ಸಂಕಟಮೋಚನ ಹನುಮಂತನ ಜನ್ಮದಿನವು ಚೈತ್ರ ಪೂರ್ಣಿಮೆಯಂದು. ಹನುಮ ಜಯಂತಿಯ ಸಂದರ್ಭದಲ್ಲಿ ನೀವು ಪಂಚಮುಖಿ ಆಂಜನೇಯನನ್ನು ಪೂಜಿಸಿದರೆ ನಿಮ್ಮ ಐದು ಇಷ್ಟಾರ್ಥಗಳು ಈಡೇರುತ್ತವೆ.
ಏಪ್ರಿಲ್ 16ರಂದು ಹನುಮ ಜಯಂತಿ(hanuman jayanti). ಸಂಕಟಮೋಚನ ಎಂದೇ ಹೆಸರಾದ ಆಂಜನೇಯ ಚೈತ್ರ ಮಾಸದ ಪೌರ್ಣಮಿಯ ದಿನ ಜನಿಸಿದ್ದು. ರಾಮನ ಭಕ್ತನಾದರೂ ಈತ ಸ್ವತಃ ದೇವರೇ ಆಗಿದ್ದಾನೆ. ಆಂಜನೇಯನನ್ನು ಸಾಮಾನ್ಯವಾಗಿ ವಾನರ ಮುಖದಲ್ಲಿ ನೋಡಿರುತ್ತೀರಿ. ಅಪರೂಪಕ್ಕೆ ಪಂಚಮುಖಿ ಆಂಜನೇಯನನ್ನು ನೋಡಿರಬಹುದು. ಆದರೆ, ಈ ಪಂಚಮುಖಿ ಆಂಜನೇಯನ ಶಕ್ತಿ ಅಪಾರವಾಗಿದೆ. ಈತ ಭಕ್ತರಿಗೆ ಶಕ್ತಿ, ಜ್ಞಾನ ನೀಡುತ್ತಾನೆ, ಅವರನ್ನು ಕಷ್ಟಗಳಿಂದ ಪಾರು ಮಾಡುತ್ತಾನೆ. ಈ ಪಂಚಮುಖಿ ಆಂಜನೇಯ ವಿಶೇಷವೇನು, ಪಂಚಮುಖಗಳು ಯಾವುವು, ಈ ರೂಪದಲ್ಲಿ ಹನುಮಂತನನ್ನು ಪೂಜಿಸುವುದರ ವಿಶೇಷ ಲಾಭಗಳೇನು ನೋಡೋಣ.
ಪಂಚಮುಖಿ ರೂಪ
ಪಂಚಮುಖಿ ಆಂಜನೇಯ(Panchamukhi Hanuman)ನ ಒಂದೊಂದು ಮುಖವೂ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಇಲ್ಲಿ ಆಂಜನೇಯನಿಗೆ ಐದು ಮುಖಗಳು. ಇದರಲ್ಲಿ,
ಮೊದಲ ಮುಖವು ಕೋತಿಯದ್ದು, ನಾವೆಲ್ಲ ಸಾಮಾನ್ಯವಾಗಿ ನೋಡುವಂಥದ್ದು. ಅದು ಪೂರ್ವ ದಿಕ್ಕಿನಲ್ಲಿ ತಿರುಗಿದೆ.
ಎರಡನೇ ಮುಖವು ಪಶ್ಚಿಮ ದಿಕ್ಕಿನಲ್ಲಿರುವ ಗರುಡನದು.
ಮೂರನೆಯ ಮುಖವು ಉತ್ತರ ದಿಕ್ಕಿನಲ್ಲಿರುವ ವರಾಹನದು.
ನಾಲ್ಕನೇ ಮುಖವು ನರಸಿಂಹನದು, ಅವನು ದಕ್ಷಿಣ ದಿಕ್ಕಿನೆಡೆ ನೋಡುತ್ತಿರುತ್ತಾನೆ.
ಐದನೇ ಮುಖವು ಕುದುರೆಯದ್ದು, ಅದು ಆಕಾಶದ ಕಡೆಗೆ ಇರುತ್ತದೆ.
Hanuman Jayanti 2022: ಹನುಮಂತನ ಬಗೆಗಿನ ಈ ವಿಷಯಗಳು ನಿಮಗೆ ಗೊತ್ತೇ?
ಹನುಮಂತನು ಈ ಪಂಚಮುಖಿ ಅವತಾರ ತಳೆಯಲು ಕಾರಣವೇನು? ಈ ವಿಶಿಷ್ಠ ರೂಪದ ಶಕ್ತಿಯೇನು ತಿಳಿಯೋಣ.
ಲಂಕಾ ಯುದ್ಧದ ಸಮಯದಲ್ಲಿ, ರಾವಣನು ಸೋಲಿನಿಂದ ತಪ್ಪಿಸಿಕೊಳ್ಳಲು ಸಹೋದರ ಅಹಿರಾವಣನ ಸಹಾಯ ಬೇಡುತ್ತಾನೆ. ಆಗ ಅಹಿರಾವಣನು ತನ್ನ ಶಕ್ತಿಯಿಂದ ಭಗವಾನ್ ರಾಮ ಮತ್ತು ಲಕ್ಷ್ಮಣರನ್ನು ನಿದ್ದೆಗೊಳಪಡಿಸುತ್ತಾನೆ. ಅವರಿಬ್ಬರನ್ನೂ ಕೊಲ್ಲಲು ಪಾತಾಳ ಲೋಕಕ್ಕೆ ಕೊಂಡೊಯ್ಯುತ್ತಾನೆ. ಅಲ್ಲಿ ಐದು ದೀಪಗಳನ್ನು ಬೆಳಗಿಸಿ ಐದು ಬೇರೆ ಬೇರೆ ದಿಕ್ಕುಗಳಲ್ಲಿ ಇರಿಸಲಾಗಿತ್ತು. ಹನುಮಂತ ಕೂಡಾ ಪಾತಾಳ ಲೋಕವನ್ನು ತಲುಪಿದಾಗ, ಪರಿಸ್ಥಿತಿಯ ಅರ್ಥವಾಯಿತು.
ಈ ಐದು ದೀಪಗಳನ್ನು ಏಕಕಾಲದಲ್ಲಿ ನಂದಿಸಿದರೆ ಮಾತ್ರ ಅಹಿರಾವಣನ ಹತ್ಯೆಯಾಗುತ್ತಿತ್ತು.
ಹನುಮಂತನು ತನ್ನ ಪ್ರಭುವಾದ ರಾಮನ ಸೇವಕನಾಗಿದ್ದನು ಮತ್ತೀಗ ಅವನ ಒಡೆಯನು ತೊಂದರೆಯಲ್ಲಿದ್ದನು. ಆಗ ಆಂಜನೇಯನು ಐದು ಮುಖಗಳನ್ನು ಧರಿಸಿ, ಐದು ದಿಕ್ಕಿನಲ್ಲಿದ್ದ ದೀಪಗಳನ್ನು ಏಕಕಾಲದಲ್ಲಿ ನಂದಿಸಿದನು. ಕೂಡಲೇ ಅಹಿರಾವಣ ಸತ್ತನು. ಅಲ್ಲಿಂದ ಶ್ರೀರಾಮ ಮತ್ತು ಲಕ್ಷ್ಮಣರನ್ನು ಸುರಕ್ಷಿತವಾಗಿ ಭೂಮಿಗೆ ಕರೆದುಕೊಂಡು ಬಂದನು.
ಈ ಪಂಚಮುಖಿ ಆಂಜನೇಯನನ್ನು ಪೂಜಿಸುವುದರಿಂದ ನಮ್ಮ ಐದು ಇಷ್ಟಾರ್ಥಗಳು ನೆರವೇರುತ್ತವೆ ಎನ್ನಲಾಗುತ್ತದೆ. ಅದರಲ್ಲೂ ಹನುಮ ಜಯಂತಿಯಂದು ಪಂಚಮುಖಿ ಆಂಜನೇಯನ ಪೂಜೆ ವಿಶೇಷ ಫಲಗಳನ್ನು ಕೊಡಲಿದೆ. ಪಂಚಮುಖಿ ಹನುಮಂತನನ್ನು ಪೂಜಿಸುವುದರಿಂದ ಆಗುವ ಲಾಭಗಳು ಇಂತಿವೆ.
Hanuman Jayanti 2022: ನಿಮ್ಮ ನೆಂಟರಿಷ್ಟರಿಗೆ ಹೀಗೆ ಶುಭಾಶಯ ಹೇಳಿ..
1. ಶತ್ರುಗಳ ಮೇಲೆ ವಿಜಯವನ್ನು ಸಾಧಿಸಲು ಆಂಜನೇಯನ ಮೊದಲ ವಾನರ ರೂಪ ಸಹಾಯ ಮಾಡುತ್ತದೆ.
2. ಗರುಡನ ರೂಪ ಪೂಜಿಸುವುದರಿಂದ ಜೀವನದಲ್ಲಿ ಕಾಡುತ್ತಿರುವ ತೊಂದರೆಗಳು ಮರೆಯಾಗುತ್ತವೆ.
3. ವರಾಹ ರೂಪ ಪೂಜಿಸುವುದರಿಂದ ಕೀರ್ತಿ, ಶಕ್ತಿ, ಧೈರ್ಯ ಮತ್ತು ದೀರ್ಘಾಯುಷ್ಯದ ಆಶೀರ್ವಾದವನ್ನು ಪಡೆಯಬಹುದು.
4. ನರಸಿಂಹ ರೂಪ ಪೂಜೆಯಿಂದ ಭಯ, ಹತಾಶೆ, ಒತ್ತಡ ಮತ್ತು ನಕಾರಾತ್ಮಕ ಶಕ್ತಿಗಳಿಂದ ದೂರ ಉಳಿಯಲು ಸಾಧ್ಯವಾಗುತ್ತದೆ.
5. ಕುದುರೆಯ ರೂಪ ಪೂಜಿಸುವುದರಿಂದ ಎಲ್ಲ ಆಸೆಗಳನ್ನು ಪೂರೈಸಬಹುದು.
ಒಟ್ನಲ್ಲಿ ಪಂಚಮುಖಿ ಆಂಜನೇಯನು ವಿಶೇಷ ಫಲಗಳನ್ನು ಕೊಡಲಿದ್ದಾನೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
