನು ಸೇರಿದಳು. ದೇವತೆಗಳಿಗೆ ಇದೆಲ್ಲ ಹೊಸತು. ದಿಕ್ಕೇ ತೋಚದೇ ಕಂಗಾಲಾದರು. ಕೊನೆಗೆ ಸೃಷ್ಟಿಯ ಮಹಾಪುರುಷ ಬ್ರಹ್ಮನ ಮೊರೆ ಹೋದರು. ಬ್ರಹ್ಮನಿಗೆ ಇದಕ್ಕೆಲ್ಲ ಪರಿಹಾರ ಎಲ್ಲಿದೆ ಅಂತ ಗೊತ್ತಿತ್ತು. ಆತ ನೇರ ದೇವತೆಗಳೊಂದಿಗೆ ಮಹಾವಿಷ್ಣುವಿನ ಬಳಿ ಹೋದ. ಹಸನ್ಮುಖಿ ವಿಷ್ಣು ವೈಕುಂಠದಲ್ಲಿ ಕುಳಿತು ದೇವತೆಗಳೆಲ್ಲರ ದುಃಖವನ್ನು ಆಲಿಸಿದ. ಬಳಿಕ ಅಮೃತ ಸಂಪಾದಿಸುವುದು ಇದಕ್ಕೆಲ್ಲ ಪರಿಹಾರ ಎಂದುಕೊಂಡು ವಿಷ್ಣು ಸಮುದ್ರ ಮಥನದ ತೀರ್ಮಾನಕ್ಕೆ ಬಂದ. ಇದಕ್ಕೆ ರಾಕ್ಷಸರೂ ಕೈ ಜೋಡಿಸಿದರು. ಸಮುದ್ರವನ್ನು ಮಥಿಸುವ ವೇಳೆಗೆ ಅಲ್ಲಿ ಸಂಪತ್ತಿನ ಒಡತಿಯಾದ ಮಹಾಲಕ್ಷ್ಮಿಯು ಆವಿರ್ಭವಿಸುತ್ತಾಳೆ. ಆಕೆ ದೇವತೆಗಳಿಗೆ ವರ ನೀಡುತ್ತಾ ಅವರನ್ನು ಕಾಯುತ್ತಾಳೆ. ಮಹಾವಿಷ್ಣುವನ್ನು ವರಿಸುತ್ತಾಳೆ.

ಕೊರೋನಾ ನಡುವೆ ವರಮಹಾಲಕ್ಷ್ಮೀ ಸಂಭ್ರಮ!

ಈ ಪ್ರಚಂಡ ಶಕ್ತಿಯ ತಾಯಿಯನ್ನು, ‘ಸಮುದ್ರರಾಜನ ಮಗಳು, ಚಂದ್ರನ ತಂಗಿ, ಕಮಲದಲ್ಲಿ ಆವಿರ್ಭವಿಸಿದ ಕಮಲಿನಿ’ ಎಂದೆಲ್ಲಾ ಕೊಂಡಾಡುತ್ತಾರೆ. ಈ ಮಹಾ ಮಂಗಳಮಯೀ ದೇವಿಯು ಸರ್ವರಿಗೂ ಶುಭವನ್ನು ಉಂಟು ಮಾಡುತ್ತಾಳೆ. ದಾರಿದ್ರ್ಯ ನಿವಾರಿಸಿ, ಸಂಪತ್ತನ್ನು ಕರುಣಿಸುತ್ತಾಳೆ ಎಂಬುದು ಭಕ್ತರ ನಂಬಿಕೆ. ಈಕೆ ಬರೀ ಲೌಕಿಕದ ಸಂಪತ್ತನ್ನಷ್ಟೇ ನೀಡಿ ಭೋಗವನ್ನು ಬೆಳೆಸುವವಳು ಮಾತ್ರವಲ್ಲ. ಈಕೆ ಅಲೌಕಿಕ ಶಕ್ತಿಗೂ ತಾಯಿಯೇ. ತನ್ನ ಜ್ಞಾನಿ ಭಕ್ತರ ಮನದಿಂಗಿತವನ್ನು ಈ ಮಹಾತಾಯಿ ಈಡೇರಿಸುತ್ತಾಳೆ.

ವರಮಹಾಲಕ್ಷ್ಮೇ ವ್ರತದಲ್ಲಿ ದೇವಿಯ ಅಲಂಕಾರ, ಸೀರೆಯುಡಿಸುವುದು ಬಹಳ ಮುಖ್ಯವಾದುದು. ಇದಕ್ಕಾಗಿ ಮಹಿಳೆಯರು ಹೆಚ್ಚಿನ ಸಮಯ ವ್ಯಯಿಸುತ್ತಾರೆ. ಬಹಳ ಶ್ರದ್ಧೆಯಿಂದ, ಭಕ್ತಿಯಿಂದ ಮಾಡಬೇಕಾದ ಕೆಲಸವಿದು.

ಬಿಂದಿಗೆ, ತೆಂಗಿನಕಾಯಿ ಇತ್ಯಾದಿಗಳಲ್ಲಿ ದೇವಿಯ ಶಾರೀರಿಕ ರಚನೆ ಮಾಡಿಕೊಂಡಿರಬೇಕು. ಬಳಿಕ ಸೀರೆ ಉಡಿಸುವ ಕೆಲಸ. ಮಹಾಲಕ್ಷ್ಮೇಗೆ ಕಡುಗೆಂಪು ಅಂಚುಗಳಿರುವ ಬಿಳೀ ಬಣ್ಣದ ಸೀರೆಯನ್ನು ಹೆಚ್ಚಿನವರು ಉಡಿಸುತ್ತಾರೆ. ಇದು ದೇವಿಗೆ ಬಹಳ ಇಷ್ಟವಾದ ಉಡುಗೆ ಎಂಬ ಮಾತಿದೆ. ಇದೇ ಥರದ ಸೀರೆಯೇ ಆಗಬೇಕು ಅಂತ ಕಡ್ಡಾಯವಿಲ್ಲ. ಜರಿಯ ಅಂಚುಳ್ಳ ಯಾವುದೇ ಸೀರೆಯನ್ನೂ ಉಡಿಸಬಹುದು.

ಗೋಮಾತೆಗೆ ಪೂಜಿಸಿ ವರಮಹಾಲಕ್ಷ್ಮೀ ಪೂಜೆ ಆರಂಭಿಸಿದ ಆನಂದ ಗುರೂಜಿ: ಇಲ್ಲಿದೆ ವಿಡಿಯೋ 

ಸೀರೆಯ ಸೆರಗನ್ನು ಮೊದಲು ವಿನ್ಯಾಸ ಮಾಡಬೇಕು. ಬಳಿಕ ಇಡೀ ಸೀರೆಯಲ್ಲಿ ನೆರಿಗೆ ಮಾಡಬೇಕು. ಸೀರೆಯನ್ನು ಉದ್ದಕೆ ಎರಡು ಭಾಗವಾಗಿ ಮಡಚಿ ಈ ನೆರಿಗೆ ಮಾಡಬಹುದು. ಹೀಗೆ ನೆರಿಗೆ ಮಾಡಲಾದ ಸೀರೆಯನ್ನು ನೀಟಾಗಿ ಪಿನ್‌ ಮಾಡಿ. ಮೊದಲೇ ಬಿಂದಿಗೆ ಸಿದ್ಧಪಡಿಸಿ ಇಟ್ಟುಕೊಳ್ಳಿ. ಈ ಬಿಂದಿಗೆ ಎಡಭಾಗಕ್ಕೆ ಸೆರಗು ಹಾಕುವಲ್ಲಿದೆ ಒಂದು ಮರದ ಸ್ಕೇಲ್‌ಅನ್ನು ಅಡ್ಡಕ್ಕೆ ಕಟ್ಟಿ. ಈಗ ಚಿಕ್ಕ ಹಗ್ಗದ ಸಹಾಯದಿಂದ ಸೀರೆಯನ್ನು ತಂಬಿಗೆಗೆ ಕಟ್ಟಿ. ನೆರಿಗೆಗಳು ಮುಂಭಾಗದಲ್ಲಿ ಬರುವ ಹಾಗೆ ನೋಡಿಕೊಳ್ಳಿ. ಸ್ಕೇಲ್‌ನ ಮೇಲೆ ಸೆರಗು ಬರುವ ಹಾಗೆ ನೋಡಿಕೊಳ್ಳಿ. ಈ ಸೆರಗನ್ನು ಹಿಂಭಾಗದಿಂದ ಬಲಬದಿಯಾಗಿ ಮುಂದೆ ತಂದು ಮುಂಭಾಗದಲ್ಲಿ ಇಳಿಯಬಿಟ್ಟರೆ ಭರ್ಜರಿಯಾಗಿ ಕಾಣುತ್ತದೆ. ಸೆರಗಿನ ಜರಿಯ ವಿನ್ಯಾಸದಿಂದ ಈ ಅದ್ದೂರಿತನ ಬರುತ್ತದೆ.