ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ನಾಗಾರಾಧನೆಯ ಪ್ರಮುಖ ಶ್ರದ್ಧಾಕೇಂದ್ರ. ಈಶ್ವರ ಪುತ್ರ ಷಣ್ಮುಖ (ಸುಬ್ರಹ್ಮಣ್ಯ) ಇಲ್ಲಿ ನಾಗರೂಪಿಯಾಗಿ ನೆಲೆನಿಂತಿದ್ದಾನೆಂಬ ನಂಬಿಕೆಯಿದೆ.  

- ಪ್ರಕಾಶ ವಿಶ್ವಕರ್ಮ, ಕುಕ್ಕೆ ಸುಬ್ರಹ್ಮಣ್ಯ

ಆದಿ ಸುಬ್ರಹ್ಮಣ್ಯ ಕ್ಷೇತ್ರವೆಂಬ ಖ್ಯಾತಿ ಇರುವ ಈ ದೇವಾಲಯ ಆದಿ ಶಂಕರರ ಕಾಲದಿಂದಲೂ ಸ್ಥಾನಿಕ ಸ್ಮಾರ್ತ ಮೊರೋಜ(ಮೋರ-ಮೈಯೂರ ಓಜಜಾಚಾರ್ಯ) ಮನೆತನದ ಆಳ್ವಿಕೆಗೆ ಒಳಪಟ್ಟಿತ್ತು. ಹಿಂದೆ ಸ್ಮಾರ್ತ ಬ್ರಾಹ್ಮಣರಿಂದ ಪೂಜೆಗೊಳ್ಳುತ್ತಿದ್ದ ಕ್ಷೇತ್ರ ಪ್ರಸ್ತುತ ಮಾಧ್ವ ಬ್ರಾಹ್ಮಣರ ಪೂಜಾಧೀನದಲ್ಲಿದೆ. ಈಗ ಕರ್ನಾಟಕ ಸರ್ಕಾರದ ಮುಜರಾಯಿ (ಧಾರ್ಮಿಕ ದತ್ತಿ) ಇಲಾಖೆಗೆ ಒಳಪಟ್ಟಿದ್ದು ರಾಜ್ಯದಲ್ಲೇ ಅತಿ ಹೆಚ್ಚು ಆದಾಯವಿರುವ ಧಾರ್ಮಿಕ ಕೇಂದ್ರವಿದು.

ಕ್ಷೇತ್ರ ವೈಶಿಷ್ಟ್ಯ:
ಇಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಆದಿ ಸುಬ್ರಹ್ಮಣ್ಯ ದೇವಸ್ಥಾನಗಳು ನಾಗಗಳ ಆವಾಸಸ್ಥಾನವೆಂಬ ದೃಢವಾದ ನಂಬಿಕೆ ಜನಮಾನಸದಲ್ಲಿ ಬೇರೂರಿದೆ. ಇಲ್ಲಿ ಶ್ರೀ ಸುಬ್ರಹ್ಮಣ್ಯನಿಗೆ ಸಲ್ಲಿಸಿದ ಪೂಜೆಯು ಸರ್ಪರಾಜನಾದ ವಾಸುಕಿಗೆ ಸಲ್ಲುವುದು. ಹಾಗಾಗಿ ಈ ಸ್ಥಳವು ಎಲ್ಲ ತರಹದ ನಾಗದೋಷಗಳ ಪರಿಹಾರ ಸ್ಥಳವೆಂದು ಹೇಳುತ್ತಾರೆ. ದೇಶದ ಮೂಲೆ ಮೂಲೆಗಳಿಂದ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ, ನಾಗತಂಬಿಲ ಹಾಗೂ ಇತರ ಪೂಜಾದಿಗಳನ್ನು ಸಲ್ಲಿಸಲು ಭಕ್ತಾದಿಗಳು ಬರುತ್ತಿರುತ್ತಾರೆ. ಸರ್ಪದೋಷ ನಿವಾರಣೆಗೆ ಪ್ರಧಾನ ತಾಣವಾಗಿದ್ದು ಬೇರೆ ಯಾವ ನಾಗ ಕ್ಷೇತ್ರಕ್ಕಾದರೂ ಹೇಳಿಕೊಂಡ ಹರಕೆಯನ್ನು ಇಲ್ಲಿ ಬಂದು ತೀರಿಸಿದರೆ ದೋಷಮುಕ್ತಿಯಾಗುತ್ತದೆ. ಆದರೆ ಇಲ್ಲಿಗೆ ಹೇಳಿಕೊಂಡ ಹರಕೆಗೆ ಬೇರಾವ ನಾಗಕ್ಷೇತ್ರದಲ್ಲೂ ಪರಿಹಾರ ಸಿಗುವುದಿಲ್ಲ, ಇಲ್ಲಿಗೇ ಆಗಮಿಸಬೇಕು ಎಂಬ ನಂಬಿಕೆಯಿದೆ. ಜೊತೆಗೆ ಆಸುಪಾಸಿನ ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯಗಳಿಗೆ ಭಕ್ತರು ಒಟ್ಟಿಗೆ ಭೇಟಿ ನೀಡುವುದಾದಲ್ಲಿ ಮೊದಲು ಧರ್ಮಸ್ಥಳಕ್ಕೆ ತೆರಳಿ ಬಳಿಕ ಸುಬ್ರಹ್ಮಣ್ಯಕ್ಕೆ ಆಗಮಿಸಬೇಕು. ಉಲ್ಟಾ ಆದರೆ ಪುಣ್ಯಫಲ ದೊರಕುವುದಿಲ್ಲ ಎಂಬ ನಂಬಿಕೆಯಿದೆ.

ಕಷ್ಟಗಳ ಮುಕ್ತಿ, ಪವಾಡಗಳ ಶಕ್ತಿ; ಇದು ಬೆಂಗಳೂರಿನ ಮುಕ್ತಿನಾಗ ಕ್ಷೇತ್ರ ಮಹಿಮೆ 

ಹೀಗೆ ಬನ್ನಿ
ಕುಕ್ಕೆ ಕ್ಷೇತ್ರ ಬೆಂಗಳೂರಿನಿಂದ 280, ಹಾಗೂ ಮಂಗಳೂರಿನಿಂದ 105 ಕಿ.ಮೀ. ದೂರದಲ್ಲಿದ್ದು ನೇರ ಬಸ್ ವ್ಯವಸ್ಥೆ ಇದೆ. ಬೆಂಗಳೂರಿಂದ ರೈಲಿನಲ್ಲಿ ಪ್ರಯಾಣಿಸುವವರು ಸುಬ್ರಹ್ಮಣ್ಯದಿಂದ 12 ಕಿ.ಮೀ. ದೂರದಲ್ಲಿರುವ ನೆಟ್ಟಣ (ಸುಬ್ರಹ್ಮಣ್ಯ ಮಾರ್ಗ) ಸ್ಟೇಷನ್‌ನಲ್ಲಿ ಇಳಿದು ಆಟೋ, ಸರ್ವೀಸ್ ಜೀಪು, ಟ್ಯಾಕ್ಸಿಗಳ ಮೂಲಕ ಕ್ಷೇತ್ರ ತಲುಪಬಹುದು. ಸ್ವಂತ ವಾಹನಗಳಲ್ಲಿ ತೆರಳುವವರು ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಂಡ್ಯ ಮೂಲಕ ಸುಬ್ರಹ್ಮಣ್ಯ ತಲುಪಬಹುದು.